Aadhaar Update: ಪಾನ್-ಆಧಾರ್ ಲಿಂಕ್: ಡಿಸೆಂಬರ್ 31ರವರೆಗೆ ಅವಕಾಶ
ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಲಿಂಕ್ ಮಾಡಲು ಈ ವರ್ಷಾಂತ್ಯದವರೆಗೆ ಅಂದರೆ ಡಿಸೆಂಬರ್ 31ರವರೆಗೆ ಅವಕಾಶವಿದೆ. ಬಳಿಕ ಲಿಂಕ್ ಮಾಡುವುದಾದರೆ 1,000 ರೂ. ವಿಳಂಬ ಶುಲ್ಕ ಪಾವತಿಸಬೇಕಾಗುತ್ತದೆ. 2024ರ ಅಕ್ಟೋಬರ್ 1ರ ಮೊದಲು ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರು ದಂಡ ಶುಲ್ಕ ಪಾವತಿಸದೆ ಪಾನ್ ಕಾರ್ಡ್ ಅನ್ನು ಆಧಾರ್‌ಗೆ ಲಿಂಕ್ ಮಾಡಬಹುದಾಗಿದೆ.


ನವದೆಹಲಿ: ಪಾನ್ ಕಾರ್ಡ್ (PAN card) ಮತ್ತು ಆಧಾರ್ ಕಾರ್ಡ್ (Aadhaar Update) ಅನ್ನು ಉಚಿತವಾಗಿ ಲಿಂಕ್ (PAN-Aadhaar link) ಮಾಡಲು ಈ ವರ್ಷದ ವರ್ಷಾಂತ್ಯದವರೆಗೆ ಅಂದರೆ ಡಿಸೆಂಬರ್ 31ರವರೆಗೆ ಅವಕಾಶವಿದೆ. ಬಳಿಕ ಲಿಂಕ್ ಮಾಡುವುದಾದರೆ 1,000 ರೂ. ವಿಳಂಬ ಶುಲ್ಕ ಪಾವತಿಸಬೇಕಾಗುತ್ತದೆ. 2024ರ ಅಕ್ಟೋಬರ್ 1ರ ಮೊದಲು ಆಧಾರ್ ಕಾರ್ಡ್‌ಗೆ (Aadhaar card) ಅರ್ಜಿ ಸಲ್ಲಿಸಿದವರು ದಂಡ ಶುಲ್ಕ ಪಾವತಿಸದೆ ಪಾನ್ ಕಾರ್ಡ್ ಅನ್ನು ಆಧಾರ್‌ಗೆ ಲಿಂಕ್ ಮಾಡಬಹುದಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಹಣಕಾಸು ಸಚಿವಾಲಯ ಹೊರಡಿಸಿರುವ ಹೊಸ ನಿರ್ದೇಶನದ ಅನುಸಾರವಾಗಿ ಲಿಂಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ. ಕಳೆದ ವರ್ಷ ಸಲ್ಲಿಸಿದ ಆಧಾರ್ ಅರ್ಜಿ ನಮೂನೆಯ ದಾಖಲಾತಿ ಐಡಿಯನ್ನು ಆಧರಿಸಿ ಪಾನ್ ಹೊಂದಿದ್ದ ತೆರಿಗೆದಾರರಿಗೆ ಈ ಘೋಷಣೆ ಅನ್ವಯವಾಗಲಿದೆ.
ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಏಪ್ರಿಲ್ 3ರಂದು ಸುತ್ತೋಲೆಯನ್ನು ಹೊರಡಿಸಿದ್ದು, 2024ರ ಅಕ್ಟೋಬರ್ 1ರ ಮೊದಲು ಸಲ್ಲಿಸಿದ ಆಧಾರ್ ಅರ್ಜಿ ನಮೂನೆಯಲ್ಲಿ ಒದಗಿಸಲಾದ ದಾಖಲಾತಿ ಐಡಿ ಆಧಾರದ ಮೇಲೆ ಪಾನ್ ಪಡೆದವರು ತಮ್ಮ ಆಧಾರ್ ಸಂಖ್ಯೆಯನ್ನು ಆದಾಯ ತೆರಿಗೆ ಅಧಿಕಾರಿಗಳಿಗೆ ತಿಳಿಸಬೇಕಾಗುತ್ತದೆ ಎಂದು ತಿಳಿಸಿದೆ.
ಆಧಾರ್ ದಾಖಲಾತಿ ಐಡಿಗಳ ಆಧಾರದ ಮೇಲೆ ಪಾನ್ ಕಾರ್ಡ್ ಹಂಚಿಕೆಯಾದ ಪ್ರಕರಣಗಳಿಗೆ ಮಾತ್ರ ಈ ವಿಸ್ತರಣೆ ಸೌಲಭ್ಯ ಸಿಗಲಿದೆ ಎಂಬುದನ್ನು ಪ್ರತಿಯೊಬ್ಬರೂ ಗಮನಿಸಬೇಕು. ಈ ಪ್ರಕರಣಗಳಿಗೆ ಮಾತ್ರ ಯಾವುದೇ ವಿಳಂಬ ಶುಲ್ಕವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಡಿಸೆಂಬರ್ 31ರ ಬಳಿಕವೂ ಇವರು ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದೇ ಇದ್ದರೆ ವಿಳಂಬ ಶುಲ್ಕವಾಗಿ 1,000 ರೂ. ಪಾವತಿಸಬೇಕಾಗುತ್ತದೆ. ಪಾನ್ ಮತ್ತು ಆಧಾರ್ ಐಡಿಗಳು ಅಸ್ತಿತ್ವದಲ್ಲಿದ್ದರೂ ಲಿಂಕ್ ಮಾಡದ ಪ್ರಕರಣಗಳು ಹೆಚ್ಚಾಗಿದೆ. ಹೀಗಾಗಿ ಪಾನ್ ಕಾರ್ಡ್ ನಿಷ್ಕ್ರಿಯವಾಗುವುದನ್ನು ತಡೆಯಲು ಎಲ್ಲರೂ ನಿಗದಿತ ಸಮಯದೊಳಗೆ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವಂತೆ ಸೂಚನೆ ತಿಳಿಸಿದೆ.
ಇದನ್ನೂ ಓದಿ: Trade War: ಶುರುವಾಯ್ತು ಅಮೆರಿಕ-ಚೀನಾ ಟ್ರೇಡ್ ವಾರ್; ಮುಂದೇನು?
ಲಿಂಕ್ ಮಾಡುವುದು ಹೇಗೆ?
ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ ಎಡಭಾಗದಲ್ಲಿರುವ ಕ್ವಿಕ್ ಲಿಂಕ್ಸ್ ವಿಭಾಗವನ್ನು ತೆರೆದು 'ಲಿಂಕ್ ಆಧಾರ್' ಮೇಲೆ ಕ್ಲಿಕ್ ಮಾಡಿ. ಬಳಿಕ ಪಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ 'ಮುಂದುವರಿಸಿ' ಎಂಬುದನ್ನು ಕ್ಲಿಕ್ ಮಾಡಿ. ಒಟಿಪಿ ಪಡೆಯಲು ಇಲ್ಲಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಅನಂತರ 'ಮುಂದುವರಿಯಿರಿ' ಮೇಲೆ ಕ್ಲಿಕ್ ಮಾಡಿ. ಇಲ್ಲಿ ಸಂಬಂಧಿತ ಮೌಲ್ಯಮಾಪನ ವರ್ಷ ಮತ್ತು ಪಾವತಿಯ ಪ್ರಕಾರದಲ್ಲಿ 'ಇತರ ರಶೀದಿ' (Other Receipts) (500) ಎಂದು ಆಯ್ಕೆ ಮಾಡಿ 'ಮುಂದುವರಿಸಿ' ಎಂಬುದನ್ನು ಕ್ಲಿಕ್ ಮಾಡಿ. ಯಶಸ್ವಿ ಪಾವತಿಯ ಅನಂತರ 'ಲಿಂಕ್ ಆಧಾರ್' ಪುಟಕ್ಕೆ ಮತ್ತೆ ಭೇಟಿ ನೀಡಿ. ಇಲ್ಲಿ ವಿವರಗಳನ್ನು ಪರಿಶೀಲಿಸಿ ಮತ್ತು ಪಾನ್-ಆಧಾರ್ ಲಿಂಕ್ ಬಗ್ಗೆ ವಿನಂತಿಯನ್ನು ಸಲ್ಲಿಸಲು 'ಮುಂದುವರಿಸಿ' ಎಂಬುದನ್ನು ಕ್ಲಿಕ್ ಮಾಡಿ.