Terrorist Encounter: ಜಮ್ಮು ಕಾಶ್ಮೀರದಲ್ಲಿ ಭರ್ಜರಿ ಸೇನಾ ಕಾರ್ಯಾಚರಣೆ; ಪಾಕಿಸ್ತಾನದ 7 ನುಸುಳುಕೋರರ ಹತ್ಯೆ
ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಫೆಬ್ರವರಿ 4-5ರ ಮಧ್ಯರಾತ್ರಿ ಎಲ್‌ಒಸಿಯಲ್ಲಿ ಪಾಕಿಸ್ತಾನಿ ನುಸುಳುಕೋರರ ಹೊಂಚು ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದ್ದು 7 ಮಂದಿ ಪಾಕ್ ನುಸುಳುಕೋರರನ್ನು ಸೆದೆಬಡಿಯಲಾಗಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu& Kashmir) ಭದ್ರತಾ ಪಡೆಗಳು ಭರ್ಜರಿ ಕಾರ್ಯಾಚರಣೆಯನ್ನು ನಡೆಸಿವೆ. ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಫೆಬ್ರವರಿ 4-5ರ ಮಧ್ಯರಾತ್ರಿ ಎಲ್‌ಒಸಿಯಲ್ಲಿ(LOC) ಪಾಕಿಸ್ತಾನಿ ನುಸುಳುಕೋರರ ಹೊಂಚುದಾಳಿಯನ್ನು ಭಾರತೀಯ ಸೇನೆ (Indian Army) ವಿಫಲಗೊಳಿಸಿದೆ. ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದ್ದು 7 ಮಂದಿ ಪಾಕ್ ನುಸುಳುಕೋರರನ್ನು ಸೆದೆಬಡಿಯಲಾಗಿದೆ. (Terrorist Encounter) ಮೃತ 7 ಉಗ್ರರಲ್ಲಿ 2-3 ಪಾಕಿಸ್ತಾನಿ ಸೈನಿಕರಿರಬಹುದು ಎಂದು ಅಂದಾಜಿಸಲಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಾಶ್ಮೀರ ಒಗ್ಗಟ್ಟಿನ ದಿನವನ್ನು ಆಚರಿಸಿದ ದಿನವೇ ಈ ಘಟನೆ ನಡೆದಿದೆ.
ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಒಳಸುಳುತ್ತಿದ್ದಾಗ ಸೇನೆ ಉಗ್ರರನ್ನು ಹೊಡೆದುರುಳಿಸಿದೆ ಎಂದು ಅಧಿಕೃತ ಮಾಹಿತಿ ಲಭ್ಯವಾಗಿದೆ. ಕೊಲ್ಲಲ್ಪಟ್ಟ ಭಯೋತ್ಪಾದಕರು ಬಹುಶಃ ಅಲ್-ಬದರ್ ಗುಂಪಿನ ಸದಸ್ಯರಾಗಿರಬಹುದು ಎಂದು ಊಹಿಸಲಾಗಿದೆ. ಮೃತಪಟ್ಟ ಉಗ್ರರಲ್ಲಿ ಎರಡರಿಂದ ಮೂರು ಉಗ್ರರು ಪಾಕಿಸ್ತಾನದ ಸೈನಿಕರು ಎಂದು ಊಹಿಸಲಾಗಿದ್ದು, ಅಧಿಕೃತ ಮಾಹಿತಿ ದೊರೆಯಬೇಕಾಗಿದೆ.
ಸೋಮವಾರ ಬೆಳಗಿನ ಜಾವ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಬೆಹಿಬಾಗ್‌ನಲ್ಲಿ ಭಾರತೀಯ ಸೇನೆಯ ನಿವೃತ್ತ ಸೈನಿಕನ ಮನೆಯ ಮೇಲೆ ಉಗ್ರರು ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿ, ಪತ್ನಿ ಹಾಗೂ ಮಗುವನ್ನು ಗಾಯಗೊಳಿಸಿದ್ದರು. ಮೃತ ನಿವೃತ್ತ ಸೈನಿಕ 39 ವರ್ಷದ ಲ್ಯಾನ್ಸ್ ನಾಯಕ್ ಮಂಜೂರ್ ಅಹ್ಮದ್ ವಾಘೆ ಅವರ ಮನೆಗೆ ನುಗ್ಗಿದ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ವಾಘೆ ಅವರು ತೀವ್ರವಾದ ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದರು. ಅವರ ಪತ್ನಿ 32 ವರ್ಷದ ಅಸೀನಾ ಅಖ್ತರ್ ಅವರ ತೊಡೆಗೆ ಗುಂಡು ಹಾರಿಸಲಾಗಿತ್ತು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಘಟನೆಯ ನಂತರ ಭದ್ರತಾ ಪಡೆಗಳು ದೊಡ್ಡ ಪ್ರಮಾಣದ ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ಆರಂಭಿಸಿದ್ದವು. ಇದೀಗ ಸೇನೆ ಗಡಿಯಲ್ಲಿ ಒಳನುಸುಳುತ್ತಿದ್ದ ಏಳು ಜನರನ್ನು ಹೊಡೆದುರುಳಿಸಿದೆ.
ಈ ಸುದ್ದಿಯನ್ನೂ ಓದಿ: Terrorist Encounter: ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಸೇನಾ ಕಾರ್ಯಾಚರಣೆ; 5 ಉಗ್ರರು ಉಡೀಸ್
ಇತ್ತೀಚೆಗೆ ಪಾಕಿಸ್ತಾನದ ಪ್ರಧಾನಿ ಕಾಶ್ಮೀರ ಸೇರಿದಂತೆ ಭಾರತದೊಂದಿಗಿನ ಎಲ್ಲಾ ಸಮಸ್ಯೆಗಳನ್ನು ಪಾಕಿಸ್ತಾನ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಬಯಸುತ್ತದೆ ಎಂದು ಹೇಳಿದ್ದರು. ಕಾಶ್ಮೀರ ಒಗ್ಗಟ್ಟಿನ ದಿನ”ದಂದು ಮುಜಫರಾಬಾದ್‌ನಲ್ಲಿ ನಡೆದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (POK) ಶಾಸಕಾಂಗ ಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು ಶಾಂತಿಯ ಬಗ್ಗೆ ಮಾತನಾಡಿದ್ದರು.