Waqf Bill: ವಕ್ಫ್ ತಿದ್ದುಪಡಿಯಿಂದ ಒಂದೇ ಒಂದು ದರ್ಗಾ, ಮಸೀದಿಗೂ ಧಕ್ಕೆ ಆಗಲ್ಲ: ಪ್ರಲ್ಹಾದ್ ಜೋಶಿ
Waqf Bill: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟನೆ ನೀಡಿದ್ದಾರೆ.ವಕ್ಫ್‌ನಲ್ಲಿ ಪ್ರಮುಖವಾಗಿ ಆಡಳಿತಾತ್ಮಕವಾಗಿ ಪಾರದರ್ಶಕ ಬದಲಾವಣೆ ತರಬೇಕಿತ್ತು ಅದನ್ನು ಮಾಡಿದ್ದೇವೆ. ಹಾಗೆಂದ ಮಾತ್ರಕ್ಕೆ ದರ್ಗಾ, ಮಸೀದಿಯಂತಹ ಧಾರ್ಮಿಕ ಕೇಂದ್ರಗಳಿಗೆ ಧಕ್ಕೆ ತರುತ್ತೇವೆ ಎಂದಲ್ಲ ಎಂದು ಹೇಳಿದ್ದಾರೆ.


ಹುಬ್ಬಳ್ಳಿ: ವಕ್ಫ್ ತಿದ್ದುಪಡಿ ಮಸೂದೆಯಿಂದ (Waqf Bill) ದೇಶದಲ್ಲಿ ಒಂದೇ ಒಂದು ದರ್ಗಾ, ಮಸೀದಿಗೆ ಧಕ್ಕೆ ಆಗುವುದಿಲ್ಲ. ಇದು ನಮ್ಮ ಸರ್ಕಾರ ಮತ್ತು ಪಕ್ಷದ ಸ್ಪಷ್ಟ ಭರವಸೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್‌ನಲ್ಲಿ ಪ್ರಮುಖವಾಗಿ ಆಡಳಿತಾತ್ಮಕವಾಗಿ ಪಾರದರ್ಶಕ ಬದಲಾವಣೆ ತರಬೇಕಿತ್ತು ಅದನ್ನು ಮಾಡಿದ್ದೇವೆ. ಹಾಗೆಂದ ಮಾತ್ರಕ್ಕೆ ದರ್ಗಾ, ಮಸೀದಿಯಂತಹ ಧಾರ್ಮಿಕ ಕೇಂದ್ರಗಳಿಗೆ ಧಕ್ಕೆ ತರುತ್ತೇವೆ ಎಂದಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಮಜಾಯಿಷಿ ನೀಡಿದರು.
ಈವರೆಗೆ ದೇಶದಲ್ಲಿ ಯಾವುದೇ ಒಂದು ಆಸ್ತಿಯನ್ನು ವಕ್ಫ್ ತನ್ನದೆಂದು ಘೋಷಣೆ ಮಾಡಿದರೆ ಮುಗೀತು. ಇದರಿಂದ ದೇಶಾದ್ಯಂತ ಗೊಂದಲ ಸೃಷ್ಟಿಯಾಗುತ್ತಿತ್ತು. ಇದನ್ನು ಪರಿಹರಿಸಲೆಂದು ಉಮೀದ್ (UMEED Act- Unified Waqf Management, Empowerment, Efficiency, and Development Act) ) ಅನ್ನು ತರಲಾಗಿದೆ. ಇದರಿಂದ ವಕ್ಫ್ ಆಸ್ತಿ ದುರ್ಬಳಕೆ ತಪ್ಪುತ್ತದೆ ಎಂದು ಹೇಳಿದರು.
ದೇಶದಲ್ಲಿ 18 ಲಕ್ಷ ಎಕರೆ ಇದ್ದ ವಕ್ಫ್ ಆಸ್ತಿ ಈಗ 39 ಲಕ್ಷ ಎಕರೆ ಆಗಿದೆ. ಆದರೆ ಆದಾಯ ಮಾತ್ರ ಕೇವಲ ₹168 ಕೋಟಿ ಇದೆ. ಅಂದರೆ, ವಕ್ಫ್ ಆಸ್ತಿಯನ್ನು ₹1, ₹5, ₹ 10. ಹೀಗೆ ಬೇಕಾಬಿಟ್ಟಿ ದರದಲ್ಲಿ ಲೀಸ್ ಕೊಡಲಾಗಿದೆ. ಇದರಿಂದ ವಕ್ಫ್‌ಗೇ ಸಹಸ್ರಾರು ಕೋಟಿ ನಷ್ಟ ಎಂದು ಜೋಶಿ ಹೇಳಿದರು.
ಕಾಂಗ್ರೆಸ್ ನಾಯಕರು ಚರ್ಚೆಗೆ ಬರಲೇ ಇಲ್ಲ
ಉಭಯ ಸದನಗಳಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ವೇಳೆ ಬೆಳಗಿನಿಂದ ಮಧ್ಯರಾತ್ರಿವರೆಗೂ ಚರ್ಚೆಗೆ ಅವಕಾಶ ನೀಡಲಾಗಿದೆ. ಹಾಗಿದ್ದರೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಚರ್ಚೆಯಲ್ಲಿ ಪಾಲ್ಗೊಳ್ಳಲಿಲ್ಲ. ರಾಹುಲ್ ಗಾಂಧಿ ರಾಜಕೀಯ ನೆಲೆಗಾಗಿ ವೋಟಿಂಗ್ ವೇಳೆಗೆ ಬಂದೆರೆಂದು ಜೋಶಿ ಆರೋಪಿಸಿದರು.
ಕ್ರೈಸ್ತರನ್ನು ಕೈ ಬಿಟ್ಟ ಕಾಂಗ್ರೆಸ್
ವೋಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿರುವ ಕಾಂಗ್ರೆಸ್ ಪಕ್ಷವೇ ಬರೀ ಮುಸ್ಲಿಂರನ್ನು ಓಲೈಸುತ್ತ ಕ್ರಿಶ್ಚಿಯನ್ನರನ್ನು ಸಂಪೂರ್ಣವಾಗಿ ಕೈ ಬಿಟ್ಟಿದೆ. ಸದಾ ಅಲ್ಪಸಂಖ್ಯಾತರ ಪರ ಎನ್ನುವ ಕಾಂಗ್ರೆಸ್ ಅಲ್ಪಸಂಖ್ಯಾತರಲ್ಲಿ ಹೆಚ್ಚು ಮತಬುಟ್ಟಿ ಎಲ್ಲಿದೆಯೋ ಅದರತ್ತ ವಾಲುತ್ತದೆ. ಅದರಂತೆ ಈಗ ಕ್ರೈಸ್ತರನ್ನು ಕೈ ಬಿಟ್ಟು ಮುಸಲ್ಮಾನರ ಪರ ನಿಂತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.
ʼಕ್ರೈಸ್ತರ ಆಸ್ತಿ ಮೇಲೂ ಎನ್‌ಡಿಎ ಸರ್ಕಾರದ ದೃಷ್ಟಿಯಿದೆʼ ಎಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನ ಎಲ್ಲಾ ಹೇಳಿಕೆಗಳು ಹತಾಶೆಯ ಪ್ರತೀಕ. ಕೇರಳದ ವಯನಾಡಲ್ಲಿ ಕ್ರೈಸ್ತರು ರಾಹುಲ್ ಗಾಂಧಿ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ಉಮೀದ್ ಅನ್ನು ಸಂಭ್ರಮಿಸಿದ್ದಾರೆ ಎಂದು ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದರು.
ಈ ಸುದ್ದಿಯನ್ನೂ ಓದಿ | Basanagouda Patil Yatnal: ಬಿಎಸ್‌ವೈ ಕುಟುಂಬದಿಂದ ಬಿಜೆಪಿ ಮುಕ್ತವಾದರೆ ಮತ್ತೆ ಪಕ್ಷ ಸೇರುವೆ: ಶಾಸಕ ಯತ್ನಾಳ್
ರಾಹುಲ್ ಗಾಂಧಿ ಅನಿವಾರ್ಯದ ನಾಯಕ
ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ನಾಯಕ. ಕಾಂಗ್ರೆಸ್ ಮೈತ್ರಿಕೂಟ ಅನಿವಾರ್ಯವಾಗಿ ಇವರನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದೆ. ರಾಹುಲ್ ಗಾಂಧಿ ಅವರಿಂದ ಅಸಂಬದ್ಧ ಹೇಳಿಕೆಗಳು, ವಿರೋಧಗಳು ಸರ್ವೇ ಸಾಮಾನ್ಯ ಎಂದು ವ್ಯಂಗ್ಯವಾಡಿದರು.