ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Sati Sulochana Movie: ಕನ್ನಡದ ಮೊದಲ ವಾಕ್ಚಿತ್ರ ʼಸತಿ ಸುಲೋಚನʼ ಮರು ಸೃಷ್ಟಿ

Sati Sulochana Movie: ಕನ್ನಡದ ಮೊದಲ ವಾಕ್ಚಿತ್ರ ʼಸತಿ ಸುಲೋಚನʼ ಬಿಡುಗಡೆಯಾಗಿ 91 ವರ್ಷಗಳಾಗಿದೆ. ಖ್ಯಾತ ನಟ ಲೋಕೇಶ್ ಅವರ ತಂದೆ ಹಾಗೂ ಸೃಜನ್ ಲೋಕೇಶ್ ತಾತಾ ಸುಬ್ಬಯ್ಯ‌ ನಾಯ್ಡು ಈ ಚಿತ್ರದ ನಾಯಕನಾಗಿ, ತ್ರಿಪುರಾಂಬ ನಾಯಕಿಯಾಗಿ ಅಭಿನಯಿಸಿದ್ದರು. ಈ ಚಿತ್ರವನ್ನು ಮರು ಸೃಷ್ಟಿ ಮಾಡಲು ಸೃಜನ್ ಲೋಕೇಶ್ ಮುಂದಾಗಿದ್ದಾರೆ. ಹೆಸರಾಂತ ನಿರ್ದೇಶಕ ಪಿ. ಶೇಷಾದ್ರಿ ನಿರ್ದೇಶನ ಮಾಡಲಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಕನ್ನಡದ ಮೊದಲ ವಾಕ್ಚಿತ್ರ ʼಸತಿ ಸುಲೋಚನʼ ಮರು ಸೃಷ್ಟಿ

Profile Siddalinga Swamy Mar 4, 2025 8:20 PM

ಬೆಂಗಳೂರು: 3-3-1934 ಅಂದರೆ ಸರಿಯಾಗಿ 91 ವರ್ಷಗಳ ಹಿಂದೆ ಕನ್ನಡದ ಮೊದಲ ವಾಕ್ಚಿತ್ರ ʼಸತಿ ಸುಲೋಚನʼ (Sati Sulochana Movie) ಬಿಡುಗಡೆಯಾಗಿತ್ತು. ನಾಟಕದಲ್ಲಿ ಕಲಾವಿದರ ಅಭಿನಯವನ್ನು ನೋಡಿದ ಜನರು ತೆರೆಯ ಮೇಲೆ ಮೊದಲ ವಾಕ್ಚಿತ್ರವನ್ನು ನೋಡಿ ಮೂಕ ವಿಸ್ಮಿತರಾದರು. ಹಿರಿಯ ನಟ ಆರ್. ನಾಗೇಂದ್ರರಾಯರ ಸಲಹೆ ಮೇರೆಗೆ ರಾಜಸ್ಥಾನ ಮೂಲದವರಾದ ಚಮನ್ ಲಾಲ್ ಡೊಂಗಾಜಿ ಅವರು ನಿರ್ಮಾಣ ಮಾಡಿದ ಈ ಚಿತ್ರವನ್ನು ವೈ.ವಿ.ರಾವ್ ನಿರ್ದೇಶನ ಮಾಡಿದ್ದರು. ಖ್ಯಾತ ನಟ ಲೋಕೇಶ್ ಅವರ ತಂದೆ ಹಾಗೂ ಸೃಜನ್ ಲೋಕೇಶ್ ತಾತಾ ಸುಬ್ಬಯ್ಯ‌ ನಾಯ್ಡು ಈ ಚಿತ್ರದ ನಾಯಕನಾಗಿ, ತ್ರಿಪುರಾಂಬ ನಾಯಕಿಯಾಗಿ ಅಭಿನಯಿಸಿದ್ದರು. 91 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರದ ಯಾವುದೇ ವಿಡಿಯೋ ತುಣುಕುಗಳು ಲಭ್ಯವಿಲ್ಲ. ಕೇವಲ ಕೆಲವೆ ಕೆಲವು ಸ್ಥಿರಚಿತ್ರಗಳಷ್ಟೇ ಇದೆ.

ತಮ್ಮ ತಾತಾ ನಾಯಕರಾಗಿ ನಟಿಸಿದ್ದ ಈ ಪ್ರಥಮ ಚಿತ್ರವನ್ನು ಮರು ಸೃಷ್ಟಿ ಮಾಡಲು ಸೃಜನ್ ಲೋಕೇಶ್ ಮುಂದಾಗಿದ್ದಾರೆ. ಹೆಸರಾಂತ ನಿರ್ದೇಶಕ ಪಿ. ಶೇಷಾದ್ರಿ ನಿರ್ದೇಶನ ಮಾಡಲಿದ್ದಾರೆ. ಈ ವಿಷಯದ ಕುರಿತು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸೃಜನ್ ಲೋಕೇಶ್ ಹಾಗೂ ಪಿ.ಶೇಷಾದ್ರಿ ಮಾತನಾಡಿದರು.

ಕನ್ನಡದ ಮೊದಲ ವಾಕ್ಚಿತ್ರ ಬಿಡುಗಡೆಯಾಗಿ 91 ವರ್ಷಗಳಾಗಿದೆ. 3-3-1934 ರಂದು ಸಂಜೆ 7.30ಕ್ಕೆ ಬೆಂಗಳೂರಿನ ಪ್ಯಾರಾಮೌಂಟ್ ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಆದರೆ ಈ ಚಿತ್ರವನ್ನು ನಾವು ನೋಡೋಣ ಎಂದರೆ ಲಭ್ಯವಿಲ್ಲ. ಕೇವಲ ಸ್ಥಿರಚಿತ್ರಗಳಷ್ಟೇ ಇದೆ.‌ ʼಸತಿ ಸುಲೋಚನʼ ರಾಮಾಯಣದ ಒಂದು ಉಪಕಥೆ. ಬೆಳ್ಳಾವೆ ನರಹರಿ ಶಾಸ್ತ್ರಿಗಳು ಬರೆದಿದ್ದ ಈ ನಾಟಕವನ್ನು ವೈ.ವಿ‌.ರಾವ್ ಅವರು ಸಿನಿಮಾ ರೂಪಕ್ಕೆ ತಂದರು. ಚಿಕ್ಕಪೇಟೆಯಲ್ಲಿ ಪಾತ್ರೆ ವ್ಯಾಪಾರಿಗಳಾಗಿದ್ದ ಚಮನ್ ಲಾಲ್ ಡೊಂಗಾಜಿ ಅವರು ಸಹೋದರ ಭೂರ್ ಮಲ್ ಡೊಂಗಾಜಿ ಅವರ ಜತೆಗೂಡಿ 40 ಸಾವಿರ ಖರ್ಚಿನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಸುಬ್ಬಯ್ಯ ನಾಯ್ಡು, ತ್ರಿಪುರಾಂಬ, ಆರ್ ನಾಗೇಂದ್ರರಾಯರು, ಲಕ್ಷ್ಮೀ ಬಾಯಿ, ಕಮಲ ಬಾಯಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು. ಮಹಾರಾಷ್ಟ್ರದ ಕೊಲ್ಲಾಪುರದ ಬಳಿ ನಿರ್ಮಿಸಲಾಗಿದ್ದ ಸೆಟ್‌ನಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿತ್ತು. ಸುಮಾರು ಎರಡು ಸಾವಿರ ಜನರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರಂತೆ. ವಿದ್ಯುತ್ ದೀಪಗಳಿಲ್ಲದೆ ಕೇವಲ ಸೂರ್ಯನ ಬೆಳಕನ್ನೇ ನಂಬಿಕೊಂಡು ಮಾಡಿದ ಚಿತ್ರವಿದು. ಈಗ ಈ ಚಿತ್ರವನ್ನು ಮರು ಸೃಷ್ಟಿ ಮಾಡಲು ಸೃಜನ್ ಲೋಕೇಶ್ ಮುಂದಾಗಿದ್ದಾರೆ. ನಾನು ನಿರ್ದೇಶನ ಮಾಡುತ್ತಿದ್ದೇನೆ. ಸುಬ್ಬಯ್ಯ ನಾಯ್ಡು ಅವರು ಈ ಚಿತ್ರದಲ್ಲಿ ಇಂದ್ರಜಿತುವಿನ ಪಾತ್ರದಲ್ಲಿ ನಟಿಸಿದ್ದರು. ಈಗ ಆ ಪಾತ್ರವನ್ನು ಸೃಜನ್ ಲೋಕೇಶ್ ಅವರೆ ಮಾಡುತ್ತಿದ್ದಾರೆ. ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಈ ಚಿತ್ರವನ್ನು ಮರುಸೃಷ್ಟಿ ಮಾಡುವುದು ಅಷ್ಟು ಸುಲಭದ ಮಾತಲ್ಲ. ನಿಮ್ಮೆಲ್ಲರ ಸಹಕಾರ ನಮಗಿರಲಿ ಎಂದರು ಪಿ. ಶೇಷಾದ್ರಿ.

ನಟ ಸೃಜನ್ ಲೋಕೇಶ್ ಮಾತನಾಡಿ, ನಮ್ಮ ತಾತಾ ನಾಯಕರಾಗಿ ನಟಿಸಿದ್ದ ಮೊದಲ ವಾಕ್ಚಿತ್ರ ʼಸತಿ‌ ಸುಲೋಚನʼ ಬಿಡುಗಡೆಯಾಗಿ 91 ವರ್ಷಗಳಾಗಿದೆ. ಈ ಸಂದರ್ಭದಲ್ಲಿ ಈ ಚಿತ್ರವನ್ನು ಮರು ಸೃಷ್ಟಿ ಮಾಡಲು ಲೋಕೇಶ್ ಪ್ರೊಡಕ್ಷನ್ಸ್ ಸಂಸ್ಥೆ ಮುಂದಾಗಿದೆ. ಈಗ ಈ ಚಿತ್ರವನ್ನು ಪಿ. ಶೇಷಾದ್ರಿ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಅಂದುಕೊಂಡ ಹಾಗೆ ಆದರೆ ಇಂದಿನಿಂದ ಒಂದು ವರ್ಷಕ್ಕೆ‌ ಸರಿಯಾಗಿ ಅಂದರೆ 3-3-2026 ರಂದು ಮರು ಸೃಷ್ಟಿಯಾದ ಈ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ. ಆ ನಿಟ್ಟಿನಲ್ಲಿ ನಾವು ಈಗಾಗಲೇ ಕೆಲಸ ಆರಂಭಿಸಿದ್ದೇವೆ. ಈ ಚಿತ್ರವನ್ನು ಮರುಸೃಷ್ಟಿ ಮಾಡುವುದು ಸುಲಭದ ಮಾತಲ್ಲ. ಅದಕ್ಕೆ ಎಲ್ಲರ ಸಹಕಾರ ಅಗತ್ಯ. ಈ ಚಿತ್ರ ನನ್ನ ಕನಸು.‌ ಹಾಗಾಗಿ ʼಸತಿ ಸುಲೋಚನʼ ಮರು ಸೃಷ್ಟಿ ಆಗಿ ಬಿಡುಗಡೆಯಾಗವವರೆಗೂ ನಾನು ಬೇರೆ ಯಾವುದೇ ವಿಷಯದ ಬಗ್ಗೆ ಗಮನ ಕೊಡುವುದಿಲ್ಲ. ನನ್ನ ಗಮನ ಬರೀ ಈ ಸಿನಿಮಾ ಮೇಲೆ ಮಾತ್ರ ಇರುತ್ತದೆ ಎಂದರು.

ಇನ್ನು ನಮ್ಮ ಕುಟುಂಬದ ಮತ್ತೊಂದು ವಿಶೇಷವೆಂದರೆ ನಮ್ಮ ತಾತಾ ಸುಬ್ಬಯ್ಯ ನಾಯ್ಡು ಅವರು ನಿರ್ಮಾಣ ಹಾಗೂ ನಿರ್ದೇಶನ ಮಾಡಿದ ʼಭಕ್ತ ಪ್ರಹ್ಲಾದʼ ಚಿತ್ರದ ಮೂಲಕ ಬಾಲ ಕಲಾವಿದನಾಗಿ ನಮ್ಮ ತಂದೆ ಲೋಕೇಶ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ನನ್ನ ತಂದೆ ಲೋಕೇಶ್ ಅವರು ತಮ್ಮ ನಿರ್ಮಾಣದ ಹಾಗೂ ನಿರ್ದೇಶನದ ʼಬುಜಂಗಯ್ಯನ ದಶಾವತಾರಗಳುʼ ಚಿತ್ರದ ಮೂಲಕ ನನ್ನನ್ನು ಬಾಲನಟನಾಗಿ ಚಿತ್ರರಂಗಕ್ಕೆ ಕರೆತಂದರು. ಈಗ ನಾನು ನಿರ್ಮಿಸಿ, ನಿರ್ದೇಶಿಸುತ್ತಿರುವ ʼಜಿ.ಎಸ್.ಟಿʼ ಚಿತ್ರದ ಮುಖಾಂತರ ನನ್ನ ಮಗ ಸುಕೃತನನ್ನು ಬೆಳ್ಳತೆರೆಗೆ ಪರಿಚಯಿಸುತ್ತಿದ್ದೇನೆ. ಇದು ಸಾಧ್ಯವಾಗುವುದು ನಮ್ಮ ಭಾರತೀಯ ಚಿತ್ರರಂಗದಲ್ಲಿ ಮಾತ್ರ ಎಂದು ಸೃಜನ್ ಲೋಕೇಶ್ ತಿಳಿಸಿದರು.

ಈ ಸುದ್ದಿಯನ್ನೂ ಓದಿ | Hydrogen vehicles: ಇನ್ನೆರೆಡು ವರ್ಷದೊಳಗೆ ದೇಶದ ಈ 10 ನಗರಗಳ ಮಧ್ಯೆ ರಸ್ತೆಗಿಳಿಯಲಿವೆ ಹಸಿರು ಹೈಡ್ರೋಜನ್ ವಾಹನ

ಹಿರಿಯ ನಿರ್ದೇಶಕರಾದ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಗಿರೀಶ್ ಕಾಸರವಳ್ಳಿ, ಯೋಗರಾಜ್ ಭಟ್, ಹಿರಿಯ ಪತ್ರಕರ್ತೆ ಡಾ.ವಿಜಯ, ನಟಿ ಜಯಮಾಲ, ರಂಗತಜ್ಞ ಶ್ರೀನಿವಾಸ್ ಜಿ. ಕಪ್ಪಣ್ಣ, ಪತ್ರಕರ್ತ ಚ‌.ಹ.ರಘುನಾಥ್ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿ, ಸೃಜನ್ ಲೋಕೇಶ್ ಹಾಗೂ ಪಿ‌.ಶೇಷಾದ್ರಿ ಅವರ ಈ ಪ್ರಯತ್ನ ಯಶಸ್ವಿಯಾಗಲೆಂದು ಶುಭ ಕೋರಿದರು.