ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Ranjana Natchiyaar: ಬಿಜೆಪಿಗೆ ಗುಡ್‌ಬೈ ಹೇಳಿ ನಟ ವಿಜಯ್‌ TVK ಪಕ್ಷ ಸೇರಿದ ನಟಿ

ನಟಿ ರಂಜನಾ ನಾಚ್ಚಿಯಾರ್( Ranjana Natchiyaar) ಬುಧವಾರ ಬಿಜೆಪಿ ತೊರೆದು ಸಹ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ(TVK) ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಎಂಟು ವರ್ಷಗಳ ಹಿಂದೆ ಭಾರತೀಯ ಜನತಾ ಪಕ್ಷವನ್ನು ಸೇರಿದ್ದ ಅವರು, ಇತ್ತೀಚಿನ ದಿನಗಳಲ್ಲಿ ಹಿಂದಿ ಹೇರಿಕೆ ಸೇರಿದಂತೆ ಕೇಂದ್ರ ಸರ್ಕಾರದ ಹತ್ತು ಹಲವು ನೀತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಬಿಜೆಪಿಗೆ ಗುಡ್‌ಬೈ ಹೇಳಿದ ನಟಿ; TVKಗೆ ಸೇರ್ಪಡೆ

Profile Rakshita Karkera Feb 26, 2025 1:42 PM

ಚೆನ್ನೈ: ಹಿಂದಿ ಭಾಷಾ ಹೇರಿಕೆ(Hindi Imposition) ವಿಚಾರ ಭಾರೀ ಸದ್ದು ಮಾಡುತ್ತಿರುವ ಬೆನ್ನಲ್ಲೇ ತಮಿಳುನಾಡು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುವ ಬೆಳವಣಿಗೆಯೊಂದು ನಡೆದಿದೆ. ನಟಿ ರಂಜನಾ ನಾಚ್ಚಿಯಾರ್( Ranjana Natchiyaar) ಬುಧವಾರ ಬಿಜೆಪಿ ತೊರೆದು ಸಹ ನಟ ವಿಜಯ್(Actor Vijay)ಅವರ ತಮಿಳಗ ವೆಟ್ರಿ ಕಳಗಂ(TVK) ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಎಂಟು ವರ್ಷಗಳ ಹಿಂದೆ ಭಾರತೀಯ ಜನತಾ ಪಕ್ಷವನ್ನು ಸೇರಿದ್ದ ಅವರು, ಇತ್ತೀಚಿನ ದಿನಗಳಲ್ಲಿ ಹಿಂದಿ ಹೇರಿಕೆ ಸೇರಿದಂತೆ ಕೇಂದ್ರ ಸರ್ಕಾರದ ಹತ್ತು ಹಲವು ನೀತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ನಿನ್ನೆ ಅವರು ಬಿಜೆಪಿ ತೊರೆದಿದ್ದು, ಇಂದು ಟಿವಿಕೆ ಸೇರ್ಪಡೆಗೊಂಡಿದ್ದಾರೆ.

ಚೆನ್ನೈ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ವಿಜಯ್ ಆಯೋಜಿಸಿದ್ದ ಟಿವಿಕೆ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಇಂದು ಬೆಳಗ್ಗೆ ಉಪಸ್ಥಿತರಿದ್ದ ರಂಜನಾ ನಾಚ್ಚಿಯಾರ್, ತಮ್ಮ ಹೊಸ ರಾಜಕೀಯ ಮುಖ್ಯಸ್ಥ ವಿಜಯ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅವರನ್ನು ಮುಂದಿನ ಎಂಜಿಆರ್ ಎಂದು ಕರೆದರು. ವಿಜಯ್ ಅವರ 'ರಾಷ್ಟ್ರೀಯತೆ ಮತ್ತು ದ್ರಾವಿಡ ನೀತಿಗಳು ನನ್ನ ಮನಸ್ಸಿನಲ್ಲಿ ಆಳವಾಗಿ ಪ್ರತಿಧ್ವನಿಸಿತು ಮತ್ತು ಟಿವಿಕೆ ತಮ್ಮ ರಾಜಕೀಯ ಭವಿಷ್ಯಕ್ಕೆ ಆದರ್ಶ ವೇದಿಕೆ. ವಿಜಯ್ ತಮಿಳುನಾಡಿಗೆ ಅತಿದೊಡ್ಡ ಭರವಸೆ ಎಂದಿದ್ದಾರೆ.

ಇದೇ ವೇಳೆ ಅವರು ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯನ್ನು ಟೀಕಿಸಿದ ಅವರು, ಎಲ್ಲಾ ಮಕ್ಕಳು ಭಾಷಾಶಾಸ್ತ್ರಜ್ಞರಲ್ಲ... ಮತ್ತು ಮಕ್ಕಳು ಬೇರೆ ಭಾಷೆಯನ್ನು ಕಲಿಯುವಂತೆ ಒತ್ತಾಯಿಸಬೇಕಾಗಿಲ್ಲ. ಯಾವುದೇ ತೀವ್ರ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.

ಇನ್ನು ನಿನ್ನೆ ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ ರಂಜನಾ, ಬಿಜೆಪಿಯ ತ್ರಿಭಾಷಾ ಸೂತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಬ್ಬ ತಮಿಳು ಮಹಿಳೆಯಾಗಿ, ತ್ರಿಭಾಷಾ ನೀತಿಯ ಹೇರಿಕೆ, ದ್ರಾವಿಡರ ಕಡೆಗೆ ಹೆಚ್ಚುತ್ತಿರುವ ದ್ವೇಷ ಮತ್ತು ತಮಿಳುನಾಡಿನ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ನಿರ್ಲಕ್ಷಿಸುವುದನ್ನು ನಾನು ಒಪ್ಪಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Hindi Imposition: ಕೇಂದ್ರ ವರ್ಸಸ್‌ ತಮಿಳುನಾಡು ಸರ್ಕಾರ- ಹಿಂದಿ ಹೇರಿಕೆ ಎಂದ ಸ್ಟ್ಯಾಲಿನ್‌ಗೆ ಪ್ರಧಾನ್‌ ಟಾಂಗ್‌

ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಭುಗಿಲೆದ್ದ ಆಕ್ರೋಶ

ರಾಷ್ಟ್ರೀಯ ಶಿಕ್ಷಣ ನೀತಿ (NEP-2020)ಗೆ ವಿರೋಧ ವ್ಯಕ್ತಪಡಿಸುವ ತಮಿಳು ನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಕಿಡಿ ಕಾರಿದ್ದಾರೆ. ತಮಿಳುನಾಡು ಸರ್ಕಾರ ಎನ್‌ಇಪಿ-2020ನ್ನು ವೀರೋಧಿಸುತ್ತಿದೆ. ರಾಜಕೀಯವಾಗಿ ನೋಡುವುದನ್ನು ಬಿಟ್ಟು ಸರ್ಕಾರ ಯೋಜನೆಯ ಪ್ರಗತಿಶೀಲ ಸುಧಾರಣೆಗಳನ್ನು ವಿಶಾಲ ಮನೋಭಾವದಿಂದ ಕಾಣಬೇಕೆಂದು ಅವರು ಒತ್ತಾಯಿಸಿದ್ದಾರೆ(Hindi Imposition). ವಿರೋಧ ಇರುವುದರಿಂದ ತಮಿಳುನಾಡಿನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಈ ನೀತಿ ನೀಡುವ ಅಪಾರ ಅವಕಾಶಗಳು ಮತ್ತು ಸಂಪನ್ಮೂಲಗಳಿಂದ ವಂಚಿತವಾಗುತ್ತವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಈ ಬಗ್ಗೆ ಸ್ಟಾಲಿನ್‌ ಅವರಿಗೆ ಪತ್ರ ಬರೆದಿರುವ ಧರ್ಮೇಂದ್ರ ಪ್ರಧಾನ್‌ ಯಾವುದೇ ರಾಜ್ಯ ಅಥವಾ ಸಮುದಾಯದ ಮೇಲೆ ಯಾವುದೇ ಭಾಷೆಯನ್ನು ಹೇರುವ ಪ್ರಶ್ನೆಯೇ ಇಲ್ಲಎಂದು ಸ್ಪಷ್ಟವಾಗಿ ಹೇಳಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಅನೇಕ ಬಿಜೆಪಿಯೇತರ ರಾಜ್ಯಗಳು NEP ಯ ಪ್ರಗತಿಪರ ನೀತಿಗಳನ್ನು ಜಾರಿಗೆ ತಂದಿವೆ. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯ ನೀಡುತ್ತದೆ ಎಂದು ಅವರು ಹೇಳಿದ್ದಾರೆ. ಸಮಗ್ರ ಶಿಕ್ಷಣದಂತಹ ಕೇಂದ್ರೀಕೃತ ಬೆಂಬಲಿತ ಕಾರ್ಯಕ್ರಮಗಳು NEP 2020 ನೊಂದಿಗೆ ಹೊಂದಿಕೆಯಾಗುತ್ತವೆ ಮತ್ತು ಪಿಎಂ ಶ್ರೀ ಶಾಲೆಗಳನ್ನು NEP ಮಾದರಿ ಶಾಲೆಗಳೆಂದು ಕಲ್ಪಿಸಲಾಗಿದೆ ಎಂದು ಒತ್ತಿ ಹೇಳಿದ್ದಾರೆ.