ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DC vs SRH: ಮಿಚೆಲ್‌ ಸ್ಟಾರ್ಕ್‌ ಮಾರಕ ದಾಳಿಗೆ ಸನ್‌ರೈಸರ್ಸ್‌ ಉಡೀಸ್‌, ಡೆಲ್ಲಿಗೆ ಎರಡನೇ ಜಯ!

DC vs SRH Match Highlights: ಮಿಚೆಲ್‌ ಸ್ಟಾರ್ಕ್‌ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 10ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 7 ವಿಕೆಟ್‌ಗಳಿಂದ ಗೆಲುವು ಪಡೆದಿದೆ. ಆ ಮೂಲಕ ಹದಿನೆಂಟನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಪಡೆದಿದೆ.

ಸನ್‌ರೈಸರ್ಸ್‌ಗೆ ಶಾಕ್‌ ಕೊಟ್ಟ ಮಿಚೆಲ್‌ ಸ್ಟಾರ್ಕ್‌, ಡಿಸಿಗೆ ಎರಡನೇ ಜಯ!

ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 5 ವಿಕೆಟ್‌ ಕಿತ್ತ ಮಿಚೆಲ್‌ ಸ್ಟಾರ್ಕ್‌.

Profile Ramesh Kote Mar 30, 2025 8:55 PM

ವಿಶಾಖಪಟ್ಟಣಂ: ಮಿಚೆಲ್‌ ಸ್ಟಾರ್‌ (35ಕ್ಕೆ 5) ಮಾರಕ ಬೌಲಿಂಗ್‌ ದಾಳಿ ಹಾಗೂ ಫಾಫ್‌ ಡು ಪ್ಲಸಿಸ್‌ (50) ಅವರ ಅರ್ಧಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 10ನೇ ಪಂದ್ಯದಲ್ಲಿ (DC vs SRH) ಬಲಿಷ್ಠ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 7 ವಿಕೆಟ್‌ಗಳ ಗೆಲುವು ಪಡೆದಿದೆ. ಆ ಮೂಲಕ ಹದಿನೆಂಟನೇ ಆವೃತ್ತಿಯ ಟೂರ್ನಿಯಲ್ಲಿ ಸತತ ಎರಡು ಗೆಲುವು ಪಡೆಯುವ ಮೂಲಕ ಅಕ್ಷರ್‌ ಪಟೇಲ್‌ (Axar Patel) ನಾಯಕತ್ವದ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆದರೆ, ಸತತ ಎರಡು ಪಂದ್ಯಗಳ ಸೋಲಿನಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 7ನೇ ಸ್ಥಾನಕ್ಕೆ ಕುಸಿದಿದೆ.

ಇಲ್ಲಿನ ಆಂಧ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ನೀಡಿದ್ದ 164 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಫಾಫ್‌ ಡು ಪ್ಲೆಸಿಸ್‌ ಹಾಗೂ ಜೇಮ್‌ ಮೆಗರ್ಕ್‌ ಮುರಿಯದ ಮೊದಲನೇ ವಿಕೆಟ್‌ಗೆ 81 ರನ್‌ಗಳನ್ನು ಕಲೆ ಹಾಕುವ ಮೂಲಕ ಸ್ಪೋಟಕ ಆತಂಭವನ್ನು ತಂದುಕೊಟ್ಟರು. 32 ಎಸೆತಗಳಲ್ಲಿ 38 ರನ್‌ಗಳಿಸಿದ ಜೇಕ್‌ ಮೆಗರ್ಕ್‌, ಝೀಸನ್‌ ಅನ್ಸಾರಿಗೆ ವಿಕೆಟ್‌ ಒಪ್ಪಿಸಿದರು.

IPL 2025: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 74 ರನ್‌ ಸಿಡಿಸಿದ ಅನಿಕೇತ್‌ ವರ್ಮಾ ಯಾರು?

ಫಾಫ್‌ ಡು ಪ್ಲೆಸಿಸ್‌ ಅರ್ಧಶತಕ

ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಫಾಫ್‌ ಡು ಪ್ಲೆಸಿಸ್‌ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸಿದ ಅವರು 27 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ ಮೂರು ಬೌಂಡರಿಗಳೊಂದಿಗೆ 50 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಡೆಲ್ಲಿಗೆ ಭರ್ಜರಿ ಆರಂಭ ತಂದುಕೊಟ್ಟು ಔಟ್‌ ಆದರು. 18 ಎಸೆತಗಳಲ್ಲಿ ಅಜೇಯ 34 ರನ್‌ಗಳನ್ನು ಸಿಡಿಸಿದ ಅಭಿಷೇಕ್‌ ಪೊರೆಲ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಬಹುಬೇಗ ಗೆಲುವಿನ ದಡ ಸೇರಿಸಿದರು. ಇದಕ್ಕೂ ಮುನ್ನ ಕೆಎಲ್‌ ರಾಹುಲ್‌ 300ರ ಸ್ಟ್ರೈಕ್‌ ರೇಟ್‌ನಲ್ಲಿ 15 ರನ್‌ ಹಾಗೂ ಟ್ರಿಸ್ಟನ್‌ ಸ್ಟಬ್ಸ್‌ ಅಜೇಯ 21 ರನ್‌ ಗಳಿಸಿದ್ದಾರೆ. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 16 ಓವರ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು 166 ರನ್‌ ಗಳಿಸಿ ಗೆಲುವು ಪಡೆಯಿತು.



163 ರನ್‌ ಕಲೆ ಹಾಕಿದ್ದ ಸನ್‌ರೈಸರ್ಸ್‌

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಮಿಚೆಲ್‌ ಸ್ಟಾರ್ಕ್‌ ಮಾರಕ ಬೌಲಿಂಗ್‌ ದಾಳಿಗೆ ನಲುಗಿತು. ಆದರೂ ಅನಿಕೇತ್‌ ವರ್ಮಾ (74 ರನ್‌) ಅವರ ಅರ್ಧಶತಕದ ಬಲದಿಂದ 18.4 ಓವರ್‌ಗಳಿಗೆ 163 ರನ್‌ಗಳನ್ನು ಕಲೆ ಹಾಕಿ ಆಲ್‌ಔಟ್‌ ಆಯಿತು. ಆ ಮೂಲಕ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ 164 ರನ್‌ಗಳ ಗುರಿಯನ್ನು ನೀಡಿತ್ತು.



ಹೈದರಾಬಾದ್‌ಗೆ ಆರಂಭಿಕ ಆಘಾತ

ಎಸ್‌ಆರ್‌ಎಚ್‌ ಪರ ಇನಿಂಗ್ಸ್‌ ಆರಂಭಿಸಿದ ಅಭಿಷೇಕ್‌ ಶರ್ಮಾ ಹಾಗೂ ಟ್ರಾವಿಸ್‌ ಹೆಡ್‌ ಉತ್ತಮ ಆರಂಭ ತಂದುಕೊಡುವಲ್ಲಿ ವಿಫಲರಾದರು. ಅಭಿಷೇಕ್‌ ಶರ್ಮಾ ರನ್‌ಔಟ್‌ ಆದರು. ನಂತರ ಇಶಾನ್‌ ಕಿಶನ್‌ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ ಅವರನ್ನು ತಮ್ಮ ಮಾರಕ ದಾಳಿಯ ಮೂಲಕ ಮಿಚೆಲ್‌ ಸ್ಟಾರ್ಕ್‌ ಔಟ್‌ ಮಾಡಿದರು. ನಂತರ ಟ್ರಾವಿಸ್‌ ಹೆಡ್‌ (22) ಅವರನ್ನು ಕೂಡ ಸ್ಟಾರ್ಕ್‌ ಪೆವಿಲಿಯನ್‌ಗೆ ಕಳುಹಿಸಿದರು. ಆ ಮೂಲಕ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಕೇವಲ 37 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಯಿತು.



ಅನಿಕೇತ್‌ ವರ್ಮಾ ಎಸ್‌ಆರ್‌ಎಚ್‌ಗೆ ಆಸರೆ

ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಅನಿಕೇತ್‌ ವರ್ಮಾ ಆಸರೆಯಾದರು. ಸ್ಪೋಟಕ ಬ್ಯಾಟ್‌ ಮಾಡಿದ ಅನಿಕೇತ್‌, 41 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ಗಳ ಮೂಲಕ 74 ರನ್‌ಗಳನ್ನು ಸಿಡಿಸಿದರು. ಅಲ್ಲದೆ, ಹೆನ್ರಿಚ್‌ ಕ್ಲಾಸೆನ್‌ ಅವರ ಜೊತೆ ಐದನೇ ವಿಕೆಟ್‌ಗೆ 77 ರನ್‌ಗಳ ಜೊತೆಯಾಟವನ್ನು ಆಡಿದರು. ಇದರೊಂದಿಗೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು 150ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇವರನ್ನು ಬಿಟ್ಟರೆ ಎಸ್‌ಆರ್‌ಎಚ್‌ ಪರ ಬೇರೆ ಯಾವುದೇ ಬ್ಯಾಟ್ಸ್‌ಮನ್‌ ರನ್‌ ಗಳಿಸಲು ಸಾಧ್ಯವಾಗಲಿಲ್ಲ.

ಮಿಚೆಲ್‌ ಸ್ಟಾರ್ಕ್‌ 5 ವಿಕೆಟ್‌ ಸಾಧನೆ

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಮಿಚೆಲ್‌ ಸ್ಟಾರ್ಕ್‌, 3.4 ಓವರ್‌ಗಳಲ್ಲಿ 35 ರನ್‌ ನೀಡಿ 5 ವಿಕೆಟ್‌ ಸಾಧನೆ ಮಾಡಿದರು. ಆ ಮೂಲಕ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಆಲ್‌ಔಟ್‌ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಅವರು 22 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು.

IPL 2025: ಫಾರ್ಮ್‌ ಕಂಡುಕೊಳ್ಳಲು ರೋಹಿತ್‌ ಶರ್ಮಾಗೆ ಸಂಜಯ್‌ ಮಾಂಜ್ರೇಕರ್‌ ಉಪಯುಕ್ತ ಸಲಹೆ!

ಸ್ಕೋರ್‌ ವಿವರ

ಸನ್‌ರೈಸರ್ಸ್‌ ಹೈದರಾಬಾದ್‌: 18.4 ಓವರ್‌ಗಳಿಗೆ 163-10 (ಅನಿಕೇತ್‌ ವರ್ಮಾ 74, ಹೆನ್ರಿಚ್‌ ಕ್ಲಾಸೆನ್‌ 33; ಮಿಚೆಲ್‌ ಸ್ಟಾರ್ಕ್‌ 35 ಕ್ಕೆ 5, ಕುಲ್ದೀಪ್‌ ಯಾದವ್‌ 22 ಕ್ಕೆ 3)

ಡೆಲ್ಲಿ ಕ್ಯಾಪಿಟಲ್ಸ್‌: 16 ಓವರ್‌ಗಳಿಗೆ 166-3 (ಫಾಫ್‌ ಡು ಪ್ಲೆಸಿಸ್‌ 50, ಜೇಕ್‌ ಮಗರ್ಕ್‌ 38, ಅಭಿಷೇಕ್‌ ಪೊರೆಲ್‌ 34*; ಝೀಸನ್‌ ಅನ್ಸಾರಿ 42ಕ್ಕೆ 3)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಮಿಚೆಲ್‌ ಸ್ಟಾರ್ಕ್‌