ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

UPW vs MIW: ಮತ್ತೊಮ್ಮೆ ಆಲ್‌ರೌಂಡರ್‌ ಪ್ರದರ್ಶನ ನೀಡಿದ ನ್ಯಾಟ್ ಸಿವರ್ ಬ್ರಂಟ್; ಮುಂಬೈ ವಿರುದ್ಧ ಸೋತ ಯುಪಿ

ನ್ಯಾಟ್ ಸಿವರ್ ಬ್ರಂಟ್ ಅವರ ಆಲ್‌ರೌಂಡರ್‌ ಪ್ರದರ್ಶನದಿಂದ ಮುಂಬೈ ಇಂಡಿಯನ್ಸ್‌ ತಂಡವು ಯುಪಿ ವಾರಿಯರ್ಸ್‌ ತಂಡವನ್ನು ಸೋಲಿಸಿದೆ. ಮೊದಲು ಬ್ಯಾಟಿಂಗ್‌ ಮಾಡಿ ಯುಪಿ ವಾರಿಯರ್ಸ್‌ ನಿಗದಿತ 20 ಓವರ್‌ನಲ್ಲಿ 9 ವಿಕೆಟ್‌ ನಷ್ಟಕ್ಕೆ 142 ರನ್‌ ಕಲೆ ಹಾಕಲಷ್ಟೇ ಶಕ್ತವಾಯಿತು. ಸಾಧಾರಣ ಗುರಿ ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್‌ 17 ಓವರ್‌ನಲ್ಲಿ 2 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

ಮುಂಬೈ ವಿರುದ್ಧ ಸೋತ ಯುಪಿ

Profile Ramesh B Feb 26, 2025 11:44 PM

ಬೆಂಗಳೂರು: ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ (ಫೆ. 26) ನಡೆದ ಡಬ್ಲ್ಯುಪಿಎಲ್‌ (WPL 2025) ಟೂರ್ನಿಯ 11ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ (UP Warriorz) ವಿರುದ್ದ ಮುಂಬೈ ಇಂಡಿಯನ್ಸ್‌ (Mumbai Indians) 8 ವಿಕೆಟ್‌ಗಳ ಬರ್ಜರಿ ಜಯ ಗಳಿಸಿದೆ (UPW vs MIW). ಆ ಮೂಲಕ ಸೋಮವಾರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ ಸೂಪರ್‌ ಓವರ್‌ನಲ್ಲಿ ಗೆಲುವಿನ ಕೇಕೆ ಹಾಕಿದ್ದ ಯುಪಿ ವಾರಿಯರ್ಸ್‌ ಇಂದಿನ ಪಂದ್ಯದಲ್ಲಿ ಮುಂಬೈ ತಂಡಕ್ಕೆ ಶರಣಾಯಿತು. ಮೊದಲು ಬ್ಯಾಟಿಂಗ್‌ ಮಾಡಿ ಯುಪಿ ವಾರಿಯರ್ಸ್‌ ನಿಗದಿತ 20 ಓವರ್‌ನಲ್ಲಿ 9 ವಿಕೆಟ್‌ ನಷ್ಟಕ್ಕೆ 142 ರನ್‌ ಕಲೆ ಹಾಕಲಷ್ಟೇ ಶಕ್ತವಾಯಿತು. ಸಾಧಾರಣ ಗುರಿ ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್‌ 17 ಓವರ್‌ನಲ್ಲಿ 2 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

ಮೊದಲು ಬ್ಯಾಟ್‌ ಮಾಡಿದ ಯುಪಿ ವಾರಿಯರ್ಸ್‌ ತಂಡ ನ್ಯಾಟ್ ಸಿವರ್ ಬ್ರಂಟ್ ಮಾರಕ ದಾಳಿಗೆ ತತ್ತರಿಸಿ 142 ರನ್‌ ಗಳಿಸಿತು. ನಾಟ್ ಸಿವರ್ ಬ್ರಂಟ್ 18 ರನ್‌ ನೀಡಿ 3 ವಿಕೆಟ್‌ ಕಿತ್ತರು. ಇನ್ನು ಶಬ್ನಿಂ ಇಸ್ಮಾಯಿಲ್ ಮತ್ತು ಸಂಸ್ಕೃತಿ ಗುಪ್ತ ತಲಾ 2 ವಿಕೆಟ್‌ ಕಬಳಿಸಿದರು. 26 ಎಸೆತಗಳಲ್ಲಿ 45 ರನ್‌ ಗಳಿಸಿದ ಗ್ರೇಸ್ ಹ್ಯಾರಿಸ್ ಅವರು ಯುಪಿ ವಾರಿಯರ್ಸ್‌ನ ಟಾಪ್‌ ಸ್ಕೋರರ್‌ ಎನಿಸಿಕೊಂಡರು. ವೃಂದಾ ದಿನೇಶ್‌ 33 ರನ್‌ ಗಳಿಸಿದ್ದು ಬಿಟ್ಟರೆ ಉಳಿದವರು ಪೆವಲಿಯನ್‌ಗೆ ಪರೇಡ್‌ ನಡೆಸಿದರು. ಕೊನೆಗೆ ಯುಪಿ ವಾರಿಯರ್ಸ್‌ 9 ವಿಕೆಟ್‌ ಕಳೆದುಕೊಂಡು 142 ರನ್‌ ಗಳಿಸಿತು.

ಇನ್ನು ಬ್ಯಾಟಿಂಗ್‌ನಲ್ಲಿಯೂ ಮಿಂಚಿದ ನ್ಯಾಟ್ ಸಿವರ್ ಬ್ರಂಟ್ ಅಬ್ಬರದ ಅರ್ಧ ಶತಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದರು. 44 ಎಸೆತ ಎದುರಿಸಿದ ಅವರು ಬರೋಬ್ಬರಿ 75 ರನ್‌ ಚಚ್ಚಿ ಔಟಾಗದೆ ಉಳಿದರು. ಇವರಿಗೆ ಉತ್ತಮ ಸಾಥ್‌ ನೀಡಿದ ಹೇಲಿ ಮ್ಯಾಥ್ಯೂಸ್ 50 ಎಸೆತಗಳಲ್ಲಿ 59 ರನ್‌ ಗಳಿಸಿದರು. ಹೀಗೆ ಇನ್ನೂ 18 ಎಸೆತ ಬಾಕಿ ಇರುವಂತೆಯೇ ಮುಂಬೈ ಗೆಲುವಿನ ದಡ ಸೇರಿತು.



ಆಲ್‌ರೌಂಡರ್‌ ಪ್ರದರ್ಶನ ನೀಡಿದ ನಾಟ್ ಸಿವರ್ ಬ್ರಂಟ್

ಫೆ. 19ರಂದು ಆಲ್‌ರೌಂಡರ್‌ ಪ್ರದರ್ಶನ ನೀಡಿ ಗುಜರಾತ್‌ ಜಯಂಟ್ಸ್‌ ವಿರುದ್ದ ಗೆಲುವಿಗೆ ಕಾರಣಕರ್ತರಾಗಿದ್ದ ಮುಂಬೈ ಇಂಡಿಯನ್ಸ್‌ನ ನ್ಯಾಟ್ ಸಿವರ್ ಬ್ರಂಟ್ ಮತ್ತೊಮ್ಮೆ ಮಿಂಚಿದರು. ಇಂದಿನ ಪಂದ್ಯದಲ್ಲಿ ಅವರು 3 ವಿಕೆಟ್‌ ಕೀಳುವ ಜತೆಗೆ 75 ರನ್‌ ಗಳಿಸಿ ಗಮನ ಸೆಳೆದರು. ಜತೆಗೆ ಸಹಜವಾಗಿ ಪ್ಲೇಯರ್‌ ಆಫ್‌ ದಿ ಮ್ಯಾಚ್‌ ಗೌರವಕ್ಕೆ ಪಾತ್ರರಾದರು.

ಈ ಸುದ್ದಿಯನ್ನೂ ಓದಿ: WPL 2025: ನ್ಯಾಟ್‌ ಸಿವರ್‌ ಬ್ರಂಟ್‌ ಆಲ್‌ರೌಂಡ್‌ ಆಟದ ಬಲದಿಂದ ಗೆದ್ದ ಮುಂಬೈ ಇಂಡಿಯನ್ಸ್‌!

ಇನ್ನು ಮಹಿಳಾ ಪ್ರೀಮಿಯರ್ ಲೀಗ್ ಸೋಮವಾರ (ಫೆ. 24) ಮೊಟ್ಟ ಮೊದಲ ಸೂಪರ್ ಓವರ್‌ಗೆ ಸಾಕ್ಷಿಯಾಗಿತ್ತು. ಕೊನೆಗೆ ಯುಪಿ ವಾರಿಯರ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರು ಅಭಿಮಾನಿಗಳ ಎದುರು ಸೋಲು ಅನುಭವಿಸಿತ್ತು. ನಿಗದಿತ 20 ಓವರ್‌ಗಳ ಕದನಲ್ಲಿ ಆರ್‌ಸಿಬಿ ಬಹುತೇಕ ಗೆಲುವಿನ ಸನಿಹ ಬಂದಿತ್ತು. ಆದರೆ ಅಂತಿಮ ಓವರ್‌ನಲ್ಲಿ ಸೋಫಿ ಎಕ್ಲೆಸ್ಟೋನ್‌ ಸಿಕ್ಸರ್‌ಗಳ ಮೂಲಕ ಆರ್‌ಸಿಬಿಯಿಂದ ಗೆಲುವನ್ನು ಕಸಿದುಕೊಂಡರು. ಉಭಯ ತಂಡಗಳ ಮೊತ್ತ 180 ಆಗಿದ್ದರಿಂದ ಪಂದ್ಯ ಟೈ ಆಗಿತ್ತು. ಈ ಹಿನ್ನೆಲೆಯಲ್ಲಿ ಸೂಪರ್‌ ಓವರ್‌ಗೆ ಮೊರೆ ಹೋಗಬೇಕಾಯಿತು.