ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Arvind Kejriwal : ಸಾರ್ವಜನಿಕ ಆಸ್ತಿ ವಿರೂಪ ಕಾಯ್ದೆ ಉಲ್ಲಂಘನೆ ಆರೋಪ; ಕೇಜ್ರಿವಾಲ್ ಸೇರಿ ಹಲವರ ವಿರುದ್ಧ ಎಫ್‌ಐಆರ್‌

2019ರಲ್ಲಿ ಸಾರ್ವಜನಿಕ ಹಣವನ್ನು ದೆಹಲಿಯಲ್ಲಿ ಹೋರ್ಡಿಂಗ್‌ಗೆ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಮತ್ತು ಇತರರ ವಿರುದ್ಧ ಎಫ್​ಐಆರ್​ ದಾಖಲಿಸಿಕೊಳ್ಳಲಾಗಿದೆ ಎಂದು ಶುಕ್ರವಾರ ದೆಹಲಿ ಪೊಲೀಸರು ಕೋರ್ಟ್​​ಗೆ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕ ಹಣ ದುರ್ಬಳಕೆ; ಕೇಜ್ರಿವಾಲ್​ ವಿರುದ್ಧ ಎಫ್​ಐಆರ್

Profile Vishakha Bhat Mar 29, 2025 10:27 AM

ನವದೆಹಲಿ: 2019ರಲ್ಲಿ ಸಾರ್ವಜನಿಕ ಹಣವನ್ನು ದೆಹಲಿಯಲ್ಲಿ ಹೋರ್ಡಿಂಗ್‌ಗೆ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ (Arvind Kejriwal) ಮತ್ತು ಇತರರ ವಿರುದ್ಧ ಎಫ್​ಐಆರ್​ ದಾಖಲಿಸಿಕೊಳ್ಳಲಾಗಿದೆ ಎಂದು ಶುಕ್ರವಾರ ದೆಹಲಿ ಪೊಲೀಸರು ಕೋರ್ಟ್​​ಗೆ ಮಾಹಿತಿ ನೀಡಿದ್ದಾರೆ. ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನೇಹಾ ಮಿತ್ತಲ್ ಅವರಿಗೆ ಸಲ್ಲಿಸಿದ ಅನುಸರಣಾ ವರದಿಯಲ್ಲಿ ದೆಹಲಿ ಪೊಲೀಸರು ಈ ವಿಷಯ ತಿಳಿಸಿದ್ದಾರೆ. ಮಾರ್ಚ್ 11ರಂದು ನ್ಯಾಯಾಧೀಶರು ಸಾರ್ವಜನಿಕ ಕಾಯ್ದೆ ಉಲ್ಲಂಘನೆ ಆರೋಪದ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದರು.

ಈ ಕುರಿತು ಪೊಲೀಸರು ಮತ್ತಷ್ಟು ತನಿಖೆಗೆ ಅವಕಾಶ ಕೋರಿದ್ದು, ಪ್ರಕರಣದ ವಿಚಾರಣೆಯನ್ನು ಏಪ್ರಿಲ್​ 19ಕ್ಕೆ ನ್ಯಾಯಾಲಯ ನಿಗದಿಸಿದೆ. ಕೇಜ್ರಿವಾಲ್​ ಹೊರತಾಗಿ, ಮಾಜಿ ಶಾಸಕ ಗುಲಾಬ್​ ಸಿಂಗ್​ ಮತ್ತು ದ್ವಾರಕ ಕೌನ್ಸಿಲರ್​​ ನಿತಿಕಾ ಶರ್ಮಾ ಅವರ ವಿರುದ್ಧ ಕೂಡ ಪ್ರಕರಣ ದಾಖಲಿಸಲಾಗಿದೆ. ಮಾರ್ಚ್ 11 ರಂದು ನ್ಯಾಯಾಲಯ ಹೊರಡಿಸಿದ ನಿರ್ದೇಶನದ ಪ್ರಕಾರ ಎಫ್‌ಐಆರ್ ನೋಂದಣಿ ಮಾಡಲಾಗಿದೆ. ದೂರನ್ನು ಔಪಚಾರಿಕವಾಗಿ ದಾಖಲಿಸಿಕೊಂಡು ಅನುಸರಣಾ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿತ್ತು.

ಏನಿದು ಪ್ರಕರಣ?

ಆಮ್‌ ಆದ್ಮಿ ಪಕ್ಷ 2019ಲ್ಲಿ ದ್ವಾರಕ ಪ್ರದೇಶದಲ್ಲಿ ಅಕ್ರಮವಾಗಿ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಬೃಹತ್​ ಗಾತ್ರದ ಹೋರ್ಡಿಂಗ್​ ಅಳವಡಿಸುವ ಮೂಲಕ ಸಾರ್ವಜನಿಕರ ಹಣವನ್ನು ಉದ್ದೇಶಪೂರ್ವಕವಾಗಿ ದುರ್ಬಳಕೆ ಮಾಡಿತ್ತು ಎಂದು ಅರವಿಂದ್​ ಕೇಜ್ರಿವಾಲ್​, ಶಾಸಕ ಗುಲಾಬ್​ ಸಿಂಗ್​ ಮತ್ತು ದ್ವಾರಕ ವಾರ್ಡ್​ ಕೌನ್ಸಿಲರ್​ ನಿತಿಕಾ ಶರ್ಮಾ ವಿರುದ್ಧ 2019ರಲ್ಲಿ ದೂರು ಸಲ್ಲಿಸಲಾಗಿತ್ತು. ಈ ಕುರಿತು ಸಾಕ್ಷ್ಯಸಮೇತ ಶಿವಕುಮಾರ್​ ಸಕ್ಸೆನಾ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್‌ ರೀತಿ ಅನಧಿಕೃತ ಹೋರ್ಡಿಂಗ್​ ಸಿಟಿಯ ಸೌಂದರ್ಯವನ್ನು ಹಾಳು ಮಾಡುವುದರ ಜೊತೆಗೆ ಸಂಚಾರ ದಟ್ಟಣೆಗೂ ಕಾರಣವಾಗುತ್ತದೆ ಎಂದು ಎಫ್​ಐಆರ್​ ದಾಖಲಿಸುವಂತೆ ಸೂಚಿಸಿತ್ತು.

ಈ ಸುದ್ದಿಯನ್ನೂ ಓದಿ: Delhi Election 2025: ಅರವಿಂದ್‌ ಕೇಜ್ರಿವಾಲ್‌ ಕಾರಿನ ಮೇಲೆ ಬಿಜೆಪಿಯಿಂದ ದಾಳಿ; ಆಪ್‌ ಆರೋಪಕ್ಕೆ ಕೇಸರಿ ಪಡೆ ತಿರುಗೇಟು

ಈ ಪೋಸ್ಟರ್‌ಗಳಲ್ಲಿ ಕೆಲವು ದೆಹಲಿ ಸರ್ಕಾರದ ಉಪಕ್ರಮಗಳನ್ನು ಜಾಹೀರಾತು ಮಾಡಿದ್ದರೆ, ಇನ್ನು ಕೆಲವು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರು ಸೇರಿದಂತೆ ಅನೇಕ ರಾಜಕೀಯ ವ್ಯಕ್ತಿಗಳನ್ನು ಒಳಗೊಂಡ ಧಾರ್ಮಿಕ ಹಬ್ಬಗಳಿಗೆ ಶುಭ ಕೋರಿದ್ದ ಫ್ಲೆಕ್ಸ್‌ಗಳಿದ್ದವು.