Naveen Shankar: ಪ್ರೇಕ್ಷಕರ ಮೆಚ್ಚುಗೆ ಪಡೆದ ʼನೋಡಿದವರು ಏನಂತಾರೆ' ಚಿತ್ರ
ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದ ಭರವಸೆ ನಾಯಕ ಎನಿಸಿಕೊಂಡಿರುವ ನವೀನ್ ಶಂಕರ್ ಅಭಿನಯದ ʼನೋಡಿದವರು ಏನಂತಾರೆʼ ಸಿನಿಮಾಕ್ಕೆ ಪ್ರೇಕ್ಷಕರು ಬಹು ಪರಾಕ್ ಎಂದಿದ್ದಾರೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಚುತ್ರತಂಡ ವೀಕ್ಷಕರಿಗೆ ಧನ್ಯವಾದ ತಿಳಿಸಿದೆ.
ಬೆಂಗಳೂರು: ಜನ ಥಿಯೇಟರ್‌ಗೆ ಬರ್ತಿಲ್ಲ. ಸಿನಿಮಾ ನೋಡ್ತಿಲ್ಲ ಅನ್ನೋ ಕೂಗು ಜೋರಾಗಿದೆ. ಆದರೆ ಒಂದೊಳ್ಳೆ ಸಿನಿಮಾವನ್ನು ಪ್ರೇಕ್ಷಕರು ಯಾವತ್ತು ಕೈಬಿಟ್ಟಿಲ್ಲ. ಅದಕ್ಕೆ ಸದ್ಯದ ಉದಾಹರಣೆ ʼನೋಡಿದವರು ಏನಂತಾರೆʼ ಸಿನಿಮಾ (Nodidavaru Enanthare). ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದ ಭರವಸೆ ನಾಯಕ ಎನಿಸಿಕೊಂಡಿರುವ ನವೀನ್ ಶಂಕರ್ (Naveen Shankar) ನಟನೆಯ ನೋಡಿದವರು ಏನಂತಾರೆ ಸಿನಿಮಾಗೆ ಭರಪೂರ ಮೆಚ್ಚುಗೆ ಸಿಗುತ್ತಿದೆ. ಯುವ ನಿರ್ದೇಶಕ ಕುಲದೀಪ್ ಕಾರಿಯಪ್ಪ ಬರೆದ ಕಥೆ ಮತ್ತು ಪಾತ್ರಕ್ಕೆ ನವೀಶ್ ಶಂಕರ್ ಜೀವ ತುಂಬಿದ ರೀತಿಗೆ ಪ್ರೇಕ್ಷಕ ಫಿದಾ ಆಗಿದ್ದಾರೆ.
ನವೀನ್ ಪಾತ್ರವಲ್ಲ ಇಡೀ ತಾರಾಬಳಗದ ಅಭಿನಯ, ಕುಲದೀಪ್ ನಿರ್ದೇಶನಕ್ಕೆ ಪ್ರೇಕ್ಷಕರು ಜೈ ಎಂದಿದ್ದಾರೆ. ಒಟ್ಟಿನಲ್ಲಿ ʼನೋಡಿದವರು ಏನಂತಾರೆʼ ಚಿತ್ರವನ್ನು ಪ್ರೇಕ್ಷಕರನ್ನು ಬಹುವಿಧವಾಗಿ ಮೆಚ್ಚಿಕೊಂಡಿದ್ದಾರೆ. ಸಿನಿಮಾಗೆ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿರುವ ಖುಷಿಯಲ್ಲಿ ಚಿತ್ರತಂಡ ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಇತ್ತಿಚೆಗೆ ಸುದ್ದಿಗೋಷ್ಠಿ ಆಯೋಜಿಸಿತ್ತು.
ಈ ವೇಳೆ ನಟ ನವೀನ್ ಶಂಕರ್ ಮಾತನಾಡಿ, ʼʼನಾವು ಸಿನಿಮಾ ಮಾಡಿ ಈ ಬಗ್ಗೆ ಹೇಳಿಕೊಳ್ಳುತ್ತೇವೆ. ಆದರೆ ಅದು ಥಿಯೇಟರ್ ಬರುವ ತನಕ ಮಾತ್ರ. ಥಿಯೇಟರ್ ಬಂದಮೇಲೆ ಪ್ರೇಕ್ಷಕರು ಅದನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ. ಅಲ್ಲಿಂದ ಮತ್ತೊಂದಷ್ಟು ಜನಕ್ಕೆ ಗೊತ್ತಾಗುತ್ತದೆ. ಅವರು ಮತ್ತೊಂದಿಷ್ಟು ಜನರನ್ನು ಕರೆದುಕೊಂಡು ಬರುತ್ತಾರೆ. ಇದು ಕೇವಲ ಕೆಲವು ಸಿನಿಮಾಗಳಿಗೆ ಆಗುತ್ತದೆ. ಈ ಕೆಲವೇ ಕೆಲವು ಸಿನಿಮಾಗಳಲ್ಲಿ ನಮ್ಮ ಚಿತ್ರವೂ ಒಂದು. ಅದೇ ಖುಷಿಯಲ್ಲಿ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸುತ್ತಿದ್ದೇವೆʼʼ ಎಂದರು.
ನವೀಶ್ ಶಂಕರ್ ಸಿದ್ದಾರ್ಥ್ ದೇವಯ್ಯನಾಗಿ ನಟಿಸಿದ್ದು, ಅಪೂರ್ವ ಭಾರದ್ವಾಜ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ನಾಗೇಶ್ ಗೋಪಾಲ್ ನಿರ್ಮಾಣದ ಈ ಚಿತ್ರಕ್ಕೆ ಆಶ್ವಿನ್ ಕೆನೆಡಿ ಛಾಯಾಗ್ರಾಹಣ, ಮಯೂರೆಶ್ ಅಧಿಕಾರಿ ಹೃದಯಸ್ಪರ್ಶಿ ಸಂಗೀತವನ್ನು ಸಂಯೋಜಿಸಿದ್ದು, ಮನು ಶೆಡಗಾರ್ ಸಂಕಲನ ಚಿತ್ರಕ್ಕಿದೆ. ಕುಲದೀಪ್ ಕಾರಿಯಪ್ಪ ಅವರು ಬರೆದ ಕಥೆ ಮತ್ತು ಚಿತ್ರಕಥೆಗೆ ಅವರೊಂದಿಗೆ ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್, ಮತ್ತು ಸುನಿಲ್ ವೆಂಕಟೇಶ್ ಸಂಭಾಷಣೆ ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ: Naveen Shankar: ಕಾಡುವ ಕಥೆಯೊಂದಿಗೆ ಬಂದ ನವೀನ್ ಶಂಕರ್; 'ನೋಡಿದವರು ಏನಂತಾರೆ' ಸಿನಿಮಾದ ಟ್ರೈಲರ್ ಔಟ್
ಜೋಗಿ ಹೇಳಿದ್ದೇನು?
ಕೆಲವು ದಿನಗಳ ಹಿಂದೆ ನಡೆದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಜೋಗಿ, "ನೋಡಿದವರು ಏನಂತಾರೆʼ ಅನ್ನೋ ಡೈಲಾಗ್ ಕೇಳಿ ಬೆಳೆದವರು ನಾವು. ನೋಡಿದವರು ಏನಂತಾರೆ ಎಂಬುದು ಭಾರತದ ಮಿಡಲ್ ಕ್ಲಾಸ್ ಅನ್ನು ಒಂದು ಚೌಕಟ್ಟಿನಲ್ಲಿರಿಸಿರುವ ಫೇಸ್. ನಾವು ನಮಗೋಸ್ಕರ ಬದುಕುತ್ತಿದ್ದೇವೋ? ಇಲ್ಲ ಇನ್ಯಾರಿಗೋಸ್ಕರ ಬದುಕುತ್ತಿದ್ದೇವೋ? ಅನ್ನುವಂತೆ ಮಾಡುತ್ತದೆ. ಕಳೆದ ಕೆಲ ವರ್ಷಗಳಿಂದ ಇದೆಲ್ಲವೂ ಬದಲಾಗಿದೆ. ಯಾರು ಏನಾದರೂ ಹೇಳಲಿ. ನನ್ನ ಲೈಫ್ ನನ್ನದು. ನಾನು ಬದುಕುತ್ತೇನೆ ಎಂದು ಹೇಳಿಕೊಟ್ಟಿದ್ದು ಟೆಕ್ನಾಲಜಿ. ಈ ರೀತಿ ಕಥೆಗಳನ್ನು ನೋಡಿದಾಗ ನನ್ನ ಮನಸಿನಲ್ಲಿ ಒಂದು ಕಥೆ ಹುಟ್ಟುತ್ತದೆ. ಈ ಕಥೆಯಲ್ಲಿ ಹಳ್ಳಿ, ಬಾಲ್ಯ, ಸಿಟಿ ಜೀವನವಿದೆ. ಟ್ರೈಲರ್ ಕೊನೆ ಶಾರ್ಟ್ ನೋಡಿದಾಗ ನವೀನ್ ಅವರು ಎಷ್ಟು ಕಷ್ಟಪಟ್ಟಿರಬಹುದು ಎನಿಸಿತು" ಎಂದು ಹೇಳಿದ್ದರು. ಸದ್ಯ ನವೀನ್ ಕಷ್ಟಕ್ಕೆ ಸೂಕ್ತ ಪ್ರತಿಫಲ ಸಿಕ್ಕಿದೆ.