ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nelamangala CMC: ಸರ್ಕಾರದ ಆದೇಶಕ್ಕೆ ಸಿಗದ ಕಿಮ್ಮತ್ತು; ನೆಲಮಂಗಲ ನಗರಸಭೆಯಲ್ಲಿ ಹೆಚ್ಚಿದ ಬ್ರೋಕರ್‌ಗಳ ಹಾವಳಿ

Nelamangala CMC: ನೆಲಮಂಗಲದಲ್ಲಿ ಬಿ-ಖಾತಾ ಆಂದೋಲನದ ಮೂಲಕ ಕೆಲವು ನಗರಸಭೆ ಸದಸ್ಯರು ಹಾಗೂ ಕೆಲವು ಬ್ರೋಕರ್‌ಗಳು ಹಣ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ವಾರ್ಡ್‌ಗಳಲ್ಲಿನ ನಿವಾಸಿಗಳಿಗೆ ತಪ್ಪು ಮಾಹಿತಿಯನ್ನು ನೀಡಿ ಖಾತೆ ಮಾಡಿಸಲು 10 ರಿಂದ 15 ಸಾವಿರ ಹಣವನ್ನು ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನೆಲಮಂಗಲ ನಗರಸಭೆಯಲ್ಲಿ ಹೆಚ್ಚಿದ ಬ್ರೋಕರ್‌ಗಳ ಹಾವಳಿ

Profile Prabhakara R Mar 26, 2025 10:20 PM

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಬಿ-ಖಾತಾ ಆಂದೋಲನವು ನೆಲಮಂಗಲ ನಗರಸಭೆಯಲ್ಲಿ ಬ್ರೋಕರ್‌ಗಳ ಹಾವಳಿಯಿಂದ ಸಂಪೂರ್ಣ ಹಳ್ಳ ಹಿಡಿದಿದೆ. ಒಂದು ಖಾತೆಗೆ 10 ರಿಂದ 15 ಸಾವಿರ ಹಣ ನೀಡುವ ಪರಿಸ್ಥಿತಿ ಸಾರ್ವಜನಿಕರಿಗೆ ನಿರ್ಮಾಣವಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕಾಗಿದ್ದ ಅಧಿಕಾರಿಗಳು ಹಾಗೂ ನಗರಸಭೆ ಅಧ್ಯಕ್ಷರು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಏನಿದು ಯೋಜನೆ?

ರಾಜ್ಯದಲ್ಲಿ ನಿಯಮಬಾಹಿರವಾಗಿ ಕಂದಾಯ ಭೂಮಿಯಲ್ಲಿ ನಿರ್ಮಿಸಿದ ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಿಕೊಂಡ ಬಡ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಫೆಬ್ರವರಿ 19 ರಿಂದ ಮೂರು ತಿಂಗಳ ಕಾಲ ಬಿ-ಖಾತಾ ಆಂದೋಲನ ಆಯೋಜಿಸಿತ್ತು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ನಗರಸಭೆ ಸದಸ್ಯರು ಹಾಗೂ ಕೆಲವು ಬ್ರೋಕರ್‌ಗಳು ಹಣ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಖಾತೆಗೆ ತೆರಿಗೆಯನ್ನು ಕಟ್ಟಿಸಿಕೊಂಡು ಖಾತೆ ಮಾಡಿಕೊಡಬೇಕು, ಆದರೆ ಕೆಲವು ಸದಸ್ಯರು ಅಲ್ಲಿನ ವಾರ್ಡ್‌ಗಳಲ್ಲಿನ ನಿವಾಸಿಗಳಿಗೆ ತಪ್ಪು ಮಾಹಿತಿಯನ್ನು ನೀಡಿ 10 ರಿಂದ 15 ಸಾವಿರ ಹಣವನ್ನು ಖಾತೆ ಮಾಡಿಸಲು ಪಡೆಯುತ್ತಿದ್ದಾರೆ. ಅತಿ ಹೆಚ್ಚು ಹಣ ಕೊಟ್ಟವರಿಗೆ ಬೇಗನೆ ಖಾತೆ ಮಾಡಿಸಿಕೊಡುತ್ತಾರೆ, ಕೇವಲ ತೆರಿಗೆಯನ್ನು ಪಾವತಿಸಿ ಖಾತೆ ಮಾಡಿಸಲು ಹೋದರೆ, ದಾಖಲಾತಿಗಳು ಸರಿ ಇಲ್ಲ ಎಂಬ ನೆಪವನ್ನೊಡ್ಡಿ ಖಾತೆಯನ್ನು ಮಾಡಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಇದರಿಂದ ನಗರಸಭೆಯ ಬಿ-ಖಾತಾ ಆಂದೋಲನ ಸಂಪೂರ್ಣ ಹಳ್ಳ ಹಿಡಿದಿದೆ.

ಈ ಸುದ್ದಿಯನ್ನೂ ಓದಿ | Chalavadi Narayanaswamy: ಮುಖ್ಯಮಂತ್ರಿಗಳಿಗೆ ಹನಿಟ್ರ್ಯಾಪ್ ಭಯ ಏನಾದರೂ ಇದೆಯೇ? ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

image

ರಾಜ್ಯದ ಕೆಲವು ಕಡೆ ವಾರ್ಡ್‌ವಾರು ಆಂದೋಲನ ನಡೆಯುತ್ತಿದೆ. ಆದರೆ ನೆಲಮಂಗಲ ನಗರಸಭೆಯಲ್ಲಿ ನಾವೇ ಹೋಗಿ ಅರ್ಜಿ ಸಲ್ಲಿಸಿದರೂ ಖಾತೆ ಮಾಡುತ್ತಿಲ್ಲ. ಖಾತೆಗೆ 10 ರಿಂದ 15 ಸಾವಿರ ರೂ. ಕೇಳುತ್ತಿದ್ದಾರೆ, ಮೇಲಾಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು

ಶಿವಕುಮಾರ್, ಸ್ಥಳೀಯ ನಿವಾಸಿ
image

ಸರಕಾರವೇ ಕೇವಲ ತೆರಿಗೆಯನ್ನು ಪಾವತಿಸಿ ಖಾತೆ ಮಾಡಿಸಿಕೊಳ್ಳಿ ಎಂದು ಹೇಳಿದೆ. ಆದರೆ, ನಗರಸಭೆಯಲ್ಲಿ ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಹಣ ಕೊಟ್ಟವರಿಗೆ ಬೇಗ ಖಾತೆ ಮಾಡಿಸಿ ಕೊಡುತ್ತಾರೆ, ನಗರಸಭೆಯಲ್ಲಿ ಬ್ರೋಕರ್‌ಗಳ ಹಾವಳಿ ಹೆಚ್ಚಿದೆ, ಇದರಲ್ಲಿ ಅಧಿಕಾರಿಗಳು ಸಹ ಶಾಮಿಲಾಗಿದ್ದು, ಲೋಕಾಯುಕ್ತರು ಇದಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು.

ಲಕ್ಷ್ಮಿನಾರಾಯಣ್, ವಾಜರಹಳ್ಳಿ ನಿವಾಸ್