Chhaava Movie: ರಶ್ಮಿಕಾ ʼತವರುʼ ಫ್ಯಾನ್ಸ್‌ಗೆ ಗುಡ್‌ನ್ಯೂಸ್; ತೆಲುಗಿನಲ್ಲೂ ರಿಲೀಸ್ ಆಗಲಿದೆ ʼಛಾವಾʼ
ಸದ್ಯ ದೇಶಾದ್ಯಂತದ ಪ್ರೇಕ್ಷಕರ ಗಮನ ಸೆಳೆದ ಬಾಲಿವುಡ್ ಚಿತ್ರ ʼಛಾವಾʼ ಭಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್ ಮಾಡುತ್ತಿದೆ. ವಿಕ್ಕಿ ಕೌಶಲ್-ರಶ್ಮಿಕಾ ಅಭಿನಯಕ್ಕೆ, ಲಕ್ಷ್ಮಣ ಉಟೇಕರ್ ನಿರ್ದೇಶನಕ್ಕೆ ಪ್ರೇಕ್ಷಕರು ಜೈ ಎಂದಿದ್ದಾರೆ. ಈ ಮಧ್ಯೆ ಚಿತ್ರತಂಡ ತೆಲುಗು ವರ್ಷನ್ ರಿಲೀಸ್ ಮಾಡಲು ಮುಂದಾಗಿದೆ.


ಮುಂಬೈ: ಸದ್ಯ ದೇಶಾದ್ಯಂತ ʼಛಾವಾʼ (Chhaava Movie) ಬಾಲಿವುಡ್ ಚಿತ್ರದಲ್ಲೇ ಸದ್ದು. ಫೆ. 14ರಂದು ರಿಲೀಸ್ ಆದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸುತ್ತಿದೆ. ಆ ಮೂಲಕ ಸೊರಗಿದ್ದ ಬಾಲಿವುಡ್‌ಗೆ ಹೊಸ ಚೈತನ್ಯ ತಂದಿತ್ತಿದೆ. ದೇಶಕಂಡ ಪರಾಕ್ರಮಿ, ಮರಾಠ ಸಾಮ್ರಾಜ್ಯದ ಅಧಿಪತಿ, ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಮಹಾರಾಜರ ಶೌರ್ಯ, ಜೀವನದ ಮೇಲೆ ಬೆಳಕು ಚೆಲ್ಲುವ ಈ ಚಿತ್ರವನ್ನು ಪ್ರೇಕ್ಷಕರು ಎರಡೂ ಕೈಚಾಚಿ ಸ್ವಾಗತಿಸಿದ್ದು, ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ರಿಲೀಸ್ ಆಗಿ 12 ದಿನಗಳಲ್ಲೇ ಭಾರತೀಯ ಗಲ್ಲಾ ಪೆಟ್ಟಿಗೆಯಲ್ಲಿ 350 ಕೋಟಿ ರೂ.ಗಿಂತ ಅಧಿಕ ದೋಚಿಕೊಂಡಿರುವ ಈ ಚಿತ್ರ ಜಾಗತಿಕವಾಗಿ 500 ಕೋಟಿ ರೂ. ಗಳಿಸುವ ಹಾದಿಯಲ್ಲಿದೆ. ಸಂಭಾಜಿ ಮಹಾರಾಜನಾಗಿ ವಿಕ್ಕಿ ಕೌಶಲ್ (Vicky Kaushal) ಕಾಣಿಸಿಕೊಂಡರೆ ಅವರ ಪತ್ನಿ ಯೇಸುಭಾಯಿಯಾಗಿ ರಶ್ಮಿಕಾ ಮಂದಣ್ಣ (Rashmika Mandanna) ಮಿಂಚಿದ್ದಾರೆ. ಈಗಾಗಲೇ ತೆಲುಗು ಪ್ರೇಕ್ಷಕರ ಮನಗೆದ್ದಿರುವ ರಶ್ಮಿಕಾ ಅವರ ಜನಪ್ರಿಯತೆಯ ಲಾಭ ಪಡೆಯಲು ಮುಂದಾಗಿರುವ ಚಿತ್ರತಂಡ ಹೊಸ ಅಪ್‌ಡೇಟ್ ಘೋಷಿಸಿದೆ. ಹೌದು, ಚಿತ್ರದ ತೆಲುಗು ಅವತರಣಿಕೆ ಬಿಡುಗಡೆಯಾಗಲಿದೆ.
ʼಛಾವಾʼ ಚಿತ್ರ ನೋಡಿದ ಪ್ರೇಕ್ಷಕರು ಬೇರೆ ಭಾಷೆಗಳಿಗೂ ಡಬ್ ಮಾಡುವಂತೆ ಮನವಿ ಸಲ್ಲಿಸಿದ್ದರು. ಇದೀಗ ಚಿತ್ರತಂಡ ತೆಲುಗಿಗೆ ಡಬ್ ಮಾಡಲು ಮುಂದಾಗಿದೆ. ರಶ್ಮಿಕಾ ಮಂದಣ್ಣ ತೆಲುಗು ವೀಕ್ಷಕರಿಗೆ ಚಿರಪರಿಚಿತ ಮುಖವಾಗಿರುವುದು ಕೂಡ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.
The epic tale of India’s courageous son, #Chhaava is now all set to roar in Telugu by popular demand⚔️❤️🔥
— Maddockfilms (@MaddockFilms) February 26, 2025
Witness the biggest spectacle #Chhaava in Telugu from March 7th👑#ChhaavaTelugu Grand Release by #GeethaArtsDistributions 🔥#ChhaavaInCinemas Now.#Chhaava… pic.twitter.com/bWQosu9Cqn
ಯಾವಾಗ ರಿಲೀಸ್?
ʼಛಾವಾʼ ಚಿತ್ರದ ತೆಲುಗು ವರ್ಷನ್ ಮಾ. 7ರಂದು ರಿಲೀಸ್ ಅಗಲಿದೆ. ʼಛಾವಾʼ ಚಿತ್ರ ನಿರ್ಮಿಸಿರುವ ಮ್ಯಾಡ್‌ಡಾಕ್ ಫಿಲ್ಮ್ಸ್ (Maddock Films) ಈ ಬಗ್ಗೆ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ''ಭಾರತದ ಪರಾಕ್ರಮಿಯ ಚರಿತ್ರೆ ಛಾವಾ ಘರ್ಷನೆ ಇನ್ನು ತೆಲುಗಿನಲ್ಲಿಯೂ ಮೊಳಗಲಿದೆ. ಬಹು ಬೇಡಿಕೆಯ ಹಿನ್ನೆಲೆಯಲ್ಲಿ ತೆಲುಗಿಗೆ ಡಬ್ ಮಾಡುತ್ತಿದ್ದೇವೆ. ಮಾ. 7ರಂದು ʼಛಾವಾʼದ ತೆಲುಗು ವರ್ಷನ್ ತೆರೆಗೆ ಬರಲಿದೆʼʼ ಎಂದು ಬರೆದುಕೊಂಡಿದೆ.
ಈ ಬಗ್ಗೆ ರಶ್ಮಿಕಾ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ʼʼಛಾವಾʼ ತೆಲುಗು ಕನಸು ನನಸಾಗುತ್ತಿದೆ. ಎಲ್ಲರಿಗೂ ಧನ್ಯವಾದʼʼ ಎಂದು ಹೇಳಿದ್ದಾರೆ. ಸ್ಯಾಂಡಲ್‌ವುಡ್‌ನಿಂದ ಚಿತ್ರರಂಗ ಪ್ರವೇಶಿಸಿ ಬಳಿಕ ತೆಲುಗಿಗೆ ಕಾಲಿಟ್ಟ ರಶ್ಮಿಕಾ ಸದ್ಯ ಅಲ್ಲಿನ ಟಾಪ್ ನಟಿ ಎನಿಸಿಕೊಂಡಿದ್ದಾರೆ. ಅವರ ಕೈಯಲ್ಲಿ ಹಲವು ತೆಲುಗು ಚಿತ್ರಗಳಿವೆ.
ಹೈದರಾಬಾದ್ ಮೂಲ ಎಂದಿದ್ದ ರಶ್ಮಿಕಾ
ಕೊಡಗು ಮೂಲದ ಕನ್ನಡತಿ ರಶ್ಮಿಕಾ ಸದ್ಯ ಕರ್ನಾಟಕವನ್ನೇ ಮರೆತಂತೆ ಆಡುತ್ತಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಕೆಲವು ತಿಂಗಳ ಹಿಂದೆ ಕನ್ನಡ ಬರಲ್ಲ ಎಂದು ತಿಳಿಸಿದ್ದ ಅವರು ಇತ್ತೀಚೆಗೆ ನಡೆದ ʼಛಾವಾʼದ ಪ್ರಮೋಷನ್ ವೇಳೆ ತಾನು ಹೈದರಾಬಾದ್‌ನವಳು ಎಂದು ಹೇಳಿದ್ದರು. ಕರ್ನಾಟಕದಲ್ಲೇ ಹುಟ್ಟಿ ಬೆಳೆದು, ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಈ ರೀತಿಯ ಹೇಳಿಕೆ ನೀಡಿದ್ದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Chhaava Movie: ‘ಛಾವಾ’ ಸಿನಿಮಾವನ್ನು ಮನಸಾರೆ ಹೊಗಳಿದ ನರೇಂದ್ರ ಮೋದಿ
ʼಛಾವಾʼ ಗಳಿಸಿದ್ದೆಷ್ಟು?
12 ದಿನಗಳಲ್ಲಿ ʼಛಾವಾʼ ಭಾರತದಲ್ಲಿ ಬರೋಬ್ಬರಿ 363.25 ಕೋಟಿ ರೂ. ಗಳಿಸಿದೆ. ಇನ್ನು ವಿದೇಶದ ಗಳಿಕೆಯೂ ಸೇರಿದರೆ ಒಟ್ಟು ಕಲೆಕ್ಷನ್ 483.35 ಕೋಟಿ ರೂ.ಗೆ ತಲುಪಿದೆ. ಮಹಾಶಿವರಾತ್ರಿಯ ದಿನವಾದ ಬುಧವಾರ ಗಳಿಕೆ ಹೆಚ್ಚಾಗುವ ನಿರೀಕ್ಷೆ ಇದೆ.