ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಅಕ್ರಮ ಸಂಬಂಧಕ್ಕೆ ಅಡ್ಡಿ; 4 ವರ್ಷದ ಮಗನನ್ನೇ ಕೊಂದ ಕಿರಾತಕ!

Murder Case: ಮಗು ಹಾವು ಕಚ್ಚಿ ಮೃತಪಟ್ಟಿದೆ ಎಂದು ಆರೋಪಿ ಬಿಂಬಿಸಿದ್ದ. ಆದರೆ ಅಂತ್ಯಕ್ರಿಯೆಗೂ ಮುನ್ನ ಗ್ರಾಮಸ್ಥರೊಬ್ಬರು ತೆಗೆದಿದ್ದ ಫೋಟೋದಿಂದ ಅನುಮಾನ ವ್ಯಕ್ತವಾಗಿದ್ದರಿಂದ ಆರೋಪಿ ವಿರುದ್ಧ ದೂರು ನೀಡಲಾಗಿತ್ತು. ಪೊಲೀಸರು ತನಿಖೆ ವೇಳೆ ಸತ್ಯಾಂಶ ಹೊರಬಿದ್ದಿದೆ.

ಅಕ್ರಮ ಸಂಬಂಧಕ್ಕೆ ಅಡ್ಡಿ; 4 ವರ್ಷದ ಮಗನನ್ನೇ ಕೊಂದ ಕಿರಾತಕ!

Profile Prabhakara R Mar 26, 2025 5:27 PM

ತುಮಕೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದೆ ಎಂದು ನಾಲ್ಕು ವರ್ಷದ ಮಗನನ್ನೇ ಮಲ ತಂದೆ ಕೊಲೆ ಮಾಡಿರುವುದು ತಾಲೂಕಿನ ಊರ್ಡಿಗೆರೆ ಹೋಬಳಿಯ ಸಿದ್ಧಲಿಂಗಯ್ಯನಪಾಳ್ಯದಲ್ಲಿ ನಡೆದಿದೆ. ಮಿಥುನ್ ಗೌಡ (4) ಕೊಲೆಯಾದ ಬಾಲಕ. ಚಂದ್ರಶೇಖರ್(24) ಮಗುವನ್ನು ಕೊಂದ ಆರೋಪಿ. ಈತನನ್ನು ಮಹಿಳಾ ಪೊಲೀಸರು ಬಂಧಿಸಿದ್ದಾರೆ. ಮಗು ಹಾವು ಕಚ್ಚಿ ಮೃತಪಟ್ಟಿದೆ ಎಂದು ಆರೋಪಿ ಬಿಂಬಿಸಿದ್ದ. ಆದರೆ ಅಂತ್ಯಕ್ರಿಯೆಗೂ ಮುನ್ನ ಗ್ರಾಮಸ್ಥರೊಬ್ಬರು ತೆಗೆದಿದ್ದ ಫೋಟೋದಿಂದ ಅನುಮಾನ ವ್ಯಕ್ತವಾಗಿದ್ದರಿಂದ ಚಂದ್ರಶೇಖರ್ ವಿರುದ್ಧ ದೂರು ನೀಡಲಾಗಿತ್ತು. ಹೀಗಾಗಿ ಮಲ ತಂದೆಯೇ ಮಗನ ಮೇಲೆ ಹಲ್ಲೆ ಮಾಡಿ ಕೊಲೆಗೈದಿರುವ ವಿಚಾರ ತನಿಖೆಯಲ್ಲಿ ಪೊಲೀಸರ ತಿಳಿದುಬಂದಿದೆ.

ಏನಿದು ಘಟನೆ?

ಬಂಧಿತ ಆರೋಪಿ ಚಂದ್ರಶೇಖರ್ ಚಾಮರಾಜನಗರದವನಾಗಿದ್ದು, ಕ್ರಷರ್​​ನಲ್ಲಿ ಲಾರಿ ಚಾಲಕನಾಗಿದ್ದಾನೆ. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾವ್ಯಾ ಎಂಬ ಮಹಿಳೆ ಮೊದಲೇ ಅಶೋಕ್ ಎಂಬಾತನನ್ನು ವಿವಾಹವಾಗಿದ್ದಳು. ಆದರೆ, ಗರ್ಭಿಣಿಯಾಗಿದ್ದಾಗಲೇ ಚಂದ್ರಶೇಖರ್ ಜತೆ ಓಡಿ ಹೋಗಿದ್ದಳು. ಬಳಿಕ ಮಗುವಿಗೆ ಜನ್ಮ ನೀಡಿದ್ದಳು. ನಂತರ ಮಗುವಿನ ವಿಚಾರವಾಗಿ ಈ ಜೋಡಿ ಮಧ್ಯೆ ಜಗಳವಾಗುತ್ತಿತ್ತು. ಮಗುವಿನ ವಿಷಯವಾಗಿ ಇಬ್ಬರ ನಡುವೆ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.

ಮಾರ್ಚ್ 20ರಂದು, ಕಾವ್ಯಾ ಕೆಲಸಕ್ಕೆ ಹೋದ ಸಮಯದಲ್ಲಿ ಚಂದ್ರಶೇಖರ್ ಮಗುವಿಗೆ (ಮಿಥುನ್ ಗೌಡ) ಹಲ್ಲೆ ನಡೆಸಿದ್ದ. ಇದರಿಂದ, ತೀವ್ರ ಗಾಯಗೊಂಡ ಮಿಥುನ್ ಪ್ರಜ್ಞೆ ತಪ್ಪಿಬಿದ್ದಿದ್ದ. ಇದನ್ನು ಮುಚ್ಚಿಹಾಕಲು, ಮಗುವಿಗೆ ಹಾವು ಕಚ್ಚಿದೆ ಎಂದು ಸುಳ್ಳು ಹೇಳಿ ಸ್ಥಳೀಯರನ್ನು ನಂಬಿಸಲು ಪ್ರಯತ್ನಿಸಿದ್ದ. ತಕ್ಷಣವೇ ಗ್ರಾಮಸ್ಥರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಿಥುನ್​ನನ್ನು ಊರ್ಡಿಗೆರೆ ಕ್ಲಿನಿಕ್‌ಗೆ ಕರೆದೊಯ್ದಿದ್ದರು. ಆದರೆ, ವೈದ್ಯರು ಪರೀಕ್ಷೆ ನಡೆಸಿದಾಗ ಮಿಥುನ್ ಮೃತಪಟ್ಟಿರುವುದು ದೃಢಪಟ್ಟಿತ್ತು.

ಕೊಲೆ ಕೖತ್ಯ ಬಯಲು

ಮಿಥುನ್ ಗೌಡ ಅಂತ್ಯಕ್ರಿಯೆಗೆ ಮುನ್ನ, ಸ್ಥಳೀಯರಾದ ಎಸ್‌.ಆರ್. ಗಂಗಾಧರಯ್ಯ ಎಂಬುವರು ಮೃತದೇಹದ ಫೋಟೊ ತೆಗೆದಿದ್ದರು. ಮಾರ್ಚ್ 22ರಂದು ಮತ್ತೆ ಈ ಚಿತ್ರವನ್ನು ವೀಕ್ಷಿಸಿದಾಗ, ಸಾವಿನ ಬಗ್ಗೆ ಅನುಮಾನ ಮೂಡಿತ್ತು. ಈ ಬಗ್ಗೆ ಗ್ರಾಮದ ಜನರು ಸೇರಿ ಚಂದ್ರಶೇಖರ್‌ನನ್ನು ಪ್ರಶ್ನಿಸಿದ್ದಾರೆ. ಆಗ ಕೊಲೆಯ ಬಗ್ಗೆ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ. ಈ ಘಟನೆ ಸಂಬಂಧ ಗಂಗಾಧರಯ್ಯ ಪೊಲೀಸರಿಗೆ ದೂರು ನೀಡಿದ್ದರು, ಪ್ರಕರಣವನ್ನು ದಾಖಲಿಸಿಕೊಂಡ ಮಹಿಳಾ ಪೊಲೀಸ್ ಠಾಣೆ ಅಧಿಕಾರಿಗಳು ಚಂದ್ರಶೇಖರ್​​ನನ್ನು ಬಂಧಿಸಿದ್ದಾರೆ. ತಕ್ಷಣವೇ ಮಗುವಿನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Self Harming: ಬೆಳಗಾವಿ ಪಿಜಿಯಲ್ಲಿ ಎಂಬಿಎ ಪದವೀಧರೆ ಆತ್ಮಹತ್ಯೆ; ಯುವತಿ ಸಾವಿಗೆ ಕಾರಣವಾಯ್ತಾ ಲವ್ ಬ್ರೇಕಪ್?

ಈ ಹತ್ಯೆ ಪ್ರಕರಣದಲ್ಲಿ ಕಾವ್ಯಾಳ ಪಾತ್ರದ ಮೇಲೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಂಡ್ಯ ಜಿಲ್ಲೆಯ ಬೆಳ್ಳೂರು ಕ್ರಾಸ್​ನ ಕಾವ್ಯಾ, ಚಂದ್ರಶೇಖರ್ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಇಬ್ಬರೂ ಸಿದ್ಧಲಿಂಗಯ್ಯನಪಾಳ್ಯದಲ್ಲಿ ನೆಲೆಸಿದ್ದರು. ಮಗುವಿನ ಸಾವಿನ ನಂತರ ತಾಯಿ ಕಾವ್ಯಾಳ ನಡೆ ಅನುಮಾನಾಸ್ಪದವಾಗಿದ್ದು, ಈ ಪ್ರಕರಣದಲ್ಲಿ ಆಕೆಯ ಕೈವಾಡ ಇದೆಯಾ ಎಂಬ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ.