Gold Cards: ಶ್ರೀಮಂತ ವಲಸಿಗರಿಗೆ ಟ್ರಂಪ್ ಗೋಲ್ಡ್ ಕಾರ್ಡ್ ಆಫರ್; ಇದರ ಬೆಲೆ ಎಷ್ಟು ಗೊತ್ತಾ?
ಟ್ರಂಪ್ ಗೋಲ್ಡ್ ಕಾರ್ಡ್(Gold Cards)ಮೂಲಕ ಶ್ರೀಮಂತ ವಲಸಿಗರು ಸುಲಭವಾಗಿ ಅಮೆರಿಕ ಪೌರತ್ವ ಪಡೆಯಬಹುದಾಗಿದೆ. ಇನ್ನು ಈ ಗೋಲ್ಡ್ ಕಾರ್ಡ್‌ಗಾಗಿ ಪಾವತಿಸಬೇಕಾದ ಮೊತ್ತ ಬರೋಬ್ಬರಿ $5 ಮಿಲಿಯನ್(43.5 ಕೋಟಿ ರೂ.). ಇದು ಅಮೆರಿಕ ಪೌರತ್ವ ಪಡೆಯಲು ವಿದೇಶಿಗರಿಗೆ ಇರುವ ಸುಗಮ ಮತ್ತು ಸರಳ ಹಾದಿ ಎಂದು ಹೇಳಿರುವ ಟ್ರಂಪ್, ಮುಂಬರುವ ದಿನಗಳಲ್ಲಿ 10 ಲಕ್ಷ ಕಾರ್ಡ್‌ಗಳು ಮಾರಾಟವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.


ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರು ಅಕ್ರಮ ವಲಸಿಗರನ್ನು ದೇಶದಿಂದಲೇ ಹೊರದಬ್ಬಿರುವ ಬೆನ್ನಲ್ಲೇ ಇದೀಗ ಹೊಸದೊಂದು ನೀತಿಯನ್ನು ಜಾರಿಗೊಳಿಸಲು ಮುಂದಾಗಿದ್ದಾರೆ. ಶ್ರೀಮಂತ ವಲಸಿಗರ ಪರವಾಗಿರುವ ನೀತಿ ಇದಾಗಿದ್ದು, ಭಾರೀ ಮೊತ್ತದ ಹಣವನ್ನು ಪಾವತಿಸಿ ಅಮೆರಿಕದ ಪೌರತ್ವ ಪಡೆಯಲು ಅನುವು ಮಾಡಿಕೊಟ್ಟಿದ್ದಾರೆ. ಟ್ರಂಪ್ ಗೋಲ್ಡ್ ಕಾರ್ಡ್(Gold Cards)ಮೂಲಕ ಶ್ರೀಮಂತ ವಲಸಿಗರು ಸುಲಭವಾಗಿ ಅಮೆರಿಕ ಪೌರತ್ವ ಪಡೆಯಬಹುದಾಗಿದೆ. ಇನ್ನು ಈ ಗೋಲ್ಡ್ ಕಾರ್ಡ್‌ಗಾಗಿ ಪಾವತಿಸಬೇಕಾದ ಮೊತ್ತ ಬರೋಬ್ಬರಿ $5 ಮಿಲಿಯನ್(43.5 ಕೋಟಿ ರೂ). ಇದು ಅಮೆರಿಕ ಪೌರತ್ವ ಪಡೆಯಲು ವಿದೇಶಿಗರಿಗೆ ಇರುವ ಹಾದಿ ಎಂದು ಹೇಳಿರುವ ಟ್ರಂಪ್, ಮುಂಬರುವ ದಿನಗಳಲ್ಲಿ 10 ಲಕ್ಷ ಕಾರ್ಡ್‌ಗಳು ಮಾರಾಟವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಟ್ರಂಪ್ ಪ್ರಕಾರ, ಈ ಕ್ರಮದಿಂದ ದೇಶದ ಸಾಲವನ್ನು ತ್ವರಿತವಾಗಿ ಪಾವತಿಸಬಹುದು. ಅಲ್ಲದೇ ವಿದೇಶಿ ಹೂಡಿಕೆದಾರರು ಶಾಶ್ವತ ನಿವಾಸಿಗಳಾಗಲು ಅನುವು ಮಾಡಿಕೊಡುವ "ಇಬಿ-5" ವಲಸೆ ಹೂಡಿಕೆದಾರರ ವೀಸಾವನ್ನು ರದ್ದುಗೊಳಿಸಿ ಅದರ ಬದಲು ಗೋಲ್ಡ್ ಕಾರ್ಡ್ ಜಾರಿಗೊಳಿಸಲಾಗುತ್ತದೆ. ಇಬಿ-5 ಯೋಜನೆ ಯುಎಸ್ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ಭರವಸೆ ನೀಡುವ ವಿದೇಶಿಯರಿಗೆ ಗ್ರೀನ್ ಕಾರ್ಡ್‌ಗಳನ್ನು ನೀಡುತ್ತಿದೆ. ಇದೀಗ ನಾವು ಪರಿಚಯಿಸುತ್ತಿರುವ ಗೋಲ್ಡ್ ಕಾರ್ಡ್‌ಗೆ ಸುಮಾರು 43.5 ಕೋಟಿ ರೂ. ಬೆಲೆಯನ್ನು ನಾವು ನಿಗದಿಪಡಿಸಿದ್ದೇವೆ. ಇದು ನಿಮಗೆ ಗ್ರೀನ್ ಕಾರ್ಡ್ ಸವಲತ್ತುಗಳನ್ನು ನೀಡಲಿದೆ ಮತ್ತು ಅಲ್ಲದೇ ಪೌರತ್ವಕ್ಕೆ ಒಂದು ಮಾರ್ಗವಾಗಲಿದೆ ಮತ್ತು ಶ್ರೀಮಂತ ಜನರು ಈ ಕಾರ್ಡ್ ಖರೀದಿಸುವ ಮೂಲಕ ನಮ್ಮ ದೇಶಕ್ಕೆ ಬರುತ್ತಾರೆ ಎಂದು ಅವರು ಹೇಳಿದರು. ಈ ಯೋಜನೆಯ ಕುರಿತು ಹೆಚ್ಚಿನ ವಿವರಗಳು ಎರಡು ವಾರಗಳಲ್ಲಿ ಹೊರಬರುತ್ತವೆ ಎಂದು ಹೇಳಿದ ಅವರು, ರಷ್ಯನ್ನರು ಈ ಯೋಜನೆಗೆ ಅರ್ಹರಾಗುತ್ತಾರೆಯೇ ಎಂದು ಪತ್ರಕರ್ತರೊಬ್ಬರು ಕೇಳಿದಾಗ, ರಷ್ಯಾದ ಒಲಿಗಾರ್ಚ್‌ಗಳು ಅರ್ಹತೆ ಪಡೆಯುವ ಸಾಧ್ಯತೆಯಿದೆ ಎಂದರು.
ಈ ಸುದ್ದಿಯನ್ನೂ ಓದಿ: Trump-Netanyahu: ನೆತನ್ಯಾಹು - ಟ್ರಂಪ್ ಫೋನ್ ಕಾಲ್ ಮೂಲಕ ಮಾತುಕತೆ; ಗಾಜಾ ಯುದ್ಧ, ಸಿರಿಯಾ ಬಗ್ಗೆ ಚರ್ಚೆ
EB-5 ವಂಚನೆಯ ಆಗರ
USCIS ವೆಬ್‌ಸೈಟ್ ಪ್ರಕಾರ, ವಿದೇಶಿ ಹೂಡಿಕೆದಾರರಿಂದ ಉದ್ಯೋಗ ಸೃಷ್ಟಿ ಮತ್ತು ಬಂಡವಾಳ ಹೂಡಿಕೆಯ ಮೂಲಕ ಯುಎಸ್ ಆರ್ಥಿಕತೆಯನ್ನು ಉತ್ತೇಜಿಸಲು EB-5 ವಲಸೆ ಹೂಡಿಕೆದಾರರ ಕಾರ್ಯಕ್ರಮವನ್ನು 1990 ರಲ್ಲಿ ಕಾಂಗ್ರೆಸ್ ರಚಿಸಿತು. ಇದರಲ್ಲಿ ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳೂ ಸೇರಿವೆ. ಇದರ ಬಗ್ಗೆ ಮಾತನಾಡಿದ ಟ್ರಂಪ್, EB-5 ಕಾರ್ಯಕ್ರಮ ಅದು ಅಸಂಬದ್ಧ, ಕಾಲ್ಪನಿಕ ಮತ್ತು ವಂಚನೆಯಿಂದ ತುಂಬಿತ್ತು, ಮತ್ತು ಇದು ಕಡಿಮೆ ಬೆಲೆಗೆ ಗ್ರೀನ್ ಕಾರ್ಡ್ ಪಡೆಯುವ ಒಂದು ಮಾರ್ಗವಾಗಿತ್ತು. ಆದ್ದರಿಂದ ಈ ರೀತಿಯ ಹಾಸ್ಯಾಸ್ಪದ EB-5 ಕಾರ್ಯಕ್ರಮವನ್ನು ಹೊಂದುವ ಬದಲು, ನಾವು EB-5 ಕಾರ್ಯಕ್ರಮವನ್ನು ಕೊನೆಗೊಳಿಸಲಿದ್ದೇವೆ. ನಾವು ಅದನ್ನು ಟ್ರಂಪ್ ಗೋಲ್ಡ್ ಕಾರ್ಡ್‌ನೊಂದಿಗೆ ಬದಲಾಯಿಸಲಿದ್ದೇವೆ ಎಂದರು.