Vishwavani Editorial: ಜನಕಲ್ಯಾಣಕ್ಕೆ ಅಭಿಯಾನವಾಗಲಿ
ಒಟ್ಟಿನಲ್ಲಿ, ‘ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ’ ಎನ್ನುವಂತೆ ‘ಭಿತ್ತಿಪತ್ರ ಸಮರ’ಕ್ಕೂ ಒಂದು ಕಾಲ ಎಂದು ಉದ್ಗರಿಸಿ ಶ್ರೀಸಾಮಾನ್ಯರು ಕೈತೊಳೆದುಕೊಳ್ಳಬೇಕೇ?
Ashok Nayak
Jan 2, 2025 9:49 AM
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆಯವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ವತಿಯಿಂದ ‘ಪೋಸ್ಟರ್ ಅಭಿಯಾನ’ ನಡೆದ ಸುದ್ದಿಯನ್ನು ನೀವು ಓದಿದ್ದೀರಿ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿಯ ಸರಕಾರವಿದ್ದಾಗ ಮತ್ತು ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಯಾಗಿದ್ದಾಗ ‘40 ಪರ್ಸೆಂಟ್ ಸಿಎಂ’, ‘ಪೇ ಸಿಎಂ’ ಎಂಬೆಲ್ಲ ಉದ್ಘೋಷಗಳನ್ನು ಒಳಗೊಂಡಿದ್ದ ಇಂಥದೇ ‘ಭಿತ್ತಿಪತ್ರ ಸಮರ’ಕ್ಕೆ ಕಾಂಗ್ರೆಸ್ ಮುಂದಾಗಿತ್ತು. ಒಟ್ಟಿನಲ್ಲಿ, ‘ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ’ ಎನ್ನುವಂತೆ ‘ಭಿತ್ತಿಪತ್ರಸಮರ’ಕ್ಕೂ ಒಂದು ಕಾಲ ಎಂದು ಉದ್ಗರಿಸಿ ಶ್ರೀಸಾಮಾನ್ಯರು ಕೈತೊಳೆದುಕೊಳ್ಳಬೇಕೇ? ರಾಜಕೀಯ ಪಕ್ಷಗಳು ತಂತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲೆಂದೋ ಜನಮನವನ್ನು ಸೆಳೆಯಲೆಂದೋ ಈ ಬಗೆಯ ಕಸರತ್ತುಗಳಿಗೆ ಮುಂದಾಗುವುದು ಹೊಸದೇನಲ್ಲ; ಆದರೆ ಇದರಿಂದ ಶ್ರೀಸಾಮಾನ್ಯರಿಗೆ ಪ್ರಯೋಜನವಾಗುವುದೇ? ರಾಜಕೀಯ ಕ್ಷೇತ್ರ ಎಂದ ಮೇಲೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಎಂಬ ಎರಡು ಪ್ರತ್ಯೇಕ ಅಸ್ತಿತ್ವಗಳು ಇರಬೇಕಾದ್ದು, ಅವುಗಳ ನಡುವೆ ಟೀಕೆ-ಟಿಪ್ಪಣಿಗಳ ವಿನಿಮಯ ವಾಗುವಂಥದ್ದೂ ಸಹಜವೇ.
ಆದರೆ ವರ್ಷಪೂರ್ತಿ ಕೆಸರೆರಚಾಟದಲ್ಲೇ ತೊಡಗಿದ್ದರೆ, ಜನಕಲ್ಯಾಣದ ಧ್ಯೇಯಕ್ಕೆ ಬಲ ತುಂಬುವವರಾರು? ಜನರಹಿತರಕ್ಷಣೆಯ ನೆಲೆಯಲ್ಲಿ ರಾಜ್ಯದಲ್ಲಿ ಆಗಬೇಕಿರುವ ಕೆಲಸ-ಕಾರ್ಯಗಳು ಮೂಟೆಗಟ್ಟಲೆ ಇವೆ; ಅವುಗಳ ಕಡೆಗೆ ಗಮನಹರಿಸುತ್ತ, ಪರಿಹಾರೋಪಾಯ ಕಂಡುಕೊಳ್ಳುವುದಕ್ಕೆ ಎಷ್ಟು ಸಮಯ ಮತ್ತು ಶ್ರಮವನ್ನು ವಿನಿಯೋಗಿಸಿ ದರೂ ಸಾಲದು.
ಆದ್ದರಿಂದ, ನಮ್ಮ ತಥಾಕಥಿತ ಜನನಾಯಕರು ಜನಕಲ್ಯಾಣವನ್ನು ಆದ್ಯತೆಯಾಗಿ ಇಟ್ಟುಕೊಳ್ಳಲಿ; ರಾಜಕೀಯ ಹಿತಾಸಕ್ತಿಯ ಅದೇನೇ ಆಂದೋಲನಗಳಿದ್ದರೂ ಅದಕ್ಕೆ ಹೆಚ್ಚಿನ ಸಮಯ ವ್ಯಯವಾಗುವುದು ಬೇಡ ಎಂಬುದು ಸಹೃದಯಿಗಳ ಆಶಯ.
ಇದನ್ನು ಓದಿ: Priyank Kharge