Kunal Kamra: ʼಮೆಂಟಲ್ ಹಾಸ್ಪಿಟಲ್ ಉತ್ತಮʼ ಎಂದು ಬಿಗ್ ಬಾಸ್ ಆಫರ್ ತಿರಸ್ಕರಿಸಿದ ಕುನಾಲ್ ಕಮ್ರಾ
Kunal Kamra: ಬಿಗ್ ಬಾಸ್ ಭಾರತದ ಅತ್ಯಂತ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದು. ಹಿಂದಿಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುವ ಶೋ ಬೇರೆ ಎಲ್ಲಾ ಭಾಷೆಗಳಿಗಿಂತ ಹೆಚ್ಚಿನ ವೀಕ್ಷಕರನ್ನು ಹೊಂದಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಲವು ಜನರು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ, ಇತ್ತೀಚಿಗೆ ವಿವಾದಗಳಿಂದಲೇ ಸುದ್ದಿಯಲ್ಲಿರುವ ಕಾಮಿಡಿಯನ್ ಕುನಾಲ್ ಕಮ್ರಾ ಅವರು ಮಾತ್ರ ಬಿಗ್ ಬಾಸ್‌ನಲ್ಲಿ ಸ್ಪರ್ಧಿಸುವ ಆಫರ್ ಅನ್ನು ತಿರಸ್ಕರಿಸಿದ್ದಾರೆ.

ಕುನಾಲ್ ಕಮ್ರಾ

ಮುಂಬೈ: ಬಿಗ್ ಬಾಸ್(Bigg Boss) ಭಾರತದ ಅತ್ಯಂತ ದೊಡ್ಡ ರಿಯಾಲಿಟಿ ಶೋ(Reality Show)ಗಳಲ್ಲಿ ಒಂದು. ಹಿಂದಿಯಲ್ಲಿ ಆರಂಭವಾಗಿದ್ದ ಈ ಕಾರ್ಯಕ್ರಮ ಈಗ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಇದು ಒಂದು ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದು, ಪ್ರತಿ ವರ್ಷ ಈ ಕಾರ್ಯಕ್ರಮದ ಟಿಆರ್‌ಪಿ ಹೆಚ್ಚುತ್ತಲೇ ಇದೆ. ಅದರಲ್ಲೂ, ಬಿಗ್ ಬಾಸ್ ಟಿವಿ ಶೋ ಮತ್ತು ಒಟಿಟಿ ಶೋ ಎಂಬ ಎರಡು ಪ್ರತ್ಯೇಕ ವಿಭಾಗ ಸೃಷ್ಟಿಯಾದ ಬಳಿಕವಂತೂ, ಅದರ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್(Salman Khan) ನಡೆಸಿಕೊಡುವ ಶೋ ಬೇರೆ ಎಲ್ಲಾ ಭಾಷೆಗಳಿಗಿಂತ ಹೆಚ್ಚಿನ ವೀಕ್ಷಕರನ್ನು ಹೊಂದಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಲವು ಜನರು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ, ಇತ್ತೀಚಿಗೆ ವಿವಾದಗಳಿಂದಲೇ ಸುದ್ದಿಯಲ್ಲಿರುವ ಕಾಮಿಡಿಯನ್ ಕುನಾಲ್ ಕಮ್ರಾ(Kunal Kamra) ಅವರು ಮಾತ್ರ ಬಿಗ್ ಬಾಸ್‌ನಲ್ಲಿ ಸ್ಪರ್ಧಿಸುವ ಆಫರ್ ಅನ್ನು ತಿರಸ್ಕರಿಸಿದ್ದಾರೆ.
ಈ ಬಗ್ಗೆ ವಾಟ್ಸಾಪ್ ಮೆಸೇಜ್‌ವೊಂದರ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಅವರು, ಸಲ್ಮಾನ್ ಖಾನ್ ಅವರ ಬಿಗ್ ಬಾಸ್‌ನ ಮುಂಬರುವ ಸೀಸನ್‌ಗಾಗಿ ತಮ್ಮನ್ನು ಸಂಪರ್ಕಿಸಲಾಗಿದೆ ಎಂದು ಹೇಳಿದ್ದಾರೆ. ಮುಂಬರುವ ಸೀಸನ್‌ನ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಕಾಸ್ಟಿಂಗ್ ನಿರ್ದೇಶಕರೊಬ್ಬರು ಅವರನ್ನು ಸಂಪರ್ಕಿಸಿದ್ದರು. ಕುನಾಲ್ ಕಮ್ರಾ ಅವರ ಆಫರ್ ತಿರಸ್ಕರಿಸುತ್ತಾ, ನಾನು ಬಿಗ್ ಬಾಸ್ ಶೋಗಿಂತ ಮೆಂಟಲ್ ಆಸ್ಪತ್ರೆಯಲ್ಲಿ ದಾಖಲಾಗುವುದನ್ನು ಉತ್ತಮ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಕಾಸ್ಟಿಂಗ್ ನಿರ್ದೇಶಕರ ಸಂದೇಶದಲ್ಲಿ, "ನಾನು ಈ ಬಿಗ್ ಬಾಸ್ ಸೀಸನ್‌ಗಾಗಿ ಅಭ್ಯರ್ಥಿಗಳ ಆಯ್ಕೆಯನ್ನು ನಿರ್ವಹಿಸುತ್ತಿದ್ದೇನೆ. ನಿಮ್ಮ ಹೆಸರು ಬಿಗ್ ಬಾಸ್ ತಂಡದ ಚರ್ಚೆಯಲ್ಲಿ ಕೇಳಿ ಬಂದಿದೆ. ಈ ಕಾರ್ಯಕ್ರಮ ನಿಮ್ಮ ನಿಮಗಿಷ್ಟವಿಲ್ಲದಿರಬಹುದು. ಆದರೆ, ಪ್ರಾಮಾಣಿಕವಾಗಿ ಹೇಳಬೇಕಾದರೆ, ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನು ಗೆಲ್ಲಲು ಇದೊಂದು ಅತ್ಯುತ್ತಮ ವೇದಿಕೆಯಾಗಿದೆ. ನಿಮ್ಮ ಅಭಿಪ್ರಾಯವೇನು? ನಾವು ಅದರ ಬಗ್ಗೆ ಮಾತನಾಡೋಣವೇ?" ಎಂದು ಹೇಳಿದ್ದಾರೆ. ಆದರೆ, ಕುನಾಲ್ ಕಮ್ರಾ ಅವರಿಗೆ ಬಿಗ್ ಬಾಸ್ OTT ಅಥವಾ ಬಿಗ್ ಬಾಸ್ 19 ಈ ಎರಡು ಕಾರ್ಯಕ್ರಮಗಳಲ್ಲಿ ಯಾವುದರ ಆಫರ್ ನೀಡಲಾಗಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.
ಈ ಸುದ್ದಿಯನ್ನೂ ಓದಿ: Kunal Kamra: ಕುತ್ತು ತಂದ ಕಾಮಿಡಿ; FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಕುನಾಲ್ ಕಮ್ರಾ
ವಿವಾದದ ಕೇಂದ್ರ ಬಿಂದು ಕುನಾಲ್ ಕಮ್ರಾ
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಅವಹೇಳನಕಾರಿ ಜೋಕ್ ಮಾಡಿದ್ದಕ್ಕೆ ಕುನಾಲ್ ಕಮ್ರಾ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸ್ಟ್ಯಾಂಡ್ ಅಪ್ ಕಾಮಿಡಿ ಕಾರ್ಯಕ್ರಮ ನಡೆದ ಸ್ಥಳವನ್ನು ಶೀವಸೇನೆ ಕಾರ್ಯಕರ್ತರು ಧ್ವಂಸಗೊಳಿಸಿದ್ದರು. ಕಮ್ರಾ ವಿರುದ್ಧ ಪ್ರಕರಣ ದಾಖಲಾದ ಬಳಿಕ ಅವರನ್ನು ಬಂಧಿಸದಂತೆ ಮದ್ರಾಸ್ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಿತ್ತು. ಇದಾದ ಬಳಿಕ ಮುಂಬೈ ಪೊಲೀಸರು ನೀಡಿರುವ ಮೂರು ಸಮನ್ಸ್‌ಗಳನ್ನು ಕುನಾಲ್ ಕಮ್ರಾ ತಪ್ಪಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ, ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದಾರೆ.
ಇದು ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ಸಿಗುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಮತ್ತು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಸಿಗುವ ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಕುನಾಲ್ ಕಮ್ರಾ ಅವರು ಅರ್ಜಿಯಲ್ಲಿ ಹೇಳಿದ್ದಾರೆ.