ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mitra Vibhushana: ಪ್ರಧಾನಿ ಮೋದಿಗೆ ಶ್ರೀಲಂಕಾದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಮಿತ್ರ ವಿಭೂಷಣ' ಪ್ರದಾನ

PM Narendra Modi: ಶ್ರೀಲಂಕಾ ಪ್ರವಾಸಕ್ಕಾಗಿ ಕೊಲಂಬೊಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಪ್ರತಿಷ್ಠಿತ ಪ್ರಶಸ್ತಿ 'ಮಿತ್ರ ವಿಭೂಷಣ'ವನ್ನು ಪ್ರದಾನ ಮಾಡಲಾಯಿತು. ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಅವರು ವಿದೇಶ ನಾಯಕರಿಗೆ ನೀಡುವ ಈ ಅತ್ಯುನ್ನತ ಪ್ರಶಸ್ತಿ ನೀಡಿದರು.

ಪ್ರಧಾನಿ ಮೋದಿಗೆ ಶ್ರೀಲಂಕಾದ ಅತ್ಯುನ್ನತ ಪ್ರಶಸ್ತಿ 'ಮಿತ್ರ ವಿಭೂಷಣ' ಪ್ರದಾನ

ನರೇಂದ್ರ ಮೋದಿ ಮತ್ತು ಅನುರ ಕುಮಾರ ದಿಸ್ಸಾನಾಯಕೆ.

Profile Ramesh B Apr 5, 2025 5:05 PM

ಕೊಲಂಬೊ: ಶ್ರೀಲಂಕಾ (Srilanka) ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶುಕ್ರವಾರ (ಏ. 4) ಕೊಲಂಬೊಗೆ (Colombo) ತೆರಳಿದ್ದಾರೆ. ದ್ವಿಪ ರಾಷ್ಟ್ರಕ್ಕೆ ಬಂದಿಳಿದ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಈ ವೇಳೆ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ (Anura Kumara Dissanayake) ಅವರು ವಿದೇಶ ನಾಯಕರಿಗೆ ನೀಡುವ ಅತ್ಯುನ್ನತ ಪ್ರಶಸ್ತಿ 'ಮಿತ್ರ ವಿಭೂಷಣ' (Mitra Vibhushana)ವನ್ನು ಪ್ರದಾನ ಮಾಡಿದರು. ಮೋದಿ ಈ ಪ್ರಶಸ್ತಿಗೆ ಎಲ್ಲ ರೀತಿಯಿಂದಲೂ ಅರ್ಹರು ಎಂದು ಅನುರ ಕುಮಾರ ದಿಸ್ಸಾನಾಯಕೆ ತಿಳಿಸಿದರು. ಇದೇ ವೇಳೆ ಮೋದಿ ಈ ಪ್ರಶಸ್ತಿಯನ್ನು 140 ಕೋಟಿ ಭಾರತೀಯರಿಗೆ ಅರ್ಪಿಸಿದರು.

ಮೋದಿ ಜತೆಗೆ ನಡೆದ ಜಂಟಿ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅನುರ ಕುಮಾರ ದಿಸ್ಸಾನಾಯಕೆ, "ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀಲಂಕಾ ಸರ್ಕಾರವು ʼಮಿತ್ರ ವಿಭೂಷಣʼ ಪ್ರಶಸ್ತಿಯನ್ನು ಸಂತೋಷದಿಂದ ಪ್ರದಾನ ಮಾಡುತ್ತಿದೆ. 2008ರಲ್ಲಿ ಪರಿಚಯಿಸಲಾದ ಈ ಪ್ರತಿಷ್ಠಿತ ಗೌರವವನ್ನು ವಿವಿಧ ರಾಷ್ಟ್ರಗಳ ಮುಖ್ಯಸ್ಥರಿಗೆ ನೀಡಲಾಗುತ್ತದೆ. ಮೋದಿ ಈ ಗೌರವಕ್ಕೆ ಅರ್ಹರುʼʼ ಎಂದು ತಿಳಿಸಿದರು. ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು, ಎರಡೂ ದೇಶಗಳ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಉತ್ತೇಜಿಸಲು ಪ್ರಧಾನಿ ಮೋದಿ ನಡೆಸಿದ ಅಸಾಧಾರಣ ಪ್ರಯತ್ನಗಳಿಗಾಗಿ ಈ ಗೌರವವನ್ನು ನೀಡಲಾಗಿದೆ.

ಪ್ರಧಾನಿ ಮೋದಿ ಅವರ ಎಕ್ಸ್‌ ಪೋಸ್ಟ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: PM Modi Srilanka Visit: ಪ್ರಧಾನಿ ಮೋದಿ ಶ್ರೀಲಂಕಾ ಭೇಟಿ- ಕುತಂತ್ರಿ ಚೀನಾಗೆ ತಲೆನೋವು ಶುರು

ಮೋದಿ ಹೇಳಿದ್ದೇನು?

ಇನ್ನು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ ಮೋದಿ ಮಾತನಾಡಿ, "ಇದು ನನಗೆ ಹೆಮ್ಮೆಯ ಕ್ಷಣ. ಇದು ನನಗೆ ಮಾತ್ರವಲ್ಲ, 140 ಕೋಟಿ ಭಾರತೀಯರಿಗೆ ಸಂದ ಗೌರವ. ಶ್ರೀಲಂಕಾ ಮತ್ತು ಭಾರತದ ಜನರ ನಡುವಿನ ಐತಿಹಾಸಿಕ ಸಂಬಂಧ ಹಾಗೂ ಆಳವಾದ ಸ್ನೇಹವನ್ನು ಇದು ಪ್ರತಿಪಾದಿಸುತ್ತದೆ. ಇದಕ್ಕಾಗಿ ನಾನು ಅಧ್ಯಕ್ಷರಿಗೆ, ಶ್ರೀಲಂಕಾ ಸರ್ಕಾರಕ್ಕೆ ಮತ್ತು ಇಲ್ಲಿನ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ" ಎಂದು ಅವರು ಹೇಳಿದರು.

"ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅಧಿಕಾರ ವಹಿಸಿಕೊಂಡ ನಂತರ ತಮ್ಮ ವಿದೇಶ ಪ್ರವಾಸವನ್ನು ಭಾರತದ ಮೂಲಕ ಆರಂಭಿಸಿದ್ದರು. ಅವರು ಅಧಿಕಾರ ಸ್ವೀಕರಿಸಿದ ಬಳಿಕ ನಾನು ಶ್ರೀಲಂಕಾಕ್ಕೆ ಭೇಟಿ ನೀಡಿದ್ದು ಇದು ಮೊದಲ ಬಾರಿ. ಇದು ನಮ್ಮ ಸಂಬಂಧಗಳ ಆಳವನ್ನು ಪ್ರತಿಬಿಂಬಿಸುತ್ತದೆ" ಎಂದು ಅವರು ಹೇಳಿದರು. 2019ರ ಬಾಂಬ್ ಸ್ಫೋಟ ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗ ಸೇರಿದಂತೆ ಕಠಿಣ ಸಮಯದಲ್ಲಿ ಭಾರತವು ಶ್ರೀಲಂಕಾದ ನೆರವಿಗೆ ಧಾವಿಸಿದೆ ಎಂದು ನೆನಪಿಸಿಕೊಂಡರು.

ʼಮಿತ್ರ ವಿಭೂಷಣʼ ಪದಕದ ವೈಶಿಷ್ಟ್ಯ

ʼಮಿತ್ರ ವಿಭೂಷಣʼ ಪ್ರಶಸ್ತಿಯ ಪದಕವನ್ನು ಬಹಳಷ್ಟು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಭಾರತ-ಶ್ರೀಲಂಕಾ ಬಾಂಧವ್ಯದ ಪ್ರಬಲ ಸಂಕೇತಗಳನ್ನು ಒಳಗೊಂಡಿದೆ. ಬೌದ್ಧ ಪರಂಪರೆಯನ್ನು ಪ್ರತಿನಿಧಿಸುವ ಧರ್ಮ ಚಕ್ರ, ಸಮೃದ್ಧಿಯನ್ನು ಸೂಚಿಸುವ ಅಕ್ಕಿಯಿಂದ ತುಂಬಿದ ಕಳಸ ಮತ್ತು ಸ್ನೇಹ ಸಂಬಂಧವನ್ನು ಸಂಕೇತಿಸುವ ಕಮಲದ ದಳಗಳಿಂದ ಕೂಡಿದ ಗ್ಲೋಬಲ್‌, ನವರತ್ನಗಳನ್ನು ಒಳಗೊಂಡಿದೆ. ಇದು ಪ್ರಧಾನಿ ಮೋದಿ ಅವರಿಗೆ ಲಭಿಸಿದ 22ನೇ ಅಂತಾರಾಷ್ಟ್ರೀಯ ಪ್ರಶಸ್ತಿ.