Vidhana Soudha lighting: ಮೆಟ್ರೋ ಪಿಲ್ಲರ್, ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ: ಡಿಸಿಎಂ ಡಿಕೆಶಿ
Vidhana Soudha lighting: ಸರ್ಕಾರದ ಆಸ್ತಿಗಳಲ್ಲಿ ದೀಪಾಲಂಕಾರ ಮಾಡುತ್ತೇವೆ, ಖಾಸಗಿ ಸ್ಥಳ, ಕಟ್ಟಡಗಳಲ್ಲಿ ದೀಪಾಲಂಕಾರ ಮಾಡಲು ಸಾಧ್ಯವಿಲ್ಲ. ಬೆಂಗಳೂರಿನ ಸುಮಾರು 40 ಕಡೆ ದೀಪಾಲಂಕಾರಕ್ಕೆ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.


ಬೆಂಗಳೂರು: ಮೆಟ್ರೋ ಪಿಲ್ಲರ್ ಹಾಗೂ ಐತಿಹಾಸಿಕ ಪಾರಂಪರಿಕ ಕಟ್ಟಡಗಳ ದೀಪಾಲಂಕಾರಕ್ಕೆ ಬ್ರ್ಯಾಂಡ್ ಬೆಂಗಳೂರು ಅಡಿ ಟೆಂಡರ್ ಕರೆಯಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ವಿಧಾನಸೌಧದಲ್ಲಿ ಭಾನುವಾರ ಆಯೋಜಿಸಿದ್ದ ನೂತನ ವಿದ್ಯುತ್ ದೀಪಾಲಂಕಾರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸರ್ಕಾರದ ಆಸ್ತಿಗಳಲ್ಲಿ ದೀಪಾಲಂಕಾರ ಮಾಡುತ್ತೇವೆ, ಖಾಸಗಿ ಸ್ಥಳ, ಕಟ್ಟಡಗಳಲ್ಲಿ ದೀಪಾಲಂಕಾರ ಮಾಡಲು ಸಾಧ್ಯವಿಲ್ಲ. ಬೆಂಗಳೂರಿನ ಸುಮಾರು 40 ಕಡೆ ದೀಪಾಲಂಕಾರಕ್ಕೆ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಯಾವ, ಯಾವ ಸ್ಥಳಗಳಲ್ಲಿ ದೀಪಾಲಂಕಾರ ಮಾಡುತ್ತೇವೆ ಎಂಬುವುದನ್ನು ಅಧಿಕಾರಿಗಳು ತಿಳಿಸಲಿದ್ದಾರೆ. ಇನ್ನು ಬೆಂಗಳೂರು ನಗರದಲ್ಲಿ ಎಲ್‌ಇಡಿ ದೀಪ ಬಳಸಲಾಗುವುದು. ಈ ಹಿಂದೆ ಕರೆಯಲಾಗಿದ್ದ ಟೆಂಡರ್ ವಿಫಲವಾಗಿದ್ದು, ಮರು ಟೆಂಡರ್ ಕರೆಯಲಾಗುವುದು. ಡಿಪಿಆರ್ ಕೂಡ ಸಿದ್ಧಪಡಿಸಲಾಗಿದೆ" ಎಂದು ಹೇಳಿದರು.

"ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ತಮ್ಮ ಕಾಲದಲ್ಲಿ ಸಾಕ್ಷಿಗುಡ್ಡೆಗಳನ್ನು ಸೃಷ್ಟಿ ಮಾಡಬೇಕು ಎಂದು ಸುವರ್ಣ ಸೌಧ ಹಾಗೂ ವಿಧಾನಸೌಧ, ವಿಕಾಸಸೌಧಕ್ಕೆ ದೀಪಾಲಂಕಾರ ಮಾಡಿಸಿದ್ದಾರೆ. ಬೆಳಗಾವಿಯಲ್ಲಿ ಗಾಂಧಿ ಪ್ರತಿಮೆ ಸ್ಥಾಪನೆ ವೇಳೆ ನಾನು ಹಾಗೂ ಯು.ಟಿ.ಖಾದರ್ ಅವರು ಹಾಗೂ ನಾನು ಈ ಬಗ್ಗೆ ಚರ್ಚೆ ನಡೆಸಿದ್ದೆವು. ಇಂದು ಈ ಕೆಲಸ ಕಾರ್ಯಗತವಾಗಿದೆ" ಎಂದರು.

"ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ನಾವೆಲ್ಲರೂ ಬೆಂಬಲವಾಗಿ ನಿಂತು ವಿಕಾಸಸೌಧ, ಉದ್ಯೋಗ ಸೌಧ ನಿರ್ಮಾಣ ಮಾಡಿ ಇತಿಹಾಸ ಸೃಷ್ಟಿಯಾಯಿತು. ಒಮ್ಮೆ ರಾಜೀವ್ ಗಾಂಧಿ ಅವರು ಬೆಂಗಳೂರಿಗೆ ಬಂದಾಗ ಜಿಪಿಓ ಕಚೇರಿಯು ವಿಧಾನಸೌಧದ ವಾಸ್ತುಶಿಲ್ಪವನ್ನು ಹೊಂದಿರಬೇಕು ಎಂದು ಸಲಹೆ ನೀಡಿದ್ದರು. ಈ ವೇಳೆ ಆಸ್ಕರ್ ಫರ್ನಾಂಡೀಸ್ ಕೂಡ ಇದ್ದರು" ಎಂದು ಹೇಳಿದರು.

ವಿಧಾನಸೌಧದ ನಿತ್ಯ ದೀಪಾಲಂಕಾರ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರ (Vidhana Soudha lighting) ವ್ಯವಸ್ಥೆ ಮಾಡಿದ್ದು, ಭಾನುವಾರ ಸಂಜೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ನಿತ್ಯ ದೀಪಾಲಂಕಾರವನ್ನು ಉದ್ಘಾಟಿಸಿದರು. ಈ ಮೊದಲು ರಾಷ್ಟ್ರೀಯ ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿಧಾನಸೌಧಕ್ಕೆ ದೀಪಾಲಂಕಾರ ಮಾಡಲಾಗುತ್ತಿತ್ತು. ಆದರೆ, ಇನ್ನುಮುಂದೆ ಪ್ರತಿದಿನ ಬಣ್ಣಬಣ್ಣದ ಬೆಳಕಿನಿಂದ ಶಕ್ತಿಸೌಧ ಕಂಗೊಳಿಸಲಿದೆ. ಪ್ರವಾಸಿಗರು ಹಾಗೂ ಬೆಂಗಳೂರಿಗರು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಿಧಾನಸೌಧ ವೀಕ್ಷಿಸಲು ಆಗಮಿಸುವುದರಿಂದ ಶಾಶ್ವತ ದೀಪಾಲಂಕಾರವನ್ನು ರಾಜ್ಯ ಸರ್ಕಾರ ಮಾಡಿದೆ.

ಪಾರ್ಲಿಮೆಂಟ್ ಮತ್ತು ವಿಧಾನಸೌಧ ಜನರ ಮತ್ತು ರಾಜ್ಯದ ಹಾಗೂ ದೇಶದ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ದೇಗುಲಗಳು. ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಮಾತನ್ನು ಪ್ರತಿಯೊಬ್ಬರೂ ಸಾರ್ಥಕಗೊಳಿಸುವ ರೀತಿಯಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಿ ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಬೇಕು ಎಂದರು.
ಸ್ವಾತಂತ್ರ್ಯ ಬಂದು, ಸಂವಿಧಾನ ರಚನೆಯಾಗಿ 75 ವರ್ಷಗಳಾದರೂ ಅಸಮಾನತೆಯನ್ನು ಇನ್ನೂ ತೆಗೆದುಹಾಕಲು ಸಾಧ್ಯವಾಗಿಲ್ಲ. ವಿಧಾನಸೌಧ, ಸುವರ್ಣಸೌಧ, ವಿಕಾಸಸೌಧದಲ್ಲಿ ಕುಳಿತು ಸಮ ಸಮಾಜ ತರುವ ದಿಕ್ಕಿನಲ್ಲಿ ಶ್ರಮಿಸಬೇಕು. ಕಾನೂನು ಸುವ್ಯವಸ್ಥೆ ಸುಗಮ ಆಗಿರಬೇಕಾದರೆ ಅಸಮಾನತೆ ಅಳಿಯಬೇಕು ಎಂದರು.
ಈ ಸುದ್ದಿಯನ್ನೂ ಓದಿ | Waqf Bill: ವಕ್ಫ್ ತಿದ್ದುಪಡಿಯಿಂದ ಒಂದೇ ಒಂದು ದರ್ಗಾ, ಮಸೀದಿಗೂ ಧಕ್ಕೆ ಆಗಲ್ಲ: ಪ್ರಲ್ಹಾದ್ ಜೋಶಿ
ಜನರ ಕೆಲಸ ಸರಿಯಾಗಿ ಮಾಡಲು ನಮ್ಮನ್ನು ವಿಧಾನಸೌಧಕ್ಕೆ ಕಳುಹಿಸಿದ್ದಾರೆ. ಈ ಉದ್ದೇಶಕ್ಕಾಗಿ ವಿಧಾನಸೌಧ ಕಟ್ಟಿಸಲಾಗಿದೆ. ಈ ಉದ್ದೇಶ ಈಡೇರಿಸಿ ಜನರ ಸಮಸ್ಯೆ ಬಗೆಹರಿಸುವ ಶಕ್ತಿ ನಮಗೆ ಬರಲಿ, ರಾಜ್ಯದ ಜನತೆಗೂ ಆರ್ಥಿಕ ಶಕ್ತಿ ತರಲು ಯತ್ನಿಸೋಣ ಎಂದು ಕರೆ ನೀಡಿದರು.