ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinod Kumar Shukla: ಹಿಂದಿ ಸಾಹಿತಿ ವಿನೋದ್ ಕುಮಾರ್ ಶುಕ್ಲಾಗೆ ಜ್ಞಾನಪೀಠ ಪ್ರಶಸ್ತಿ

59th Jnanpith Award: 2024ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಯನ್ನು ಹಿಂದಿಯ ಸಾಹಿತಿ, ಛತ್ತೀಸ್‌ಗಢದ ವಿನೋದ್‌ ಕುಮಾರ್‌ ಶುಕ್ಲಾ ಅವರಿಗೆ ಘೋಷಿಸಲಾಗಿದೆ. ಭಾರತದ ಅತ್ಯುನ್ನತ ಸಾಹಿತ್ಯ ಗೌರವ ಜ್ಞಾನಪೀಠ ಪ್ರಶಸ್ತಿ ಛತ್ತೀಸ್‌ಗಢಕ್ಕೆ ದೊರೆಯುತ್ತಿರುವುದು ಇದು ಮೊದಲ ಬಾರಿ. ಪ್ರಶಸ್ತಿಯು 11 ಲಕ್ಷ ರೂ. ನಗದು, ಕಂಚಿನ ಸರಸ್ವತಿ ಪ್ರತಿಮೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಹಿಂದಿ ಸಾಹಿತಿ ವಿನೋದ್ ಕುಮಾರ್ ಶುಕ್ಲಾಗೆ ಜ್ಞಾನಪೀಠ ಪ್ರಶಸ್ತಿ

ವಿನೋದ್‌ ಕುಮಾರ್‌ ಶುಕ್ಲಾ.

Profile Ramesh B Mar 22, 2025 9:56 PM

ಹೊಸದಿಲ್ಲಿ: 2024ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ (59th Jnanpith Award)ಯನ್ನು ಹಿಂದಿಯ ಸಾಹಿತಿ, ಛತ್ತೀಸ್‌ಗಢದ ವಿನೋದ್‌ ಕುಮಾರ್‌ ಶುಕ್ಲಾ (Vinod Kumar Shukla) ಅವರಿಗೆ ಘೋಷಿಸಲಾಗಿದೆ. ಭಾರತದ ಅತ್ಯುನ್ನತ ಸಾಹಿತ್ಯ ಗೌರವ ಜ್ಞಾನಪೀಠ ಪ್ರಶಸ್ತಿ ಛತ್ತೀಸ್‌ಗಢಕ್ಕೆ ದೊರೆಯುತ್ತಿರುವುದು ಇದು ಮೊದಲ ಬಾರಿ ಎನ್ನುವುದು ವಿಶೇಷ. 88 ವರ್ಷದ ಕವಿ, ಸಣ್ಣ ಕಥೆಗಾರ ಮತ್ತು ಪ್ರಬಂಧಕಾರ ವಿನೋದ್‌ ಕುಮಾರ್‌ ಶುಕ್ಲಾ ಅವರನ್ನು ಸಮಕಾಲೀನ ಹಿಂದಿ ಸಾಹಿತ್ಯದ ಅತ್ಯಂತ ವಿಶಿಷ್ಟ ಬರಹಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಜ್ಞಾನಪೀಠ ಪ್ರಶಸ್ತಿಯು 11 ಲಕ್ಷ ರೂ. ನಗದು, ಕಂಚಿನ ಸರಸ್ವತಿ ಪ್ರತಿಮೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಇದು ಹಿಂದಿ ಸಾಹಿತ್ಯಕ್ಕೆ ದೊರೆತ 12ನೇ ಜ್ಞಾನಪೀಠ ಪ್ರಶಸ್ತಿ.

ಪ್ರಶಸ್ತಿ ಘೋಷಣೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶುಕ್ಲಾ, "ಇದು ಬಹಳ ದೊಡ್ಡ ಪ್ರಶಸ್ತಿ. ನಾನು ಇದನ್ನು ಸ್ವೀಕರಿಸುತ್ತೇನೆ ಎಂದು ಭಾವಿಸಿರಲಿಲ್ಲ. ನಾನು ಎಂದಿಗೂ ಪ್ರಶಸ್ತಿಗಳ ಬಗ್ಗೆ ಯೋಚಿಸಲಿಲ್ಲ. ನಾನು ಜ್ಞಾನಪೀಠಕ್ಕೆ ಅರ್ಹನಾಗಿದ್ದೇನೆ ಎಂದು ಹಲವರು ಆಗಾಗ ಹೇಳುತ್ತಿದ್ದರು. ಆದರೆ ಈಗ ಪ್ರತಿಕ್ರಿಯಿಸಲು ನನಗೆ ಸರಿಯಾದ ಪದಗಳೇ ಸಿಗುತ್ತಿಲ್ಲʼʼ ಎಂದು ಹೇಳಿದ್ದಾರೆ.



ಈ ಇಳಿ ವಯಸ್ಸಿನಲ್ಲಿಯೂ ಅವರು ತಮ್ಮ ಬರವಣಿಗೆಯನ್ನು ಮುಂದುವರಿಸಿದ್ದಾರೆ. ಅದರಲ್ಲಿಯೂ ಮಕ್ಕಳ ಸಾಹಿತ್ಯದತ್ತ ಗಮನ ಹರಿಸಿದ್ದಾರೆ. ಯುವ ಬರಹಗಾರರಿಗೆ ಸಲಹೆ ನೀಡಿ, "ಬರವಣಿಗೆ ಸಣ್ಣ ಕೆಲಸವಲ್ಲ. ನೀವು ಬರೆಯುತ್ತಿದ್ದರೆ ಅದನ್ನು ಮುಂದುವರಿಸಿ. ನಿಮ್ಮ ಮೇಲೆ ವಿಶ್ವಾಸವಿಡಿ. ನಿಮ್ಮ ಕೃತಿ ಪ್ರಕಟವಾದ ನಂತರ ಇತರರು ಪ್ರತಿಕ್ರಿಯೆ ನೀಡಿದರೆ, ಅದರ ಬಗ್ಗೆಯೂ ಗಮನ ಹರಿಸಿ" ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Sudha Murty: "ವಾರಕ್ಕೆ 70 ಗಂಟೆ ಕೆಲಸ" ; ಪತಿ ನಾರಾಯಣ ಮೂರ್ತಿ ಹೇಳಿಕೆಗೆ ಸುಧಾ ಮೂರ್ತಿ ಪ್ರತಿಕ್ರಿಯೆ ನೀಡಿದ್ದೇನು?

ಬರಹಗಾರ್ತಿ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪ್ರತಿಭಾ ರೇ ಅಧ್ಯಕ್ಷತೆಯಲ್ಲಿ 59ನೇ ಜ್ಞಾನಪೀಠ ಪ್ರಶಸ್ತಿಯ ಆಯ್ಕೆ ಸಮಿತಿಯು ವಿನೋದ್ ಶುಕ್ಲಾ ಅವರ ಹೆಸರನ್ನು ಅಂತಿಮಗೊಳಿಸಿದೆ. ʼʼಹಿಂದಿ ಸಾಹಿತ್ಯಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ಶುಕ್ಲಾ ಅವರನ್ನು ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವರ ಸೃಜನಶೀಲನೆ, ಬರವಣಿಗೆ ಶೈಲಿ ವಿಶಿಷ್ಟವಾದುದುʼʼ ಎಂದು ಸಮಿತಿ ತಿಳಿಸಿದೆ. ಆಯ್ಕೆ ಸಮಿತಿಯು ಮಾಧವ್ ಕೌಶಿಕ್, ದಾಮೋದರ್ ಮೌಜೋ, ಪ್ರಭಾ ವರ್ಮ, ಅನಾಮಿಕಾ, ಎ. ಕೃಷ್ಣ ರಾವ್, ಪ್ರಫುಲ್ ಶಿಲೇದಾರ್, ಜಾನಕಿ ಪ್ರಸಾದ್ ಶರ್ಮಾ ಮತ್ತು ಜ್ಞಾನಪೀಠ ನಿರ್ದೇಶಕ ಮಧುಸೂದನ್ ಆನಂದ್ ಅವರನ್ನೊಳಗೊಂಡಿದೆ.

ಪ್ರಚೋದನಕಾರಿ ಗದ್ಯ ಮತ್ತು ಕಾವ್ಯಾತ್ಮಕ ಸಂವೇದನೆಗಳಿಗೆ ಜನಪ್ರಿಯರಾದ ಶುಕ್ಲಾ ಅವರ ʼದೀವಾರ್ ಮೇ ಏಕ್ ಖಿರ್ಕಿ ರೆಹ್ತಿ ಥಿʼ ಕೃತಿಗೆ 1999ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ʼನೌಕರ್ ಕಿ ಕಮೀಜ್ʼ (1979) ಶುಕ್ಲಾ ಅವರ ಪ್ರಮುಖ ಕಾದಂಬರಿ. ʼಸಬ್ ಕುಚ್ ಹೋನಾ ಬಚಾ ರಹೇಗಾʼ (1992) ಕವಿತಾ ಸಂಕಲನ ಕೂಡ ಭಾರೀ ಜನಪ್ರಿಯತೆ ಪಡೆದಿದೆ.

ಸಾಹಿತ್ಯ ಕ್ಷೇತ್ರದ ದೇಶದ ಅತೀ ದೊಡ್ಡ ಪ್ರಶಸ್ತಿ ಜ್ಞಾನಪೀಠವನ್ನು 1961ರಲ್ಲಿ ಸ್ಥಾಪಿಸಲಾಯಿತು. ಮೊದಲ ಪ್ರಶಸ್ತಿಯನ್ನು ಮಲಯಾಳಂ ಸಾಹಿತಿ ಜಿ. ಶಂಕರ್‌ ಕುರುಪ್‌ ಅವರಿಗೆ ʼಓಡಕುಳಲ್‌ʼ ಕೃತಿಗಾಗಿ 1965ರಲ್ಲಿ ನೀಡಲಾಯಿತು.