Yogi Adityanath: ಚಿತ್ರವಾಗಿ ತೆರೆಮೇಲೆ ಬರಲಿದೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಜೀವನ ಚರಿತ್ರೆ; ಫಸ್ಟ್ ಲುಕ್ ರಿಲೀಸ್
Ajey - The Untold Story of a Yogi: ಉತ್ತರ ಪ್ರದೇಶ ಮುಖ್ಯಮಂತ್ರಿ, ಬಿಜೆಪಿಯ ಫೈರ್‌ಬ್ರ್ಯಾಂಡ್ ಯೋಗಿ ಆದಿತ್ಯನಾಥ್ ಅವರ ಜೀವನ ಚರಿತ್ರೆ ತೆರೆಮೇಲೆ ಮಿಂಚಲು ಸಿದ್ದತೆ ನಡೆಯುತ್ತಿದೆ. ಹೌದು ಯೋಗಿ ಜೀವನವನ್ನಾಧರಿಸಿದ ಚಿತ್ರ ಸೆಟ್ಟೇರಿದೆ. ಇದಕ್ಕೆ ʼಅಜಯ್-ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಯೋಗಿʼ ಎಂದು ಹೆಸರಿಡಲಾಗಿದ್ದು, ಫಸ್ಟ್ ಲುಕ್ ಹೊರ ಬಿದ್ದಿದೆ.


ಮುಂಬೈ: ರಾಜಕೀಯದಲ್ಲಿ ಸಕ್ರಿಯರಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ, ಬಿಜೆಪಿಯ ಫೈರ್‌ಬ್ರ್ಯಾಂಡ್ ಯೋಗಿ ಆದಿತ್ಯನಾಥ್ (Yogi Adityanath) ಇನ್ನುಮುಂದೆ ಬಣ್ಣದ ಲೋಕದಲ್ಲೂ ಮಿಂಚಲಿದ್ದಾರೆ. ಹಾಗಂತ ಅವರು ಚಿತ್ರರಂಗಕ್ಕೆ ಬರುತ್ತಿಲ್ಲ. ಬದಲಾಗಿ ಅವರ ಜೀವನ ಚರಿತ್ರೆ ಸಿನಿಮಾ ರೂಪದಲ್ಲಿ ತೆರೆ ಮೇಲೆ ಬರಲಿದೆ. ಹೌದು, ಬಾಲಿವುಡ್‌ನಲ್ಲಿ ಯೋಗಿ ಬಯೋಪಿಕ್ ಸಿದ್ದವಾಗುತ್ತಿದೆ. ಸದ್ದಿಲ್ಲದೆ ತಯಾರಿಸಿ ನಡೆಸಿರುವ ಚಿತ್ರತಂಡ ಇದೀಗ ಫಸ್ಟ್ ಲುಕ್, ಮೋಷನ್ ಪೋಸ್ಟರ್ ಹೊರಬಿಟ್ಟು ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದೆ. ಚಿತ್ರಕ್ಕೆ ʼಅಜಯ್-ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಯೋಗಿʼ (Ajey - The Untold Story of a Yogi) ಎಂದು ಹೆಸರಿಡಲಾಗಿದೆ. ರವೀಂದ್ರ ಗೌತಮ್ (Ravindra Gautam) ನಿರ್ದೇಶನದ ಈ ಸಿನಿಮಾ ಹಿಂದಿಯಲ್ಲಿ ತಯಾರಾಗಿ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. ಈ ವರ್ಷವೇ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.
ಯೋಗಿ ಆದಿತ್ಯನಾಥ್ ಅವರ ಜೀವನ ಯಾವ ಸಿನಿಮಾ ಕಥೆಗಿಂತಲೂ ಕಡಿಮೆ ಇಲ್ಲ. ಎಲ್ಲ ಭಾವನೆಗಳ ಮಿಶ್ರಣದಂತಿದೆ ಅವರ ಬದುಕು. ಸನ್ಯಾಸಿಯಾಗಿದ್ದುಕೊಂಡು ರಾಜಿಕೀಯಕ್ಕೆ ಬಂದು, ಮುಖ್ಯಮಂತ್ರಿ ಪಟ್ಟಕ್ಕೇರಿ, ಅಲ್ಲಿಯೂ ಅನೇಕ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದ ಅವರ ಹೋರಾಟ, ಹಂತ ಹಂತವಾಗಿ ಗೆಲುವಿನ ಮೆಟ್ಟಿಲೇರಲು ಪಟ್ಟ ಶ್ರಮ, ಎದುರಿಸಿದ ಅವಮಾನ-ಹೀಗೆ ಯಾರಿಗೂ ಗೊತ್ತಿಲ್ಲದ ಅನೇಕ ವಿಚಾರಗಳು ಈ ಸಿನಿಮಾದ ಮೂಲಕ ಪ್ರೇಕ್ಷಕರೆದುರು ತೆರೆದುಕೊಳ್ಳಲಿದೆ.
ʼಅಜಯ್-ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಯೋಗಿʼ ಚಿತ್ರದ ಮೋಷನ್ ಪೋಸ್ಟರ್ ನೋಡಿ:
ಈ ಸುದ್ದಿಯನ್ನೂ ಓದಿ: Box Office Clash: 2026ರ ಸಂಕ್ರಾಂತಿಗೆ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಪೈಪೋಟಿ; ಒಂದೇ ದಿನ 3 ಬಹು ನಿರೀಕ್ಷಿತ ಚಿತ್ರಗಳು ರಿಲೀಸ್
ಇದೀಗ ಹೊರ ಬಂದಿರುವ ಮೋಷನ್ ಪೋಸ್ಟರ್‌ನಲ್ಲಿ ಯೋಗಿ ಆದಿತ್ಯನಾಥ್ ಆಧ್ಯಾತ್ಮಿಕದತ್ತ ಆಕರ್ಷಿತರಾಗಿದ್ದು, ಬಳಿಕ ರಾಜಕೀಯಕ್ಕೆ ಕಾಲಿಟ್ಟಿದ್ದು, ಸಿಎಂ ಪಟ್ಟಕ್ಕೇರಿದ್ದು ಹೀಗೆ ವಿವಿಧ ವಿಚಾರಗಳ ಪ್ರಸ್ತಾವವಿರುವುದು ಕಂಡು ಬಂದಿದೆ. ಇದೇ ಕಾರಣಕ್ಕೆ ಸಿನಿಮಾ ಕುತೂಹಲ ಕೆರಳಿಸಿದೆ.
ʼಅಜಯ್ʼ ಚಿತ್ರವನ್ನು ಶಂತನು ಗುಪ್ತ ಅವರ ʼದಿ ಮಾಂಕ್ ಹೂ ಬಿಕೇಂ ಚೀಫ್ ಮಿನಿಸ್ಟರ್ʼ (The Monk Who Became Chief Minister) ಕೃತಿಯ ಆಧಾರದಲ್ಲಿ ನಿರ್ಮಿಸಲಾಗುತ್ತಿದೆ. ಇದು ಡ್ರಾಮ, ಸೆಂಟಿಮೆಂಟ್, ಆ್ಯಕ್ಷನ್ ಮತ್ತು ತ್ಯಾಗದ ಕಥೆಯನ್ನು ಒಳಗೊಂಡಿದೆ ಎಂದು ಚಿತ್ರತಂಡ ಹೇಳಿದೆ. ಯೋಗಿ ಆದಿತ್ಯನಾಥ್ ಅವರ ಜೀವನವನ್ನು ರಸವತ್ತಾಗಿ, ಕುತೂಹಲಭರಿತವಾಗಿ ಕಟ್ಟಿಕೊಡಲಾಗುತ್ತಿದೆಯಂತೆ.
ಪಾತ್ರ ವರ್ಗ
ಯೋಗಿ ಆದಿತ್ಯನಾಥ್ ಪಾತ್ರದಲ್ಲಿ ಅನಂತ್ ಜೋಶಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಲುಕ್ ಈಗಾಗಲೇ ಗಮನ ಸೆಳೆದಿದೆ. ಇನ್ನು ಪರೇಶ್ ರಾವಲ್, ದಿನೇಶ್ ಲಾಲ್ ಯಾದವ್, ಅಜಯ್ ಮೆಂಗಿ, ಪವನ್ ಮಲ್ಹೋತ್ರಾ, ಗರಿಮಾ ಸಿಂಗ್, ರಾಜೇಶ್ ಖಟ್ಟರ್ ಮತ್ತಿತರರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ʼʼಯೋಗಿ ಆದಿತ್ಯನಾಥ್ ಅವರ ಜೀವನ ಅನೇಕ ಸವಾಲುಗಳಿಂದ ಕೂಡಿದೆ. ಎಲ್ಲವನ್ನು ಬಿಟ್ಟು ಬರುವ ಹುಡುಗನೊಬ್ಬ ಯೋಗಿಯಾಗಿ ಬಳಿಕ ಮುಖ್ಯಮಂತ್ರಿಯಾಗಿ ಜನಸೇವಕನಾಗಿ ಬದಲಾದ ಪರಿಯನ್ನು ಸಮರ್ಥವಾಗಿ ತೆರೆಮೇಲೆ ತರಲಿದ್ದೇವೆʼʼ ಎಂದು ನಿರ್ಮಾಪಕರಾದ ರಿತು ಮೆಂಗಿ ತಿಳಿಸಿದ್ದಾರೆ. ಯೋಗಿ ಅದಿತ್ಯನಾಥ್ ರೌಡಿಗಳನ್ನು ಮಟ್ಟ ಹಾಕಿದ್ದು, ಹಿಂದೂ ಫೈರ್‌ಬ್ರ್ಯಾಂಡ್ ಆಗಿ ರೂಪುಗೊಂಡಿದ್ದು, ಸಮಾಜ ದ್ರೋಹಿಗಳ ವಿರುದ್ಧ ಬುಲ್ಡೋಜರ್ ನ್ಯಾಯ ಜಾರಿಗೊಳಿಸಿದ್ದು-ಹೀಗೆ ಅನೇಕ ಕೌತುಕಭರಿತ ವಿಚಾರಗಳು ಚಿತ್ರದಲ್ಲಿ ಇರಲಿದೆ. ಈ ಎಲ್ಲ ಕಾರಣಗಳಿಂದ ಚಿತ್ರ ಈಗಾಗಲೇ ಕುತೂಹಲ ಕೆರಳಿಸಿದೆ.