Malappuram District: ಮಲಪ್ಪುರಂ ಜಿಲ್ಲೆ ʼಪ್ರತ್ಯೇಕ ರಾಷ್ಟ್ರʼವಂತೆ! ವಿವಾದದ ಕಿಡಿ ಹಚ್ಚಿದ ಕೇರಳದ ನಾಯಕ
Vellappally Natesan: ಕೇರಳದಲ್ಲಿ ಮುಸ್ಲಿಮರೇ ಹೆಚ್ಚಾಗಿ ಇರುವ ಮಲಪ್ಪುರಂ ಜಿಲ್ಲೆಯನ್ನು ʼಪ್ರತ್ಯೇಕ ದೇಶʼಎಂದು ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ವೆಲ್ಲಪ್ಪಳ್ಳಿ ನಟೇಶನ್ ಅವರು ಕರೆದಿದ್ದು, ವಿವಾದದ ಕಿಡಿ ಹೊತ್ತಿಸಿದೆ. ದೇಶದಲ್ಲಿ ವಕ್ಫ್ ಮಸೂದೆ ವಿರುದ್ಧ ಮುಸ್ಲಿಮರ ಪ್ರತಿಭಟನೆಗಳು ಹೆಚ್ಚಾಗುತ್ತಿರುವ ಹೊತ್ತಲ್ಲೇ ಈ ಹೇಳಿಕೆ ಬಂದಿದ್ದು, ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ವೆಲ್ಲಪ್ಪಳ್ಳಿ ನಟೇಶನ್

ತಿರುವನಂತಪುರಂ: ಮುಸ್ಲಿಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಕಾರಣಕ್ಕಾಗಿ ಶ್ರೀ ನಾರಾಯಣ ಧರ್ಮ ಪರಿಪಾಲನ (ಎಸ್‌ಎನ್‌ಡಿಪಿ)(SNDP) ಯೋಗಂನ(Sree Narayana Dharma Paripalana) ಪ್ರಧಾನ ಕಾರ್ಯದರ್ಶಿ ವೆಲ್ಲಪ್ಪಳ್ಳಿ ನಟೇಶನ್(Vellappally Natesan) ಅವರು ಸದ್ಯಕ್ಕೆ ಭಾರಿ ಟೀಕೆ ಎದುರಿಸುತ್ತಿದ್ದಾರೆ. ಕೇರಳದಲ್ಲಿ ಮುಸ್ಲಿಮರೇ ಹೆಚ್ಚಾಗಿ ಇರುವ ಮಲಪ್ಪುರಂ(Malappuram) ಜಿಲ್ಲೆಯನ್ನು ʼಪ್ರತ್ಯೇಕ ದೇಶʼ(Different Country) ಎಂದು ಅವರು ಕರೆದಿದ್ದು ವಿವಾದದ ಕಿಡಿ ಹೊತ್ತಿಸಿದೆ. ದೇಶದಲ್ಲಿ ವಕ್ಫ್ ಮಸೂದೆ ವಿರುದ್ಧ ಮುಸ್ಲಿಮರ ಪ್ರತಿಭಟನೆಗಳು ಹೆಚ್ಚಾಗುತ್ತಿರುವ ಹೊತಲ್ಲೇ ಈ ಹೇಳಿಕೆ ಬಂದಿದ್ದು, ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
“ನೀವು ಮಲಪ್ಪುರಂನಲ್ಲಿ ಶುದ್ಧ ಗಾಳಿಯನ್ನು ಉಸಿರಾಡಲು ಸಾಧ್ಯವೇ ಇಲ್ಲ ಎಂದು ನಾನು ಭಾವಿಸುತ್ತೇನೆ. ಇಲ್ಲಿ ನಿಮ್ಮ ಸ್ವತಂತ್ರ ಅಭಿಪ್ರಾಯವನ್ನು ಹೇಳಲೂ ಅವಕಾಶವಿಲ್ಲ. ಮಲಪ್ಪುರಂ ಬೇರೆಯೇ ರಾಷ್ಟ್ರ. ಇದು ವಿಭಿನ್ನ ಜನರ ರಾಷ್ಟ್ರ. ಸ್ವಾತಂತ್ರ್ಯ ಸಿಕ್ಕಿ ದಶಕಗಳೇ ಕಳೆದಿದ್ದರೂ ಹಿಂದುಳಿದ ವರ್ಗಗಳಿಗೆ ಏನಾದರೂ ಪ್ರಯೋಜನ ದೊರೆತಿದೆಯೇ” ಎಂದು ನಟೇಶನ್ ಶುಕ್ರವಾರ ಮಲಪ್ಪುರಂನ ಚುಂಗಥರ ಪ್ರದೇಶದಲ್ಲಿ ನಡೆದ ಸಭೆಯಲ್ಲಿ ಹೇಳಿದ್ದರು.
2011ರ ಜನಗಣತಿಯ ಪ್ರಕಾರ 4.1 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮಲಪ್ಪುರಂನಲ್ಲಿ 70% ಕ್ಕಿಂತ ಹೆಚ್ಚಿನ ಸಂಖ್ಯೆ ಹೊಂದಿರುವ ಮುಸ್ಲಿಮರು ಇಲ್ಲಿ ಬಹುಸಂಖ್ಯಾತರಾಗಿದ್ದಾರೆ. ಕೇವಲ 27.6% ರಷ್ಟು ಜನಸಂಖ್ಯೆ ಹೊಂದಿರುವ ಹಿಂದೂಗಳು ಈ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಕೇರಳದ ವಿವಿಧ ಭಾಗಗಳಲ್ಲಿ ಗಮನಾರ್ಹ ಪ್ರಮಾಣದ ಜನಸಂಖ್ಯೆ ಹೊಂದಿರುವ ಈಳವ ಸಮುದಾಯವನ್ನು ಎಸ್‌ಎನ್‌ಡಿಪಿ ಪ್ರತಿನಿಧಿಸುತ್ತದೆ.
ನಟೇಶನ್ ಹೇಳಿಕೆಗೆ ಟೀಕೆ:
ನಟೇಶನ್ ಅವರ ಹೇಳಿಕೆಯನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಖಂಡಿಸಿದೆ. ಪಕ್ಷದ ಅಧ್ಯಕ್ಷ ಸಯ್ಯದ್ ಸಾದಿಕ್ ಅಲಿ ಶಿಹಾಬ್ ತಂಗಲ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, "ಯಾರಾದರೂ ಮಲಪ್ಪುರಂ ಜಿಲ್ಲೆಯನ್ನು ಟೀಕಿಸಿದರೆ, ಅವರು ಕೇವಲ ಒಂದು ನಿರ್ದಿಷ್ಟ ಸಮುದಾಯವನ್ನು ಟೀಕಿಸುತ್ತಿಲ್ಲ. ಬದಲಾಗಿ ಪ್ರಸಿದ್ಧ ಬರಹಗಾರರು ಮತ್ತು ಕಲಾವಿದರನ್ನು ಕೇರಳಕ್ಕೆ ನೀಡಿದ ಜಿಲ್ಲೆಯನ್ನು ಟೀಕಿಸುತ್ತಿದ್ದಾರೆ ಎಂದರ್ಥ. ಇದು ಅನೇಕ ಐತಿಹಾಸಿಕ ದೇವಾಲಯಗಳಿಗೆ ನೆಲೆಯಾದ ಜಿಲ್ಲೆ. ಇದು ಎಲ್ಲರ ಜಿಲ್ಲೆ, ಕೇವಲ ಒಂದು ಸಮುದಾಯಕ್ಕೆ ಸೇರಿದ್ದಲ್ಲ" ಎಂದು ಹೇಳಿದ್ದಾರೆ.
ಹೇಳಿಕೆ ಸಮರ್ಥಿಸಿಕೊಂಡ ನಟೇಶನ್:
ಮಲಪ್ಪುರಂ ಕುರಿತ ಹೇಳಿಕೆಗಳಿಗೆ ರಾಜ್ಯವ್ಯಾಪಿ ಟೀಕೆಗಳು ವ್ಯಕ್ತವಾದರೂ, ನಟೇಶನ್ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ವಿಮರ್ಶಕರು ತಮ್ಮ ಹೇಳಿಕೆಯ ಉದ್ದೇಶವನ್ನು ತಿರುಚುತ್ತಿದ್ದಾರೆ ಎಂದು ಆರೋಪಿಸಿದರು. "ನಾನು ಒಂದು ವಾಕ್ಯವನ್ನೂ ಹಿಂತೆಗೆದುಕೊಳ್ಳುವುದಿಲ್ಲ. ನಾನು ಮುಸ್ಲಿಂ ಸಮುದಾಯದ ವಿರುದ್ಧ ಏನೂ ಮಾತನಾಡಿಲ್ಲ. ನನ್ನ ಇತ್ತೀಚಿನ ಭಾಷಣದಲ್ಲಿ, ಮಲಪ್ಪುರಂನಲ್ಲಿ ಸಾಮಾಜಿಕ ನ್ಯಾಯವಿಲ್ಲ ಎಂದು ನಾನು ಹೇಳಿದ್ದೇನೆ. ಅದು ಸತ್ಯ. ಕೆಲವು IUML ನಾಯಕರು ತಮ್ಮ ಹೇಳಿಕೆಗಳನ್ನು ತಪ್ಪಾಗಿ ನಿರೂಪಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಅವರು ಹೇಳಿದರು.
ಈ ಸುದ್ದಿಯನ್ನು ಓದಿ: Viral Video: ಮೆಟ್ರೋದೊಳಗೆ ಮದ್ಯ ಸೇವಿಸಿದ ಯುವಕ ; ನೆಟ್ಟಿಗರು ಫುಲ್ ಗರಂ!
ಕೆಲವರು ನನ್ನನ್ನು ಮುಸ್ಲಿಂ ವಿರೋಧಿ ಎಂದು ಬ್ರಾಂಡ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾನು ಯಾವುದೇ ಸಮುದಾಯದ ವಿರೋಧಿಯಲ್ಲ. ನಾನು ಯಾವುದೇ ದ್ವೇಷಪೂರಿತ ಹೇಳಿಕೆಗಳನ್ನು ನೀಡಿಲ್ಲ ಮಾಧ್ಯಮದ ಒಂದು ವರ್ಗವು ತಮ್ಮ ಭಾಷಣದ ಆಯ್ದ ಭಾಗಗಳನ್ನು ಮಾತ್ರ ತೋರಿಸಿ ದಾರಿತಪ್ಪಿಸುತ್ತಿದೆ ಎಂದು ಅವರು ಹೇಳಿದರು.
ತಮ್ಮ ಹೇಳಿಕೆಯ ಹಿಂದಿನ ಉದ್ದೇಶ ವಿವರಿಸಿದ ಅವರು, "ನಮ್ಮ ಸಮುದಾಯಕ್ಕೆ ಮಲಪ್ಪುರಂನಲ್ಲಿ ಒಂದು ಸ್ಮಶಾನವೂ ಇಲ್ಲ. ಅವರು ಅಲ್ಲಿ ಗುಲಾಮರಂತೆ ಬದುಕುತ್ತಿದ್ದಾರೆ. ಮಲಪ್ಪುರಂನಲ್ಲಿರುವ ಹಿಂದುಳಿದ ಸಮುದಾಯಗಳ ಸದಸ್ಯರಿಗೆ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ಆರ್ಥಿಕ ಅವಕಾಶಗಳನ್ನು ನೀಡಲಾಗುತ್ತಿಲ್ಲ” ಎಂದು ಅವರು ಆರೋಪಿಸಿದರು.