Bengaluru Rain: ಬೆಂಗಳೂರಿನಲ್ಲಿ ತಂಪೆರೆದ ಬೇಸಗೆ ಮಳೆ; ಹಲವು ಕಡೆ ಕೆರೆಯಂತಾದ ರಸ್ತೆ
Bengaluru News: ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಬೆಂಗಳೂರಿಗರಿಗೆ ಗುರುವಾರ (ಏ. 3) ದಿಢೀರ್ ಸುರಿದ ಮಳೆ ತಂಪೆರೆದಿದೆ. ನಗರದ ಹಲವೆಡೆ ಭಾರಿ ಮಳೆ ಸುರಿದಿದ್ದು, ವಾಹನ ಸವಾರರು, ಸಾರ್ವಜನಿಕರು ಪರದಾಡಿದರು. ಅಲ್ಲಲ್ಲಿ ಟ್ರಾಫಿಕ್ ಜಾಮ್ ಕೂಡ ಕಂಡುಬಂತು.

ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆ.

ಬೆಂಗಳೂರು: ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಬೆಂಗಳೂರಿಗರಿಗೆ ಗುರುವಾರ (ಏ. 3) ದಿಢೀರ್ ಸುರಿದ ಮಳೆ ತಂಪೆರೆದಿದೆ (Bengaluru Rain). ನಗರದ ಹಲವೆಡೆ ಭಾರಿ ಮಳೆ ಸುರಿದಿದ್ದು, ವಾಹನ ಸವಾರರು, ಸಾರ್ವಜನಿಕರು ಪರದಾಡಿದರು. ಮೆಜೆಸ್ಟಿಕ್, ವಿಧಾನಸೌಧ, ಶಾಂತಿನಗರ, ಮಲ್ಲೇಶ್ವರಂ, ಪ್ರೀಡಂಪಾರ್ಕ್, ರಿಚ್‌ಮಂಡ್ ಟೌನ್, ಟೌನ್ ಹಾಲ್, ಲಾಲ್‌ಭಾಗ್, ಬಿಟಿಎಂ ಲೇಔಟ್, ರಾಜರಾಜೇಶ್ವರಿ ನಗರ, ಸರ್ಜಾಪುರ ಮುಂತಾದ ಕಡೆಗಳಲ್ಲಿ ಮಧ್ಯಾಹ್ನ ಧಾರಾಕಾರ ಮಳೆ ಸುರಿಯಿತು. ಗುರುವಾರ ಬೆಂಗಳೂರು ಸಹಿತ ಕರಾವಳಿಯ ವಿವಿಧ ಜಿಲ್ಲೆಗಳು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಈ ಹಿಂದೆಯೇ ನೀಡಿತ್ತು(Weather Forecast). ಅದರಂತೆ ಬೆಂಗಳೂರಿನಲ್ಲಿ ಭಾರಿ ವರ್ಷಧಾರೆಯಾಗಿದೆ.
ಭಾರಿ ಮಳೆಯಿಂದಾಗಿ ನಗರದ ವಿವಿಧ ರಸ್ತೆಗಳಲ್ಲಿ ನೀರು ತುಂಬಿ ಕೆರೆಯಂತಾದವು. ವಾಹನ ಸವಾರರು ಸರಾಗವಾಗಿ ಸಂಚರಿಸಲು ಸಾಧ್ಯವಾಗದೆ ಪರದಾಡಿದರು. ಅಲ್ಲಲ್ಲಿ ಟ್ರಾಫಿಕ್ ಜಾಮ್ ಕೂಡ ಕಂಡುಬಂತು.
ಈ ಸುದ್ದಿಯನ್ನೂ ಓದಿ: Drinking Water: ಕೆಆರ್‌ಎಸ್‌ನಲ್ಲಿ 27 ಟಿಎಂಸಿ ಅಡಿ ನೀರು, ಈ ಬೇಸಿಗೆಯಲ್ಲಿ ಬೆಂಗಳೂರಿಗೆ ಜಲಕ್ಷಾಮ ಇಲ್ಲ
ರಸ್ತೆಗೆ ಉರುಳಿಬಿದ್ದ ಮರ
ಇನ್ನು ರಾಜಾಜಿನಗರದಲ್ಲಿ ಭಾರಿ ಮಳೆಯಿಂದಾಗಿ ಮರಗಳು ಮತ್ತು ವಿದ್ಯುತ್ ಕಂಬಗಳು ರಸ್ತೆ ಮೇಲೆ ಉರುಳಿ ಬಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದ್ದು, ಬಿಬಿಎಂಪಿ, ಬೆಸ್ಕಾಂ ಸಿಬ್ಬಂದಿ ಕೂಡಲೇ ಧಾವಿಸಿ ತೆರವುಗೊಳಿಸಿದ್ದಾರೆ.

ಟ್ರಾಫಿಕ್ ಪೊಲೀಸರು ಹೇಳಿದ್ದೇನು?
ಎಚ್ಎಎಲ್ ಹಳೆಯ ವಿಮಾನ ನಿಲ್ದಾಣ ರಸ್ತೆಯಿಂದ ದೊಮ್ಮಲೂರ್ ಫೈಓವರ್ ಕಡೆಗೆ, ಸ್ವಾಮಿ ವಿವೇಕಾನಂದ ರಸ್ತೆಯಿಂದ 80 ಅಡಿ ರಸ್ತೆ ಕಡೆಗೆ ಹಾಗೂ ವಸಂತನಗರ ಅಂಡರ್ ಪಾಸ್ ಪ್ರದೇಶಗಳಲ್ಲಿ ಮಳೆ ನೀರು ನಿಂತಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಜತೆಗೆ ಐಟಿಐ ಭವನದಿಂದ ಬಾಣಸವಾಡಿ ಸರ್ವಿಸ್ ರಸ್ತೆ ಕಡೆಗಳಲ್ಲಿ ವಾಹನಗಳ ದಟ್ಟಣೆ ಇದೆ. ಪುಟ್ಟೇನಹಳ್ಳಿ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತಿದೆ. ಉದಯ ಟಿವಿ ಜಂಕ್ಷನ್‌ನಲ್ಲಿ ಮಳೆ ನೀರು ನಿಂತಿರುವುದರಿಂದ ಜಯಮಹಲ್ ರಸ್ತೆ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಸೂಚನೆ ನೀಡಿದ್ದಾರೆ.
ನಾಳೆಯೂ ಮಳೆ ಸಾಧ್ಯತೆ
ಏ. 4ರಂದು ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಸ್ಥಳಗಳಲ್ಲಿ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಉತ್ತರ ಒಳನಾಡಿನ ವಿಜಯಪುರ, ಕಲಬುರಗಿ, ಬೆಳಗಾವಿ, ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗಲಿದೆ. ಹಾಗೆಯೇ ದಕ್ಷಿಣ ಒಳನಾಡಿನ ಹಾಸನ, ಮೈಸೂರು, ಚಿತ್ರದುರ್ಗ, ತುಮಕೂರು, ಕೊಡಗು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಹಲವೆಡೆ ಗಂಟೆಗೆ 40-50 ಕಿ.ಮೀ. ವೇಗದ ಗಾಳಿಯೊಂದಿಗೆ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.