Jasprit Bumrah: ಆರ್‌ಸಿಬಿ ಪಂದ್ಯಕ್ಕೂ ಬುಮ್ರಾ ಅನುಮಾನ!
IPL 2025: ಹಾಲಿ ಆವೃತ್ತಿಯಲ್ಲಿ ಮುಂಬೈ ಆಡಿದ 4 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ. ಸೋಲಿನ ಹತಾಶೆಯಲ್ಲಿದ್ದ ಹಾರ್ದಿಕ್ ಪಾಂಡ್ಯ ಪಡೆಗೆ ಜಸ್‌ಪ್ರೀತ್ ಬುಮ್ರಾ ಸೇವೆ ಕಳೆದುಕೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.


ಮುಂಬಯಿ: ಪ್ರಧಾನ ವೇಗಿ ಜಸ್‌ಪ್ರೀತ್ ಬುಮ್ರಾ ಅವರ ಕಮ್‌ಬ್ಯಾಕ್ ನಿರೀಕ್ಷೆಯಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೆ ನಿರಾಸೆಯಾಗಿದೆ. ಬುಮ್ರಾ ಆಗಮನ ಇನ್ನಷ್ಟು ತಡವಾಗಲಿದೆ ಎಂದು ತಿಳಿದುಬಂದಿದೆ. ಎ.7ರಂದು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಆಡುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಬುಮ್ರಾ ಪ್ರಸ್ತುತ ಬೆಂಗಳೂರಿನ ಎನ್‌ಸಿಎಯಲ್ಲೇ ಇದ್ದು ಆಡಲು ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ಹಾಲಿ ಆವೃತ್ತಿಯಲ್ಲಿ ಮುಂಬೈ ಆಡಿದ 4 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ. ಸೋಲಿನ ಹತಾಶೆಯಲ್ಲಿದ್ದ ಪಾಂಡ್ಯ ಪಡೆಗೆ ಬುಮ್ರಾ ಸೇವೆ ಕಳೆದುಕೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೆನ್ನು ನೋವಿಗೆ ತುತ್ತಾಗಿದ್ದ ಬುಮ್ರಾ ಕಳೆದ ಮೂರು ತಿಂಗಳಿನಿಂದ ಬಿಸಿಸಿಐ ಪುನಶ್ಚೇತನ ಶಿಬಿರದಲ್ಲಿದ್ದಾರೆ. ಅವರು ಬಿಸಿಸಿಐ ವೈದ್ಯಕೀಯ ತಂಡದಿಂದ ಆಡಲು ಅನುಮತಿಗಾಗಿ ಕಾಯುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಬುಮ್ರಾ 3 ಅಥವಾ 4 ದಿನಗಳಲ್ಲಿ ಎನ್‌ಒಸಿ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಬಾರಿಯೂ ಅಸ್ಥಿರ ಪ್ರದರ್ಶನ
ಕಳೆದ ಆವೃತ್ತಿಯಂತೆ ಈ ಬಾರಿಯೂ ಮುಂಬೈ ಅಸ್ಥಿರ ಪ್ರದರ್ಶನ ತೋರುತ್ತಿದೆ. ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಸಂಪೂರ್ಣ ವೈಫಲ್ಯ ಎದುರಿಸುತ್ತಿದ್ದಾರೆ. ಮಾಜಿ ನಾಯಕ ರೋಹಿತ್ ಕಳೆದ ಪಂದ್ಯದಲ್ಲಿ ಗಾಯದ ಕಾರಣ ನೀಡಿ ಪಂದ್ಯದಿಂದ ಹೊರಗುಳಿದಿದ್ದರು. ಆದರೆ ಅಸಲಿ ಕಾರಣ ಬ್ಯಾಟಿಂಗ್ ವೈಫಲ್ಯ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ.
ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜಯಂಟ್ಸ್ ತಂಡ, ತನ್ನ ಪಾಲಿನ 20 ಓವರ್‌ಗಳಲ್ಲಿ 203 ರನ್‌ಗಳನ್ನು ಕಲೆ ಹಾಕಿತು. ಬೃಹತ್ ಮೊತ್ತದ ಗುರಿ ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಿಗೆ 191 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತ್ತು. ಜತೆಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ.