ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಪರ ಸುನೀಲ್ ನರೇನ್ ಏಕೆ ಆಡುತ್ತಿಲ್ಲ? ಇಲ್ಲಿದೆ ಕಾರಣ!
RR vs KKR: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮಾರ್ಚ್ 26 ರಂದು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಜಿಂಕ್ಯ ರಹಾನೆ ಮೊದಲು ಬೌಲಿಂಗ್ ನಿರ್ಧರಿಸಿದರು. ಈ ವೇಳೆ ತಮ್ಮ ಕೀ ಆಟಗಾರ ಸುನೀಲ್ ನರೇನ್ ಆಡುವುದಿಲ್ಲ ಎಂದು ಮಾಹಿತಿ ನೀಡಿದ್ದರು.

ರಾಜಸ್ಥಾನ್ ರಾಯಲ್ಸ್ ವಿರುದ್ಧ ಸುನೀಲ್ ನರೇನ್ ಏಕೆ ಆಡುತ್ತಿಲ್ಲ?

ಗುವಾಹಟಿ: ಇಲ್ಲಿನ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಾರ್ಚ್ 26 ರಂದು ಬುಧವಾರ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಆರನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ (KKR vs RR) ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯಕ್ಕೆ ಉಭಯ ತಂಡಗಳೆರಡೂ ತನ್ನ ಪ್ಲೇಯಿಂಗ್ XIನಲ್ಲಿ ಒಂದೊಂದು ಬದಲಾವಣೆಗಳನ್ನು ಮಾಡಿಕೊಂಡು ಕಣಕ್ಕೆ ಇಳಿದವು. ರಾಜಸ್ಥಾನ್ ರಾಯಲ್ಸ್‌ನಲ್ಲಿ ಫಝಲಕ್ ಫಾರೂಕಿ ಬದಲು ವಾನಿಂದು ಹಸರಂಗ ಬಂದರೆ, ಕೆಕೆಆರ್ ಪರ ಸುನೀಲ್ ನರೇನ್ (Sunil Narine) ಬದಲು ಮೊಯೀನ್ ಅಲಿ ಕಣಕ್ಕೆ ಇಳಿದರು. ಆದರೆ, ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದ ನರೇನ್, ಆರ್‌ಆರ್ ವಿರುದ್ಧ ಏಕೆ ಆಡಲಿಲ್ಲ ಎಂಬ ಪ್ರಶ್ನೆ ಎಲ್ಲರಿಗೂ ಉಂಟಾಯಿತು.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಬಳಿಕ ಮಾತನಾಡಿದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ, ತಮ್ಮ ಪ್ಲೇಯಿಂಗ್ XIನಲ್ಲಿ ಬದಲಾವಣೆ ಇದೆ ಎಂದು ಹೇಳಿದ್ದಾರೆ. ಈ ಪಂದ್ಯಕ್ಕೆ ಒಂದು ಬದಲಾವಣೆಯನ್ನು ತರಲಾಗಿದೆ. ಸುನೀಲ್ ನರೇನ್ ಬದಲು ಮೊಯೀನ್ ಅಲಿ ಆಡುತ್ತಿದ್ದಾರೆ. ಸುನೀಲ್ ನರೇನ್ ಸಂಪೂರ್ಣ ಫಿಟ್ ಇಲ್ಲದ ಕಾರಣ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು. ಅಂದ ಹಾಗೆ ಕಳೆದ ಹಲವು ವರ್ಷಗಳಿಂದ ಕೆಕೆಆರ್‌ಗೆ ಕೀ ಆಟಗಾರನಾಗಿರುವ ಅವರು, 1628 ದಿನಗಳ ಬಳಿಕ ಇದೇ ಮೊದಲ ಬಾರಿ ಕೆಕೆಆರ್ ಪರ ಐಪಿಎಲ್ ಪಂದ್ಯದಲ್ಲಿ ಆಡಲಿಲ್ಲ. 2020ರ ಐಪಿಎಲ್ ಟೂರ್ನಿಯ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸುನೀಲ್ ನರೇನ್ ಆಡಿರಲಿಲ್ಲ. ಇದಾದ ಬಳಿಕ ಇದೇ ಮೊದಲ ಬಾರಿ ಸ್ಪಿನ್ ಆಲ್‌ರೌಂಡರ್ ಆಡುತ್ತಿಲ್ಲ.
KKR vs RR: ಸಂಜು ಸ್ಯಾಮ್ಸನ್ ಬದಲು ರಿಯಾನ್ ಪರಾಗ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸಲು ಕಾರಣವೇನು?
ಮಾರ್ಚ್ 22 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯದಲ್ಲಿ ಕೆಕೆಆರ್ ಪರ ಸುನೀಲ್ ನರೇನ್ ಕಣಕ್ಕೆ ಇಳಿದಿದ್ದರು. ಆರ್‌ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ್ದ ಅವರು 44 ರನ್‌ಗಳನ್ನು ಸಿಡಿಸಿದ್ದರು.. ಆದರೆ, ಗುವಾಹಟಿ ಪಂದ್ಯಕ್ಕೂ ಮುನ್ನ ಅವರು ಸಂಪೂರ್ಣ ಫಿಟ್ ಆಗಿರಲಿಲ್ಲ, ಇದರಿಂದಾಗಿ ಅವರು ಹೊರಗೆ ಕುಳಿತುಕೊಳ್ಳಬೇಕಾಯಿತು.
ಆರ್‌ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಹೀನಾಯ ಸೋಲು ಕಂಡಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕೆಕೆಆರ್ 8 ವಿಕೆಟ್‌ಗೆ 174 ರನ್ ಗಳಿಸಿತು. ಬಳಿಕ ಗುರಿ ಹಿಂಬಾಲಿಸಿದ್ದ ಆರ್‌ಸಿಬಿ, ಅದ್ಭುತವಾಗಿ ಬ್ಯಾಟ್ ಮಾಡಿ 16.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತ್ತು. 7 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು.
🚨 Toss 🚨@KKRiders elected to bowl first against @rajasthanroyals in Guwahati
— IndianPremierLeague (@IPL) March 26, 2025
Updates ▶ https://t.co/lGpYvw87IR #TATAIPL | #RRvKKR pic.twitter.com/PVVVJoU2cz
2025ರ ಐಪಿಎಲ್ ಆರನೇ ಪಂದ್ಯಕ್ಕೆ ಉಭಯ ತಂಡಗಳ ಪ್ಲೇಯಿಂಗ್ XI
ಕೋಲ್ಕತಾ ನೈಟ್ ರೈಡರ್ಸ್: ಕ್ವಿಂಟನ್ ಡಿ ಕಾಕ್ (ವಿ.ಕೀ), ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಮೊಯೀನ್ ಅಲಿ, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ವೈಭವ್ ಅರೋರ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ
ರಾಜಸ್ತಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಧ್ರುವ್ ಜುರೆಲ್ (ವಿ.ಕೀ), ಶಿಮ್ರಾನ್ ಹೆಟ್ಮಾಯರ್, ವಾನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ