Accident: ಡ್ರಿಂಕ್ & ಡ್ರೈವ್ ಕೇಸ್- ಓರ್ವ ಸಾವು, 6 ಮಂದಿಗೆ ಗಂಭೀರ ಗಾಯ; ಖ್ಯಾತ ನಿರ್ದೇಶಕಿ ಅರೆಸ್ಟ್
Accident: ದೇಶಾದ್ಯಂತ ನಡೆಯುತ್ತಿರುವ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕುಡಿದು ವಾಹನ ಚಲಾಯಿಸುವಂತಿಲ್ಲ ಎಂಬ ಕಾನೂನನ್ನು ತರಲಾಗಿದೆ. ಹೀಗಿದ್ದರೂ ಅದೆಷ್ಟೋ ಜನರು ಕಂಠ ಪೂರ್ತಿ ಕುಡಿದು ಬೇಕಾಬಿಟ್ಟಿ ವಾಹನಗಳನ್ನು ಚಲಾವಣೆ ಮಾಡುತ್ತಿದ್ದಾರೆ. ಇಂತಹ ಹುಚ್ಚಾಟಗಳಿಗೆ ಒಬ್ಬ ವ್ಯಕ್ತಿ ಸಾವನ್ನಪ್ಪಿಗಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಾಂಧರ್ಬಿಕ ಚಿತ್ರ

ಕೋಲ್ಕತ್ತಾ: ದಕ್ಷಿಣ ಕೋಲ್ಕತ್ತಾ(South Kolkata)ದ ಅತ್ಯಂತ ಜನಸಂದಣಿ ಇರುವ ಮಾರುಕಟ್ಟೆ(Kolkata market)ಯೊಂದರಲ್ಲಿ ಭಾನುವಾರ ಬೆಳಿಗ್ಗೆ ಖಾಸಗಿ ಕಾರೊಂದು (Drink And Drive)ಜನರ ಮೇಲೆ ನುಗ್ಗಿದ ಪರಿಣಾಮ ಒಬ್ಬರು ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕಾರಿನಲ್ಲಿ ಪ್ರಸಿದ್ಧ ಬಂಗಾಳಿ ಸೀರಿಯಲ್ ನಿರ್ದೇಶಕಿ(Bengali Entertainment Channel Producer) ಹಾಗೂ ಖಾಸಗಿ ಚಾನೆಲ್‌ವೊಂದರ ಎಕ್ಸಿಕ್ಯುಟಿವ್ ಪ್ರೊಡ್ಯೂಸ್ ಆಗಿರುವ ಶ್ರೀಯಾ ಬಸು(Shriya Basu) ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಅಪಘಾತ ನಡೆಯುತ್ತಿದ್ದಂತೆ ಆಕ್ರೋಶಗೊಂಡ ಜನರು ಕಾರಿನಲ್ಲಿದ್ದ ಇಬ್ಬರ ಮೇಲೆ ದಾಳಿ ನಡೆಸಿದ್ದು, ಅವರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ. ಪೊಲೀಸ್ ಅಧಿಕಾರಿಗಳು ಪ್ರಯಾಣಿಕರನ್ನು ರಕ್ಷಿಸಲು ಸ್ಥಳಕ್ಕೆ ಧಾವಿಸಿದಾಗ, ಶ್ರೀಯಾ ಬಸು ಕುಡಿದ ಮತ್ತಿನಲ್ಲಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ಬರುವ ವೇಳೆಗಾಗಲೇ ನಿಲ್ಲಲೂ ಆಗದ ಸ್ಥಿತಿಯಲ್ಲಿದ್ದ ಅವರು, ರಸ್ತೆಯ ಮೇಲೆಯೇ ಕುಸಿದು ಬಿದ್ದಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಾರು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಸಿದ್ದಾಂತ ದಾಸ್ ಅಲಿಯಾಸ್ ವಿಕ್ಟೋ ಎಂದು ಗುರುತಿಸಲಾಗಿದ್ದು, ಈತ ಕೂಡ ಬಂಗಾಳಿ ಚಲನಚಿತ್ರೋದ್ಯಮದ ಖ್ಯಾತ ನಿರ್ದೇಶಕರಾಗಿದ್ದಾರೆ. ಕಾರ್ಯನಿರ್ವಾಹಕ ನಿರ್ಮಾಪಕಿ ಶ್ರೀಯಾ ಬಸು ಅವರನ್ನು ಪೊಲೀಸರು ಜನರಿಂದ ರಕ್ಷಿಸಿದ ನಂತರ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಇಬ್ಬರೂ ಕುಡಿದ ಮತ್ತಿನಲ್ಲಿದ್ದರು ಎಂದು ಮೂಲಗಳು ಹೇಳಿವೆ.
ಬೆಳಗ್ಗಿನ ಜಾವದವರೆಗೂ ಪಾರ್ಟಿ ನಂತರ ಜಾಲಿ ರೈಡ್
ಮೂಲಗಳ ಪ್ರಕಾರ, ಕೋಲ್ಕತ್ತಾದ ಸೌತ್ ಸಿಟಿ ಮಾಲ್‌ನಲ್ಲಿರುವ ಪಬ್‌ನಲ್ಲಿ ಕಾರ್ಯಕ್ರಮವೊಂದರ ಯಶಸ್ಸನ್ನು ಆಚರಿಸಲು ಪಾರ್ಟಿ ಆಯೋಜಿಸಲಾಗಿತ್ತು. ಬೆಳಗ್ಗಿನ ಜಾವ ಎರಡು ಗಂಟೆ ಸುಮಾರಿಗೆ ಪಾರ್ಟಿಗೆ ಬಂದವರೆಲ್ಲಾ ಮನೆಗೆ ವಾಪಸ್ ತೆರಳಿದ್ದರೂ, ಇವರಿಬ್ಬರು ಮಾತ್ರ ಮನೆಗೆ ಹೋಗದೆ ಮತ್ತೆ ಕುಡಿಯಲು ಮುಂದುವರೆಸಿದ್ದರು. ಕುಡಿದ ನಂತರ ತಮ್ಮ ಕಾರಿನಲ್ಲಿ ಬೆಳಕು ಹರಿಯುವವರೆಗೆ ಕಾರಿನಲ್ಲಿ ಜಾಲಿ ರೈಡ್ ಹೋಗಲು ನಿರ್ಧರಿಸಿದ ಇಬ್ಬರೂ ನಿರ್ದೇಶಕರು, ಖಾಲಿ ಇದ್ದ ನಗರದ ರಸ್ತೆಗಳಲ್ಲಿ ವೇಗವಾಗಿ ರೈಡ್ ಮಾಡಿದ್ದರು.
ಈ ಸುದ್ದಿಯನ್ನು ಓದಿ: Viral Video: ಅವಧಿ ಮೀರಿದ ಎದೆ ಹಾಲನ್ನು ಈಕೆ ಮಾಡಿದ್ದೇನು ನೋಡಿ! ವಿಡಿಯೊ ಫುಲ್ ವೈರಲ್
ಭಾನುವಾರ ಬೆಳಗ್ಗೆಯಾದರೂ ಅವರ ಮದ್ಯದ ಅಮಲು ಇಳಿಯಲಿಲ್ಲ. ಕಾರು ಠಾಕೂರ್ಪುಕುರ್ ಬಜಾರ್‌ಗೆ ಪ್ರವೇಶಿಸಿ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. "ವಾಹನವು ಬಿಷ್ಣುಪುರ ಕಡೆಯಿಂದ ಬಂದಿತ್ತು. ಅಪಘಾತದ ನಂತರ, ಕಾರಿನೊಳಗೆ ಒಬ್ಬ ವ್ಯಕ್ತಿ ಮಾತ್ರ ಇದ್ದದ್ದು ಕಂಡುಬಂದಿತು" ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಅಪಘಾತದಿಂದಾಗಿ ಆರು ಜನರಿಗೆ ಗಂಭೀರ ಗಾಯಗಳಾಗಿವೆ. ನಾಲ್ವರನ್ನು ಕಸ್ತೂರಿ ನರ್ಸಿಂಗ್ ಹೋಂಗೆ ಕರೆದೊಯ್ಯಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಅಪಘಾತಕ್ಕೆ ಕಾರಣವಾದ ಕಾರನ್ನು ಜಪ್ತಿ ಮಾಡಿದ್ದು, ಚಾಲಕನನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಕೋಲ್ಕತ್ತಾ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಗಾಯಾಳುಗಳು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ವ್ಯಕ್ತಿಯನ್ನು ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಕಸ ಗುಡಿಸುವ ಅಮೀನುರ್ ರೆಹಮಾನ್ ಎಂದು ಗುರುತಿಸಲಾಗಿದೆ. ಆರೋಪಿ ಸಿದ್ಧಾಂತ ದಾಸ್ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆಯಿದೆ.