Death Sentence: ಅಬುಧಾಬಿಯಲ್ಲಿ ಭಾರತೀಯ ಮಹಿಳೆಗೆ ಗಲ್ಲು ಏನಿದು ಪ್ರಕರಣ?
ನಾಲ್ಕು ತಿಂಗಳ ಮಗುವನ್ನು ಕೊಲೆ ಮಾಡಿದ ಆರೋಪದ ಮೇಲೆ ಅಬುಧಾಬಿಯಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ಮಹಿಳೆಯನ್ನು ಫೆಬ್ರವರಿ 15 ರಂದು ಗಲ್ಲಿಗೇರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಶಹಜಾದಿ ಖಾನ್ ಅವರ ತಂದೆ, ತಮಗೆ ನ್ಯಾಯ ಸಿಗಲಿಲ್ಲ ಎಂದು ಆರೋಪಿಸಿ, ಶಹಜಾದಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅಬುಧಾಬಿಗೆ ಹೋಗಲು ಸರ್ಕಾರವು ಅವರಿಗೆ ಪ್ರಯಾಣ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಗಲ್ಲುಶಿಕ್ಷೆಯೊಳಗಾದ ಭಾರತೀಯ ಮಹಿಳೆ

ಅಬುಧಾಬಿ: ನಾಲ್ಕು ತಿಂಗಳ ಮಗುವನ್ನು ಕೊಲೆ ಮಾಡಿದ ಆರೋಪದ ಮೇಲೆ ಅಬುಧಾಬಿಯಲ್ಲಿ (Death Sentence) ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ಮಹಿಳೆಯನ್ನು ಫೆಬ್ರವರಿ 15 ರಂದು ಗಲ್ಲಿಗೇರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಶಹಝಾದಿ ಅವರ ಅಂತ್ಯಕ್ರಿಯೆ ಮಾರ್ಚ್ 5 ರಂದು ಅಬುಧಾಬಿಯಲ್ಲಿ ನಡೆಯಲಿದೆ ಎಂದು ವಿದೇಶಾಂಗ ಸಚಿವಾಲಯವನ್ನು ಪ್ರತಿನಿಧಿಸಿದ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಚೇತನ್ ಶರ್ಮಾ, ನ್ಯಾಯಮೂರ್ತಿ ಸಚಿನ್ ದತ್ತ ನೇತೃತ್ವದ ಪೀಠಕ್ಕೆ ತಿಳಿಸಿದ್ದಾರೆ. ಮಹಿಳೆಯ ಅತ್ಯಂಕ್ರಿಯೆಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡುವುದಾಗಿ ಶರ್ಮಾ ತಿಳಿಸಿದ್ದಾರೆ.
ಪರಿಸ್ಥಿತಿಯನ್ನು ಅತ್ಯಂತ ದುರದೃಷ್ಟಕರ ಎಂದು ಕರೆದ ನ್ಯಾಯಾಲವು ಶಹಝಾದಿ ಅವರ ತಂದೆ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತು. ಶೆಹಜಾದಿ ರಕ್ಷಣೆ ಕೋರಿ ಆಕೆಯ ಪೋಷಕರು ಕೇಂದ್ರಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆ ಪ್ರಕರಣದ ಮರುಪರಿಶೀಲನೆ ನಡೆಸುವಂತೆ ಭಾರತೀಯ ರಾಯಭಾರಿ ಕಚೇರಿ ಅಬುಧಾಬಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ ಫೆ.15ರಂದೇ ಆಕೆಯನ್ನು ಗಲ್ಲಿಗೇರಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಏನಿದು ಪ್ರಕರಣ ?
ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಗೋಯಿರಾ ಮುಘಲೈ ಗ್ರಾಮದ ನಿವಾಸಿ ಶಹಜಾದಿಯನ್ನು ಉಜೈರ್ ಎಂಬಾತ ವಂಚಿಸಿ ದುಬೈ ದಂಪತಿಗೆ ಮಾರಾಟ ಮಾಡಿದ್ದ. ದಂಪತಿ ಆಕೆಯನ್ನು ತಮ್ಮ ಮಗುವಿನ ಆರೈಕೆಗೆ ನೇಮಿಸಿದ್ದರು. ಆದರೆ ಕೆಲದಿನಗಳಲ್ಲಿ ಮಗು ಮೃತಪಟ್ಟಿತ್ತು. ಶೆಹಜಾದಿಯೇ ಮಗುವಿನ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿ ದಂಪತಿ ದೂರು ನೀಡಿದ್ದರು. ತನಿಖೆ ಬಳಿಕ ಅಬುಧಾಬಿ ನ್ಯಾಯಾಲಯ ಆಕೆಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಶಹಜಾದಿ, ಫೆಬ್ರವರಿ 10, 2023 ರಿಂದ ಅಬುಧಾಬಿ ಪೊಲೀಸ್ ಕಸ್ಟಡಿಯಲ್ಲಿದ್ದಳು. ಜುಲೈ 31, 2023 ರಂದು ಮರಣದಂಡನೆ ವಿಧಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ:Periya Murders: ಪೆರಿಯಾ ಹತ್ಯೆ ಪ್ರಕರಣ; 10 ಮಂದಿಗೆ ಜೀವಾವಧಿ-ಮಾಜಿ ಎಂಎಲ್‌ಎಗೆ 5 ವರ್ಷ ಜೈಲು ಶಿಕ್ಷೆ
ಈಗ ಶಹಜಾದಿ ಖಾನ್ ಅವರ ತಂದೆ, ತಮಗೆ ನ್ಯಾಯ ಸಿಗಲಿಲ್ಲ ಎಂದು ಆರೋಪಿಸಿ, ಶಹಜಾದಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅಬುಧಾಬಿಗೆ ಹೋಗಲು ಸರ್ಕಾರವು ಅವರಿಗೆ ಪ್ರಯಾಣ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ನೀವು ನನ್ನ ಮಗಳನ್ನು ಜೀವಂತವಾಗಿ ನೀಡಲು ಸಾಧ್ಯವಾಗಲಿಲ್ಲ, ಕನಿಷ್ಠ ಅವಳ ದೇಹವನ್ನು ನನಗೆ ಕೊಡಿ ಎಂದು ಅವರು ಹೇಳಿದ್ದಾರೆ.