ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Murder Case: ಅಸಹಜ ಲೈಂಗಿಕತೆಗೆ ಒಪ್ಪದ ಪತ್ನಿಯ ಕೊಂದು ನೇಣು ಬಿಗಿದುಕೊಂಡ ಪತಿ!

Murder Case: ಬೆಂಗಳೂರಿನ ಬ್ಯಾಡರಹಳ್ಳಿಯ ಕಾಳಿ ನಗರದಲ್ಲಿ ಘಟನೆ ನಡೆದಿದೆ. ಅಸಹಜ ಲೈಂಗಿಕತೆಗೆ ಹೆಂಡತಿ ಒಪ್ಪಲಿಲ್ಲವೆಂದು ಮಗನ ಎದುರೇ ಆಕೆಯನ್ನು ಕೊಂದು ಗಂಡ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಅಸಹಜ ಲೈಂಗಿಕತೆಗೆ ಒಪ್ಪದ ಪತ್ನಿಯ ಕೊಂದು ಪತಿ ಆತ್ಮಹತ್ಯೆ!

Profile Prabhakara R Feb 26, 2025 9:16 PM

ಬೆಂಗಳೂರು: ಅಸಹಜ ಲೈಂಗಿಕತೆಗೆ ಹೆಂಡತಿ ಒಪ್ಪಲಿಲ್ಲವೆಂದು ಮಗನ ಎದುರೇ ಆಕೆಯನ್ನು ಕೊಂದು ಗಂಡ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ (Murder Case) ಬೆಂಗಳೂರಿನ ಬ್ಯಾಡರಹಳ್ಳಿಯ ಕಾಳಿ ನಗರದಲ್ಲಿ ನಡೆದಿದೆ. ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊಗಳನ್ನು ತೋರಿಸಿದ ವ್ಯಕ್ತಿ ನೀನೂ ಕೂಡ ಅದೇ ರೀತಿಯಲ್ಲಿ ಸಹಕರಿಸುವಂತೆ ಒತ್ತಾಯಿಸಿದ್ದರಿಂದ ಹೆಂಡತಿ ನಿರಾಕರಿಸಿದ್ದಾಳೆ. ಈ ಬಗ್ಗೆ ಅಮ್ಮನಿಗೆ ದೂರು ಹೇಳಿ ಬುದ್ಧಿ ಹೇಳಿದ್ದಕ್ಕೆ ಗಂಡ ಕೋಪಗೊಂಡಿದ್ದು. ಬಳಿಕ 6 ವರ್ಷದ ಮಗನ ಕಣ್ಣೆದುರಿಗೆ ಹೆಂಡತಿಯ ಕತ್ತು ಹಿಸುಕಿ ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಮತಾ (33) ಕೊಲೆಯಾದ ಮಹಿಳೆ. ಸುರೇಶ್ (40) ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡ ಆರೋಪಿಯಾಗಿದ್ದಾನೆ.

ಸುರೇಶ್‌ ಮತ್ತು ಮಮತಾ ದಂಪತಿ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಸುರೇಶ್‌ ಕುಡಿದು ಬಂದು ಪತ್ನಿ ಜತೆ ಜಗಳ ಮಾಡುತ್ತಿದ್ದ. ಇಂದು ಬೆಳಗ್ಗೆ ಪತಿ-ಪತ್ನಿ ಮಧ್ಯೆ ಜಗಳ ಉಂಟಾಗಿತ್ತು. ಜಗಳದ ವೇಳೆ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮೂಲತಃ ಸುರೇಶ್ ತುಮಕೂರಿನ ಗುಬ್ಬಿ ತಾಲೂಕಿನ ಸಿ.ಎಸ್. ಪುರದವರು. ಪತ್ನಿ ಮಮತ ತುಮಕೂರು ಜಿಲ್ಲೆ ನಿಡುವಳ್ಳಿಯವರು. ಕಳೆದ 13 ವರ್ಷದ ಹಿಂದೆ ವಿವಾಹ ಮಾಡಿಕೊಂಡಿದ್ದು, ಇತ್ತೀಚೆಗೆ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಸುರೇಶ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದರೆ, ಹೆಂಡತಿ ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ದಂಪತಿ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಆದರೆ, ಸೆಕ್ಸ್ ವಿಚಾರಕ್ಕೆ ಪತ್ನಿ ಮಮತಾ ಜತೆಗೆ ಸುರೇಶ್ ಆಗಾಗ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಮೊಬೈಲ್‌ ಫೋನ್‌ನಲ್ಲಿ ಅಶ್ಲೀಲ ವಿಡಿಯೊ ತೋರಿಸಿ, ಅದೇ ರೀತಿ ಸಹಕರಿಸಲು ಒತ್ತಾಯ ಮಾಡುತ್ತಿದ್ದ. ಈ ಬಗ್ಗೆ ಬೇಸತ್ತಿದ್ದ ಹೆಂಡತಿ ಗಂಡನ ಕಿರುಕುಳದ ಬಗ್ಗೆ ಆಕೆಯ ತಾಯಿಯ ಬಳಿ ಹೇಳಿಕೊಂಡಿದ್ದಳು. ಈ ವಿಚಾರವಾಗಿ ಕಳೆದ ಎರಡು ದಿನಗಳ ಹಿಂದೆ ದಂಪತಿ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಎರಡೂ ಕಡೆ ಮನೆಯವರು ಮಾತಾಡಿ ವಿಚ್ಛೇದನ ಪಡೆದುಕೊಳ್ಳಲು ನಿರ್ಧರಿಸಿದ್ದರು. ಇದರ ಬೆನ್ನಲ್ಲೇ ಸುರೇಶ್‌ ಹೆಂಡತಿಯನ್ನು ಕೊಲೆಗೈದು, ತಾನೂ ನೇಣಿಗೆ ಶರಣಾಗಿದ್ದಾನೆ. ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Bhadravathi News: ತಡರಾತ್ರಿ ಆಸ್ಪತ್ರೆಯಲ್ಲಿ ಮಹಿಳೆ ಸಾವು; ಬೆಳಗ್ಗೆ ಪುನಃ ಬಂತು ಜೀವ!

ನವಜಾತ ಶಿಶು ಮಾರಾಟ; ಅಂಗನವಾಡಿ ಕಾರ್ಯಕರ್ತೆ ಅಮಾನತು

ಕುಣಿಗಲ್: ಅವಿವಾಹಿತ ಯುವತಿ ಜನ್ಮ ನೀಡಿದ್ದ ನವಜಾತ ಶಿಶು ಮಾರಾಟ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಆರೋಪದ ಮೇಲೆ ತಾಲೂಕಿನ ಕೊತ್ತಗೆರೆ ಅಂಗನವಾಡಿ ಕಾರ್ಯಕರ್ತೆ ಜ್ಯೋತಿಯನ್ನು ಅಮಾನತುಗೊಳಿಸಲಾಗಿದೆ. ಕುಣಿಗಲ್‌ ಆಸ್ಪತ್ರೆಯಲ್ಲಿ (Kunigal News) ಮಾಗಡಿಯ ಅವಿವಾಹಿತ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆ ಮಗುವಿನ ಮಾರಾಟಕ್ಕೆ ಮಧ್ಯಸ್ಥಿಕೆ ವಹಿಸಿದ್ದ ಜ್ಯೋತಿ, ಮುಬಾರಕ್ ಎಂಬುವವರಿಗೆ 60 ಸಾವಿರಕ್ಕೆ ಮಾರಾಟ ಮಾಡಿಸಿದ್ದರು. ಈ ಬಗ್ಗೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವರದಿ ಆಧಾರದ ಮೇಲೆ ಅಂಗನವಾಡಿ ಕಾರ್ಯಕರ್ತೆಯನ್ನು ಅಮಾನತು ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.