Vishwavani Editorial: ಏಕಿಂಥ ಮಲತಾಯಿ ಧೋರಣೆ !
ಕ್ರಿಕೆಟ್‌ಗೆ ದಕ್ಕುತ್ತಿರುವ ಪ್ರೋತ್ಸಾಹ, ಧನಸಹಾಯ, ಪ್ರಾಯೋಜಕತ್ವ ಇತ್ಯಾದಿ ಅಂಶಗಳಲ್ಲಿ ಕಾಲುಭಾಗದಷ್ಟಾದರೂ ದೇಶದ ಮಿಕ್ಕ ಕೆಲ ಕ್ರೀಡೆಗಳಿಗೆ ಸಿಗುವಂತಾದರೆ, ಮತ್ತಷ್ಟು ಪ್ರತಿಭೆಗಳು ಹೊರಹೊಮ್ಮಿ ದೇಶದ ಕೀರ್ತಿ ಪತಾಕೆಯನ್ನು ಜಗತ್ತಿನ ಎಲ್ಲೆಡೆ
Vishwavani News
Jan 6, 2025 6:42 AM
ಅದೇನು ಕಾರಣವೋ ಗೊತ್ತಿಲ್ಲ, ಕ್ರಿಕೆಟ್ ಆಟಕ್ಕೆ ನಮ್ಮ ದೇಶದಲ್ಲಿ ಇನ್ನಿಲ್ಲದ ರಾಜಮರ್ಯಾದೆ ಸಿಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯ ಸಮಯ ಎಂಬುದು ಗೊತ್ತಿದ್ದರೂ, ಅದೇ ಸಮಯದಲ್ಲಿ ವಿಭಿನ್ನ ಕ್ರಿಕೆಟ್ ಪಂದ್ಯಾವಳಿಗಳ ಆಯೋಜನೆಯಾಗುವುದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಇಂಥ ನಡೆಯ ಹಿಂದೆ ಅದೇನು ‘ವಾಣಿಜ್ಯಿಕ’ ಹಿತಾಸಕ್ತಿಗಳಿರುತ್ತವೆಯೋ ಆ ದೇವರೇ ಬಲ್ಲ!‘ಹಾಗಂತ, ಸುನಿಲ್ ಗಾವಸ್ಕರ್, ಜಿ.ಆರ್.ವಿಶ್ವನಾಥ್, ಬಿ.ಎಸ್.ಚಂದ್ರಶೇಖರ್, ಪ್ರಸನ್ನ, ಸಚಿನ್ ತೆಂಡೂಲ್ಕರ್, ಜಾವಗಲ್ ಶ್ರೀನಾಥ್, ಅನಿಲ್ಕುಂಬ್ಳೆಯವರಂಥ ಕಲಿಗಳನ್ನು ಜಗತ್ತಿಗೆ ಪರಿಚಯಿಸಿದ ಕ್ರಿಕೆಟ್ ಅನ್ನು ನಿರ್ಲಕ್ಷಿಸಬೇಕೇ?’ ಎಂದು ಕೆಲವರು ಪ್ರಶ್ನಿಸಬಹುದು.
ವಿಷಯ ಅದಲ್ಲ, ಕ್ರಿಕೆಟ್‌ಗೆ ದಕ್ಕುತ್ತಿರುವ ಪ್ರೋತ್ಸಾಹ, ಧನಸಹಾಯ, ಪ್ರಾಯೋಜಕತ್ವ ಇತ್ಯಾದಿ ಅಂಶಗಳಲ್ಲಿ ಕಾಲುಭಾಗದಷ್ಟಾದರೂ ದೇಶದ ಮಿಕ್ಕ ಕೆಲ ಕ್ರೀಡೆಗಳಿಗೆ ಸಿಗುವಂತಾದರೆ, ಮತ್ತಷ್ಟು ಪ್ರತಿಭೆಗಳು ಹೊರಹೊಮ್ಮಿ ದೇಶದ ಕೀರ್ತಿ ಪತಾಕೆಯನ್ನು ಜಗತ್ತಿನ ಎಲ್ಲೆಡೆ ಹಾರಿಸಬಲ್ಲರು ಎಂಬ ಕಾಳಜಿಯಷ್ಟೇ ಈ ಮಾತಿನ ಹಿಂದಿನ ಉದ್ದೇಶ. ಗುಕೇಶ್ ಎಂಬ ಯುವಪ್ರತಿಭೆ ಇತ್ತೀಚೆಗೆ ಚದುರಂಗದಲ್ಲಿ ವಿಶ್ವ ಚಾಂಪಿಯನ್ ಎನಿಸಿ ಕೊಳ್ಳುವವರೆಗೂ ಅವರ ಬಗ್ಗೆ ಬಹುತೇಕರಿಗೆ ಗೊತ್ತಿರಲಿಲ್ಲ.
ಇದೇ ರೀತಿಯಲ್ಲಿ, ಕಬಡ್ಡಿ, ಬಾಸ್ಕೆಟ್‌ಬಾಲ್, ಷಟ್ಲ್ ಮತ್ತು ಬಾಲ್ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಸೇರಿದಂತೆ ಹಲವು ಹೊರಾಂಗಣ ಮತ್ತು ಒಳಾಂಗಣ ಕ್ರೀಡೆಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ತವಕಿಸುತ್ತಿರುವ ಸಾವಿರಾರು ಪ್ರತಿಭೆಗಳಿವೆ ನಮ್ಮ ದೇಶದಲ್ಲಿ; ಆದರೆ ಸದವಕಾಶ ಮತ್ತು ಆರ್ಥಿಕ ನೆರವು ಸೇರಿದಂತೆ ವಿವಿಧ ನೆಲೆಗಟ್ಟಿನ ಉತ್ತೇಜನದ ಕೊರತೆ ಅವರನ್ನು ಕಾಡುತ್ತಿದೆ. ನಮ್ಮ ಹೆಚ್ಚಿನ ಶಾಲಾ ಕಾಲೇಜುಗಳಲ್ಲಿ ಆಟದ ಮೈದಾನಗಳು ಇಲ್ಲದಿರುವುದನ್ನು, ಕ್ರೀಡೋಪಕರಣಗಳ ಕೊರತೆ ಕಾಡುತ್ತಿರುವುದನ್ನು ಬಿಡಿಸಿ ಹೇಳಬೇಕಿಲ್ಲ.
ವಿದ್ಯಾರ್ಥಿಗಳು ಓದಿನ ವಿಷಯದಲ್ಲಿ ಮಾತ್ರವಲ್ಲದೆ ಆಟೋಟಗಳಲ್ಲೂ ದೇಹವನ್ನು ಹುರಿಗಟ್ಟಿಸಿಕೊಂಡಾಗ ಮಾತ್ರವೇ ಅವರ ಸರ್ವಾಂಗೀಣ ಅಭಿವೃದ್ಧಿಯಾದೀತು. ನಮ್ಮ ಆಳುಗ ವ್ಯವಸ್ಥೆಯು ಇನ್ನಾದರೂ ಈ ವಿಷಯದಲ್ಲಿ ಆದ್ಯ ಗಮನವನ್ನು ನೀಡಬೇಕಿದೆ.
ಇದನ್ನೂ ಓದಿ: Vishwavani Editorial: ಚೀನಾ ಜಲ ರಾಜಕಾರಣ