ನಾಳೆ ಬಿಸಿಸಿಐ ಸಭೆ; ರೋಹಿತ್, ಕೊಹ್ಲಿ ಟೆಸ್ಟ್ ಭವಿಷ್ಯ ನಿರ್ಧಾರ
ಶ್ರೇಯಸ್ ಅಯ್ಯರ್ ಅವರನ್ನು ಮತ್ತೆ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಗೆ ಸೇರ್ಪಡೆಗೊಳಿಸುವ ಸಾಧ್ಯತೆ ಇದೆ. ಕಳೆದ ವರ್ಷ ಗುತ್ತಿಗೆ ಪಟ್ಟಿಯಿಂದ ಶ್ರೇಯಸ್ ಹೊರಬಿದ್ದಿದ್ದರು. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೇಯಸ್ ಭಾರತದ ಪರ ಗರಿಷ್ಠ ರನ್ ಬಾರಿಸಿದ್ದರು.


ನವದೆಹಲಿ: ನಾಳೆ(ಶನಿವಾರ) ನಡೆಯುವ ಬಿಸಿಸಿಐ ಸಭೆ(BCCI Meeting)ಯಲ್ಲಿ ಕೆಲ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಸಭೆಯಲ್ಲಿ ಮುಖ್ಯವಾಗಿ ವಾರ್ಷಿಕ ಗುತ್ತಿಗೆ ಪಟ್ಟಿ, ರೋಹಿತ್(ohit Sharma) ಮತ್ತು ವಿರಾಟ್(Virat Kohli) ಟೆಸ್ಟ್ ಭವಿಷ್ಯದ ಬಗ್ಗೆ ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಆಯ್ಕೆಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್, ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಮಾ.29ರ ಸಭೆಯಲ್ಲಿ ಸೇರಲಿದ್ದಾರೆ ಎಂದು ಮೂಲಗಳು ಹೇಳಿವೆ.
ರೋಹಿತ್ ಶರ್ಮ ಟೆಸ್ಟ್ ತಂಡದ ನಾಯಕರಾಗಿ ಮುಂದುವರಿಸುವ ಬಗ್ಗೆ ಬಿಸಿಸಿಐ ಅಧಿಕಾರಿಗೆ ಒಲವಿಲ್ಲ ಎನ್ನಲಾಗಿದೆ. ಈ ವರದಿಗಳ ಬೆನ್ನಲ್ಲೇ ರೋಹಿತ್ ಇಂಗ್ಲೆಂಡ್ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದಿದೆ. ಒಂದೊಮ್ಮೆ ರೋಹಿತ್ ಟೆಸ್ಟ್ ಆಡದಿರಲು ನಿರ್ಧರಿಸಿದರೆ ಶುಭಮನ್ ಗಿಲ್ ಟೆಸ್ಟ್ ತಂಡದ ನಾಯಕನಾಗುವ ಸಾಧ್ಯತೆ ಇದೆ. ಅನುಭವಿ ಜಸ್‌ಪ್ರೀತ್ ಬುಮ್ರಾ ಇದ್ದರೂ ಕೂಡ ಅವರು ಆಗಾಗ ಬೆನ್ನುನೋವಿಗೆ ಸಿಲುಕುತ್ತಿರುವುದು ಬಿಸಿಸಿಐಗೆ ಚಿಂತೆಗೀಡು ಮಾಡಿದೆ. ಜಡೇಜಾ ಮತ್ತು ಕೊಹ್ಲಿ ಟೆಸ್ಟ್ ಭವಿಷ್ಯ ಕೂಡ ನಿರ್ಧಾರವಾಗುವ ಸಾಧ್ಯತೆ ಇದೆ.
ಶ್ರೇಯಸ್ ಅಯ್ಯರ್ ಅವರನ್ನು ಮತ್ತೆ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಗೆ ಸೇರ್ಪಡೆಗೊಳಿಸುವ ಸಾಧ್ಯತೆ ಇದೆ. ಕಳೆದ ವರ್ಷ ಗುತ್ತಿಗೆ ಪಟ್ಟಿಯಿಂದ ಶ್ರೇಯಸ್ ಹೊರಬಿದ್ದಿದ್ದರು. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೇಯಸ್ ಭಾರತದ ಪರ ಗರಿಷ್ಠ ರನ್ ಬಾರಿಸಿದ್ದರು. ಹೀಗಾಗಿ ಅವರನ್ನು ಮತ್ತೆ ಗುತ್ತಿಗೆ ಪಟ್ಟಿಗೆ ಸೇರಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ದೇಶೀಯ ಕ್ರಿಕೆಟ್ ಆಡದ ಹಿನ್ನೆಲೆಯಲ್ಲಿ ಈ ಬಾರಿಯೂ ಇಶಾನ್ ಕಿಶನ್ ಬಿಸಿಸಿಐ ಗುತ್ತಿಗೆ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ IPL 2025: ತಂಡದ ಸಿಬ್ಬಂದಿಯನ್ನು ಸ್ವಿಮ್ಮಿಂಗ್ ಪೂಲ್‌ಗೆ ಎತ್ತಿ ಬಿಸಾಕಿದ ರೋಹಿತ್ ಟೀಮ್
ಇದೇ ವೇಳೆ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದ ಹೊರತಾಗಿಯೂ ರೋಹಿತ್, ಕೊಹ್ಲಿ, ಜಡೇಜಾರನ್ನು ಎ+ ದರ್ಜೆಯಲ್ಲೇ ಮುಂದುವರಿಸಲು ಸಾಧ್ಯತೆಯಿದೆ. ಅಕ್ಷರ್ ಪಟೇಲ್‌ಗೆ ಭಡ್ತಿ ಸಿಗಲಿದ್ದು, ನಿತೀಶ್ ರೆಡ್ಡಿ, ವರುಣ್ ಚಕ್ರವರ್ತಿ ಹಾಗೂ ಅಭಿಷೇಕ್ ಶರ್ಮಾ ಮೊದಲ ಬಾರಿ ಗುತ್ತಿಗೆ ಪಟ್ಟಿ ಸೇರಲಿದ್ದಾರೆ ಎನ್ನಲಾಗುತ್ತಿದೆ.
ಬಿಸಿಸಿಐ ಗುತ್ತಿಗೆ ಪಟ್ಟಿಯನ್ನು ಎ+, ಎ, ಬಿ, ಸಿ ಎಂದು ವಿಂಗಡಿಸಲಾಗುತ್ತದೆ. ಪಟ್ಟಿಯಲ್ಲಿದ್ದವರಿಗೆ ಕ್ರಮವಾಗಿ ₹7 ಕೋಟಿ, ₹5 ಕೋಟಿ, ₹3 ಕೋಟಿ ಹಾಗೂ ₹1 ಕೋಟಿ ವಾರ್ಷಿಕ ಸಂಭಾವನೆ ಲಭಿಸುತ್ತದೆ.