Actress Khushbu Sundar: ಕಷ್ಟಕಾಲದಲ್ಲಿ ರವಿಚಂದ್ರನ್ ಮಾಡಿದ್ದ ಸಹಾಯ ನೆನೆದ ನಟಿ ಖುಷ್ಬೂ
Actress Khushbu Sundar: ಅನಾರೋಗ್ಯದ ಹಿನ್ನೆಲೆ ತಾಯಿ ಆಸ್ಪತ್ರೆಯಲ್ಲಿದ್ದಾಗ ಬಿಲ್ ಕಟ್ಟಲು ರವಿಚಂದ್ರನ್ ಹಾಗೂ ಅವರ ತಂದೆ ವೀರಸ್ವಾಮಿ ಅವರು ಮಾಡಿದ ಸಹಾಯವನ್ನು ನಟಿ ಖುಷ್ಬೂ ಸುಂದರ್ ಸ್ಮರಿಸಿದ್ದಾರೆ. ನಟಿ ಖುಷ್ಬೂ ಸುಂದರ್ ಅವರನ್ನು ರವಿಚಂದ್ರನ್ ಹಾಗೂ ತಂದೆ ವೀರಸ್ವಾಮಿ ಅವರೇ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು.


ಬೆಂಗಳೂರು: ನಟ ರವಿಚಂದ್ರನ್ (V. Ravichandran) ಅವರು ಕನ್ನಡ ಚಿತ್ರರಂಗಕ್ಕೆ (Kannada Film industry) ಸಾಕಷ್ಟು ನಟ-ನಟಿಯರನ್ನು ಪರಿಚಯಿಸಿದ್ದಾರೆ. ಅಲ್ಲದೇ ಕಷ್ಟದಲ್ಲಿರುವ ಹಲವರಿಗೆ ಸಹಾಯವನ್ನೂ ಮಾಡಿದ್ದಾರೆ. ಇದೀಗ ಬಹುಭಾಷಾ ನಟಿ, ರಾಜಕಾರಣಿ ಖುಷ್ಬೂ ಸುಂದರ್ ಅವರು, ತಾವು ಕಷ್ಟದಲ್ಲಿದ್ದಾಗ ರವಿಚಂದ್ರನ್ ಅವರು ಮಾಡಿದ್ದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ರವಿಚಂದ್ರನ್ ಅವರ ನೆರವಿನ ಬಗ್ಗೆ ಖುಷ್ಬೂ ಸುಂದರ್ (Actress Khushbu Sundar) ಸ್ಮರಿಸಿದ್ದು, ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ನಟಿ ಖುಷ್ಬೂ ಸುಂದರ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರೇ ರವಿಚಂದ್ರನ್ ಹಾಗೂ ತಂದೆ ವೀರಸ್ವಾಮಿ. 1988ರಲ್ಲಿ ಬಿಡುಗಡೆಯಾದ ‘ರಣಧೀರ’ ಸಿನಿಮಾದಲ್ಲಿ ಖುಷ್ಬೂ ಬಣ್ಣ ಹಚ್ಚಿದರು. ಇದು ಅವರು ನಟಿಸಿದ ಮೊದಲ ಕನ್ನಡ ಸಿನಿಮಾ. ಈ ಚಿತ್ರವನ್ನು ರವಿಚಂದ್ರನ್ ಅವರೇ ನಿರ್ದೇಶಿಸಿದ್ದರು. ಅವರ ತಂದೆ ವೀರಸ್ವಾಮಿ ನಿರ್ಮಾಣ ಮಾಡಿದ್ದರು.
‘ನಾನು ವಿ. ರವಿಚಂದ್ರನ್ ಜತೆ ಶೂಟ್ ಮಾಡುತ್ತಿದ್ದೆ. ಆ ಚಿತ್ರಕ್ಕೆ ಅವರದ್ದೇ ನಿರ್ದೇಶನ ಇತ್ತು. ಅವರ ತಂದೆ ನಿರ್ಮಾಣ ಮಾಡಿದ್ದರು. ಈ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನನ್ನ ತಾಯಿ ಆಸ್ಪತ್ರೆಯಲ್ಲಿ ಇದ್ದರು. ಈ ವೇಳೆ 36 ಸಾವಿರ ರೂಪಾಯಿ ಬಿಲ್ ಆಗಿತ್ತು. ಆದರೆ, ನನ್ನ ಬಳಿ ಅಷ್ಟು ಹಣ ಇರಲಿಲ್ಲ. ಆಗ ನನ್ನ ವಯಸ್ಸು 17. ನಾನು ಹಣ ಹೇಗೆ ಪಾವತಿಸುವುದು ಎಂದು ಚಿಂತೆಯಲ್ಲಿ ಇದ್ದೆ. ತಾಯಿಗೆ ಅನಾರೋಗ್ಯ ವಿಚಾರವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ.
ಶೂಟಿಂಗ್ ವೇಳೆ ನಾನು ಸಾಕಷ್ಟು ಡಿಸ್ಟರ್ಬ್ ಆಗಿರುವುದನ್ನು ಗಮನಿಸಿದ ರವಿಚಂದ್ರನ್ ಅವರು, ನನ್ನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದರು. ಬಳಿಕ ‘ರವಿಚಂದ್ರನ್ ಅವರ ತಂದೆ ವೀರಸ್ವಾಮಿ ಅವರು ಆಸ್ಪತ್ರೆಗೆ ತೆರಳಿ, ವೈದ್ಯರ ಜತೆ ಮಾತನಾಡಿ, ಬಿಲ್ ಕಟ್ಟಿ ನನ್ನ ತಾಯಿಯನ್ನು ಮನೆಗೆ ಕರೆದುಕೊಂಡು ಹೋಗಿ ಬಿಟ್ಟರು ಎಂದು ಖುಷ್ಬೂ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Kichcha Sudeepa: ಮುದ್ದು ಮಗುವಿನ ಚಿಕಿತ್ಸೆಗೆ ಸುದೀಪ್ ಸಹಾಯಹಸ್ತ; ನೆರವು ನೀಡಲು ಅಭಿಮಾನಿಗಳಲ್ಲೂ ಮನವಿ
ಶೂಟಿಂಗ್ ಮುಗಿದ ಬಳಿಕ ರವಿಚಂದ್ರನ್ ಹಾಗೂ ವೀರಸ್ವಾಮಿ ಅವರು ನನ್ನ ವಿರುದ್ಧ ಸಿಟ್ಟಾಗಿದ್ದರು. ‘ಏಕೆ ಈ ವಿಚಾರ ಮುಚ್ಚಿಟ್ಟಿದ್ದಿರಿ’ ಎಂದು ಕೇಳಿದರು. ‘ನನಗೆ ಹಣವನ್ನು ಹೇಗೆ ಕೇಳಬೇಕು ಎಂಬುದು ಗೊತ್ತಾಗಿರಲಿಲ್ಲ’ ಎಂದು ವಿವರಿಸಿದ್ದಾಗಿ ನಟಿ ಖುಷ್ಬೂ ವಿವರಿಸಿದ್ದಾರೆ.
ಪುಟ್ಟ ಬಾಲಕನ ಬದುಕಿಗೆ ಬೆಳಕಾದ ಧ್ರುವ ಸರ್ಜಾ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್, ನಟ ಧ್ರುವ ಸರ್ಜಾ ಅವರು ನಟನೆ ಜತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಚಾಮರಾಜನಗರದ ಜಿಲ್ಲೆಯ ಬುಡಕಟ್ಟು ವಸತಿ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿ ಸೇರಿ ಅಗತ್ಯ ವಸ್ತುಗಳನ್ನು ಕಳುಹಿಸಿಕೊಟ್ಟಿದ್ದ ನಟ, ಇದೀಗ ಬಡ ಕುಟುಂಬದ ಪುಟ್ಟ ಬಾಲಕನ ಬಾಳಿಗೆ ಬೆಳಕಾಗಿದ್ದಾರೆ. ಕಣ್ಣಿನಲ್ಲಿ ಪೊರೆ ಬೆಳೆದಿದ್ದರಿಂದ ಬಾಲಕನಿಗೆ ದೃಷ್ಟಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಮಾಹಿತಿ ಪಡೆದಿದ್ದ ನಟ ಧ್ರುವ ಸರ್ಜಾ ಅವರು, ಬಾಲಕನ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬಾಲಕನಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುವ ಅನಿವಾರ್ಯತೆ ಇತ್ತು. ಆದರೆ, ಗಾರೆ ಕೆಲಸ ಮಾಡುವ ಪೋಷಕರಿಗೆ ಮಗನಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿವಷ್ಟು ಶಕ್ತಿ ಇರಲಿಲ್ಲ. ಹೀಗಾಗಿ ಮಗುವಿನ ಬೆನ್ನಿಗೆ ನಿಂತ ಧ್ರುವ ಸರ್ಜಾ ಅವರು ಕಣ್ಣಿನ ಶಸ್ತ್ರಚಿಕಿತ್ಸೆಗೆ ನೆರವಾಗಿದ್ದಾರೆ. ಇದೀಗ ಮಗುವಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಮಗುವಿನ ದೃಷ್ಟಿ ಸುಧಾರಿಸಿದೆ ಎಂದು ತಿಳಿದುಬಂದಿದೆ.
ನಟ ಧ್ರುವ ಸರ್ಜಾ ಅವರು ವಿಡಿಯೊ ಕಾಲ್ ಮಾಡುವ ಮೂಲಕ ಬಾಲಕನ ಆರೋಗ್ಯ ವಿಚಾರಿಸಿದ್ದಾರೆ. ಈ ಬಗ್ಗೆ ಬಾಲಕನ ತಂದೆ ಪ್ರತಿಕ್ರಿಯಿಸಿದ್ದು, ನನ್ನ ಪುಟ್ಟ ಮಗನಿಗೆ ಕಣ್ಣಿನ ಸಮಸ್ಯೆ ಇತ್ತು. ಅದನ್ನು ಧ್ರುವ ಸರ್ಜಾ ಅಣ್ಣನ ಬಳಿ ಹೇಳಿಕೊಂಡೆವು. ಕೂಡಲೇ ಅವರು ಆಸ್ಪತ್ರೆಗೆ ಹೇಳಿದರು. ಅವರಿಂದ ಮಗನ ಕಣ್ಣು ದೃಷ್ಟಿ ಸರಿಹೋಗಿದೆ. ಅವನು ಪ್ರಪಂಚ ನೋಡುವಂತಾಗಿದೆ’ ಎಂದಿದ್ದಾರೆ.

ಇನ್ನು ಮಂಜುನಾಥ ಆಸ್ಪತ್ರೆ ವೈದ್ಯರು ಮಾತನಾಡಿ, ಧ್ರುವ ಸರ್ಜಾ ಅವರು ನಮಗೆ ಆ ಬಾಲಕನನ್ನು ರೆಫರ್ ಮಾಡಿದ್ದರು. ಪರೀಕ್ಷೆ ಮಾಡಿದಾಗ ಪೊರೆ ಇರುವುದು ಗೊತ್ತಾಯಿತು. ಕೂಡಲೇ ನಾವು ಆಪರೇಷನ್ ಮಾಡಿದೆವು. ಈ ಕಾರ್ಯವನ್ನು ನಾನು ಮಾಡಿದೆ ಎಂದು ಹೇಳುವುದು ಬೇಡ, ಪ್ರಚಾರ ಮಾಡುವುದು ಬೇಡ ಎಂದು ಧ್ರುವ ಸರ್ಜಾ ಹೇಳಿದ್ದರು’ ಎಂದಿರುವುದಾಗಿ ವೈದ್ಯರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Vinay Gowda: ಇನ್ಮುಂದೆ ರಜತ್ ಜೊತೆ ರೀಲ್ಸ್ ಮಾಡಲ್ಲ: ವಿನಯ್ ಗೌಡ ಖಡಕ್ ನಿರ್ಧಾರ
ಆಪರೇಷನ್ ಬಳಿಕ ನಟ ಧ್ರುವ ಸರ್ಜಾ ಅವರು ಆ ಬಾಲಕನೊಟ್ಟಿಗೆ, ಅವರ ಪೋಷಕರೊಟ್ಟಿಗೆ ಮಾತನಾಡಿದ್ದಾರೆ. ಪೋಷಕರಿಬ್ಬರೂ ಸಹ ಧ್ರುವ ಸರ್ಜಾ ಅವರ ಸಹಾಯಕ್ಕೆ ಧನ್ಯವಾದ ಹೇಳಿದ್ದಾರೆ. ‘ಧ್ರುವ ಸರ್ಜಾ ಅಣ್ಣ ಬೈಯ್ಯುತ್ತಾರೆ, ಆದರೆ ಮಾಡಿದ ಸಹಾಯವನ್ನು ಹೇಳಿಕೊಳ್ಳದೇ ಇರಲು ಆಗುವುದಿಲ್ಲ’ ಎಂದು ಬಾಲಕನ ಪೋಷಕರು ಭಾವುಕರಾಗಿದ್ದಾರೆ.