ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RR vs KKR: ರಾಜಸ್ಥಾನ್‌ ರಾಯಲ್ಸ್‌ಗೆ ಸತತ ಎರಡನೇ ಸೋಲು, ಕೆಕೆಆರ್‌ಗೆ ಮೊದಲ ಗೆಲುವು!

RR vs KKR Match Highlights: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 8 ವಿಕೆಟ್‌ಗಳ ಗೆಲುವು ಪಡೆಯಿತು. ಮೊದಲು ಬ್ಯಾಟ್‌ ಮಾಡಿದ್ದ ಆರ್‌ಆರ್‌ 151 ರನ್‌ಗಳನ್ನು ಗಳಿಸಿತ್ತು. ಬಳಿಕ ಕೆಕೆಆರ್‌ ಎರಡು ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

RR vs KKR: ರಾಜಸ್ಥಾನ್‌ ಎದುರು ಕೋಲ್ಕತಾಗೆ ಅಧಿಕಾರಯುತ ಗೆಲುವು!

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಕೋಲ್ಕತಾ ನೈಟ್‌ ರೈಡರ್ಸ್‌ಗೆ 8 ವಿಕೆಟ್‌ ಜಯ.

Profile Ramesh Kote Mar 26, 2025 11:08 PM

ಗುವಾಹಟಿ: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಲ್ಲಿ ಸಂಘಟಿತ ಪ್ರದರ್ಶನ ತೋರಿದ ಕೋಲ್ಕತಾ ನೈಟ್‌ ರೈಡರ್ಸ್‌ (Kolkata Knight Riders) ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಆರನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ 8 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಹದಿನೆಂಟನೇ ಆವೃತ್ತಿಯ ಟೂರ್ನಿಯಲ್ಲಿ ಅಜಿಂಕ್ಯ ರಹಾನೆ ನಾಯಕತ್ವದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು. ಇನ್ನು ತನ್ನ ಮೊದಲನೇ ಪಂದ್ಯವನ್ನು ಸೋತಿದ್ದ ಆರ್‌ಆರ್‌, ಇದೀಗ ಮತ್ತೊಂದು ಸೋಲನ್ನು ಅನುಭವಿಸಿತು.

ಮಾರ್ಚ್‌ 26ರಂದು ಬುಧವಾರ ಇಲ್ಲಿನ ಬರ್ಸಪರ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡ ನೀಡಿದ್ದ 152 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಯಾವುದೇ ತೊಂದರೆ ಇಲ್ಲದೆ ಗೆಲುವನ್ನು ಕಸಿದುಕೊಂಡಿತು. ಕ್ವಿಂಟನ್‌ ಡಿ ಕಾಕ್‌ ಅರ್ಧಶತಕದ ಬಲದಿಂದ ಕೆಕೆಆರ್‌, 17.3 ಓವರ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು 153 ರನ್‌ ಗಳಿಸಿ ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಗೆಲುವಿನ ರುಚಿ ಅನುಭವಿಸಿರು.

KKR vs RR: ಸಂಜು ಸ್ಯಾಮ್ಸನ್‌ ಬದಲು ರಿಯಾನ್‌ ಪರಾಗ್‌ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಮುನ್ನಡೆಸಲು ಕಾರಣವೇನು?

ಕ್ವಿಂಟನ್‌ ಡಿ ಕಾಕ್‌ ಭರ್ಜರಿ ಬ್ಯಾಟಿಂಗ್‌

ಗುರಿ ಹಿಂಬಾಲಿಸಿದ ಕೆಕೆಆರ್‌ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದ ಕ್ವಿಂಟನ್‌ ಡಿ ಕಾಕ್‌! ಮೊಯೀನ್‌ ಅಲಿ 5 ರನ್‌ ಗಳಿಸಿ ರನ್‌ ಔಟ್‌ ಆದರು. ಬಳಿಕ ನಾಯಕ ಅಜಿಂಕ್ಯ ರಹಾನೆ 18 ರನ್‌ಗಳಿಗೆ ಸೀಮಿತರಾದರು. ಆದರೆ, ಒಂದು ತುದಿಯಲ್ಲಿ ಕೊನೆಯವರೆಗೂ ಬ್ಯಾಟ್‌ ಮಾಡಿದ ಆರಂಭಿಕ ಕ್ವಿಂಟನ್‌ ಡಿ ಕಾಕ್‌, ಆರ್‌ಆರ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ 61 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 97 ರನ್‌ಗಳನ್ನು ಗಳಿಸಿದರು. ಆ ಮೂಲಕ 15 ಎಸೆತಗಳು ಬಾಕಿ ಇರುವಾಗಲೇ ಕೆಕೆಆರ್‌ ತಂಡವನ್ನು ಗೆಲ್ಲಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.



151 ರನ್‌ ಗಳಿಸಿದ ಕೆಕೆಆರ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ಯಾವೊಬ್ಬ ಬ್ಯಾಟ್ಸ್‌ಮನ್‌ ದೊಡ್ಡ ಇನಿಂಗ್ಸ್‌ ಆಡಲಿಲ್ಲ. ಕೆಕೆಆರ್‌ನ ಪರಿಣಾಮಕಾರಿ ಬೌಲಿಂಗ್‌ ದಾಳಿಗೆ ನಲುಗಿದ ರಿಯಾನ್‌ ಪರಾಗ್‌ ನಾಯಕತ್ವದ ರಾಜಸ್ಥಾನ್‌ ರಾಯಲ್ಸ್‌, ತನ್ನ ಪಾಲಿನ 20 ಓವರ್‌ಗಳಿಗ 9 ವಿಕೆಟ್‌ಗಳ ನಷ್ಟಕ್ಕೆ 151 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಎದುರಾಳಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ 152 ರನ್‌ಗಳ ಗುರಿಯನ್ನು ನೀಡಿತು.

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಕೆಕೆಆರ್‌ ಪರ ಸುನೀಲ್‌ ನರೇನ್‌ ಏಕೆ ಆಡುತ್ತಿಲ್ಲ? ಇಲ್ಲಿದೆ ಕಾರಣ!

ಇನಿಂಗ್ಸ್‌ ಆರಂಭಿಸಿದ ಯಶಸ್ವಿ ಜೈಸ್ವಾಲ್‌ ಹಾಗೂ ಸಂಜು ಸ್ಯಾಮ್ಸನ್‌ ರಾಜಸ್ಥಾನ್‌ ರಾಯಲ್ಸ್‌ ನಿರೀಕ್ಷಿತ ಆರಂಭ ತಂದುಕೊಡುವಲ್ಲಿ ವಿಫಲರಾದರು. ಈ ಪಂದ್ಯದಲ್ಲಿಯೂ ಕೇವಲ ಬ್ಯಾಟ್ಸ್‌ಮನ್‌ ಆಗಿ ಆಡಿದ ಸಂಜು ಸ್ಯಾಮ್ಸನ್‌ 11 ಎಸೆತಗಳಲ್ಲಿ 13 ರನ್‌ ಗಳಿಸಿ ವೈಭವ್‌ ಅರೋರ ಯಾರ್ಕರ್‌ಗೆ ಕ್ಲೀನ್‌ ಬೌಲ್ಡ್‌ ಆದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ನಾಯಕ ರಿಯಾನ್‌ ಪರಾಗ್‌ 15 ಎಸೆತಗಳಲ್ಲಿ 25 ರನ್‌ ಸಿಡಿಸಿ ದೊಡ್ಡ ಇನಿಂಗ್ಸ್‌ ಆಡುವ ಮುನ್ಸೂಚನೆಯನ್ನು ನೀಡಿದ್ದರು. ಆದರೆ, ವರುಣ್‌ ಚಕ್ರವರ್ತಿ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚ್‌ ಕೊಟ್ಟರು. 24 ಎಸೆತಗಳಲ್ಲಿ 29 ರನ್‌ ಗಳಿಸಿದ್ದ ಮತ್ತೊಬ್ಬ ಆರಂಭಿಕ ಯಶಸ್ವಿ ಜೈಸ್ವಾಲ್‌ ಕೂಡ ಮೊಯೀನ್‌ ಅಲಿ ಎಸೆತದಲ್ಲಿ ಹರ್ಷಿತ್‌ ರಾಣಾಗೆ ಕ್ಯಾಚ್‌ ಕೊಟ್ಟರು.



ವಾನಿಂದು ಹಸರಂಗ ಹಾಗೂ ನಿತೀಶ್‌ ರಾಣಾ ಅವರು ಕೂಡ ಮಧ್ಯಮ ಕ್ರಮಾಂಕದಲ್ಲಿ ನಿರಾಶೆ ಮೂಡಿಸಿದರು. ಶುಭ ದುಬೆ ಹಾಗೂ ಶಿಮ್ರಾನ್‌ ಹೆಟ್ಮಾಯರ್‌ ಅವರು ಕೂಡ ತಮ್ಮ ಬ್ಯಾಟ್‌ನಲ್ಲಿ ಸದ್ದು ಮಾಡಲಿಲ್ಲ. ಕಳೆದ ಪಂದ್ಯದಂತೆ ಈ ಪಂದ್ಯದಲ್ಲಿಯೂ ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ನಿಂತು ಬ್ಯಾಟ್‌ ಮಾಡಿದ ಧ್ರುವ್‌ ಜುರೆಲ್‌ 33 ರನ್‌ ಗಳಿಸಿ ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಕೊನೆಯಲ್ಲಿ ಜೋಫ್ರಾ ಆರ್ಚರ್‌ 7 ಎಸೆತಗಳಲ್ಲಿ 16 ರನ್‌ಗಳ ಕೊಡುಗೆಯನ್ನು ನೀಡಿ ಔಟ್‌ ಆದರು.

ಕೆಕೆಆರ್‌ ಪರ ಪರಿಣಾಮಕಾರಿಯಾಗಿ ಬೌಲ್‌ ಮಾಡಿದ ವೈಭವ್‌ ಅರೋರಾ, ಮೊಯೀನ್‌ ಅಲಿ, ಹರ್ಷಿತ್‌ ರಾಣಾ ಹಾಗೂ ವರುಣ್‌ ಚಕ್ರವರ್ತಿ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.



ಸ್ಕೋರ್‌ ವಿವರ

ರಾಜಸ್ಥಾನ್‌ ರಾಯಲ್ಸ್‌: 20 ಓವರ್‌ಗಳಿಗೆ 151-9 (ಧ್ರುವ್‌ ಜುರೆಲ್‌ 33, ಯಶಸ್ವಿ ಜೈಸ್ವಾಲ್‌ 29, ರಿಯಾನ್‌ ಪರಾಗ್‌ 25, ವರುಣ್‌ ಚಕ್ರವರ್ತಿ 17 ಕ್ಕೆ 2, ಮೊಯೀನ್‌ ಅಲಿ 23 ಕ್ಕೆ 2, ಹರ್ಷಿತ್‌ ರಾಣಾ 36 ಕ್ಕೆ 2, 33 ಕ್ಕೆ 2)

ಕೋಲ್ಕತಾ ನೈಟ್‌ ರೈಡರ್ಸ್‌: 17.3 ಓವರ್‌ಗಳಿಗೆ 153-2 (ಕ್ವಿಂಟನ್‌ ಡಿ ಕಾಕ್‌ 97*, ಅಂಗ್‌ಕೃಷ್‌ ರಘುವಂಶಿ 22*; ವಾನಿಂದು ಹಸರಂಗ 34 ಕ್ಕೆ 1)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಕ್ವಿಂಟನ್‌ ಡಿ ಕಾಕ್‌