ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Maha Kumbh Mela: 45 ದಿನಗಳ ಮಹಾ ಕುಂಭ ಮೇಳಕ್ಕೆ ಇಂದು ತೆರೆ, ಕೋಟಿ ಜನರ ಪುಣ್ಯಸ್ನಾನ ನಿರೀಕ್ಷೆ

ಮಹಾ ಕುಂಭ, ಮಹಾ ಶಿವರಾತ್ರಿಯಂದು (Maha Shivratri) ಅಂತಿಮ ಸ್ನಾನದೊಂದಿಗೆ ಸಂಪನ್ನಗೊಳ್ಳಲಿದೆ. ಇದುವರೆಗೂ ದಾಖಲೆಯ 63.36 ಕೋಟಿ ಜನರು ಇಲ್ಲಿಗೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ (Triveni Sangam) ಪವಿತ್ರ ಸ್ನಾನ ಮಾಡಿದ್ದಾರೆ ಎಂದು ತಿಳಿಸಲಾಗಿದೆ.

45 ದಿನಗಳ ಮಹಾ ಕುಂಭ ಮೇಳಕ್ಕೆ ಇಂದು ತೆರೆ, ಕೋಟಿ ಜನರ ಪುಣ್ಯಸ್ನಾನ ನಿರೀಕ್ಷೆ

ಹರೀಶ್‌ ಕೇರ ಹರೀಶ್‌ ಕೇರ Feb 26, 2025 6:59 AM

ನವದೆಹಲಿ: 45 ದಿನಗಳ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ (Prayagraj) ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ (Maha Kumbh Mela) ಇಂದು ವೈಭವದ ತೆರೆ ಬೀಳಲಿದೆ. ವಿಶ್ವದ ಅತಿದೊಡ್ಡ ಧಾರ್ಮಿಕ ಸಂಗಮಗಳಲ್ಲಿ ಒಂದಾದ ಮಹಾ ಕುಂಭ, ಮಹಾ ಶಿವರಾತ್ರಿಯಂದು (Maha Shivratri) ಅಂತಿಮ ಸ್ನಾನದೊಂದಿಗೆ ಸಂಪನ್ನಗೊಳ್ಳಲಿದೆ. ಇದುವರೆಗೂ ದಾಖಲೆಯ 63.36 ಕೋಟಿ ಜನರು ಇಲ್ಲಿಗೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ (Triveni Sangam) ಪವಿತ್ರ ಸ್ನಾನ ಮಾಡಿದ್ದಾರೆ ಎಂದು ತಿಳಿಸಲಾಗಿದೆ.

ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಸ್ಥಳವಾದ ಪ್ರಯಾಗ್‌ರಾಜ್‌ನಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಈ ಮಹಾ ಉತ್ಸವಕ್ಕೆ ತೆರೆ ಬೀಳುವ ಸಂದರ್ಭದಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿದೆ. ಸೋಮವಾರದಿಂದ ಮೇಳ ಮೈದಾನದಲ್ಲಿ ಅಂತಿಮ "ಅಮೃತ ಸ್ನಾನ"ಕ್ಕಾಗಿ ಜನಸಂದಣಿ ಹೆಚ್ಚುತ್ತಲೇ ನಡೆದಿದೆ. ಇದು ಮುಂಜಾನೆಯಿಂದಲೇ ತ್ರಿವೇಣಿ ಸಂಗಮದತ್ತ ಜನ ಗುಂಪುಗುಂಪಾಗಿ ಧಾವಿಸುತ್ತಿದ್ದಾರೆ.

ಜನಸಂದಣಿಯ ನಿರ್ವಹಣೆ, ನೈರ್ಮಲ್ಯದ ನಿರ್ವಹಣೆ, ಸಾಕಷ್ಟು ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡಿರುವ ಸಮಗ್ರ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಭದ್ರತೆ, ಸಾರಿಗೆ ಮತ್ತು ಎಮರ್ಜೆನ್ಸಿ ವ್ಯವಸ್ಥೆಗಳನ್ನು ವ್ಯಾಪಕವಾಗಿ ಮಾಡಲಾಗಿದೆ. ಜನವರಿ 26ರಂದು ಮೌನಿ ಅಮವಾಸ್ಯೆಯ ಸಂದರ್ಭದಲ್ಲಿ ನಡೆದ ಕಾಲ್ತುಳಿತದ ನಂತರ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಹೆಚ್ಚಿನ ಗಮನ ನೀಡಲಾಗಿದೆ. ಕಾಲ್ತುಳಿತದಲ್ಲಿ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ನಡುವೆ ಕುಂಭ ಮೇಳದ ಟೆಂಟ್‌ಗಳಲ್ಲಿ ಹಲವು ಸಣ್ಣಪುಟ್ಟ ಬೆಂಕಿ ಆಕಸ್ಮಿಕಗಳೂ ಸಂಭವಿಸಿವೆ.

ವಾರಾಂತ್ಯದ ನಂತರವೂ ಭಕ್ತರ ಸಂಖ್ಯೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ. ಮಂಗಳವಾರ ಸಂಜೆಯಿಂದ, ಜನಪ್ರವಾಹದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಜನಸಂದಣಿಯನ್ನು ನೋಡಿದ ಆಡಳಿತವು ಸಂಚಾರವನ್ನು ನಿಯಂತ್ರಿಸಲು ಮತ್ತು ಭಕ್ತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿನ್ನೆ ಸಂಜೆ 4 ಗಂಟೆಯಿಂದ ವಾಹನ ರಹಿತ ವಲಯವನ್ನು ಮತ್ತೊಮ್ಮೆ ಘೋಷಿಸಿದೆ. ಸಂಗಮದಿಂದ 10 ಕಿ.ಮೀ ದೂರದಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.

ಅಕ್ಷಯ್ ಕುಮಾರ್, ಕತ್ರಿನಾ ಕೈಫ್ ಮತ್ತು ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ತಡಾನಿ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ಸಹ ಈ ಭವ್ಯ ಕಾರ್ಯಕ್ರಮಕ್ಕೆ ಆಗಮಿಸಿದರು. ಶನಿವಾರದವರೆಗೆ 64 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದರೆ, ಸೋಮವಾರ 1.30 ಕೋಟಿಗೂ ಅಧಿಕ ಜನರು ಸ್ನಾನ ಮಾಡಿದ್ದಾರೆ.

ಕುಂಭ ಮೇಳ ಸಾಕಷ್ಟು ರಾಜಕೀಯ ವಾದವಿವಾದಗಳನ್ನೂ ಹುಟ್ಟುಹಾಕಿದೆ. ಪ್ರತಿಪಕ್ಷ ಮತ್ತು ಬಿಜೆಪಿಯ ನಾಯಕರ ನಡುವೆ ವಾಗ್ವಾದ ನಡೆದಿದೆ. ಪ್ರತಿಪಕ್ಷಗಳು ಪದೇ ಪದೇ ಸರ್ಕಾರವನ್ನು ಗುರಿಯಾಗಿಸಿಕೊಂಡು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಧರ್ಮ ಮತ್ತು ಸಂಸ್ಕೃತಿಯನ್ನು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದು ಗುಲಾಮರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಪ್ರಧಾನಿ ಮೋದಿ ಟೀಕಿಸಿದರು.

ಇನ್ನೊಂದು ದೊಡ್ಡ ವಿವಾದವೆಂದರೆ ಸಂಗಮದ ನೀರಿನಲ್ಲಿ ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಬೃಹತ್‌ ಪ್ರಮಾಣದಲ್ಲಿದೆ ಮತ್ತು ಸ್ನಾನಕ್ಕೆ ಯೋಗ್ಯವಾಗಿಲ್ಲ ಎಂದು ವರದಿಗಳು ಸೂಚಿಸಿದವು. ಟೀಕಾಕಾರರು ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿ ಯೋಗಿ ಆದಿತ್ಯನಾಥ್ ಅದನ್ನು ನಿರಾಕರಿಸಿದರು.

ಪುರಾತನ ಹಿಂದೂ ಗ್ರಂಥಗಳಲ್ಲಿ ಉಲ್ಲೇಖಿಸಿದಂತೆ ಸಮುದ್ರ ಮಥನದ ಸಂದರ್ಭದಲ್ಲಿ ಅಮೃತದ ಹನಿಗಳು ನಾಲ್ಕು ಕಡೆಗಳಲ್ಲಿ ಭೂಮಿಗೆ ಬಿದ್ದವು. ಪ್ರಯಾಗ್‌ರಾಜ್‌ ಅವುಗಳಲ್ಲಿ ಒಂದು. ಪ್ರಯಾಗ್‌ರಾಜ್‌ನಲ್ಲಿ ಇದೀಗ ನಡೆಯುತ್ತಿರುವ ಕುಂಭ ಮೇಳ 144 ವರ್ಷಕ್ಕೊಮ್ಮೆ ಆಗಮಿಸುತ್ತದೆ. ಈ ಸಂದರ್ಭದಲ್ಲಿ ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನಿವಾರಣೆಯಾಗಿ ಮೋಕ್ಷ ದೊರೆಯುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ : Maha Kumbh Mela 2025: ಕುಂಭ, ಗಂಗಾ, ಯಮುನಾ, ಸರಸ್ವತಿ...ಮಹಾ ಕುಂಭಮೇಳದ ವೇಳೆ ಪ್ರಯಾಗ್‌ರಾಜ್‌ನಲ್ಲಿ 12 ಶಿಶುಗಳ ಜನನ