IPL 2025: ಎಂಎಸ್ ಧೋನಿ ಐಪಿಎಲ್ ವೃತ್ತಿ ಜೀವನಕ್ಕೆ ವಿದಾಯ ಹೇಳುವ ಸಮಯ ಬಂದಾಯ್ತು!
When MS Dhoni IPL Retirement?: ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂಎಸ್ ಧೋನಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ನಿವೃತ್ತಿ ಹಂಚಿನಲ್ಲಿದ್ದಾರೆ. ಪ್ರಸಕ್ತ ಆವೃತ್ತಿಯ ಬಳಿಕ ಎಂಎಸ್ ಧೋನಿ ಐಪಿಎಲ್ ವೃತ್ತಿ ಜೀವನಕ್ಕೆ ವಿದಾಐ ಹೇಳುವ ಸಾಧ್ಯತೆ ಇದೆ. ಇದಕ್ಕೆ ಸಾಕ್ಷಿ ಇಲ್ಲಿದೆ.

ಎಂಎಸ್ ಧೋನಿ

ಚೆನ್ನೈ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪ್ರಮುಖ ಆಕರ್ಷಣೆಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಹಾಗೂ ʻಥಲಾʼ ಎಂದೇ ಖ್ಯಾತಿಯ ಎಂಎಸ್ ಧೋನಿ (MS Dhoni) ಕೂಡ ಒಬ್ಬರು. ಏಕೆಂದರೆ, ಕಳೆದ ಐದು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕಿಕೆಟ್‌ಗೆ ವಿದಾಯ ಹೇಳಿದ್ದ ಮಿಸ್ಟರ್ ಕೂಲ್ ಕ್ಯಾಪ್ಟನ್, ಅಂದಿನಿಂದ ಇಲ್ಲಿಯವರೆಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಐಪಿಎಲ್ ಟೂರ್ನಿಯಲ್ಲಿ ತಲ್ಲೀನರಾಗಿದ್ದಾರೆ. ಆದರೆ, ಎಂಎಸ್‌ಡಿಯ ಐಪಿಎಲ್ ನಿವೃತ್ತಿ ಬಗ್ಗೆ ಸದ್ಯ ಸಾಕಷ್ಟು ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿವೆ.
ಇದಕ್ಕೆ ಸಾಕಷ್ಟಿಯೆಂಬಂತೆ ಶನಿವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಎಂಎಸ್ ಧೋನಿಯ ಇಡೀಗ ಕುಟುಂಬ ಆಗಮಿಸಿದೆ. ಸಾಮಾನ್ಯವಾಗಿ ಎಂಎಸ್ ಧೋನಿಯವರ ಪತ್ನಿ ಮತ್ತು ಪುತ್ರಿ ಪಂದ್ಯದ ವೇಳೆ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಈ ಬಾರಿ ಎಂಎಸ್ ಧೋನಿಯ ಅಪ್ಪ-ಅಮ್ಮ ತಮ್ಮ ಮಗನ ಪಂದ್ಯವನ್ನು ವೀಕ್ಷಿಸಲು ಚೆನ್ನೈಗೆ ಬಂದಿರುವುದು ಅಭಿಮಾನಿಗಳಿಗೆ ಹಲವು ಅನುಮಾನಗಳನ್ನು ಮೂಡಿಸಿವೆ. ಬಹುಶಃ ಡೆಲ್ಲಿVS ಚೆನ್ನೈ ಪಂದ್ಯದ ಬಳಿಕ ಎಂಎಸ್ ಧೋನಿ ಪಾಲಿಗೆ ವಿಶೇಷ ಘಟನೆ ನಡೆಯಬಹುದಾ? ಅಥವಾ ಸಿಎಸ್‌ಕೆ ಮಾಜಿ ನಾಯಕ ಐಪಿಎಲ್ ವೃತ್ತಿ ಜೀವನಕ್ಕೆ ವಿದಾಯ ಹೇಳಬಹುದಾ? ಎಂಬಂತೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳನ್ನು ನಡೆಸುತ್ತಿದ್ದಾರೆ.
ತವರಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಹ್ಯಾಟ್ರಿಕ್ ಸೋಲಿನ ಮುಖಭಂಗ, ಡೆಲ್ಲಿಗೆ ಸತತ ಮೂರನೇ ಜಯ!
ಆದರೆ, ಪಂದ್ಯದ ಬಳಿಕ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ಅಂದ ಹಾಗೆ ಎಂಎಸ್ ಧೋನಿ ಪಾಲಿಗೆ ಇದು ಕೊನೆಯ ಐಪಿಎಲ್ ಟೂರ್ನಿಯಾಗುವ ಸಾಧ್ಯತೆ ಇದೆ. ಈ ಕಾರಣದಿಂದಲೇ ತಮ್ಮ ಪುತ್ರನ ಆಟವನ್ನು ಕಣ್ತುಂಬಿಸಿಕೊಳ್ಳಲು ಎಂಎಸ್ ಧೋನಿ ಅವರ ಅಪ್ಪ-ಅಮ್ಮ ಮೈದಾನಕ್ಕೆ ಬಂದಿರಬಹುದು. ಸದ್ಯ ಎಂಎಸ್ ಧೋನಿಗೆ 43 ವರ್ಷ ವಯಸ್ಸಾಗಿದ್ದು, ಅವರು ತಮ್ಮ ವೃತ್ತಿ ಜೀವನದ ಅಂತಿಮ ಹಂತದಲ್ಲಿದ್ದಾರೆ. ಈ ಬಾರಿ ಟೂರ್ನಿಯ ಅಂತ್ಯಕ್ಕೆ ಎಂಎಸ್ ಧೋನಿಯ ಐಪಿಎಲ್ ಭವಿಷ್ಯದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಚೆನ್ನೈ ಸೂಪರ್ ಕಿಂಗ್ಸ್‌ಗೆ ಹ್ಯಾಟ್ರಿಕ್ ಸೋಲು
ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ, ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಕೆಎಲ್ ರಾಹುಲ್ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 183 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್‌ಗೆ 184 ರನ್‌ಗಳನ್ನು ಸವಾಲಿನ ಗುರಿಯನ್ನು ನೀಡಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ಸಿಎಸ್‌ಕೆ, ವಿಜಯ್ ಶಂಕರ್ ಅರ್ಧಶತಕದ ಹೊರತಾಗಿಯೂ ಇತರೆ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 5 ವಿಕೆಟ್‌ಗಳ ನಷ್ಟಕ್ಕೆ 159 ರನ್‌ಗಳಿಗೆ ಸೀಮಿತವಾಯಿತು. ಎಂಎಸ್ ಧೋನಿ ಕೊನೆಯಲ್ಲಿ ಅಜೇಯ 30 ರನ್‌ಗಳಿಸಿದರು. ಆದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಸಿಎಸ್‌ಜೆ 25 ರನ್‌ಗಳಿಂದ ಸೋಲು ಒಪ್ಪಿಕೊಂಡಿತು.