Rashmika Mandanna: ಕೊನೆಗೂ ಕರ್ನಾಟಕದವಳು ಎಂದು ಒಪ್ಪಿಕೊಂಡ ರಶ್ಮಿಕಾ; ಸ್ಯಾಂಡಲ್‌ವುಡ್‌ಗೆ ಬರ್ತಾರಾ?
ಸ್ಯಾಂಡಲ್‌ವುಡ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಸದ್ಯ ಬಹುಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ತೆಲುಗಿನ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವ ಅವರು ಇತ್ತೀಚೆಗೆ ತಮ್ಮ ಮೂಲ ಹೈದರಾಬಾದ್ ಎಂದು ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ತಾವು ಕರ್ನಾಟಕದವರು ಎಂದು ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ.

ಮುಂಬೈ: 2016ರಲ್ಲಿ ತೆರೆಕಂಡ ರಿಷಬ್ ಶೆಟ್ಟಿ-ರಕ್ಷಿತ್ ಶೆಟ್ಟಿ ಕಾಂಬಿನೇಷನ್‌ನ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಚತುರ್ಭಾಷಾ ನಟಿ. ಹಲವು ಚಿತ್ರಗಳಲ್ಲಿ ಬ್ಯುಸಿ ಇರುವ ಜತೆ ಜತೆಗೆ ವಿವಾದಗಳಿಂದಲೇ ಸಾಕಷ್ಟು ಸುದ್ದಿಯಾಗಿದ್ದಾರೆ, ಈಗಲೂ ಆಗುತ್ತಿದ್ದಾರೆ. ಸಹಜ ಚೆಲುವು, ಮುದ್ದಾದ ನಗು, ಉತ್ತಮ ಡ್ಯಾನ್ಸ್‌ನಿಂದಲೇ ಗಮನ ಸೆಳೆದ ಅವರು ಬಹುಬೇಗ ಪರಭಾಷೆಗಳಿಗೂ ಕಾಲಿಟ್ಟರು. ಟಾಲಿವುಡ್‌ಗೆ ತೆರಳಿ ಅಲ್ಲಿಯೂ ಸೈ ಎನಿಸಿಕೊಂಡ ಅವರು ಆ ಬಳಿಕ ಕಾಲಿವುಡ್‌ನಲ್ಲಿಯೂ ಚಾನ್ಸ್ ಗಿಟ್ಟಿಸಿಕೊಂಡರು. ತೆಲುಗು ಚಿತ್ರಪ್ರೇಮಿಗಳ ಮನೆ ಮಗಳೇ ಆಗಿರುವ ರಶ್ಮಿಕಾ ಸದ್ಯ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. ಜತೆಗೆ ಬಾಲಿವುಡ್‌ಗೂ ಪ್ರವೇಶಿಸಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2021ರಲ್ಲೆ ತೆರೆಕಂಡ ʼಪೊಗರುʼ ಚಿತ್ರವೇ ಕೊನೆ. ಬಳಿಕ ಅವರು ಯಾವ ಕನ್ನಡ ಸಿನಿಮಾದಲ್ಲಿಯೂ ನಟಿಸಿಲ್ಲ. ಇಂತಿಪ್ಪ ರಶ್ಮಿಕಾ ಕೆಲವೊಮ್ಮೆ ಕನ್ನಡ, ಕರ್ನಾಟಕವನ್ನೇ ಮರೆತಂತೆ ಆಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ತಾನು ಕರ್ನಾಟಕ ಮೂಲದವಳು ಎನ್ನುವುದನ್ನು ಮನಸ್ಸು ಬಿಚ್ಚಿ ಹೇಳಿದ್ದಾರೆ. ಆ ಮೂಲಕ ಕರುನಾಡನ್ನು ಮರೆತಿಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ.
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ʼಗುಡ್ ಬೈʼ ಚಿತ್ರದ ಮೂಲಕ 2022ರಲ್ಲಿ ಹಿಂದಿ ಚಿತ್ರರಂಗ ಪ್ರವೇಶಿಸಿದ ರಶ್ಮಿಕಾ ಬಳಿಕ ಒಂದರ ಹಿಂದೆ ಒಂದರಂತೆ ಅವಕಾಶ ಬಾಚಿಕೊಳ್ಳುತ್ತಿದ್ದಾರೆ. ಮಾ. 30ರಂದು ಸೂಪರ್ ಸ್ಟಾರ್ ಸಲ್ಮಾನ್ ಖಾನ್‌ನೊಂದಿಗೆ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ʼಸಿಕಂದರ್ʼ ಸಿನಿಮಾ ರಿಲೀಸ್ ಆಗಿದೆ. ಈ ಹಿನ್ನೆಲೆಯಲ್ಲಿ ಪ್ರಮೋಷನ್ ಕಾರ್ಯದಲ್ಲಿ ಬ್ಯೂಸಿಯಾಗಿದ್ದ ರಶ್ಮಿಕಾ ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಮಾತನಾಡಿದ್ದಾರೆ.
ವೈರಲ್ ಆಗುತ್ತಿರುವ ರಶ್ಮಿಕಾ ಅವರ ವಿಡಿಯೊ ಇಲ್ಲಿದೆ:
ಈ ಸುದ್ದಿಯನ್ನೂ ಓದಿ: Chhaava Movie: ರಶ್ಮಿಕಾ ʼತವರುʼ ಫ್ಯಾನ್ಸ್‌ಗೆ ಗುಡ್‌ನ್ಯೂಸ್; ತೆಲುಗಿನಲ್ಲೂ ರಿಲೀಸ್ ಆಗಲಿದೆ ʼಛಾವಾʼ
ರಶ್ಮಿಕಾ ಹೇಳಿದ್ದೇನು?
ಭಾಷೆಗಳನ್ನು ಕಲಿಯಬೇಕಾದ ಮಹತ್ವದ ಬಗ್ಗೆ ಮಾತನಾಡಿದ ರಶ್ಮಿಕಾ, ʼʼನಾನು ಕರ್ನಾಟಕದವಳು. ನಾನು ಹುಟ್ಟಿ ಬೆಳೆದಿದ್ದು ಕೂಡ ಕರ್ನಾಟಕದಲ್ಲೇ. ಅಲ್ಲಿ ನಾನು ಕನ್ನಡ ಹಾಗೂ ಇಂಗ್ಲಿಷ್ ಮಾತನಾಡುತ್ತಿದ್ದೆ. ಯಾವುದೇ ವ್ಯಕ್ತಿ ತನ್ನ ಸುತ್ತ-ಮುತ್ತ ಮಾತನಾಡಲಾಗುತ್ತಿರುವ ಭಾಷೆಯನ್ನು ಬಲು ಬೇಗ ಕಲಿಯುತ್ತಾರೆ. ನನ್ನದು ಕರ್ನಾಟಕದ ಕೊಡಗು ಹಾಗಾಗಿ ನನಗೆ ಕನ್ನಡ ಭಾಷೆ ಸುಲಭವಾಗಿ ಬರುತ್ತದೆ. ಐಸಿಎಸ್‌ಇ ಶಾಲೆಯಲ್ಲಿ ಕಲಿತಿದ್ದರಿಂದ ಇಂಗ್ಲಿಷ್ ಕೂಡ ಗೊತ್ತುʼʼ ಎಂದಿದ್ದಾರೆ. ಆ ಮೂಲಕ ಕನ್ನಡ ಮರೆತಿಲ್ಲ ಎನ್ನುವ ಸಂದೇಶ ಸಾರಿದ್ದಾರೆ.
ʼʼತೆಲುಗು ಚಿತ್ರಕ್ಕಾಗಿ ಹೈದರಾಬಾದ್‌ಗೆ ಬಂದ ಬಳಿಕ ತೆಲುಗು ಭಾಷೆ ಕಲಿಯುವುದು ನನಗೆ ಅನಿವಾರ್ಯವಾಗಿತ್ತು. ನನ್ನ ಮನೆ, ಆಫೀಸ್ ಸಿಬ್ಬಂದಿ, ಸೆಕ್ಯುರಿಟಿ ಎಲ್ಲರೂ ತೆಲುಗು ಭಾಷೆಯವರೇ ಆಗಿರುವುದರಿಂದ ನಾನು ಅವರೊಂದಿಗೆ ಅವರ ಭಾಷೆಯಲ್ಲೇ ಮಾತನಾಡಬೇಕಾಗಿತ್ತು. ಈ ಕಾರಣದಿಂದಲೇ ನಾನು ತೆಲುಗು ಕಲಿತುಕೊಂಡಿದ್ದೇನೆʼʼ ಎಂದೂ ರಶ್ಮಿಕಾ ಹೇಳಿದ್ದಾರೆ.
ಹೈದರಾಬಾದ್ ಮೂಲ ಎಂದಿದ್ದ ರಶ್ಮಿಕಾ
ಕೆಲವು ದಿನಗಳ ಹಿಂದೆ ತಮ್ಮʼಛಾವಾʼ ಹಿಂದಿ ಚಿತ್ರದ ಪ್ರಮೋಷನ್ ವೇಳೆ ರಶ್ಮಿಕಾ ಮುಂಬೈಯಲ್ಲಿ ತಮ್ಮದು ಹೈದರಾಬಾದ್ ಮೂಲ ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಇದರಿಂದ ಅವರು ಟ್ರೋಲಿಗರಿಗೆ ಆಹಾರವಾಗಿದ್ದರು. ಸದ್ಯ ಅವರು ಕರ್ನಾಟಕದ ಬಗ್ಗೆ ಮಾತನಾಡಿರುವ ವಿಡಿಯೊ ವೈರಲ್ ಆಗುತ್ತಿದೆ. ಪರಭಾಷೆಗಳ ಜತೆಗೆ ಅವರು ಕನ್ನಡದಲ್ಲಿಯೂ ನಟಿಸಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.