Justice Yashwant Varma: 15 ಕೋಟಿ ರೂ. ಪತ್ತೆ ಪ್ರಕರಣ; ಅಲಹಾಬಾದ್ ಹೈಕೋರ್ಟ್‌ಗೆ ಯಶವಂತ್ ವರ್ಮಾ ವರ್ಗಾವಣೆಗೆ ಸುಪ್ರೀಂ ಕೋರ್ಟ್ ಶಿಫಾರಸು
Justice Yashwant Varma: ಮನೆಯಲ್ಲಿ ಸುಟ್ಟ ಸ್ಥಿತಿಯಲ್ಲಿ 15 ಕೋಟಿ ರೂ.ಗಳ ನೋಟಿನ ಕಂತೆ ಸಿಕ್ಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸ್ಸಿನ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ.

ನ್ಯಾಯಮೂರ್ತಿ ಯಶವಂತ್ ವರ್ಮಾ.

ನವದೆಹಲಿ: ಮನೆಯಲ್ಲಿ ಸುಟ್ಟ ಸ್ಥಿತಿಯಲ್ಲಿ 15 ಕೋಟಿ ರೂ.ಗಳ ನೋಟಿನ ಕಂತೆ ಸಿಕ್ಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ (Justice Yashwant Varma) ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸ್ಸಿನ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ. ಈ ಬಗ್ಗೆ ಕೇಂದ್ರದಿಂದ ಅಧಿಕೃತ ಆದೇಶ ಹೊರಬರುವುದೊಂದೇ ಬಾಕಿ. ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸುವ ಸುಪ್ರೀಂ ಕೋರ್ಟ್ ಕೊಲಿಜಿಯಂ ನಿರ್ಧಾರದ ಬಗ್ಗೆ ಅಲಹಾಬಾದ್ ಹೈಕೋರ್ಟ್ ಬಾರ್ ಅಸೋಸಿಯೇಷನ್ ಆಕ್ಷೇಪ ವ್ಯಕ್ತಪಡಿಸಿದೆ.
ಅವರಿಗೆ ನಿಯೋಜಿಸಲಾದ ಎಲ್ಲ ಪ್ರಕರಣಗಳನ್ನು ಈಗ ಇತರ ವಿಭಾಗೀಯ ಪೀಠಗಳಿಗೆ ಮರು ಹಂಚಿಕೆ ಮಾಡಲಾಗಿದೆ. ಈ ಮೊದಲು ಮುಂದಿನ ಆದೇಶದವರೆಗೆ ಯಶವಂತ್ ವರ್ಮಾ ಅವರನ್ನು ತಕ್ಷಣದಿಂದಲೇ ಕರ್ತವ್ಯದಿಂದ ವಜಾಗೊಳಿಸಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಆದೇಶ ಹೊರಡಿಸಿದ್ದರು. ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್ ಸುಟ್ಟ ಸ್ಥಿತಿಯಲ್ಲಿ 15 ಕೋಟಿ ರೂ.ಗಳ ನೋಟಿನ ಕಂತೆ ಸಿಕ್ಕಿರುವ ಪ್ರಕರಣದ ವಿಚಾರಣೆಗಾಗಿ ಪಂಜಾಬ್, ಹರಿಯಾಣ ಮತ್ತು ಕರ್ನಾಟಕ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಿತ್ತು.
Supreme Court Collegium issues resolution recommending transfer of Justice Yashwant Varma, Judge of High Court of Delhi, back to his parent court, the Allahabad High Court
— ANI (@ANI) March 24, 2025
The Allahabad High Court Bar Association had raised objection over the Supreme Court Collegium’s decision… pic.twitter.com/x2Ro1mJS8U
ಈ ಸುದ್ದಿಯನ್ನೂ ಓದಿ: Justice Yashwant Varma: 15 ಕೋಟಿ ರೂ. ಪತ್ತೆ ಪ್ರಕರಣ; ನ್ಯಾಯಮೂರ್ತಿ ಯಶವಂತ್ ವರ್ಮಾ ಕರ್ತವ್ಯದಿಂದ ವಜಾ
ಏನಿದು ಪ್ರಕರಣ?
ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಮಾ. 14ರಂದು ಬೆಂಕಿಯಲ್ಲಿ ಸುಟ್ಟು ಹೋಗಿರುವ ಕಂತೆ ಕಂತೆ ನೋಟುಗಳು ಕಾಣಸಿಕ್ಕಿದ್ದವು. ವರ್ಮಾ ಊರಿನಿಂದ ಹೊರಗಿದ್ದಾಗ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಅವರ ಕುಟುಂಬದ ಸದಸ್ಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅವರು ಬೆಂಕಿಯನ್ನು ನಂದಿಸಿದ ನಂತರ ರೂಂಗಳಲ್ಲಿ ನಗದು ಪತ್ತೆಯಾಗಿತ್ತು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೊಗೆ ಪ್ರತಿಕ್ರಿಯೆ ನೀಡಿರುವ ವರ್ಮಾ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ʼʼನಾನು ಅಥವಾ ನನ್ನ ಕುಟುಂಬದವರು ಯಾರೇ ಆಗಲಿ ಹಣವನ್ನು ಕೋಣೆಗಳಲ್ಲಿ ಸಂಗ್ರಹಿಸಿಲ್ಲ. ನಗದು ನಮಗೆ ಸೇರಿದೆ ಎಂಬ ಆರೋಪವನ್ನು ನಾನು ಖಂಡಿಸುತ್ತೇನೆʼʼ ಎಂದು ಅವರು ಹೇಳಿದ್ದಾರೆ. ʼʼನಾನು ಅಥವಾ ನನ್ನ ಕುಟುಂಬದ ಯಾವುದೇ ಸದಸ್ಯರು ಆ ಸ್ಟೋರ್ ರೂಂನಲ್ಲಿ ಯಾವುದೇ ಸಮಯದಲ್ಲಿ ಯಾವುದೇ ನಗದು ಅಥವಾ ಕರೆನ್ಸಿಯನ್ನು ಸಂಗ್ರಹಿಸಿಲ್ಲ ಅಥವಾ ಇಟ್ಟುಕೊಂಡಿಲ್ಲ. ಯಾವಾಗಲೂ ನಿಯಮಿತ ಬ್ಯಾಂಕಿಂಗ್ ಮಾರ್ಗಗಳ ಮೂಲಕ, ಯುಪಿಐ ಹಾಗೂ ಕಾರ್ಡ್‌ಗಳ ಮೂಲಕವೇ ಹಣವನ್ನು ಬಳಸುತ್ತೇವೆʼʼ ಎಂದಿದ್ದರು. ಪೊಲೀಸ್ ಆಯುಕ್ತರು ಹಂಚಿಕೊಂಡ ವಿಡಿಯೊ ಮತ್ತು ಫೋಟೊಗಳು ತಾವು ಸ್ಥಳದಲ್ಲಿ ನೋಡಿದ ಚಿತ್ರಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಹೇಳಿದ್ದರು. ಜತೆಗೆ ಇದು ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲು ನಡೆದ ಪಿತೂರಿ ಎಂದು ಸ್ಪಷ್ಟನೆ ನೀಡಿದ್ದರು.
ಜಸ್ಟಿಸ್ ವರ್ಮಾ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ 2016ರಲ್ಲಿ ನೇಮಕಗೊಂಡಿದ್ದರು. 2021ರ ಅಕ್ಟೋಬರ್‌ನಲ್ಲಿ ಅವರನ್ನು ದಿಲ್ಲಿ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು. ಅದಕ್ಕಿಂತ ಮೊದಲು ಅವರು ಉತ್ತರ ಪ್ರದೇಶ ಸರ್ಕಾರದ ಸ್ಥಾಯಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.