KKR vs RCB: ಐಪಿಎಲ್ 2025ಕ್ಕೆ ಅದ್ಧೂರಿ ಆರಂಭ; ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ
IPL 2025: 18ನೇ ಆವೃತ್ತಿಯ ಐಪಿಎಲ್‌ಗೆ ಅದ್ಧೂರಿ ಆರಂಭ ಸಿಕ್ಕಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಣಕ್ಕಿಳಿದಿದೆ. ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ದುಕೊಂಡಿದೆ


ಕೋಲ್ಕತಾ: ಜಗತ್ತಿನ ಕ್ರಿಕೆಟ್ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. 18ನೇ ಆವೃತ್ತಿಯ ಐಪಿಎಲ್‌ಗೆ ಅದ್ಧೂರಿ ಆರಂಭ ಸಿಕ್ಕಿದೆ. ಕೋಲ್ಕತಾ ಈಡನ್ ಗಾರ್ಡನ್ಸ್ ಸ್ಟೇಡಿಯಂ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಕಣಕ್ಕಿಳಿದಿದೆ. ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ದುಕೊಂಡಿದೆ (KKR vs RCB). ಆ ಮೂಲಕ ಮೊದಲ ಪಂದ್ಯದಲ್ಲೇ ರೋಚಕ ಹಣಾಹಣಿ ನಡೆಯುವ ಸಾಧ್ಯತೆ ದಟ್ಟವಾಗಿದೆ.
ಸದ್ಯ ಕೋಲ್ಕತಾದ ವಾತಾವರಣ ತಿಳಿಯಾಗಿದ್ದು, ಮಳೆ ಸುರಿಯುವ ಆತಂಕ ದೂರವಾಗಿದೆ. ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈ ಹಿಂದೆ ತಿಳಿಸಿದ್ದು ಪ್ರೇಕ್ಷಕರ ಚಿಂತೆಗೆ ಕಾರಣವಾಗಿತ್ತು. ಸದ್ಯ ಅಂತಹ ಯಾವುದೇ ಸೂಚನೆ ಕಂಡು ಬರುತ್ತಿಲ್ಲ. ವಿಶೇಷ ಎಂದರೆ ನಾಯಕನಾಗಿ ರಜತ್ ಪಾಟಿದಾರ್ ಅವರಿಗೆ ಇದು ಮೊದಲ ಪಂದ್ಯ.
ಇತ್ತಂಡಗಳ ಪ್ಲೇಯಿಂಗ್ 11
ಆರ್‌ಸಿಬಿ ತಂಡ: ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರಸಿಕ್ ದಾರ್ ಸಲಾಮ್, ಸುಯಾಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್.
ಇಂಪ್ಯಾಕ್ಟ್ ಪ್ಲೇಯರ್ಸ್: ದೇವದತ್ ಪಡಿಕ್ಕಲ್, ಅಭಿನಂದನ್ ಸಿಂಗ್, ಮನೋಜ್ ಭಾಂಡಗೆ, ರೊಮಾರಿಯೊ ಶೆಫರ್ಡ್, ಸ್ವಪ್ನಿಲ್ ಸಿಂಗ್
ಕೆಕೆಆರ್ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಆಂಗ್ರಿಶ್ ರಘುವಂಶಿ, ಸುನಿಲ್ ನರೈನ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
ಇಂಪ್ಯಾಕ್ಟ್ ಪ್ಲೇಯರ್ಸ್: ಅನ್‌ರಿಚ್ ನಾರ್ಟ್ಜೆ, ಮನೀಶ್ ಪಾಂಡೆ, ವೈಭವ್ ಅರೋರಾ, ಅನುಕುಲ್ ರಾಯ್, ಲುವ್ನಿತ್ ಸಿಸೋಡಿಯಾ
ಈ ಸುದ್ದಿಯನ್ನೂ ಓದಿ: Virat Kohli: ಈ ಬಾರಿಯ ಐಪಿಎಲ್‌ನಲ್ಲಿ 5 ಪ್ರಮುಖ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ
ಪಿಚ್ ಹೇಗಿದೆ?
ಈಡನ್ ಗಾರ್ಡನ್ಸ್ ಸ್ಟೇಡಿಯಂನ ಪಿಚ್ ಬ್ಯಾಟರ್‌ಗಳಿಗೆ ಹೇಳಿ ಮಾಡಿಸಿದಂತಿದ್ದರೂ ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳು ಇಲ್ಲಿ ಹಿಡಿತ ಸಾಧಿಸಲಿದ್ದಾರೆ. ಅದರಲ್ಲೂ ಮಂಜಿನ ಕಾಟ ಇರುವ ಕಾರಣ ಚೇಸಿಂಗ್ ನಡೆಸುವ ತಂಡಗಳಿಗೆ ಇಲ್ಲಿ ಗೆಲುವಿನ ಅವಕಾಶ ಹೆಚ್ಚು. ಆದರೆ ಈ ಬಾರಿ ಹೊಸ ಚೆಂಡು ಬಳಕೆಗೂ ಅವಕಾಶ ಇರುವುದನ್ನು ಮರೆಯುವಂತಿಲ್ಲ. ಇದುವರೆಗೆ ಇಲ್ಲಿ 93 ಐಪಿಎಲ್ ಪಂದ್ಯಗಳು ನಡೆದಿವೆ. ಇದರಲ್ಲಿ 38 ಬಾರಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಜಯಿಸಿದರೆ, 55 ಬಾರಿ ಚೇಸಿಂಗ್ ನಡೆಸಿದ ತಂಡ ಗೆದ್ದಿದೆ.
ಗಮನ ಸೆಳೆದ ಉದ್ಘಾಟನಾ ಕಾರ್ಯಕ್ರಮ
ಇದಕ್ಕೂ ಮೊದಲು ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕೋಲ್ಕತ್ತಾದ ಸಹ-ಮಾಲೀಕ ಮತ್ತು ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರು ಉದ್ಘಾಟನಾ ಸಮಾರಂಭಕ್ಕೆ ಕಳೆ ತಂದುಕೊಟ್ಟರು. ಜತೆಗೆ ಬಹುಭಾಷಾ ಗಾಯಕಿ ಶ್ರೇಯಾ ಘೋಷಾಲ್ ತಮ್ಮ ಮಧುರ ಕಂಠದಿಂದ ನೆರೆದಿದ್ದವರನ್ನು ಮೋಡಿ ಮಾಡಿದರು. ತಮ್ಮ ಪ್ರಸಿದ್ಧ ಹಾಡುಗಳನ್ನು ಪ್ರಸ್ತುತಪಡಿಸಿದರು. “ಮೇರೆ ಧೋಲ್ನಾ…” ಹಾಡಿನೊಂದಿಗೆ ಸಮಾರಂಭಕ್ಕೆ ಚಾಲನೆ ನೀಡಿದರು. ಇನ್ನು ಬಾಲಿವುಡ್ ಬೆಡಗಿ ದಿಶಾ ಪಠಾಣಿ ವಿವಿಧ ಹಾಡಿಗೆ ಮೈ ಕುಣಿಸುವ ಮೂಲಕ ಪ್ರೇಕ್ಷಕರ ಎದೆ ಬಡಿತ ಹೆಚ್ಚಿಸಿದರು. ವಿಶೇಷ ಎಂದರೆ ಆರ್‌ಸಿಬಿಯ ವಿರಾಟ್ ಕೊಹ್ಲಿ ಮತ್ತು ಕೆಕೆಆರ್‌ನ ರಿಂಕು ಸಿಂಗ್ ಶಾರುಖ್ ಖಾನ್ ಜತೆ ಹೆಜ್ಜೆ ಹಾಕಿ ರಂಜಿಸಿದರು.