IIT BABA: ಐಪಿಎಲ್ ಭವಿಷ್ಯ ನುಡಿದ ಐಐಟಿ ಬಾಬಾ; ಆರ್‌ಸಿಬಿ ಅಭಿಮಾನಿಗಳಿಗೆ ಆತಂಕ
IPL 2025: ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ ಎರಡು ಪಂದ್ಯಗಳನ್ನು ಗೆದ್ದು ಅಜೇಯವಾಗಿದೆ. ಜತೆಗೆ ಅಂಕಪಟ್ಟಿಯಲ್ಲಿಯೂ ಉತ್ತಮ ರನ್‌ರೇಟ್‌ನೊಂದಿಗೆ ಅಗ್ರಸ್ಥಾನದಲ್ಲಿದೆ. ಐಐಟಿ ಬಾಬಾನ ಭವಿಷ್ಯದಿಂದ ಆರ್‌ಸಿಬಿ ಪ್ರದರ್ಶನಕ್ಕೆ ಅಡ್ಡಿಯಾಗದಿರಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.


ನವದೆಹಲಿ: ಚಾಂಪಿಯನ್ಸ್ ಟ್ರೋಫಿ ವೇಳೆ ಪಾಕಿಸ್ತಾನ ವಿರುದ್ಧದ ವಿರಾಟ್ ಕೊಹ್ಲಿ ರನ್ ಗಳಿಸುವುದಿಲ್ಲ, ಭಾರತ ಪಂದ್ಯ ಸೋಲುತ್ತದೆ ಎಂದು ಭವಿಷ್ಯ ನುಡಿದು ಬಾರೀ ಟ್ರೋಲ್ ಆಗಿದ್ದ ಐಐಟಿ ಬಾಬಾ ಇದೀಗ ಐಪಿಎಲ್ ಭವಿಷ್ಯ ನುಡಿದಿದ್ದಾರೆ. ಅವರ ಭವಿಷ್ಯದಂತೆ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ಪ್ರವೇಶಿಸಲಿದೆಯಂತೆ.
ಮಹಾಕುಂಭದಲ್ಲಿ ಭಾರೀ ಸುದ್ದಿಯಾದ ಮಾಜಿ ಏರೋಸ್ಪೇಸ್ ಇಂಜಿನಿಯರ್ 'ಐಐಟಿ ಬಾಬಾ'(IIT Baba) ಅಭಯ್ ಸಿಂಗ್ ಭವಿಷ್ಯ ಕೇಳಿ ಆರ್‌ಸಿಬಿ ಅಭಿಮಾನಿಗಳಿಗೆ ಇದೀಗ ಭಾರೀ ಆತಂಕವೊಂದು ಶುರುವಾಗಿದೆ. ಹೌದು ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಫೈನಲ್‌ನಲ್ಲಿ ಚೆನ್ನೈ ತಂಡವನ್ನು ಸೋಲಿಸಿ ಚೊಚ್ಚಲ ಕಪ್ ಗೆಲ್ಲಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಇದನ್ನು ಕೇಳಿದ ಆರ್‌ಸಿಬಿ ಅಭಿಮಾನಿಗಳು ಚಾಂಪಿಯನ್ಸ್ ಟ್ರೋಫಿ ಭವಿಷ್ಯದಂತೆ ಉಲ್ಟಾ ಆಗದಿದ್ದದರೆ ಸಾಕು ಎಂದಿದ್ದಾರೆ.
ಸದ್ಯ ಆರ್‌ಸಿಬಿ ಆಡಿದ ಎರಡು ಪಂದ್ಯಗಳನ್ನು ಗೆದ್ದು ಅಜೇಯವಾಗಿದೆ. ಜತೆಗೆ ಅಂಕಪಟ್ಟಿಯಲ್ಲಿಯೂ ಉತ್ತಮ ರನ್‌ರೇಟ್‌ನೊಂದಿಗೆ ಅಗ್ರಸ್ಥಾನದಲ್ಲಿದೆ. ಐಐಟಿ ಬಾಬಾನ ಭವಿಷ್ಯದಿಂದ ಆರ್‌ಸಿಬಿ ಪ್ರದರ್ಶನಕ್ಕೆ ಅಡ್ಡಿಯಾಗದಿರಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ IPL 2025: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಅಪರೂಪದ ದಾಖಲೆ ಬರೆದ ವಿರಾಟ್ ಕೊಹ್ಲಿ!
ಶುಕ್ರವಾರ ನಡೆದಿದ್ದ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 50 ರನ್‌ಗಳ ಗೆಲುವು ಸಾಧಿಸಿ ಬರೋಬ್ಬರಿ 17 ವರ್ಷಗಳ ಬಳಿಕ ಚೆನ್ನೈ ಕ್ರೀಡಾಂಗಣದಲ್ಲಿ ಪಂದ್ಯ ಗೆದ್ದ ಸಾಧನೆ ಮಾಡಿತ್ತು. ಜತೆಗೆ ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್‌ಕೆಗೆ ರನ್ ಆಧಾರದಲ್ಲಿ ಅತಿದೊಡ್ಡ ಸೋಲುನ್ನು ಕೂಡ ಉಣಬಡಿಸಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅವರ ಅರ್ಧ ಶತಕ ಮತ್ತು ಫಿಲ್ ಸಾಲ್ಟ್, ಟಿಮ್ ಡೇವಿಡ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ 7 ವಿಕೆಟಿಗೆ 196 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ತಂಡ ನಾಟಕೀಯ ಕುಸಿತದೊಂದಿಗೆ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಮಾತ್ರ ಗಳಿಸಲು ಶಕ್ತವಾಗಿ ಸೋಲು ಕಂಡಿತು.