Murder Attempt: ಹನಿಟ್ರ್ಯಾಪ್ ಆಗಿಲ್ಲ, ನನ್ನ ಕೊಲೆಗೆ ಯತ್ನ: ಎಂಎಲ್‌ಸಿ ರಾಜೇಂದ್ರ ದೂರು
ನನ್ನ ಮೇಲೆ ಹನಿಟ್ರ್ಯಾಪ್ ಆಗಿಲ್ಲ. ಆದರೆ ನನಗೆ ಫೋನ್ ಕರೆಗಳು ಬರ್ತಾ ಇದ್ದವು. ಕಳೆದ ನವೆಂಬರ್ 16ರಂದು ಮಗಳ ಹುಟ್ಟುಹಬ್ಬ ಇತ್ತು. ಅವತ್ತು ಮನೆಗೆ ಶಾಮಿಯಾನ ಹಾಕಲು ಬಂದವರು ನನ್ನ ಮೇಲೆ ದಾಳಿ ಮಾಡುವ ಉದ್ದೇಶದಿಂದ ಬಂದಿದ್ದರು ಎಂದು ಎಂಎಲ್‌ಸಿ ರಾಜೇಂದ್ರ ಆರೋಪಿಸಿದರು.

ರಾಜೇಂದ್ರ

ಬೆಂಗಳೂರು: ನನ್ನನ್ನು ಕೊಲೆ ಮಾಡಲು (murder attempt) ಸುಪಾರಿ ನೀಡಲಾಗಿದೆ ಎಂದು ಸಚಿವ ಕೆ.ಎನ್ ರಾಜಣ್ಣ (minister KN Rajanna) ಅವರ ಪುತ್ರ, ವಿಧಾನಪರಿಷತ್ ಸದಸ್ಯ ರಾಜೇಂದ್ರ (MLC Rajendra) ಅವರು ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಡಿಜಿಪಿ ಕಚೇರಿಗೆ ತೆರಳಿ ಇಂದು ಅವರು ದೂರು ನೀಡಿದರು. ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿ ವಿವರ ನೀಡಿದರು. 'ಕಳೆದ ಒಂದು ವಾರ ಅಥವಾ ಹತ್ತು ದಿನದಿಂದ ಇಂತಹ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ನಾನು ಡಿಜಿಪಿ ಅವರನ್ನು ಭೇಟಿ ಮಾಡಿದ್ದೇನೆ. ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂಬುದರ ತನಿಖೆ ಆಗಬೇಕು ಅಂತ ಗೃಹ ಸಚಿವರಿಗೆ ಮನವಿ ನೀಡಿದ್ದೆ. ಈಗ ಡಿಜಿಪಿ ಅವರನ್ನು ಭೇಟಿ ಮಾಡಿ ದೂರು ನೀಡಿದ್ದೇನೆ' ಎಂದರು.
ನನ್ನ ಮೇಲೆ ಹನಿಟ್ರ್ಯಾಪ್ ಆಗಿಲ್ಲ. ಆದರೆ ನನಗೆ ಫೋನ್ ಕರೆಗಳು ಬರ್ತಾ ಇದ್ದವು. ಕಳೆದ ನವೆಂಬರ್ 16ರಂದು ಮಗಳ ಹುಟ್ಟುಹಬ್ಬ ಇತ್ತು. ಅವತ್ತು ಮನೆಗೆ ಶಾಮಿಯಾನ ಹಾಕಲು ಬಂದವರು ನನ್ನ ಮೇಲೆ ದಾಳಿ ಮಾಡುವ ಉದ್ದೇಶದಿಂದ ಬಂದಿದ್ದರು ಎಂದು ಆರೋಪಿಸಿದರು. ಅಂದು ಅವರು ಕೊಲೆ ಮಾಡಬೇಕು ಅಂತ ಮನೆಗೆ ಬಂದಿರುತ್ತಾರೆ. ಈ ವಿಚಾರ ನನಗೆ ಜನವರಿಯಲ್ಲಿ ಗೊತ್ತಾಗುತ್ತೆ. ಇದಕ್ಕೆ ಸಂಬಂಧಿಸಿದಂತೆ ಒಂದು ವಾಯ್ಸ್ ರೆಕಾರ್ಡ್ ಬರುತ್ತದೆ. ನನ್ನ ಸೋರ್ಸ್ ಮೂಲಕ ವಿಚಾರ ಗೊತ್ತಾಗುತ್ತದೆ. ಆ ವಾಯ್ಸ್ ಮೆಸೇಜ್‌ನಲ್ಲಿ 5 ಲಕ್ಷ ಹಣ ನೀಡಿರೋದು ಗೊತ್ತಾಗುತ್ತದೆ. ನನ್ನ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಇದೆಲ್ಲ ವಿಚಾರವನ್ನು ನಾನು ಡಿಜಿಪಿ ಅವರಿಗೂ ಹೇಳಿದ್ದೇನೆ. ನಿಮ್ಮ ವ್ಯಾಪ್ತಿಯಲ್ಲಿ ಆಗಿದ್ದು, ಹಾಗಾಗಿ ಅಲ್ಲಿಯ ಎಸ್‌ಪಿಗೆ ಸೂಚನೆ ನೀಡುತ್ತೇನೆ ಅಂದಿದ್ದಾರೆ. ತುಮಕೂರು ಎಸ್‌ಪಿಗೆ ಬಹುಶಃ ಹೇಳ್ತಾರೆ. ಅಲ್ಲಿಯೇ ತನಿಖೆ ಮಾಡ್ತಾರೆ ಅಂತ ಹೇಳಿದ್ದಾರೆ ಎಂದು ತಿಳಿಸಿದರು. ಹನಿಟ್ರ್ಯಾಪ್ ಬಗ್ಗೆ ನಾನು ಯಾವುದೇ ದೂರನ್ನು ನೀಡಿಲ್ಲ. ನನ್ನ ಕೊಲೆಗೆ ಸುಪಾರಿ ಪಡೆದಿದ್ದಾರೆ ಅಂತ ದೂರು ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕೆಲ ದಿನಗಳ ಹಿಂದೆ ವಿಧಾನಸಭೆಯಲ್ಲಿ ಮಾತನಾಡಿದ್ದ ಸಚಿವ ರಾಜಣ್ಣ, ಹನಿಟ್ರ್ಯಾಪ್ ಪ್ರಯತ್ನ ನಡೆದಿತ್ತು ಎಂಬುದನ್ನು ಬಹಿರಂಗಪಡಿಸಿದ್ದರು. ನಿರಂತರವಾಗಿ ಫೋನ್ ಕರೆ ಮಾಡಲಾಗಿತ್ತು. ವಿಡಿಯೋ ಕಾಲ್ ಮೂಲಕ ಹನಿಟ್ರ್ಯಾಪ್ ಮಾಡಲು ಯತ್ನ ನಡೆದಿತ್ತು ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ: Honey trap Case: ಹನಿಟ್ರ್ಯಾಪ್ ತನಿಖೆಗೆ ಕೋರಿದ ಪಿಐಎಲ್ ವಜಾ ಮಾಡಿದ ಸುಪ್ರೀಂ ಕೋರ್ಟ್