Actor Govinda: 37 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡ್ತಾರಾ ನಟ ಗೋವಿಂದ? ಸ್ಪಷ್ಟನೆ ನೀಡಿದ ಮ್ಯಾನೇಜರ್
90ರ ದಶಕದಲ್ಲಿ ಬಾಲಿವುಡ್ ಆಳಿದ್ದ ನಟ ಗೋವಿಂದ ತಮ್ಮ 37 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿದ್ದಾರೆ ಎನ್ನುವ ವದಂತಿ ಹಬ್ಬಿದೆ. ಪತ್ನಿ ಸುನೀತಾ ಅಹುಜಾ ಈಗಾಗಲೇ ಡಿವೋರ್ಸ್ ನೋಟಿಸ್ ಕೊಟ್ಟಿದ್ದಾರೆ ಎನ್ನಲಾಗಿದೆ. ಇದೀಗ ದಂಪತಿಯ ಮ್ಯಾನೇಜರ್‌ಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ನಟ ಗೋವಿಂದ ಮತ್ತು ಸುನೀತಾ ಅಹುಜಾ.

ಮುಂಬೈ: ಬಾಲಿವುಡ್ ನಟ ಗೋವಿಂದ (Actor Govinda) ಮತ್ತು ಸುನೀತಾ ಅಹುಜಾ (Sunita Ahuja) 37 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿದ್ದಾರೆ ಎನ್ನುವ ಸುದ್ದಿ ಸದ್ಯ ಭಾರಿ ಸದ್ದು ಮಾಡುತ್ತಿದೆ. ಇವರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ವದಂತಿ ಹರಡಿದ್ದು, ಇದಕ್ಕೆ ಸುನೀತಾ ಅಹುಜಾ ಅವರ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ. ಸುನೀತಾ ಅವರ ಮ್ಯಾನೇಜರ್ ಸಾದಿಯಾ ಸೋಲ್ಕರ್ ಈ ಬಗ್ಗೆ ಮಾತನಾಡಿ, ಡಿವೋರ್ಸ್ ವದಂತಿಯನ್ನು ನಿರಾಕರಿಸಿದ್ದಾರೆ. "ವಿಚ್ಚೇದನದ ಸುದ್ದಿ ನಿಜವಲ್ಲ" ಎಂದು ತಿಳಿಸಿದ್ದಾರೆ. ಆದಾಗ್ಯೂ ಹೆಚ್ಚಿನ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ.
ಗೋವಿಂದ ಹೇಳಿದ್ದೇನು?
ಡಿವೋರ್ಸ್ ವದಂತಿ ಹರಡಿರುವ ಬಗ್ಗೆ ನಟ ಗೋವಿಂದ ಸ್ವತಃ ಇಟೈಮ್ಸ್ (ETimes) ಜತೆ ಮಾತನಾಡಿದ್ದಾರೆ. ಈ ವೇಳೆ ಅವರು, "ವ್ಯವಹಾರ ಮಾತುಕತೆಗಳು ಮಾತ್ರ ನಡೆಯುತ್ತಿದೆ. ನಾನು ಬೇರೊಂದು ಸಿನಿಮಾವನ್ನ ಪ್ರಾರಂಭಿಸುವ ಸಿದ್ಧತೆಯಲ್ಲಿದ್ದೇನೆ" ಎಂದು ತಿಳಿಸಿದ್ದಾರೆ. ಇದಕ್ಕಿಂತ ಹೆಚ್ಚಿನ ಗುಟ್ಟು ಅವರು ಬಿಟ್ಟುಕೊಟ್ಟಿಲ್ಲ.
ಅದಾಗ್ಯೂ ಗೋವಿಂದ ಅವರ ಮ್ಯಾನೇಜರ್ ಶಶು ಸಿನ್ಹಾ ವದಂತಿ ಹರಡಲು ಸುನೀತಾ ಕಾರಣ ಎಂದು ಆರೋಪಿಸಿದ್ದಾರೆ. ʼʼಇತ್ತೀಚಿನ ಸಂದರ್ಶನದಲ್ಲಿ ಸುನೀತಾ ಅತಿಯಾಗಿ ಮಾತನಾಡಿದ್ದಾರೆ. ಅದರ ಪರಿಣಾಮವಾಗಿ ಡಿವೋರ್ಸ್ ವದಂತಿ ಹರಡಿದೆ. ಅದು ಬಿಟ್ಟು ದಂಪತಿಯ ನಡುವೆ ಯಾವುದೇ ಘರ್ಷಣೆ ಇಲ್ಲ. ಇನ್ನೊಂದೆರಡು ದಿನಗಳಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ದಂಪತಿಯ ಮಧ್ಯೆ ಉಂಟಾಗಿರುವ ಮನಸ್ತಾಪವನ್ನ ಪರಿಹರಿಸುವ ಪ್ರಯತ್ನದಲ್ಲಿದ್ದೇವೆʼʼ ಎಂದು ಹೇಳಿದ್ದಾರೆ.
ʼʼಸುನೀತಾ ಅವರು ಕೆಲವು ತಿಂಗಳ ಹಿಂದೆಯೇ ಡಿವೋರ್ಸ್ ನೋಟಿಸ್ ಕಳುಹಿಸಿದ್ದರು. ಆದರೆ ಅದಾದ ಬಳಿಕ ಈ ಕುರಿತು ಯಾವುದೇ ಬೆಳವಣಿಗೆ ನಡೆದಿಲ್ಲʼʼ ಎಂದಿದ್ದಾರೆ. ಇತ್ತ ಗೋವಿಂದ ಅವರ ಸಂಬಂಧಿಕರಾದ ಆರತಿ ಸಿಂಗ್ ಮತ್ತು ಕೃಷ್ಣ ಅಭಿಷೇಕ್ ಡಿವೋರ್ಸ್ ವದಂತಿಯನ್ನು ತಳ್ಳಿ ಹಾಕಿದ್ದಾರೆ. ಗೋವಿಂದ ಮತ್ತು ಸುನೀತಾ ಅವರ ದಾಂಪತ್ಯ ಯಾವುದೇ ಕಾರಣಕ್ಕೂ ಮುರಿದು ಬೀಳುವುದಿಲ್ಲ ಎಂದು ತಿಳಿಸಿದ್ದಾರೆ. ಗೋವಿಂದ 30 ವರ್ಷದ ಮರಾಠಿ ನಟಿಯೊಂದು ಆತ್ಮೀಯವಾಗಿದ್ದಾರೆ. ಈ ಅಂಶವೇ ಡಿವೋರ್ಸ್‌ಗೆ ಮುಖ್ಯ ಕಾರಣ ಎನ್ನುವ ವದಂತಿಯೂ ಇತ್ತೀಚೆಗೆ ಕೇಳಿ ಬಂದಿತ್ತು. ಸದ್ಯ ಈ ಗಾಳಿಸುದ್ದಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ಈ ಸುದ್ದಿಯನ್ನೂ ಓದಿ: Actor Govinda: ಬಾಲಿವುಡ್‌ನಲ್ಲಿ ಮತ್ತೊಂದು ವಿಚ್ಛೇದನ?; ದಾಂಪತ್ಯ ಜೀವನಕ್ಕೆ ಅಂತ್ಯ ಹಾಡ್ತಾರಾ ಗೋವಿಂದ-ಸುನೀತಾ?
ಪ್ರೀತಿಸಿ ಮದುವೆಯಾಗಿದ್ದ ಜೋಡಿ
ಹಾಗೆ ನೋಡಿದರೆ ಗೋವಿಂದ ಮತ್ತು ಸುನೀತಾ ಅವರದ್ದು ಲವ್ ಮ್ಯಾರೇಜ್. ಗೋವಿಂದ ನಟನಾಗುವ ಮುನ್ನವೇ ಸುನೀತಾ ಪ್ರೀತಿಸುತ್ತಿದ್ದರು. ಸುನೀತಾ 9ನೇ ರಗತಿಯಲ್ಲಿ ಓದುತ್ತಿದ್ದಾಗ ಮೊದಲ ಬಾರಿಗೆ ಗೋವಿಂದ ಅವರನ್ನು ಭೇಟಿಯಾಗಿದ್ದರು. ಗೋವಿಂದ ಮತ್ತು ಸುನೀತಾ ಅವರು 1987ರ ಮಾರ್ಚ್‌ನಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಟೀನಾ ಅಜುಜಾ ಮತ್ತು ಯಶವರ್ಧನ್ ಅಹುಜಾ ಎಂಬ ಮಕ್ಕಳಿದ್ದಾರೆ. ಗೋವಿಂದ 90ರ ದಶಕದಲ್ಲಿ ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ವಿಶೇಷವಾಗಿ ಹಾಸ್ಯ ಪ್ರಧಾನ ಚಿತ್ರದಲ್ಲಿ ಮಿಂಚಿದ್ದರು. ಕೆಲವು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.