ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Lokesh Kaayarga Column: ನಮ್ಮ ನಾಡಿನ ಸಿಂಹಗಳನ್ನು ನೆನೆಯುವವರಾರು ?

‘ಛಾವಾ’ ಸಿನಿಮಾದಲ್ಲಿ ಮೂರ‍್ನಾಲ್ಕು ಬಾರಿ ಕರ್ನಾಟಕದ ಹೆಸರು ಬರುತ್ತದೆ. ಕರ್ನಾಟಕದಿಂದ ಬಂದ ಕಪ್ಪಕಾಣಿಕೆ ಬಗ್ಗೆಯೂ ಉಲ್ಲೇಖಿಸಲಾಗುತ್ತದೆ. ಆದರೆ ಅಸಲಿಗೆ ಅಂದು ಕರ್ನಾಟಕ ಎಂಬ ಪ್ರಾಂತ್ಯ ಇರಲಿಲ್ಲ. ಕನ್ನಡಿಗರು ಮೈಸೂರು, ಕೆಳದಿ ಅರಸರು, ಬಿಜಾಪುರ ಸುಲ್ತಾನರು ಹೀಗೆ ನಾನಾ ಪ್ರಾಂತೀ ಯ ರಾಜರುಗಳ ಅಧೀನದಲ್ಲಿ ಹಂಚಿ ಹೋಗಿದ್ದರು

ನಮ್ಮ ನಾಡಿನ ಸಿಂಹಗಳನ್ನು ನೆನೆಯುವವರಾರು ?

ಕಾರ್ಯನಿರ್ವಾಹಕ ಸಂಪಾದಕ ಹಾಗೂ ಅಂಕಣಕಾರ ಲೋಕೇಶ್‌ ಕಾಯರ್ಗ

Profile Ashok Nayak Feb 26, 2025 5:39 AM

ಲೋಕಮತ

kaayarga@gmail.com

ಬಾಲಿವುಡ್ ನಟ ವಿಕ್ಕಿ ಕೌಶಲ್ ನಟನೆಯ ‘ಛಾವಾ’ (ಮರಿ ಸಿಂಹ) ಸಿನಿಮಾ ಬಾಕ್ಸ್ ಆಫೀಸ್‌ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಛತ್ರಪತಿ ಶಿವಾಜಿಯ ಪುತ್ರ ಛತ್ರಪತಿ ಸಂಭಾ ಜಿ ಜೀವನ ಗಾಥೆ ಪ್ರೇರಣೆ ಎಂದು ನಿರ್ದೇಶಕ ಲಕ್ಷ್ಮಣ್ ಉಟೇಕರ್ ತಿಳಿಸಿದ್ದರೂ, ಚಿತ್ರಕ್ಕೆ ಬೇಕಾದ ನಾಟಕೀಯ ಸನ್ನಿವೇಶಗಳನ್ನು ಸೇರಿಸಲಾಗಿದೆ ಎಂದು ಹೇಳುವ ಮೂಲಕ ಆರಂಭದಲ್ಲೇ ವಿವಾದಗಳಿಂದ ‘ಬೇಲ್’ ಪಡೆದುಕೊಂಡಿದ್ದಾರೆ. ಇಷ್ಟಾದರೂ ಚಿತ್ರಪ್ರೇಮಿ ಗಳ ಪಾಲಿಗಿದು ಇದು ಸಂಭಾಜಿಯ ಅಸಲಿ ಕಥನ. ಅದರಲ್ಲೂ ಮಹಾರಾಷ್ಟ್ರ ಜನತೆ ಈ ಚಿತ್ರವನ್ನು ಮರಾಠರ ಶೌರ‍್ಯ, ಪರಾಕ್ರಮ ಮತ್ತು ಅಸ್ಮಿತೆಯ ಭಾಗವಾಗಿ ನೋಡುತ್ತಿದ್ದಾರೆ. ಇತಿಹಾಸವನ್ನು ಓದಿದವರಿಗೆ ಔರಂಗಜೇಬನ ಮತಾಂಧತೆ ಮತ್ತು ಕ್ರೌರ‍್ಯದ ಬಗ್ಗೆ ಗೊತ್ತು. ಆದರೆ ಮೊದಲ ಬಾರಿಗೆ ಇದನ್ನು ತೆರೆಯ ಮೇಲೆ ನೋಡಿ, ಅಭಿಪ್ರಾಯಕ್ಕೆ ಬರುವವರ ಆವೇಶ ಬೇರೆಯೇ ಇರುತ್ತದೆ.

ಇದನ್ನೂ ಓದಿ: Lokesh Kayarga Column: ಕೇಜ್ರಿವಾಲ್‌ ಎಂಬ ನಂಬಿಕೆಯ ಕಗ್ಗೊಲೆ

ಇದೇನೇ ಇರಲಿ, ಇಂತಹ ಚಿತ್ರಗಳಿಂದ ನಮ್ಮ ಯುವ ಪೀಳಿಗೆ ಇತಿಹಾಸದ ಪುಟಗಳತ್ತ ಮತ್ತೊಮ್ಮೆ ಕಣ್ಣು ಹಾಯಿಸಲು ಅನುಕೂಲ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅತಿರಂಜಿತ ಇತಿಹಾಸದ ಹೊರತಾಗಿಯೂ, ಕೆಲವರಾದರೂ ನೈಜ ಇತಿಹಾಸವನ್ನು ತಿಳಿಯ ಬೇಕೆಂಬ ತುಡಿತದಿಂದ ಅಧ್ಯಯನಶೀಲರಾದರೆ ಅಷ್ಟರ ಮಟ್ಟಿಗಿದು ಅನುಕೂಲ.

ರಾಷ್ಟ್ರಪ್ರೇಮ, ಶೌರ‍್ಯದ ವಿಚಾರಕ್ಕೆ ಬಂದಾಗ ನಮ್ಮ ದೇಶದಲ್ಲಿ ರಜಪೂತರು, ಸಿಖ್ಖರು, ಮರಾಠರು ಸೇರಿದಂತೆ ಕೆಲವು ಜನಾಂಗ ಮತ್ತು ಪ್ರಾಂತ್ಯದ ಹೆಸರನ್ನು ಮೊದಲಿನಿಂದಲೂ ಉಲ್ಲೇಖಿಸಿಕೊಂಡು ಬರಲಾಗುತ್ತಿದೆ. ನಮ್ಮ ಮಿಲಿಟರಿಯಲ್ಲೂ ಈ ಹೆಸರಿನಲ್ಲಿ ಪ್ರತ್ಯೇಕ ರೆಜಿಮೆಂಟ್ ಇದೆ.

Screenshot_2 ok

ಇದಕ್ಕೆ ಬಲ ನೀಡಿರುವುದು ಇತಿಹಾಸದ ಕಥನಗಳು. ‘ಛಾವಾ’ ಸಿನಿಮಾದಲ್ಲಿ ಮೂರ‍್ನಾಲ್ಕು ಬಾರಿ ಕರ್ನಾಟಕದ ಹೆಸರು ಬರುತ್ತದೆ. ಕರ್ನಾಟಕದಿಂದ ಬಂದ ಕಪ್ಪಕಾಣಿಕೆ ಬಗ್ಗೆಯೂ ಉಲ್ಲೇಖಿಸಲಾಗುತ್ತದೆ. ಆದರೆ ಅಸಲಿಗೆ ಅಂದು ಕರ್ನಾಟಕ ಎಂಬ ಪ್ರಾಂತ್ಯ ಇರಲಿಲ್ಲ. ಕನ್ನಡಿಗರು ಮೈಸೂರು, ಕೆಳದಿ ಅರಸರು, ಬಿಜಾಪುರ ಸುಲ್ತಾನರು ಹೀಗೆ ನಾನಾ ಪ್ರಾಂತೀ ಯ ರಾಜರುಗಳ ಅಧೀನದಲ್ಲಿ ಹಂಚಿ ಹೋಗಿದ್ದರು.

1681ರಲ್ಲಿ ಮೈಸೂರಿನ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ ಸಂಭಾಜಿ, ಚಿಕ್ಕದೇವರಾಜ ಒಡೆಯರ್ ಸೇನೆಯ ಎದುರು ಸೋತು ವಾಪಸ್ಸಾಗಿದ್ದ. ಇತಿಹಾಸದುದ್ದಕ್ಕೂ ಕನ್ನಡಿಗರು ತಮ್ಮ ಕಲಿತನ ಮೆರೆದರೂ ಮರಾಠಿಗರು, ರಜಪೂತರನ್ನು ಉಲ್ಲೇಖಿಸುವಂತೆ ಈ ಶೌರ್ಯ, ಪರಾಕ್ರಮ ಗಳನ್ನು ಕನ್ನಡಿಗರ ಪರಾಕ್ರಮ ಎಂದೂ ಬಿಂಬಿಸಲಿಲ್ಲ. ಹೀಗಾಗಿ ನಮ್ಮ ಇತಿಹಾಸದ ಬಗ್ಗೆ, ನಮ್ಮನ್ನಾಳಿದ ಅರಸು ಮನೆತನಗಳ ಬಗ್ಗೆ ನಮಗೇ ಸಾಕಷ್ಟು ಅವಜ್ಞೆ ಇದೆ.

ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಶಿವಾಜಿ, ಸಂಭಾಜಿ, ಸಂಭಾಜಿಯ ಮೊಮ್ಮಗ ಬಾಜಿ ರಾವ್, ತಾನಾಜಿ ಮುಂತಾದ ನಾಯಕರ ಬಗ್ಗೆ ತಿಳಿದ ಕನ್ನಡಿಗರು ಇಂದು ಮರಾಠಾ ಇತಿಹಾಸದ ಕುರಿತು ಮಾತನಾಡಿ ಕೊಳ್ಳುತ್ತಿದ್ದಾರೆ. ಆದರೆ ನಮ್ಮ ನಾಡಿನ ಸಿಂಹಗಳು ಮತ್ತು ಸಿಂಹಿಣಿಯರ ಬಗ್ಗೆ ತಿಳಿಯದೇ ಅನಾಥ ಪ್ರಜ್ಞೆ ಅನುಭವಿಸುತ್ತಿದ್ದಾರೆ.

ಕನ್ನಡಿಗರೇ ರಕ್ಷಕರು

ವಿಶೇಷ ಎಂದರೆ ಸಂಭಾಜಿಯ ಮರಣಾನಂತರ ಆತನ ಉತ್ತರಾಧಿಕಾರಿಯಾಗಿ ಬಂದ ರಾಜಾ ರಾಮನ ಪ್ರಾಣ ರಕ್ಷಣೆ ಮಾಡಿದ್ದು ಕನ್ನಡಿಗ ರಾಣಿ ಕೆಳದಿಯ ರಾಣಿ ಚೆನ್ನಮ್ಮ. ಒಂದು ವೇಳೆ ಅಂದು ಚೆನ್ನಮ್ಮ ಮೊಘಲರ ಸೈನ್ಯದಿಂದ ರಾಜಾರಾಮನ ಪ್ರಾಣ ರಕ್ಷಣೆ ಮಾಡ ದಿದ್ದರೆ ಮರಾಠರ ಆಡಳಿತ ಅಂದೇ ಕೊನೆಗೊಳ್ಳುತ್ತಿತ್ತು. ಸಂಭಾಜಿಯ ಮರಣದ ಸುದ್ದಿ ತಲುಪುತ್ತಲೇ 1689ರ ಮಾರ್ಚ್ 12ರಂದು ರಾಯಗಢ ಕೋಟೆಯಲ್ಲಿ ಕಿರಿಯ ವಯಸ್ಸಿನ ರಾಜಾರಾಮನಿಗೆ ಪಟ್ಟಾಭಿಷೇಕ ಮಾಡಲಾಗುತ್ತದೆ.

ಇದನ್ನು ತಿಳಿದ ಕೂಡಲೇ ಮಾರ್ಚ್ 25ರಂದು ಔರಂಗಜೇಬನ ಪುತ್ರ ಅಜಮತ್ ಅರಾ ನೇತೃತ್ವದ ಸೈನ್ಯ ರಾಯಗಢದ ಮೇಲೆ ಮುತ್ತಿಗೆ ಹಾಕುತ್ತದೆ. ರಾಜಾರಾಮನ ಪ್ರಾಣ ಉಳಿ ಸುವ ದೃಷ್ಟಿಯಿಂದ ಮರಾಠ ಅಽನ ಅರಸರ ಆಶ್ರಯ ಕೇಳಿದಾಗ, ಔರಂಗಜೇಬನ ಕ್ರೌರ‍್ಯಕ್ಕೆ ಹೆದರಿ ಅವರಾರೂ ರಕ್ಷಣೆ ನೀಡುವುದಿಲ್ಲ. ಈ ಸಂದರ್ಭದಲ್ಲಿ ರಾಜರಾಮನ ವೇಷ ಮರೆಸಿ ಕೆಳದಿಗೆ ಕರೆ ತರಲಾಗುತ್ತದೆ.

ಮರಾಠ ರಾಜನಿಗೆ ಆಶ್ರಯ ಕೊಟ್ಟರೆ ಮೊಘಲರ ದಾಳಿ ನಿಶ್ಚಿತವೆಂದು ತಿಳಿದರೂ ಕೆಳದಿಯ ರಾಣಿಚೆನ್ನಮ್ಮ, ರಕ್ಷಣೆ ಬಯಸಿದವರಿಗೆ ಆಶ್ರಯ ನೀಡುವುದು ಧರ್ಮ ಎಂದು ತಿಳಿದು ರಾಜರಾಮನ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲುತ್ತಾಳೆ. ಮೊಘಲರ ದಾಳಿಗೆ ಮುನ್ನವೇ ಯುದ್ಧ ಕ್ಕೆ ಸಿದ್ಧಳಾಗುತ್ತಾಳೆ. ಕೆಳದಿ ಸೈನಿಕರ ಗೆರಿಲ್ಲಾ ಮಾದರಿ ದಾಳಿಗೆ ಸಿಲುಕಿದ ಅಜಮತ್ ಅರಾ ನೇತೃತ್ವದ ಸೈನ್ಯಕ್ಕೆ ಕೋಟೆಯತ್ತ ಬರಲು ಸಾಧ್ಯವಾಗುವುದಿಲ್ಲ.

ಕೊನೆಗೆ ಔರಂಗಜೇಬನ ಸೂಚನೆಯಂತೆ ಅಜಮತ್ ದಿಲ್ಲಿಗೆ ಮರಳುತ್ತಾನೆ. ಇದಕ್ಕೂ ಮುನ್ನ ಬೆಳವಡಿಯ ಮಲ್ಲಮ್ಮ ರಾಣಿಯ ಮುಂದೆ ಸೋತ ಛತ್ರಪತಿ ಶಿವಾಜಿ ರಾಜಿ ಸಂಧಾನಕ್ಕೆ ಮಾಡಿಕೊಂಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. 16ನೇ ಶತಮಾನದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ, ಭಟ್ಕಳದ ರಾಣಿ ಚೆನ್ನಾಭೈರಾದೇವಿ ಮುಂತಾದವರು ಪೋರ್ಚು ಗೀಸರ ವಿರುದ್ಧ ದಿಟ್ಟತನದಿಂದ ಹೋರಾಡಿ, ಫಿರಂಗಿ ಸಜ್ಜಿತ ಅವರ ಸೈನ್ಯವನ್ನು ಧೈರ್ಯ ದಿಂದ ಹಿಮ್ಮೆಟ್ಟಿಸಿದ್ದರು.

ನಮ್ಮ ಇತಿಹಾಸದ ಪಠ್ಯಗಳಲ್ಲಿ ರಾಣಿ ಅಬ್ಬಕ್ಕನ ಸಾಹಸದ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿ ಇದೆ. ಆದರೆ ಸುಮಾರು 54 ವರ್ಷಗಳ ಕಾಲ ಆಡಳಿತ ನಡೆಸಿದ ಚೆನ್ನಾಭೈರಾದೇವಿಯ ಸಾಹಸ ಇಂದಿಗೂ ಅಜ್ಞಾತವಾಗಿ ಉಳಿದಿದೆ.

ಇತಿಹಾಸ ದಾಖಲಿಸದ ಅಮರ ಸುಳ್ಯ ದಂಗೆ

ನಾವು ಪಠ್ಯದಲ್ಲಿ ಓದಿದಂತೆ 1857ರ ಸಿಪಾಯಿದಂಗೆ ಭಾರತದ ಮೊತ್ತ ಮೊದಲ ಸ್ವಾತಂತ್ರ್ಯ ಸಂಗ್ರಾಮ. ಆದರೆ ಇದಕ್ಕೆ ಎರಡು ದಶಕಗಳ ಮುನ್ನ ಅಂದು ಕೊಡಗಿನ ಭಾಗವಾಗಿದ್ದ ಸುಳ್ಯ ಪ್ರದೇಶದ ರೈತಾಪಿ ಜನತೆ ತಮ್ಮದೇ ಸೈನ್ಯ ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಕೆದಂಬಾಡಿ ರಾಮಯ್ಯ ಗೌಡರ ನೇತೃತ್ವದಲ್ಲಿ ಇಲ್ಲಿನ ರೈತರು ಸೈನ್ಯ ಕಟ್ಟಿದ ರೀತಿ, ಮೂರ‍್ನಾಲ್ಕು ಕಡೆಗಳಲ್ಲಿ ಬ್ರಿಟಿಷರ ಖಜಾನೆಯನ್ನು ಲೂಟಿ ಹೊಡೆದು ಮಂಗಳೂರಿನಲ್ಲಿ ಬಾವುಟಗುಡ್ಡೆ ಯಲ್ಲಿ ತಮ್ಮ ಧ್ವಜ ಪ್ರತಿಷ್ಠಾಪನೆ ಮಾಡಿದ್ದು, ಬ್ರಿಟಿಷ್ ಮುಕ್ತ ಸ್ವತಂತ್ರ ಪ್ರದೇಶ ಎಂದು ಘೋಷಣೆ ಹೊರಡಿಸಿದ್ದು ಸಂಭಾಜಿಯ ಜೀವನ ಚರಿತ್ರೆಗಿಂತ ಯಾವ ರೀತಿಯಲ್ಲೂ ಕಡಿಮೆ ಇಲ್ಲ.

ಸಂಭಾಜಿ ಸಿಕ್ಕಿಬಿದ್ದಂತೆ ಬಂಧುಜನರ ದ್ರೋಹದ ಕಾರಣದಿಂದ ಈ ಹೋರಾಟದಲ್ಲಿ ಪಾಲ್ಗೊಂಡ 1115 ರೈತ ಹೋರಾಟಗಾರರು ಬ್ರಿಟಿಷರ ಕೈಗೆ ಸಿಕ್ಕಿ ಬೀಳುತ್ತಾರೆ. ಸಿಕ್ಕಿಬಿದ್ದ ಎಲ್ಲ ರೈತರ ಜಮೀನನ್ನು ಬ್ರಿಟಿಷರು ಮುಟ್ಟುಗೋಲು ಹಾಕಿಕೊಂಡು ಮಾಹಿತಿದಾರರಿಗೆ ಹಂಚುತ್ತಾರೆ. ಕೆಲವು ಮುಖಂಡರನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಗಲ್ಲಿಗೇರಿ ಸಿದರೆ, ಇನ್ನು ಕೆಲವರನ್ನು ಮಡಿಕೇರಿಯ ಕೋಟೆಯ ಮುಂದೆ ಬಹಿರಂಗವಾಗಿ ಗಲ್ಲಿಗೇರಿಸ ಲಾಗುತ್ತದೆ.

ಕೆದಂಬಾಡಿ ರಾಮಯ್ಯ ಗೌಡ, ಅವರ ಸಣ್ಣಪ್ಪ ಗೌಡ ಸೇರಿದಂತೆ ಅನೇಕರನ್ನು ಬೋನು ಗಳಲ್ಲಿ ಇರಿಸಿ ಸಿಂಗಾಪುರದ ಜೈಲಿಗೆ ರವಾನಿಸಲಾಗುತ್ತದೆ. ಸ್ವಾತಂತ್ರ್ಯ ಮತ್ತು ಸ್ವಾಭಿ ಮಾನದ ಹೆಸರಿನಲ್ಲಿ ಹೋರಾಡಿದ ಇವರ ಕಥಾನಕ ಕನ್ನಡಿಗರು ಬಿಡಿ, ಇತ್ತೀಚಿನವರೆಗೆ ನಮ್ಮ ಇತಿಹಾಸಕಾರರಿಗೂ ತಿಳಿದಿರಲಿಲ್ಲ. ಈ ಬಂಡಾಯದ ಮಹತ್ವವನ್ನು ಕಡಿಮೆ ಮಾಡಲೆಂದೇ ಬ್ರಿಟಿಷರು, ಇದನ್ನು ‘ಕಲ್ಯಾಣಪ್ಪನ ಕಾಟ್‌ಕಾಯಿ’ ಎಂದು ಕರೆದು ದರೋಡೆ ಕೋರರ ದಾಳಿ ಎಂದು ಬಿಂಬಿಸಿದರು. ನಮ್ಮ ಇತಿಹಾಸ ಕಾರರೂ ಇದನ್ನು ನಂಬಿದ್ದರು.

ಮೊದಲ ಸ್ವಾತಂತ್ರ್ಯ ಸಮರ

ಕೆನರಾ ಮತ್ತು ಕೊಡಗು ಪ್ರಾಂತದಲ್ಲಿ ರೈತರು, ಕೂಲಿಕಾರ್ಮಿಕರು, ಜನಸಾಮಾನ್ಯರನ್ನು ಒಗ್ಗೂಡಿಸಿಕೊಂಡು ಬ್ರಿಟಿಷರ ವಿರುದ್ಧ ಶಸ್ತ್ರಸಜ್ಜಿತ ಹೋರಾಟ ನಡೆಸಿ ಮಡಿಕೇರಿಯಿಂದ ಮಂಗಳೂರುವರೆಗಿನ ಭಾಗವನ್ನು 13 ದಿನಗಳ ಕಾಲ ಸ್ವತಂತ್ರಗೊಳಿಸಿದ ಕೆದಂಬಾಡಿ ರಾಮಯ್ಯ ಗೌಡ ಅವರ ಪ್ರತಿಮೆಯನ್ನು ಎರಡು ವರ್ಷಗಳ ಹಿಂದಷ್ಟೇ ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ಥಾಪಿಸಿ ಈ ದೇಶಪ್ರೇಮಿಗೆ ಗೌರವ ಸಲ್ಲಿಸಲಾಗಿದೆ.

ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆಯನ್ನು ಮಡಿಕೇರಿಯಲ್ಲಿ ಸ್ಥಾಪಿಸಲಾಗಿದೆ. ಆದರೆ ಧಿರೋದಾತ್ತ ಕಥಾನಕ ವನ್ನು ರಾಷ್ಟ್ರಮಟ್ಟದಲ್ಲಿ ಬಿಂಬಿಸಿ 1937ರಷ್ಟು ಹಿಂದೆಯೇ ಕನ್ನಡದ ನೆಲದಲ್ಲಿ ನಮ್ಮ ದೇಶದ ಮೊದಲ ಸ್ವಾತಂತ್ರ್ಯ ಸಮರ ಆರಂಭವಾಗಿತ್ತು ಎಂದು ನಿರೂಪಿಸಲು ನಮಗೆ ಸಾಧ್ಯವಾಗಿಲ್ಲ. ಇದೇ ಇತಿಹಾಸ ತಮಿಳರು, ತೆಲುಗರು, ಮರಾಠರ ದ್ದಾಗಿದ್ದರೆ ಈ ಹೆಸರುಗಳು ರಾಷ್ಟ್ರಮಟ್ಟದಲ್ಲಿ ಕೇಳಿ ಬರುತ್ತಿತ್ತು.

ಅಮರ ಸುಳ್ಯದ ಈ ಹೋರಾಟಕ್ಕೆ ಅರಸೊತ್ತಿಗೆಯ ನಂಟು ಇರಲಿಲ್ಲ. 1799ರಲ್ಲಿ ಟಿಪ್ಪು ಸುಲ್ತಾನ ಆಳ್ವಿಕೆ ಕೊನೆಗೊಂಡ ಬಳಿಕ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶ ಬ್ರಿಟಿಷರ ವಶವಾಯಿತು. ಈಗ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿರುವ ಸುಳ್ಯ ಕೊಡಗಿನ ಹಾಲೇರಿ ರಾಜವಂಶಸ್ಥರ ಆಳ್ವಿಕೆಗೆ ಒಳಪಟ್ಟಿತ್ತು.

ಹಾಲೇರಿ ಅರಸ ಚಿಕ್ಕವೀರ ರಾಜೇಂದ್ರನ ಪದಚ್ಯುತಿ ಬಳಿಕ ಈ ಭಾಗವೂ ಬ್ರಿಟಿಷರ ವಶವಾಗಿತ್ತು. ಅಲ್ಲಿವರೆಗೂ ವಸ್ತು ರೂಪದಲ್ಲಿ ಸಂದಾಯವಾಗುತ್ತಿದ್ದ ಕಂದಾಯವನ್ನು ಹಣದ ರೂಪದಲ್ಲಿ ನೀಡಬೇಕೆಂದು ಬ್ರಿಟಿಷರು ತಾಕೀತು ಮಾಡಿದ್ದು ರೈತರ ದಂಗೆಗೆ ಮೂಲ ಕಾರಣವಾಗಿತ್ತು.

1837 ಮಾರ್ಚ್ 30ರಂದು ಸುಳ್ಯ ಮಿತ್ತೂರು ಗ್ರಾಮದ ಕೆದಂಬಾಡಿ ರಾಮಯ್ಯ ಗೌಡರಿಗೆ ಸೇರಿದ ಮದುವೆ ಗದ್ದೆಯಿಂದ ಕಲ್ಯಾಣಸ್ವಾಮಿ ನೇತೃತ್ವದಲ್ಲಿ ಹೊರಟ ಸಾವಿರಕ್ಕೂ ಹೆಚ್ಚಿನ ರೈತರ ದಂಡು ಮೊದಲು ಬೆಳ್ಳಾರೆ ಪೇಟೆಯಲ್ಲಿ ಕಂಪೆನಿಯ ಖಜಾನೆಯನ್ನು ವಶಪಡಿಸಿ ಗೆಲುವು ಸಾಧಿಸುತ್ತದೆ. ಹುಲಿ ಕಡಿದ ನಂಜಯ್ಯ, ಚೆಟ್ಟಿ-ಕುರ್ತು ಕುಡಿಯರು, ಕರಡಿಮಲೆ ಅಣ್ಣಿಗೌಡ, ಪೆರಾಜೆ ಊಕಣ್ಣ ಬಂಟ, ಕರಣಿಕ ಕೃಷ್ಣಯ್ಯ, ಕರಣಿಕ ಸುಬ್ಬಯ್ಯ, ಕೋಲ್ಚಾರು ಕೂಸಪ್ಪ ಗೌಡ ಮೊದಲಾದವರು ಹೋರಾಟದ ನೇತೃತ್ವ ವಹಿಸುತ್ತಾರೆ.

ಇವರೆಲ್ಲರ ಹೆಸರು ಬ್ರಿಟಿಷರ ದಾಖಲೆಗಳಲ್ಲಿವೆ. ಬೆಳ್ಳಾರೆಯಲ್ಲಿ ಹೋರಾಟದ ಸೇನಾಪಡೆ ಯನ್ನು ನಾಲ್ಕು ತಂಡಗಳಾಗಿ ವಿಂಗಡಿಸಿ ಮೊದಲ ತಂಡ ಕುಂಬ್ಳೆ, ಕಾಸರಗೋಡು, ಮಂಜೇಶ್ವರದ ಕಡೆ, ಎರಡನೇ ತಂಡವನ್ನು ಬಂಟ್ವಾಳ, ಕಾರ್ಕಳಕ್ಕೆ, ಮೂರನೇ ತಂಡ ವನ್ನು ಉಪ್ಪಿನಂಗಡಿ, ಬಿಸಿಲೆಗೆ ಕಳುಹಿಸಿದರೆ, ಕಲ್ಯಾಣ ಸ್ವಾಮಿ, ಕೆದಂಬಾಡಿ ರಾಮಯ್ಯ ಗೌಡ ಮತ್ತು ಕುಕ್ಕುನಾಡು ಚೆನ್ನಯ್ಯರನ್ನು ಒಳಗೊಂಡ ಪ್ರಧಾನ ಸೈನ್ಯ ಮಂಗಳೂರಿನ ಕಡೆ ಹೊರಡುತ್ತದೆ.

ಪುತ್ತೂರಿನ ಬ್ರಿಟಿಷ್ ಕಂಪೆನಿ ಕಚೇರಿಯನ್ನು ವಶಪಡಿಸಿಕೊಂಡ ಮುಖ್ಯಪಡೆ ಮಂಗಳೂರಿ ನತ್ತ ಧಾವಿಸಿದಾಗ ನಂದಾವರದ ಲಕ್ಷ್ಮಪ್ಪ ಬಂಗರಸ, ವಿಟ್ಲದ ಅರಸರು,ಧರ್ಮಸ್ಥಳದ ಹೆಗ್ಗಡೆಯವರ ಬೆಂಗಾವಲು ಪಡೆ ಜತೆ ಸೇರುತ್ತಾರೆ. ಈ ಸೈನ್ಯವನ್ನು ಕಂಡು ಅಂದಿನ ಚೀ- ಕಲೆಕ್ಟರ್ ಲೆವಿನ್ ಪಲಾಯನ ಮಾಡುತ್ತಾನೆ.

ಮಂಗಳೂರಿನ ಖಜಾನೆ ವಶಪಡಿಸಿಕೊಂಡ ಹೋರಾಟಗಾರರು ಇಂದು ಬಾವುಟಗುಡ್ಡೆ ಮೈದಾನದಲ್ಲಿ ಕಂಪನಿ ಧ್ವಜ ಇಳಿಸಿ ಹಾಲೇರಿ ವಂಶದ ರಾಜಲಾಂಛನದ ಧ್ವಜವನ್ನು ಹಾರಿಸುತ್ತಾರೆ. ಸೆರೆಮನೆಗಳ ಬಾಗಿಲು ಒಡೆದು ಅಲ್ಲಿರುವ ಕೈದಿಗಳನ್ನು ಬಿಡುಗಡೆ ಮಾಡುತ್ತಾರೆ.

ಮಂಗಳೂರನ್ನು ಗೆದ್ದ ರೈತ ಸೈನ್ಯ ಮಡಿಕೇರಿಯನ್ನು ವಶಪಡಿಸಿಕೊಳ್ಳಲು ಕೂಜುಗೋಡು ಅಪ್ಪಯ್ಯ ಗೌಡ ಮತ್ತು ಕೂಜುಗೋಡು ಮಲ್ಲಪ್ಪ ಗೌಡ ಇವರ ನೇತೃತ್ವದಲ್ಲಿ ಬಿಸಿಲೆ ಘಾಟಿಯ ಮುಖಾಂತರ ಮಡಿಕೇರಿಯತ್ತ ಸಾಗಿತ್ತು. ಆದರೆ ಮಂಗಳೂರನ್ನು ಕಳೆದುಕೊಂಡ ಬ್ರಿಟಿಷರು ಮುಂಬಯಿಯಿಂದ ಸೈನ್ಯ, ಮದ್ದು ಗುಂಡು, ಯುದ್ಧ ಸಾಮಗ್ರಿಗಳನ್ನು ತರಿಸಿ ಪ್ರತಿ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.

ಬ್ರಿಟಿಷರ ಸುಸಜ್ಜಿತ ಸೇನೆಯ ಎದುರು ರೈತ ಸೈನ್ಯಕ್ಕೆ ಸೋಲಾಯಿತು. ಮಲಬಾರಿನಿಂದ ಹಡಗಿನಲ್ಲಿ ಬಂದ ಹೆಚ್ಚುವರಿ ಬ್ರಿಟಿಷ್ ಪಡೆ ಮಂಗಳೂರನ್ನು ಮರಳಿ ವಶಕ್ಕೆ ಪಡೆಯು ತ್ತದೆ. ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಲಕ್ಷಪ್ಪ ಬಂಗರಸ, ಉಪ್ಪಿನಂಗಡಿಯ ಮಂಜ, ಕಲ್ಯಾಣಪ್ಪ ನಾಮಾಂಕಿತ ಪುಟ್ಟ ಬಸವರನ್ನು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಗಲ್ಲಿಗೇರಿಸಲಾಗುತ್ತದೆ.

ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಮಡಿಕೇರಿಯ ಕೋಟೆಯ ಎದುರು ಬಹಿರಂಗವಾಗಿ ಗಲ್ಲಿಗೇರಿಸಲಾಯಿತು. ಕೆದಂಬಾಡಿ ರಾಮಯ್ಯ ಗೌಡ, ಅವರ ಮಗ ಸಣ್ಣಯ್ಯ ಗೌಡ ಸಹಿತ ಹಲವಾರು ಸ್ವಾತಂತ್ರ್ಯ ಯೋಧರನ್ನು ಪ್ರಾಣಿಗಳಂತೆ ಬೋನಿನಲ್ಲಿ ತುಂಬಿಸಿ ಸಿಂಗಾಪುರಕ್ಕೆ ರವಾನಿಸಲಾಯಿತು. ದೇಶಕ್ಕೆ ಸ್ವಾತಂತ್ರ್ಯದ ಅರ್ಥ ತಿಳಿಯುವ ಮುನ್ನವೇ ಇದಕ್ಕಾಗಿ ಹೋರಾಡಿದ ಈ ಯೋಧರು ತಮ್ಮದಲ್ಲದ ನೆಲದಲ್ಲಿ ಜೈಲಿನಲ್ಲಿಯೇ ನರಳಿ ಸಾವು ಕಾಣ ಬೇಕಾಯಿತು. ಸಂಭಾಜಿ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಹೇಳುವಂತೆ, ಸ್ವರಾಜ್ಯಕ್ಕಾಗಿ ಹೋರಾ ಡಿದ ಇವರ ತ್ಯಾಗ, ಬಲಿದಾನ ವ್ಯರ್ಥವಾಗಬಾರದು. ಇದು ತಿಳಿಯಬೇಕಾದರೆ ನಮ್ಮ ಇತಿಹಾಸವನ್ನು ನಾವು ತಿಳಿಯಬೇಕಾಗಿದೆ.