Viral Video: ನಗು ನಗುತ್ತಲೇ ಭಾಷಣ ಮಾಡುತ್ತಿದ್ದ 20 ವರ್ಷದ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವು
Viral Video: 20 ವರ್ಷದ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ಬೀಳ್ಕೊಡುಯ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿರುವಾಗಲೇ ಕುಸಿದು ಬಿದ್ದಿದ್ದು, ತಾವು ಆ ಕಾಲೇಜಿನಲ್ಲಿ ಕಳೆದ ಸಂತೋಷದ ಕ್ಷಣಗಳ ಬಗ್ಗೆ ನಗು ನಗುತ್ತಲೇ ವಿವರಣೆ ನೀಡುತ್ತಿದ್ದ ವೇಳೆಯೇ ಸಾವನ್ನಪ್ಪಿದ್ದಾಳೆ. ಮೃತಪಟ್ಟ ವಿದ್ಯಾರ್ಥಿನಿಯನ್ನು ವರ್ಷಾ ಖರತ್ ಎಂದು ಗುರುತಿಸಲಾಗಿದ್ದು, ಭಾಷಣದ ನಡುವೆ ಅವರ ಧ್ವನಿ ಏಕಾಏಕಿ ಕ್ಷೀಣಿಸಲು ಆರಂಭವಾಗಿದೆ ಏಕಾಏಕಿ ಕೆಳಗೆ ಬಿದ್ದು ಪ್ರಾಣ ಹೋಗಿದೆ.


ಮುಂಬೈ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಯುವಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಯುವಕರಷ್ಟೇ ಅಲ್ಲದೇ, ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕೂಡ ಹೃದಯಾಘಾತದಿಂದ ಇಹಲೋಕ ತ್ಯಜಿಸುತ್ತಿರುವುದು ನಿಜಕ್ಕೂ ವೈದ್ಯಕೀಯ ಲೋಕಕ್ಕೆ ಒಂದು ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಇಂತಹುದೇ ಘಟನೆ ಇತ್ತೀಚಿಗೆ ಮಹಾರಾಷ್ಟ್ರದ ಧಾರಾಶಿವ್ ನಗರದಲ್ಲಿ ನಡೆದಿದೆ. ಇಲ್ಲಿನ ಕಾಲೇಜು ಕಾರ್ಯಕ್ರಮವೊಂದರಲ್ಲಿ 20 ವರ್ಷದ ವಿದ್ಯಾರ್ಥಿನಿಯೊಬ್ಬರು ಭಾಷಣ ಮಾಡುವಾಗ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆಯ ವಿಡಿಯೋ ಈಗ ವೈರಲ್(Viral Video) ಆಗಿದೆ. ಈ ಘಟನೆ ಪರಾಂಡ ತಾಲ್ಲೂಕಿನ(Paranda Taluka) ಮಹರ್ಷಿ ಗುರುವರ್ಯ ಆರ್‌ಜಿ ಶಿಂಧೆ ಮಹಾವಿದ್ಯಾಲಯ(Maharshi Guruvarya RG Shinde Mahavidyalaya)ದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ವೀಡಿಯೊದಲ್ಲಿ, 20 ವರ್ಷದ ವಿದ್ಯಾರ್ಥಿನಿ ವರ್ಷಾ ಖರತ್(Varsha Kharat) ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮರಾಠಿಯಲ್ಲಿ ಭಾಷಣ ಮಾಡುತ್ತಿರುವಾಗ, ತಾವು ಆ ಕಾಲೇಜಿನಲ್ಲಿ ಕಳೆದ ಸಂತೋಷದ ಕ್ಷಣಗಳ ಬಗ್ಗೆ ನಗು ನಗುತ್ತಲೇ ವಿವರಣೆ ನೀಡುತ್ತಿದ್ದರು. ಭಾಷಣದ ನಡುವೆ ಅವರ ಧ್ವನಿ ಏಕಾಏಕಿ ಕ್ಷೀಣಿಸಲು ಆರಂಭವಾಗಿದ್ದು, ನಂತರ ಅವರು ಕುಸಿದುಬಿದ್ದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಹಲವರು ಅವಳ ಸಹಾಯಕ್ಕಾಗಿ ಧಾವಿಸಿದ್ದಾರೆ.
ವರ್ಷಾಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಅಲ್ಲಿ ಅವಳು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇದಕ್ಕೂ ಮೊದಲು, ಉತ್ತರ ಪ್ರದೇಶದ ಬರೇಲಿಯಿಂದ ಇದೇ ರೀತಿಯ ದುರಂತ ಘಟನೆ ವರದಿಯಾಗಿತ್ತು, ಅಲ್ಲಿ ದಂಪತಿಗಳ 25ನೇ ವಿವಾಹ ವಾರ್ಷಿಕೋತ್ಸವದ ಆಚರಣೆಯ ವೇಳೆ ಪತಿ ಹೃದಯಾಘಾತದಿಂದ ನಿಧನರಾಗಿದ್ದು, ವಾರ್ಷಿಕೋತ್ಸವ ಆಚರಿಸುತ್ತಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿತ್ತು.
ಐವತ್ತು ವರ್ಷದ ಉದ್ಯಮಿ ವಾಸಿಂ ಸರ್ವರ್ ಅವರು ಪಿಲಿಭಿತ್ ಬೈಪಾಸ್ ರಸ್ತೆಯಲ್ಲಿ ನಡೆದ ಪಾರ್ಟಿಯಲ್ಲಿ ತಮ್ಮ ಪತ್ನಿ ಫರಾ ಅವರೊಂದಿಗೆ ಡ್ಯಾನ್ಸ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಅವರ ಪ್ರಾಣ ಉಳಿಯಲಿಲ್ಲ.
ಯುವತಿಯ ಕೊನೆಯ ಕ್ಷಣದ ವಿಡಿಯೊ ಇಲ್ಲಿದೆ
Maharashtra’s Dharashiv: Farewell Turns Fatal
— زماں (@Delhiite_) April 6, 2025
20 y/o Varsha Kharat collapsed and died while giving a farewell speech on stage. Despite past heart surgery at age 8, she had been living a normal life for 12 years. Doctors suspect a sudden heart attack. https://t.co/cSFKDHQxnV pic.twitter.com/YCQHCkqSLU
ಕ್ರಿಕೆಟ್ ಆಡುವಾಗಲೇ ಹೃದಯಾಘಾತ
ಹೈದರಾಬಾದ್‌ನಲ್ಲಿ ಅಂತರ್ ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿತ್ತು. ಈ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಏಕಾಏಕಿ ಪಿಚ್ ಮೇಲೆ ಕುಸಿದುಬಿದ್ದಿದ್ದರು. ಅವರು ಬೀಳುವವರೆಗೂ ಅತ್ಯಂತ ಸಕ್ರಿಯವಾಗಿ ಪಂದ್ಯದಲ್ಲಿ ತೊಡಗಿದ್ದರು. ಅವರಿಗೆ ಹೃದಯಾಘಾತವಾಗಿದೆ ಎಂದು ಆಸ್ಪತ್ರೆಯಲ್ಲಿ ವೈದ್ಯರು ಹೇಳಿದ್ದರು.
ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಲೇ ಇವೆ. ಕರ್ನಾಟಕದಲ್ಲಿಯೂ ಶಾಲಾ ಮಕ್ಕಳಿಂದ ಹಿಡಿದು ನಡುವಯಸ್ಸಿನ ಹಲವರು ಹಠಾತ್ ಹೃದಯಾಘಾತದಿಂದ ಮೃತಪಟ್ಟಿರುವ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಹೃದಯಾಘಾತ, ಹೃದಯ ಸ್ತಂಭನ, ಮೆದುಳು ಸಂಬಂಧಿ ಕಾರಣದಿಂದಾಗಿ ಯುವ ಜನರ ಹಠಾತ್ ಸಾವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿ ವರದಿ ನೀಡಲು ಕರ್ನಾಟಕದಲ್ಲಿ ತಜ್ಞರ ಸಮಿತಿಯನ್ನು ರಚನೆ ಮಾಡಲಾಗಿದೆ.
ಈ ಸುದ್ದಿಯನ್ನು ಓದಿ: Viral Video: ಘಿಬ್ಲಿ ಎಡವಟ್ಟು; ಯುವತಿಯ ಫೋಟೊದಲ್ಲಿ 3ನೇ ಕಾಲು ಉದ್ಭವ: ನಕ್ಕು ನಕ್ಕು ಸುಸ್ತಾದ ನೆಟ್ಟಿಗರು
ಅದರಲ್ಲಿಯೂ, ಕೋವಿಡ್ ಲಸಿಕೆ ಪಡೆದ ಬಳಿಕ ಈ ಸಾವುಗಳ ಸಂಖ್ಯೆ ಹೆಚ್ಚಾಗಿದ್ದು ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಸಮಿತಿ ರಚಿಸಲು ಆದೇಶಿಸಿದ್ದ ಸಿಎಂ ಸಿದ್ದರಾಮಯ್ಯ ಅವರು, ಈ ಸಾವುಗಳು ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡಪರಿಣಾಮಗಳಿಂದ ಸಂಭವಿಸುತ್ತಿರಬಹುದು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದ್ದರಿಂದ ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳಿಂದ ಹಠಾತ್ ಸಾವಿಗೀಡಾಗುತ್ತಿರುವ ಬಗ್ಗೆ ಅಧ್ಯಯನ ನಡೆಸಿ ಇಂತಹ ಸಾವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಿ ಎಂದು ತಮ್ಮ ಆದೇಶದಲ್ಲಿ ಹೇಳಿದ್ದರು.