Pralhad Joshi: ಕೇರಳ ಸರ್ಕಾರ ಕನಿಷ್ಠ 1,000 ಫಲಾನುಭವಿಗಳಿಗೂ ʼಸೂರ್ಯ ಘರ್ʼ ಯೋಜನೆ ಕಲ್ಪಿಸಿಲ್ಲ: ಪ್ರಲ್ಹಾದ್ ಜೋಶಿ ಆರೋಪ
Pralhad Joshi: ಕೇಂದ್ರ ಸರ್ಕಾರ ದೇಶಾದ್ಯಂತ 10 ಲಕ್ಷಕ್ಕೂ ಅಧಿಕ ಸೂರ್ಯ ಘರ್ ಘಟಕ ಅಳವಡಿಸಿ ಜನರಿಗೆ ಉಚಿತ ವಿದ್ಯುತ್ ಕಲ್ಪಿಸುವಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದರೆ, ಕೇರಳ ಸರ್ಕಾರ ಕನಿಷ್ಠ 1,000 ಫಲಾನುಭವಿಗಳಿಗೂ ಸೂರ್ಯ ಘರ್ ಯೋಜನೆ ಕಲ್ಪಿಸಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದಲ್ಲಿ ಕೇಂದ್ರ ಸರ್ಕಾರ ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಹಾಕುತ್ತಿದ್ದರೆ, ಕಾಂಗ್ರೆಸ್-ಕಮ್ಯುನಿಸ್ಟ್ ಮೈತ್ರಿ ಆಡಳಿತದ ಸರ್ಕಾರಗಳು ಬರೀ ಭ್ರಷ್ಟಾಚಾರ, ಹಿಂಸಾಚಾರದಲ್ಲಿ ಮುಳುಗಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆರೋಪಿಸಿದರು. ತಿರುವನಂತಪುರದಲ್ಲಿ ಇಂದು (ಸೋಮವಾರ) ನಡೆದ ಬಿಜೆಪಿ ನೂತನ ಅಧ್ಯಕ್ಷರ ಘೋಷಣೆ ಸಮಾರಂಭ ಉದ್ದೇಶಿಸಿ ಮಾತನಾಡಿ, ಕೇರಳ ಸರ್ಕಾರವಂತೂ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ. ಕೇಂದ್ರ ಸರ್ಕಾರ ಅಭಿವೃದ್ಧಿಗಾಗಿ ಅದೆಷ್ಟೇ ಹಣ ನೀಡಿದರೂ ಅಭಿವೃದ್ಧಿಗೆ ಬಳಸದೆ ಭ್ರಷ್ಟಾಚಾರ ನಡೆಸುತ್ತಿದೆ ಎಂದು ದೂರಿದರು.
ಜನಕ್ಕೆ ಸೂರ್ಯ ಘರ್ ಕಲ್ಪಿಸದ ಸರ್ಕಾರ
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಸೂರ್ಯ ಘರ್, ಕುಸುಮ್ ಬಿ ಅಂತಹ ಅತ್ಯುತ್ತಮ ಇಂಧನ ಸ್ವಾವಲಂಬಿ ಯೋಜನೆಗಳನ್ನು ಕೊಟ್ಟರೆ ಕೇರಳದಂತಹ ಬಿಜೆಪಿಯೇತರ ರಾಜ್ಯಗಳು ಸಂಪೂರ್ಣವಾಗಿ ಉಪೇಕ್ಷಿಸಿವೆ. ಜನಕ್ಕೆ ತಲುಪಿಸುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಕೇಂದ್ರ ಸರ್ಕಾರ ದೇಶಾದ್ಯಂತ 10 ಲಕ್ಷಕ್ಕೂ ಅಧಿಕ ಸೂರ್ಯ ಘರ್ ಘಟಕ ಅಳವಡಿಸಿ ಜನರಿಗೆ ಉಚಿತ ವಿದ್ಯುತ್ ಕಲ್ಪಿಸುವಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದರೆ, ಕೇರಳ ಸರ್ಕಾರ ಕನಿಷ್ಠ 1,000 ಫಲಾನುಭವಿಗಳಿಗೂ ಸೂರ್ಯ ಘರ್ ಯೋಜನೆ ಕಲ್ಪಿಸಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಭಾರತದಲ್ಲಿ ಕೇರಳ ಅತಿ ಹೆಚ್ಚು ಬಿಸಿಲಿನ ದಿನಗಳಲ್ಲಿರುವ ರಾಜ್ಯವಾಗಿದೆ. ಹಾಗಿದ್ದರೂ ಇಲ್ಲಿ ಸೂರ್ಯ ಘರ್ ಮತ್ತು ಕುಸುಮ್ ಬಿ ಯೋಜನೆ ಪರಿಣಾಮಕಾರಿ ಅನುಷ್ಠಾನವಾಗಿಲ್ಲ, ಈ ಮೂಲಕ ಸ್ಥಳೀಯ ಸರ್ಕಾರ ಕೇರಳದ ಜನರನ್ನು ವಂಚಿಸಿದೆ ಎಂದು ಆರೋಪಿಸಿದರು.
ಸೂರ್ಯ ಘರ್ ಆದಾಯದ ಮೂಲ
ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳಿಸಿದ ಸೂರ್ಯ ಘರ್ ಯೋಜನೆ ಜನ ಸಾಮಾನ್ಯರಿಗೆ ಒಂದು ಆದಾಯದ ಮೂಲವೂ ಆಗಿದೆ. ಸೂರ್ಯ ಘರ್ ಅಳವಡಿಕೆಯಿಂದ 300ಕ್ಕೂ ಹೆಚ್ಚು ಯೂನಿಟ್ ಉಚಿತ ವಿದ್ಯುತ್ ಬಳಕೆ ಮಾತ್ರವಲ್ಲದೆ, ಹೆಚ್ಚಿನ ವಿದ್ಯುತ್ ಉತ್ಪಾದಿಸಿ ಮಾರಾಟ ವ್ಯವಸ್ಥೆಯೂ ಇದರಲ್ಲಿದೆ. ಈ ಯೋಜನೆ ಮುಖೇನ 25 ವರ್ಷಗಳಲ್ಲಿ ₹15 ಲಕ್ಷ ಆದಾಯ ಕಂಡುಕೊಳ್ಳಲು ಸಾಧ್ಯವಿದೆ ಮತ್ತು 40 ವರ್ಷಗಳವರೆಗೆ ಉಚಿತ ಸೌರ ವಿದ್ಯುತ್ ಪಡೆಯಬಹುದಾಗಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಈ ಸುದ್ದಿಯನ್ನೂ ಓದಿ | Pralhad Joshi: ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮತ್ತೊಂದು ವಿಮಾನ ಸೇವೆ: ಪ್ರಲ್ಹಾದ್ ಜೋಶಿ
ಬಿಜೆಪಿ ನಿಷ್ಠೆ ಭಾರತಕ್ಕೆ; ಕಾಂಗ್ರೆಸ್ ನಿಷ್ಠೆ ಬೇರೆ ದೇಶಕ್ಕೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ಪ್ರತಿನಿತ್ಯ ಪ್ರತಿಯೊಬ್ಬರ ಅಭಿವೃದ್ಧಿ, ವಿಕಾಸಕ್ಕೆ ಶ್ರಮಿಸುತ್ತಿದೆ. ಅದರಂತೆ ಕೇರಳದ ಜನರ ಅಭಿವೃದ್ಧಿಗೂ ಬದ್ಧವಾಗಿದೆ ಎಂದ ಸಚಿವರು, ಬಿಜೆಪಿ ಭಾರತಕ್ಕೆ ನಿಷ್ಠವಾಗಿದ್ದರೆ, ಕಾಂಗ್ರೆಸ್ ಬೇರೆ ದೇಶಗಳಿಗೆ ನಿಷ್ಠೆ ತೋರುತ್ತಿದೆ. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಕೂಟ ಸಾಮಾಜಿಕ ಅಭಿವೃದ್ಧಿಗೆ ನಿಷ್ಠೆ ತೋರುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.