ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Modi: ಶ್ರೀಲಂಕಾಕ್ಕೆ ಬಂದಿಳಿದ ಪ್ರಧಾನಿ ಮೋದಿ; ಭಾರೀ ಮಳೆಯ ನಡುವೆಯೇ ಭರ್ಜರಿ ಸ್ವಾಗತ

ಶ್ರೀಲಂಕಾದಲ್ಲಿ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಅವರ ನೇತೃತ್ವದ ಎಡಪಂಥೀಯ ರಾಷ್ಟ್ರೀಯ ಜನಶಕ್ತಿ ಮೈತ್ರಿಕೂಟ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾಕ್ಕೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ. ಥೈಲ್ಯಾಂಡ್‌ನಲ್ಲಿ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಪಾಲ್ಗೊಂಡ ಮೋದಿ ಬಳಿಕ ಅಲ್ಲಿಂದ ನೇರವಾಗಿ ಶ್ರೀಲಂಕಾಕ್ಕೆ ಆಗಮಿಸಿದ್ದಾರೆ.

ಶ್ರೀಲಂಕಾದಲ್ಲಿ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ

ಕೊಲಂಬೊ: ಮೂರು ದಿನಗಳ ಶ್ರೀಲಂಕಾ (Srilanka) ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶುಕ್ರವಾರ ಕೊಲಂಬೊಗೆ (Colombo) ಆಗಮಿಸಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಅವರು ಭಾರತ ಮತ್ತು ಶ್ರೀಲಂಕಾ ನಡುವಿನ ರಕ್ಷಣಾ, ಇಂಧನ, ಡಿಜಿಟಲ್ ಮೂಲಸೌಕರ್ಯ, ಆರೋಗ್ಯ ಮತ್ತು ವ್ಯಾಪಾರ ಕ್ಷೇತ್ರಗಳಿಗೆ ಸಂಬಂಧಿಸಿ ಚರ್ಚೆ ನಡೆಸಿ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಶ್ರೀಲಂಕಾದಲ್ಲಿ ಅಧ್ಯಕ್ಷ ಅನುರ ಕುಮಾರ ದಿಸ್ಸನಾಯಕೆ(Anura Kumara Dissanayake) ಅವರ ನೇತೃತ್ವದ ಎಡಪಂಥೀಯ ರಾಷ್ಟ್ರೀಯ ಜನಶಕ್ತಿ ಮೈತ್ರಿಕೂಟ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾಕ್ಕೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ.

ಥೈಲ್ಯಾಂಡ್‌ನಲ್ಲಿ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಪಾಲ್ಗೊಂಡ ಮೋದಿ ಬಳಿಕ ಅಲ್ಲಿಂದ ನೇರವಾಗಿ ಶ್ರೀಲಂಕಾಕ್ಕೆ ಆಗಮಿಸಿದ್ದಾರೆ. ಶ್ರೀಲಂಕಾ ಅಧ್ಯಕ್ಷ ದಿಸ್ಸನಾಯಕೆ ಅವರು ಕಳೆದ ಡಿಸೆಂಬರ್ ನಲ್ಲಿ ನವದೆಹಲಿಗೆ ಭೇಟಿ ನೀಡಿದ್ದರು. ಶ್ರೀಲಂಕಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದು ಅವರ ಮೊದಲ ವಿದೇಶ ಪ್ರವಾಸವಾಗಿತ್ತು. ಈ ಸಂದರ್ಭದಲ್ಲಿ ಎರಡೂ ದೇಶಗಳೂ ಆದ್ಯತೆಯ ಕ್ಷೇತ್ರಗಳಿಗೆ ಪರಸ್ಪರ ಸಹಕಾರ ಮಾಡುವುದಾಗಿ ಹೇಳಿಕೆ ನೀಡಿದ್ದವು.

ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾಕ್ಕೆ ಭೇಟಿ ನೀಡುವ ಮುನ್ನ ಪ್ರಧಾನಿ ಮೋದಿ ಮತ್ತು ಶ್ರೀಲಂಕಾ ಅಧ್ಯಕ್ಷ ದಿಸ್ಸನಾಯಕೆ ಇಬ್ಬರೂ ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಎರಡು ರಾಷ್ಟ್ರಗಳ ನಡುವಿನ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ಸಹಕಾರದ ಹೊಸ ಕ್ಷೇತ್ರಗಳನ್ನು ಅನ್ವೇಷಿಸಲು ಎದುರು ನೋಡುತ್ತಿರುವುದಾಗಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾ ಭೇಟಿಯ ಈ ಸಂದರ್ಭದಲ್ಲಿ ಎಂಟು ತಿಳುವಳಿಕೆ ಪತ್ರಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ದ್ವೀಪ ರಾಷ್ಟ್ರಕ್ಕೆ ಅಗ್ಗದ ಇಂಧನ ಪೂರೈಕೆ ಸೇರಿದಂತೆ ಡಿಜಿಟಲೀಕರಣ, ಆರೋಗ್ಯ, ರಕ್ಷಣೆ ಮತ್ತು ಇಂಧನ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಯೋಗವನ್ನು ಈ ಒಪ್ಪಂದ ಹೊಂದಿರಲಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರೊಂದಿಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಕೂಡ ಇದ್ದಾರೆ. ಕೊಲಂಬೊದ ಸ್ವಾತಂತ್ರ್ಯ ಚೌಕದಲ್ಲಿ ಶನಿವಾರ ಪ್ರಧಾನಿ ಮೋದಿ ಅವರು ಗೌರವ ರಕ್ಷೆಯನ್ನು ಸ್ವೀಕರಿಸಿ ಬಳಿಕ ಅಧ್ಯಕ್ಷೀಯ ಸಚಿವಾಲಯದಲ್ಲಿ ಅಧ್ಯಕ್ಷ ದಿಸ್ಸನಾಯಕೆ ಅವರೊಂದಿಗೆ ಔಪಚಾರಿಕ ಮಾತುಕತೆ ನಡೆಸಲಿದ್ದಾರೆ.



ಪ್ರಧಾನಿ ಮೋದಿ ಭೇಟಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಶ್ರೀಲಂಕಾದಲ್ಲಿನ ಭಾರತೀಯ ಹೈಕಮಿಷನರ್ ಸಂತೋಷ್ ಝಾ ಅವರು, ನವದೆಹಲಿ ಮತ್ತು ಕೊಲಂಬೊ ನಡುವಿನ ಸಂಬಂಧಗಳು ಗಾಢವಾಗುತ್ತಿದೆ. ದ್ವಿಪಕ್ಷೀಯ ಸಂಬಂಧಗಳು ಈ ಮೊದಲು ಎಂದಿಗೂ ಉತ್ತಮವಾಗಿರಲಿಲ್ಲ ಎಂದು ಹೇಳಿದರು. ಪ್ರಧಾನಿ ಮೋದಿಯವರ ಈ ಭೇಟಿಯ ವೇಳೆ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ. ಇದು ಎರಡು ದೇಶಗಳ ಜಂಟಿ ಅಭ್ಯಾಸ, ತರಬೇತಿ ಕಾರ್ಯಕ್ರಮಗಳು ಮತ್ತು ಮಿಲಿಟರಿ ಹಾರ್ಡ್‌ವೇರ್ ಪೂರೈಕೆಯಂತಹ ಅಸ್ತಿತ್ವದಲ್ಲಿರುವ ಒಪ್ಪಂದಗಳನ್ನು ಒಳಗೊಂಡಿರುತ್ತದೆ. ರಕ್ಷಣಾ ಸಹಕಾರವನ್ನು ಒಂದು ನಿರ್ಧಿಷ್ಟ ಚೌಕಟ್ಟಿನೊಳಗೆ ಇಡುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ : Stock Market Update: ಟ್ರಂಪ್‌ ಟಾರಿಫ್‌ ಎಫೆಕ್ಟ್‌, ಸೆನ್ಸೆಕ್ಸ್‌ 322 ಅಂಕ ಪತನ

ಭಾರತ ಮತ್ತು ಶ್ರೀಲಂಕಾ ನಡುವಿನ ರಕ್ಷಣಾ ಪಾಲುದಾರಿಕೆಯ ಮುಖ್ಯ ಉದ್ದೇಶ ಸಮುದ್ರ ಭದ್ರತೆಯಾಗಿದೆ. ನಾವು ಒಂದೇ ಪ್ರದೇಶದಲ್ಲಿದ್ದೇವೆ ಮತ್ತು ನಮ್ಮ ಭದ್ರತೆಯು ಪರಸ್ಪರ ಬೆಸೆದುಕೊಂಡಿದೆ. ಅದರ ಆಧಾರದ ಮೇಲೆ ನಾವು ಕೆಲಸ ಮಾಡಬೇಕಿದೆ ಎಂದು ಅವರು ತಿಳಿಸಿದರು. ಕಳೆದ ವರ್ಷದ ಕೊನೆಯಲ್ಲಿ ಶ್ರೀಲಂಕಾ ಅಧ್ಯಕ್ಷರ ಭಾರತ ಭೇಟಿ ಬಳಿಕ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಶ್ರೀಲಂಕಾ ಭೇಟಿಯು ಎರಡು ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ಹೊಸ ಅಂಶಗಳನ್ನು ಸೇರಿಸಿದೆ ಎಂದು ಝಾ ಹೇಳಿದರು. ಭಾರತ ಮತ್ತು ಶ್ರೀಲಂಕಾ ಅತ್ಯಂತ ಹತ್ತಿರದ ನೆರೆಹೊರೆಯವರು. ಎರಡೂ ರಾಷ್ಟ್ರಗಳು ಸುಧೀರ್ಘವಾದ ಸಂಬಂಧವನ್ನು ಹೊಂದಿವೆ. ನಮ್ಮ ಇತಿಹಾಸ, ಭೌಗೋಳಿಕತೆ, ಸಾಮಾಜಿಕ, ಸಾಂಸ್ಕೃತಿಕ ಸಂಬಂಧಗಳನ್ನು ಗಮನಿಸಿದರೆ ನಾವು ಸಹಕರಿಸುವುದು ಬಹಳ ಮುಖ್ಯ ಎಂದು ಅವರು ತಿಳಿಸಿದರು.