Rahul Gandhi: ಸಂಸತ್‌ನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ; ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ
Om Birla: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಂಸತ್ತಿನಲ್ಲಿ ತಮಗೆ ಮಾತನಾಡಲು ಅವಕಾಶ ನಿರಾಕರಿಸಿದ್ದಾರೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ದೂರಿದ್ದಾರೆ. ಸಂಸತ್ ಕಲಾಪಗಳನ್ನು ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.

ರಾಹುಲ್ ಗಾಂಧಿ.

ಹೊಸದಿಲ್ಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Lok Sabha Speaker Om Birla) ವಿರುದ್ಧ ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಬುಧವಾರ (ಮಾ. 26) ಗಂಭೀರ ಆರೋಪ ಹೊರಿಸಿದ್ದಾರೆ. ಓಂ ಬಿರ್ಲಾ ಸಂಸತ್ತಿನಲ್ಲಿ ತಮಗೆ ಮಾತನಾಡಲು ಅವಕಾಶ ನಿರಾಕರಿಸಿದ್ದಾರೆ ಎಂದು ದೂರಿದ್ದಾರೆ. ಸಂಸತ್ ಕಲಾಪಗಳನ್ನು ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದ ರಾಹುಲ್ ಗಾಂಧಿ, ಪ್ರಮುಖ ಸಮಸ್ಯೆಗಳನ್ನು ಪ್ರಸ್ತಾವಿಸಲು ಪದೇ ಪದೆ ಸಲ್ಲಿಸಿದ ಮನವಿಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಹೇಳಿದ್ದಾರೆ.
ʼʼಏನು ನಡೆಯುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ. ಮಾತನಾಡಲು ಅವಕಾಶ ನೀಡುವಂತೆ ಸ್ಪೀಕರ್ ಓಂ ಬಿರ್ಲಾ ಬಳಿ ಮನವಿ ಮಾಡಿದ್ದೆ. ಆದರೆ ಅವರು ನನಗೆ ಅವಕಾಶವನ್ನೇ ನೀಡಲಿಲ್ಲ. ಇದು ಸದನವನ್ನು ನಡೆಸಿವ ರೀತಿ ಅಲ್ಲವೇ ಅಲ್ಲʼʼ ಎಂದು ಕಿಡಿಕಾರಿದ್ದಾರೆ. ಸಂಸತ್‌ನ ಹೊರ ಭಾಗದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈ ಆರೋಪ ಹೊರಿಸಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆ ಇಲ್ಲಿದೆ:
#WATCH | Delhi: Lok Sabha LoP and Congress leader Rahul Gandhi says, " I don't know what is going on...I requested him to let me speak but he (Speaker) just ran away. This is no way to run the House. Speaker just left and he did not let me speak...he said something… pic.twitter.com/5cszadgc3w
— ANI (@ANI) March 26, 2025
ಮುಂಬರುವ ಮಹಾ ಕುಂಭಮೇಳ ಮತ್ತು ಈಗ ಹೆಚ್ಚುತ್ತಿರುವ ನಿರುದ್ಯೋಗದ ಸಮಸ್ಯೆಯ ಬಗ್ಗೆ ಮಾತನಾಡಲು ಪ್ರಯತ್ನಿಸಿದಾಗ ಪದೇ ಪದೆ ನಿರಾಕರಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ. "ಉಳಿದ ಸಮಯದಲ್ಲಿ ನಾನು ಸದ್ದಿಲ್ಲದೆ ಕುಳಿತಿದ್ದೆ. ಸಮಸ್ಯೆ ಬಗ್ಗೆ ಮಾತನಾಡಲು ನಾನು ಎದ್ದು ನಿಂತಾಗಲೆಲ್ಲ ನನ್ನನ್ನು ತಡೆಯಲಾಗುತ್ತಿತ್ತು. ಇಲ್ಲಿ ಪ್ರಜಾಪ್ರಭುತ್ವಕ್ಕೆ ಸ್ಥಾನವಿಲ್ಲ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Sarada Muraleedharan: ಕಪ್ಪು ಬಣ್ಣವನ್ನು ಏಕೆ ದ್ವೇಷಿಸುತ್ತೀರಿ? ವರ್ಣಬೇಧಕ್ಕೆ IAS ಅಧಿಕಾರಿಯ ಪ್ರತ್ಯುತ್ತರ
ನಿಯಮ ಪಾಲಿಸುವಂತೆ ಸೂಚಿಸಿದ ಓಂ ಬಿರ್ಲಾ
ಸದನದ ಘನತೆಯನ್ನು ಎತ್ತಿಹಿಡಿಯಲು ಅಗತ್ಯವಾದ ನಿಯಮಗಳನ್ನು ಅನುಸರಿಸುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ರಾಹುಲ್ ಗಾಂಧಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. "ನೀವು ಸದನದ ಘನತೆ ಮತ್ತು ಸಭ್ಯತೆಯ ಮಾನದಂಡಗಳನ್ನು ಕಾಪಾಡುವ ನಿರೀಕ್ಷೆಯಿದೆ. ಸಂಸದರ ನಡವಳಿಕೆಯು ಸದನದ ಘನತೆ ಮತ್ತು ಸಂಪ್ರದಾಯಗಳ ಉನ್ನತ ಮಾನದಂಡಗಳಿಗೆ ಅನುಗುಣವಾಗಿಲ್ಲದ ಹಲವು ನಿದರ್ಶನಗಳು ಕಣ್ಣ ಮುಂದಿದೆ" ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದ್ದರು.
"ಈ ಸಂದರ್ಭದಲ್ಲಿ ವಿಪಕ್ಷಗಳ ನಾಯಕ ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕೆಂದು ನಾನು ನಿರೀಕ್ಷಿಸುತ್ತೇನೆʼʼ ಎಂದು ತಿಳಿಸಿದ್ದರು. ಸ್ಪೀಕರ್ ಈ ರೀತಿಯ ಹೇಳಿಕೆ ನೀಡಲು ಕಾರಣವೇನು ಎನನುವುದು ಸ್ಪಷ್ಟವಾಗಿಲ್ಲ.
ರಾಹುಲ್ ಗಾಂಧಿ ಆಕ್ರೋಶ
ಸ್ಪೀಕರ್ ತಮ್ಮ ಬಗ್ಗೆ ಹೇಳಿಕೆ ನೀಡಿ ಮಾತನಾಡಲು ಅವಕಾಶ ನೀಡದೆ ಸದನವನ್ನು ಮುಂದೂಡಿದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕಳೆದ 1 ವಾರದಲ್ಲಿ ಅವರಿಗೆ ಮಾತನಾಡಲು ಅವಕಾಶವನ್ನೇ ನೀಡಲಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯ ಉಪನಾಯಕ ಗೌರವ್ ಗೊಗೊಯ್, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ಲೋಕಸಭೆಯಲ್ಲಿ ಪಕ್ಷದ ಸಚೇತಕ ಮಾಣಿಕಂ ಠಾಗೋರ್ ಸೇರಿದಂತೆ ಸುಮಾರು 70 ಕಾಂಗ್ರೆಸ್ ಸಂಸದರು ಲೋಕಸಭಾ ಸ್ಪೀಕರ್ ಅವರನ್ನು ಭೇಟಿಯಾಗಿ ಸದನದಲ್ಲಿ ಮಾತನಾಡಲು ರಾಹುಲ್ ಗಾಂಧಿ ಅವರಿಗೆ ಅವಕಾಶ ನಿರಾಕರಿಸಿರುವ ಬಗ್ಗೆ ಧ್ವನಿ ಎತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.