SRH vs GT: ಸಿರಾಜ್ ದಾಳಿಗೆ ನಲುಗಿದ ಸನ್‌ರೈಸರ್ಸ್; ಗುಜರಾತ್‌ಗೆ 7 ವಿಕೆಟ್ ಗೆಲುವು
IPL 2025: ಗುಜರಾತ್ ಪರ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಸಿರಾಜ್ 4 ಓವರ್ ಎಸೆದು ಕೇವಲ 17 ರನ್ ವೆಚ್ಚದಲ್ಲಿ 4 ವಿಕೆಟ್ ಕಿತ್ತರೆ, ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ಸಾಯಿ ಕಿಶೋರ್( 24 ಕ್ಕೆ 2) ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ(25ಕ್ಕೆ 2) ತಲಾ ಎರಡು ವಿಕೆಟ್ ಕಿತ್ತರು. ಅನುಭವಿಗಳಾದ ಇಶಾಂತ್ ಮತ್ತು ರಶೀದ್ ಖಾನ್ ವಿಕೆಟ್ ಲೆಸ್ ಎನಿಸಿಕೊಂಡರು.


ಹೈದರಾಬಾದ್: ವೇಗಿ ಮೊಹಮ್ಮದ್ ಸಿರಾಜ್(17 ಕ್ಕೆ 4) ಬಿಗಿ ಬೌಲಿಂಗ್ ದಾಳಿ ಹಾಗೂ ನಾಯಕ ಶುಭಮನ್ ಗಿಲ್(61*) ಬಾರಿಸಿದ ಅಜೇಯ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್(SRH vs GT) ತಂಡ ಐಪಿಎಲ್(IPL 2025) 18ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು 7 ವಿಕೆಟ್ ಅಂತರದ ಗೆಲುವು ದಾಖಲಿಸಿದೆ. ಇದರೊಂದಿಗೆ ಶುಭಮನ್ ಗಿಲ್(Shubman Gill) ಪಡೆ ಹಾಲಿ ಆವೃತ್ತಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರನೇ ಗೆಲುವು ದಾಖಲಿಸಿದೆ.
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೈದರಾಬಾದ್ ಬ್ಯಾಟಿಂಗ್ ಮರೆತವರಂತೆ ಆಡಿ 8 ವಿಕೆಟ್‌ಗೆ 152 ರನ್ ಬಾರಿಸಿತು. ಜಬಾಬಿತ್ತ ಗುಜರಾತ್ ಆರಂಭಿಕ ಆಘಾತ ಹೊರತಾಗಿಯೂ 16.4 ಓವರ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 153 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಚೇಸಿಂಗ್ ವೇಳೆ ಗುಜರಾತ್ ಕೂಡ ಹೈದರಾಬಾದ್‌ನಂತೆ ಆರಂಭಿಕ ಆಘಾತ ಎದುರಿಸಿತು. 16 ರನ್‌ಗೆ 2 ವಿಕೆಟ್ ಕಳೆದುಕೊಂಡಿತು. ಕಳೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದ ಸಾಯಿ ಸುದರ್ಶನ್(5) ಮತ್ತು ಜಾಸ್ ಬಟ್ಲರ್(0) ಇಲ್ಲಿ ವಿಫಲರಾದರು. ಆರಂಭಿಕ ಹಂತದಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದರೂ ನಾಯಕ ಶುಭಮನ್ ಗಿಲ್ ಮತ್ತು ಈ ಆವೃತ್ತಿಯ ಮೊದಲ ಪಂದ್ಯವನ್ನಾಡಿದ ವಾಷಿಂಗ್ಟನ್ ಸುಂದರ್ ಸೇರಿಕೊಂಡು ಉತ್ತಮ ಜತೆಯಾಟ ಸಂಘಟಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು.
ಗಿಲ್ ಮತ್ತು ಸುಂದರ್ ಮೂರನೇ ವಿಕೆಟ್‌ಗೆ 90 ರನ್‌ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಗಿಲ್‌ಗಿಂತ ಕೊಂಚ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಸುಂದರ್ ಅರ್ಧಶತಕದ ಅಂಚಿನಲ್ಲಿ ಎಡವಿದರು. 49 ರನ್ ಗಳಿಸಿದ ವೇಳೆ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಯಿತು. ಆರನೇ ಓವರ್‌ನಲ್ಲಿ 20 ರನ್ ಸೂರೈಗೈದರು.
ಸುಂದರ್ ವಿಕೆಟ್ ಬಿದ್ದ ಬಳಿಕ ಇಂಪ್ಯಾಕ್ಟ್ ಆಟಗಾರನಾಗಿ ಆಡಲಿಳಿದ ವಿಂಡೀಸ್‌ನ ಬಿಗ್ ಹಿಟ್ಟರ್ ಶೆರ್ಫೆನ್ ರುದರ್‌ಫೋರ್ಡ್ ತನ್ನ ಖ್ಯಾತಿಗೆ ತಕ್ಕ ಬ್ಯಾಟ್ ಬೀಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಬೌಂಡರಿ ಮೂಲಕವೇ ರನ್ ಖಾತೆ ತೆರೆದ ಅವರು 16 ಎಸೆಗಳಿಂದ 5 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ ಅಜೇಯ 35 ರನ್ ಬಾರಿಸಿದರು. ಶುಭಮನ್ ಗಿಲ್ ಅಜೇಯ 61 ರನ್ ಗಳಿಸಿದರು. ಹೈದರಾಬಾದ್ ಪರ ಮೊಹಮ್ಮದ್ ಶಮಿ(28ಕ್ಕೆ 2) ವಿಕೆಟ್ ಕಿತ್ತರು.
ಸಿರಾಜ್ ಘಾತಕ ದಾಳಿ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಸನ್‌ರೈಸರ್ಸ್ ತಂಡ ಹೈದರಾಬಾದ್‌ನವರೇ ಆದ ವೇಗಿ ಮೊಹಮ್ಮದ್ ಸಿರಾಜ್ ಘಾತಕ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು. ಅಪಾಯಕಾರಿ ಆರಂಭಿಕರಾದ ಟ್ರಾವಿಸ್ ಹೆಡ್(8) ಮತ್ತು ಅಭಿಷೇಕ್ ಶರ್ಮ(18) ವಿಕೆಟ್ ಕಿತ್ತು ಗುಜರಾತ್‌ಗೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಇದೇ ವೇಳೆ ಐಪಿಎಲ್‌ನಲ್ಲಿ 100 ವಿಕೆಟ್ ಪೂರ್ತಿಗೊಳಿಸಿದ ಮೈಲುಗಲ್ಲು ನೆಟ್ಟರು. ಇಶಾನ್ ಕಿಶನ್ ಈ ಪಂದ್ಯದಲ್ಲಿಯೂ ವಿಫಲರಾದರು.14 ಎಸೆತಗಳಿಂದ 17 ರನ್ ಗಳಿಸಿದರು.
ಇದನ್ನೂ ಓದಿ RCB vs MI: ವಾಂಖೇಡೆ ಕದನಕ್ಕೆ ಪಾಂಡ್ಯ, ಪಾಟೀದಾರ್ ಅಣಿ
50 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ರೆಡ್ಡಿ ಮತ್ತು ಹೆನ್ರಿಚ್ ಕ್ಲಾಸೆನ್ ಸಣ್ಣ ಜತೆಯಾಟವೊಂದನ್ನು ನಡೆಸಿ ತಂಡದ ಮೊತ್ತವನ್ನು ನೂರಕ್ಕೇರಿಸಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 50 ರನ್ ಜತೆಯಾಟ ನಡೆಸಿತು. ನಿತೀಶ್ ರೆಡ್ಡಿ(31) ರನ್ ಬಾರಿಸಿದರೆ, ಕ್ಲಾಸೆನ್ 19 ಎಸೆತಗಳಿಂದ 27 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ನಾಯಕ ಪ್ಯಾಟ್ ಕಮಿನ್ಸ್ 9 ಎಸೆತಗಳಿಂದ ಅಜೇಯ 22(3 ಬೌಂಡರಿ, 1 ಸಿಕ್ಸರ್) ರನ್ ಬಾರಿಸಿ ತಂಡದ ಮೊತ್ತವನ್ನು 150 ರ ಗಡಿ ದಾಟಿಸಿದರು.
𝐓𝐡𝐞 𝐒𝐈𝐔𝐔𝐔-𝐑𝐀𝐉 𝐬𝐡𝐨𝐰 𝐢𝐧 𝐇𝐲𝐝𝐞𝐫𝐚𝐛𝐚𝐝 🫡
— IndianPremierLeague (@IPL) April 6, 2025
🔽 Click below to relive Mohd. Siraj's sensational spell 🔥https://t.co/rRa2liYk3M #TATAIPL | #SRHvGT | @mdsirajofficial pic.twitter.com/TCuQ2aJJS2
ಗುಜರಾತ್ ಪರ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಸಿರಾಜ್ 4 ಓವರ್ ಎಸೆದು ಕೇವಲ 17 ರನ್ ವೆಚ್ಚದಲ್ಲಿ 4 ವಿಕೆಟ್ ಕಿತ್ತರೆ, ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ಸಾಯಿ ಕಿಶೋರ್( 24 ಕ್ಕೆ 2) ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ(25ಕ್ಕೆ 2) ತಲಾ ಎರಡು ವಿಕೆಟ್ ಕಿತ್ತರು. ಅನುಭವಿಗಳಾದ ಇಶಾಂತ್ ಮತ್ತು ರಶೀದ್ ಖಾನ್ ವಿಕೆಟ್ ಲೆಸ್ ಎನಿಸಿಕೊಂಡರು.