Tumkur News: ತುಮಕೂರು ಜಿಲ್ಲಾ ವಕೀಲರ ಸಂಘದ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ
Tumkur News: ತುಮಕೂರು ಜಿಲ್ಲಾ ವಕೀಲರ ಸಂಘದ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇ.33ರಷ್ಟು ಮೀಸಲು ಕಲ್ಪಿಸಲು ವಕೀಲರ ಸಂಘಕ್ಕೆ ಆದೇಶಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ವಕೀಲರ ಸಂಘದ ಚುನಾವಣೆಗೆ ತಡೆಯಾಜ್ಞೆ ನೀಡಿದೆ.


ತುಮಕೂರು: ತುಮಕೂರು ಜಿಲ್ಲಾ ವಕೀಲರ ಸಂಘದ ಚುನಾವಣೆಗೆ (tumkur district bar association) ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಏ. 5ರಂದು ನಡೆಯಬೇಕಿತ್ತು, ಆದರೆ, ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇ.33ರಷ್ಟು ಮೀಸಲು ಕಲ್ಪಿಸಲು ವಕೀಲರ ಸಂಘಕ್ಕೆ ಆದೇಶಿಸುವಂತೆ ಕೋರಿ ವಕೀಲರಾದ ಮೋಹನ್ ಕುಮಾರಿ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ (karnataka High court) ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಸಂಘದ ಚುನಾವಣೆಗೆ ತಡೆಯಾಜ್ಞೆ ನೀಡಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲೆ ಕೆ.ಎಸ್.ವಿದ್ಯಾಶ್ರೀ , ಮಹಿಳಾ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಮೀಸಲು ಕಲ್ಪಿಸಲು ಕೋರಿ ಅರ್ಜಿದಾರರು ತುಮಕೂರು ವಕೀಲರ ಸಂಘಕ್ಕೆ ಮನವಿ ಪತ್ರವನ್ನು ಸಲ್ಲಿಸಿದ್ದರು. ಮಹಿಳೆಯರಿಗೆ ಮೀಸಲಾತಿ ಒದಗಿಸಲು ಉಪ ಕಾನೂನುಗಳನ್ನು ತಿದ್ದುಪಡಿ ಮಾಡಲು ಸಂಘಕ್ಕೆ ಸಾಕಷ್ಟು ಸಮಯವಿತ್ತು. ಆದರೂ ಅರ್ಜಿದಾರರ ಮನವಿ ತಿರಸ್ಕರಿಸಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಶೇ.33 ಸ್ಥಾನ ಮಹಿಳಾ ಅಭ್ಯರ್ಥಿಗಳಿಗೆ ನೀಡಲು ಮನವಿ
ತುಮಕೂರು ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಶೇ.33ರಷ್ಟು ಸ್ಥಾನಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲು ನೀಡಲು ಕೋರಿ ಅರ್ಜಿದಾರರು ಮಾರ್ಚ್ 5ರಂದು ಸಂಘದ ಅಧ್ಯಕ್ಷರು ಮತ್ತು ಚುನಾವಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದರು.ಸಂಘದ ಬೈಲಾ-1960ರ ನಿಯಮ 7ರ ಪ್ರಕಾರ ಕಾರ್ಯಕಾರಿ ಸಮಿತಿಯ ಒಂದು ಸದಸ್ಯ ಸ್ಥಾನವನ್ನು ಈಗಾಗಲೇ ಮಹಿಳೆಗೆ ಮೀಸಲಿಡಲಾಗಿದೆ. ಶೇ.33ರಷ್ಟು ಮೀಸಲು ಕಲ್ಪಿಸುವ ಕುರಿತು ಉನ್ನತಮಟ್ಟದ ಸಮಿತಿ ನಿರ್ಣಯ ಕೈಗೊಳ್ಳಬೇಕಿದೆ. ಹಾಲಿ ಸಮಿತಿ ಈ ಕುರಿತು ನಿರ್ಧರಿಸುವ ಅಧಿಕಾರವಿಲ್ಲ. ಈ ವಿಚಾರದಲ್ಲಿ ಸಭೆ ಕರೆದು ಚರ್ಚಿಸಲು ಅಗತ್ಯವಾದಷ್ಟು ಸಮಯವಿಲ್ಲ ಎಂದು ಹೇಳಿತ್ತು. ಈ ಕ್ರಮ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರ ನಡೆಸಿದ ಹೈಕೋರ್ಟ್ ತುಮಕೂರು ಜಿಲ್ಲಾ ವಕೀಲರ ಸಂಘದ ಚುನಾವಣೆಗೆ ತಡೆಯಾಜ್ಞೆ ನೀಡಿದೆ.
ಈ ಸುದ್ದಿಯನ್ನೂ ಓದಿ |ರೈತ ಆತ್ಮಹತ್ಯೆ: ಪರಿಹಾರಕ್ಕೆ ಆಗ್ರಹಿಸಿ ತಹಸೀಲ್ದಾರ್ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ