#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Kannada Sahitya Sammelana: ಹಿಂದಿ ಹೇರಿಕೆ ನಿಲ್ಲಿಸಿ, ನ್ಯಾಯವಾಗಿ ತೆರಿಗೆ ಪಾಲು ಕೊಡಿ: ಗುಡುಗಿದ ಗೊರುಚ

Kannada Sahitya Sammelana: ಕನ್ನಡವು ಕರ್ನಾಟಕದಲ್ಲಿ ಸಾರ್ವಭೌಮ ಎಂದರೆ, ಅದು ಭಾಷಾಂಧತೆಯಲ್ಲ. ಅದು ಒಂದು ಆದರ್ಶ ಜನತಂತ್ರದ ಬಹುಮುಖ್ಯ ಗುಣ ಎಂದು ಗೊ.ರು ಚನ್ನಬಸಪ್ಪ ಎಚ್ಚರಿಸಿದರು.

Profile Prabhakara R Dec 20, 2024 6:58 PM
ಮಂಡ್ಯ: ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ಬ್ಯಾಂಕ್‌ ವ್ಯವಹಾರಗಳಲ್ಲಿ, ಅಂಚೆ ಕಚೇರಿಗಳಲ್ಲಿ, ರಾಜ್ಯಭಾಷೆಗಳನ್ನು ನಿರ್ಲಕ್ಷಿಸಿ ಹಿಂದಿಯನ್ನು ಹೇರುವ ಪ್ರಯತ್ನ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಕನ್ನಡವೇ ಕರ್ನಾಟಕದಲ್ಲಿ (Kannada Sahitya Sammelana) ಸಾರ್ವಭೌಮ ಎಂದು ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೊ.ರು ಚನ್ನಬಸಪ್ಪ ತಿಳಿಸಿದರು.
87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಮಾತನಾಡಿದ ಅವರು, ನಮ್ಮದು ಸಾಂವಿಧಾನಿಕ ಒಕ್ಕೂಟ ವ್ಯವಸ್ಥೆ-ಫೆಡರಲ್ ವ್ಯವಸ್ಥೆ. ಕಳೆದ 74 ವರ್ಷಗಳಿಂದ ಅನೇಕ ಇತಿಮಿತಿಗಳ ನಡುವೆ ಮುಕ್ಕಾಗದಂತೆ ಅದನ್ನು ಕಾಯ್ದುಕೊಂಡು ಬಂದಿದ್ದೇವೆ. ಕವಿರಾಜಮಾರ್ಗಕಾರ ಹೇಳಿದಂತೆ "ಕನ್ನಡದೊಳ್ ಭಾವಿಸಿದ ಜನಪದ" ವಸುಧೆಯಲ್ಲಿ ವಿಲೀನವಾಗಿದೆ ನಿಜ. ಆದರೆ ಅದು ತನ್ನ ಭಾಷೆ, ಸಾಹಿತ್ಯ, ಜೀವನ ಪದ್ಧತಿ, ಆಹಾರ ಸಂಸ್ಕೃತಿ, ಆಧ್ಯಾತ್ಮ, ಆರ್ಥಿಕತೆ, ಉದ್ಯೋಗ, ಕಾಯಕ ಮುಂತಾದವುಗಳ ನೆಲೆಯಿಂದ ತನ್ನ 'ಅಸ್ಮಿತೆ'ಯನ್ನು, 'ವಿಶಿಷ್ಟತೆ'ಯನ್ನು, 'ಅನನ್ಯತೆ'ಯನ್ನು ಜತನದಿಂದ ಕಾಪಿಟ್ಟುಕೊಂಡು ಬಂದಿದೆ. ಭಾರತದ ಐಕ್ಯತೆ ಮತ್ತು ಸಮಗ್ರತೆ ನಿಂತಿರುವುದೇ ಬಹುಭಾಷೆ-ಬಹುಸಂಸ್ಕೃತಿಯಿಂದ ಎಂಬುದನ್ನು ನಾವು ಮರೆಯಬಾರದು ಎಂದರು.
"ಬಹುತ್ವ'ವು ನಮ್ಮ ದೇಶದ ಏಕತೆಯ ಮೂಲ ದ್ರವ್ಯವಾಗಿದೆ. ಅತ್ಯಂತ ಆತಂಕದ ಸಂಗತಿಯೆಂದರೆ ಇಂದು ನಮ್ಮ ಸಾಮಾಜಿಕ ಬಹುತ್ವಕ್ಕೆ, ಬಹುಸಂಸ್ಕೃತಿಗೆ, ಭಾಷಾ ಸ್ವಾಯತ್ತತೆಗೆ, ಧಾರ್ಮಿಕ ಸೌಹಾರ್ದತೆಗೆ, ಆರ್ಥಿಕ ಸಮೃದ್ಧತೆಗೆ ಒದಗಿರುವ ಅಪಾಯ. ಬಹುಭಾಷಾ ಸಂಸ್ಕೃತಿ ನೀತಿಯನ್ನು ಸಂವಿಧಾನಾತ್ಮಕವಾಗಿ ಕೇಂದ್ರ ಸರ್ಕಾರವು ಪಾಲಿಸಬೇಕು. ಇದು ಇಂದು ನಡೆಯುತ್ತಿಲ್ಲ. ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ಬ್ಯಾಂಕ್ ವ್ಯವಹಾರಗಳಲ್ಲಿ, ಅಂಚೆ ಕಚೇರಿಗಳಲ್ಲಿ, ರಾಜ್ಯಭಾಷೆಗಳನ್ನು ನಿರ್ಲಕ್ಷಿಸಿ ಹಿಂದಿಯನ್ನು ಹೇರುವ ಪ್ರೋತ್ಸಾಹಿಸುವ ಪ್ರಯತ್ನ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಕನ್ನಡವು ಕರ್ನಾಟಕದಲ್ಲಿ ಸಾರ್ವಭೌಮ ಎಂದರೆ, ಅದು ಭಾಷಾಂಧತೆಯಲ್ಲ. ಅದು ಒಂದು ಆದರ್ಶ ಜನತಂತ್ರದ ಬಹುಮುಖ್ಯ ಗುಣ ಎಂದು ಎಚ್ಚರಿಸಿದರು.
ತೆರಿಗೆ ಹಣದಲ್ಲಿ ನ್ಯಾಯವಾದ ಪಾಲು ಕೊಡಿ
ಯಾವುದನ್ನು 'ಒಕ್ಕೂಟ-ಹಣಕಾಸು (ಫಿಸ್ಕಲ್ ಫೆಡರಲಿಸಮ್) ವ್ಯವಸ್ಥೆ' ಎಂದು ಕರೆಯುತ್ತೇವೆಯೋ ಅದನ್ನು ಇಂದು ಒಕ್ಕೂಟ ಸರ್ಕಾರವು ಸಂವಿಧಾನಾತ್ಮಕವಾಗಿ ನಿರ್ವಹಿಸುವುದರಲ್ಲಿ ವಿಫಲವಾಗಿದೆ. ಒಕ್ಕೂಟ ಸರ್ಕಾರವು ಹಣಕಾಸು ಆಯೋಗಗಳ ಶಿಫಾರಸುಗಳಿಗೆ ಅನುಗುಣವಾಗಿ ಕರ್ನಾಟಕಕ್ಕೆ ಬರಬೇಕಾದ ತೆರಿಗೆ ಪಾಲನ್ನು ವರ್ಗಾಯಿಸುತ್ತಿಲ್ಲ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಈ ತೆರಿಗೆ ಪಾಲಿನ ಬಗೆಗೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನ್ಯಾಯಮಾಡುತ್ತಿದೆ ಎಂದು ಹೇಳುವುದರಲ್ಲಿ ಸತ್ಯಾಂಶವಿದೆ. ನಬಾರ್ಡ್ (ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಟರ್ ಆಂಡ್ ರೂರಲ್ ಡೆವಲಪ್‌ಮೆಂಟ್) ವಾರ್ಷಿಕವಾಗಿ ಕರ್ನಾಟಕಕ್ಕೆ ನೀಡುತ್ತಿದ್ದ ಮರುಹಣಕಾಸು ಸಾಲವನ್ನು 2024-25ರಲ್ಲಿ ಶೇ. 58ರಷ್ಟು ಕಡಿತಮಾಡಿದೆ. ಈ ಮಾತುಗಳನ್ನು ರಾಜಕೀಯ ಬಣ್ಣದ ಮೂಲಕ ನೋಡುವುದು ಸಲ್ಲ ಎಂದು ಗುಡುಗಿದರು.
ಇದು ಕರ್ನಾಟಕಸ್ಥರ ಬದುಕು ಮತ್ತು ಭವಿಷ್ಯದ ಪ್ರಶ್ನೆ, ರಾಜ್ಯಗಳು ಆರ್ಥಿಕವಾಗಿ ಬೆಳೆದರೆ ಮಾತ್ರ ಭಾರತ ಬೆಳೆಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕೇಂದ್ರ-ರಾಜ್ಯಗಳ ನಡುವಣ ಸಂಬಂಧದ ಬಗ್ಗೆ, ಮುಖ್ಯವಾಗಿ ಹಣಕಾಸು ಸಂಬಂಧವನ್ನು ಕುರಿತಂತೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕು ಮತ್ತು ಈ ಬಗ್ಗೆ ಕೇಂದ್ರ ಸರ್ಕಾರವು ಸಂವಿಧಾನ ಮತ್ತು ಹಣಕಾಸು ತಜ್ಞರ ಒಂದು ವಿಶೇಷ ಆಯೋಗವನ್ನು ರಚಿಸಬೇಕು ಎಂದು ನಾನು ಈ ವೇದಿಕೆಯ ಮೂಲಕ ಒತ್ತಾಯಿಸುತ್ತೇನೆ. ರಾಜ್ಯಗಳ ಹಣಕಾಸು ಸ್ವಾಯತ್ತತೆಯನ್ನು ಸಂರಕ್ಷಿಸುವ ಕಾರ್ಯವನ್ನು ಒಕ್ಕೂಟ ಸರ್ಕಾರ ಮಾಡಬೇಕು ಎಂದರು.
Kannada Sahitya Sammelana: ಸಾಹಿತ್ಯ ಸಮ್ಮೇಳನ ಮೆರವಣಿಗೆ ಉದ್ಘಾಟನೆಗೆ ಪ್ರಮೋದಾದೇವಿ ಒಡೆಯರ್‌ ಗೈರು