Vishwavani Editorial: ಭದ್ರಾವತಿ ಬಂಗಾರಕ್ಕೂ ಜೀವ ನೀಡಿ
Vishwavani Editorial: ಭದ್ರಾವತಿ ಬಂಗಾರಕ್ಕೂ ಜೀವ ನೀಡಿ
Ashok Nayak
Jan 3, 2025 10:43 AM
ಖಾಸಗೀಕರಣದ ಅಂಚಿನಲ್ಲಿದ್ದ, ‘ಭಾರತೀಯ ರಾಷ್ಟ್ರೀಯ ಉಕ್ಕು ನಿಗಮ’ದ ವೈಜಾಗ್ ಸ್ಟೀಲ್ ಕಾರ್ಖಾನೆಗೆ ಪ್ರಸಕ್ತ ವರ್ಷದಲ್ಲಿ ಮರುಜೀವ ನೀಡುವ ನಿಟ್ಟಿನಲ್ಲಿನ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿಯವರ ಪ್ರಯತ್ನ ಕೊನೆಗೂ ಫಲ ನೀಡಿದ್ದು, ಸದ್ಯದಲ್ಲೇ ಈ ಕಾರ್ಖಾನೆಯ ಪುನರಾರಂಭದ ಘೋಷಣೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಉಪಕ್ರಮವು ಯಶಸ್ವಿಯಾಗಿ ಕೈಗೂಡಿದಲ್ಲಿ ದೇಶದಲ್ಲಿನ ಉಕ್ಕಿನ ಉತ್ಪಾದನೆಯ ಪ್ರಮಾಣ ಗಣನೀಯವಾಗಿ ಹೆಚ್ಚುವುದರ ಜತೆಗೆ, ಸಾವಿರಾರು ಕಾರ್ಮಿಕ ಕುಟುಂಬಗಳಿಗೆ ಒಳಿತಾಗಲಿದೆ ಎಂಬುದರಲ್ಲಿ ಸಂದೇಹವಿಲ್ಲ.
‘ಕಬ್ಬಿಣ ಮತ್ತು ಉಕ್ಕು’ ಎನ್ನುತ್ತಿದ್ದಂತೆ ಅಪ್ರಯತ್ನವಾಗಿ ನೆನಪಾಗುವುದು ಕರ್ನಾಟಕದ ಭದ್ರಾವತಿಯಲ್ಲಿನ ‘ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ’. ನೂರು ವರ್ಷಕ್ಕೂ ಹಳೆಯ ಈ ಕಾರ್ಖಾನೆಯ ಪುನಶ್ಚೇತನಕ್ಕೆ ಹತ್ತು ಹಲವು ಕಸರತ್ತುಗಳನ್ನು ಮಾಡಿದರೂ ಅದು ಫಲ ನೀಡಲಿಲ್ಲ ಎಂಬುದು ವಿಷಾದದ ಸಂಗತಿ.
ನಿರಂತರ ನಷ್ಟ, ಅದಿರಿನ ಅಲಭ್ಯತೆ, ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಉನ್ನತೀಕರಿಸಲ್ಪಡದ ಯಂತ್ರೋಪಕರಣ ಗಳು ಮತ್ತು ದೀರ್ಘಕಾಲದವರೆಗೆ ಅವು ಸ್ಥಗಿತಗೊಂಡಿದ್ದ ಕಾರಣಕ್ಕೆ ಅನುತ್ಪಾದಕವಾಗಿ ಮಾರ್ಪಟ್ಟಿದ್ದು- ಹೀಗೆ ಭದ್ರಾವತಿಯ ಕಾರ್ಖಾನೆಯು ಉಸಿರು ನಿಲ್ಲಿಸುವಂತಾಗಿದ್ದಕ್ಕೆ ಹಲವು ಕಾರಣಗಳಿವೆ ಎನ್ನಲಾಗುತ್ತಿದೆ.
1918-1919ರ ಕಾಲಘಟ್ಟದಲ್ಲಿ ಶುರುವಾಗಿ ಭವ್ಯ ಇತಿಹಾಸ ಹೊಂದಿದ್ದ ಈ ಕಾರ್ಖಾನೆಯಲ್ಲಿ ಒಂದು ಕಾಲಕ್ಕೆ ಗಣನೀಯ ಸಂಖ್ಯೆಯ ಕಾರ್ಮಿಕರು ಕೆಲಸ ಮಾಡುತ್ತಿದ್ದರು; ಕಾರಣವಲ್ಲದ ಕಾರಣಕ್ಕೆ ಅದು ಏದುಸಿರು ಬಿಡು ವಂತಾದಾಗ, ತಮ್ಮ ಅನ್ನಕ್ಕೆ ಆಸರೆಯಾಗಿದ್ದ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಅಲ್ಲಿನ ಕಾರ್ಮಿಕರು ಸತತ 10 ವರ್ಷಗಳವರೆಗೆ ಹೋರಾಟ ನಡೆಸಿದ್ದುಂಟು.
ಈ ಕಾರ್ಖಾನೆಯ ದುಸ್ಥಿತಿಗೆ, ಅದು ನಷ್ಟಕ್ಕೆ ಒಡ್ಡಿಕೊಳ್ಳುವಂತಾಗಿದ್ದಕ್ಕೆ ಕಾರಣಗಳೇನೇ ಇರಬಹುದು; ಆದರೆ ಇದು ನಮ್ಮ ನಾಡಿನ ಹೆಮ್ಮೆಯ ಅಸ್ತಿತ್ವಗಳಲ್ಲೊಂದು ಎಂಬ ಸತ್ಯವನ್ನಂತೂ ತಳ್ಳಿ ಹಾಕಲಾಗದು. ಆದ್ದರಿಂದ, ವೈಜಾಗ್ ಕಾರ್ಖಾನೆಗೆ ಮರುಜೀವ ನೀಡಿದಂತೆ ‘ಭದ್ರಾವತಿ ಬಂಗಾರ’ಕ್ಕೂ ಅಂಥದೊಂದು ಭಾಗ್ಯ ನೀಡಲು ಕೇಂದ್ರಸಚಿವರು ಯತ್ನಿಸಲಿ ಎಂಬುದು ಸಹೃದಯಿಗಳ ಆಶಯ ಮತ್ತು ನಿರೀಕ್ಷೆ.
ಇದನ್ನೂ ಓದಿ: Vishwavani Editorial: ಚದುರಂಗ ಬಲದ ಚತುರ