RCB vs MI: ಬುಮ್ರಾ ಭೀತಿಯಲ್ಲಿ ಇಂದು ಆರ್‌ಸಿಬಿ ಕಣಕ್ಕೆ
ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲ. ಪಂದ್ಯದ ವೇಳೆ ಗರಿಷ್ಠ ತಾಪಮಾನವು ಸುಮಾರು 34 ಡಿಗ್ರಿ ಗಳಷ್ಟಿದ್ದು, ಆರ್ದ್ರತೆ ಶೇ.45ರಷ್ಟು ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಾಂಖೇಡೆ ಸಣ್ಣ ಸ್ಟೇಡಿಯಂ ಆದ ಕಾರಣ ದೊಡ್ಡ ಹೊಡೆತಗಳನ್ನು ಸರಾಗವಾಗಿ ಬಾರಿಸಬಹುದು. ಇಲ್ಲಿ ಟಾಸ್ ಕೂಡ ನಿರ್ಣಾಯಕ. ದ್ವಿತೀಯ ಇನಿಂಗ್ಸ್ ವೇಳೆ ಇಬ್ಬನಿ ಬೀಳುವ ಕಾರಣ ಸ್ಪಿನ್ನರ್‌ಗಳಿಗೆ ಸವಾಲು ಎದುರಾಗಬಹುದು.


ಮುಂಬಯಿ: ಸೋಮವಾರದ ಐಪಿಎಲ್(IPL 2025) ಪಂದ್ಯದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ(RCB vs MI) ತಂಡಗಳು ಸೆಣಸಾಟ ನಡೆಸಲಿವೆ. ಜಸ್‌ಪ್ರೀತ್ ಬುಮ್ರಾ(Jasprit Bumrah) ತಂಡಕ್ಕೆ ಮರಳಿದ್ದು ಮುಂಬೈ ಪಡೆಯ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಆರ್‌ಸಿಬಿ ವಿರುದ್ಧ ಅವರು ಕಣಕ್ಕಿಳಿಯುದನ್ನು ಈಗಾಗಲೇ ಕೋಚ್ ಜಯವರ್ದನೆ ಖಚಿತಪಡಿಸಿದ್ದಾರೆ. ಹಾಲಿ ಆವೃತ್ತಿಯಲ್ಲಿ ಮುಂಬೈ ತಂಡ ತವರಿನಾಚೆ ಆಡಿದ ಮೂರು ಪಂದ್ಯದಲ್ಲಿ ಸೋಲು ಕಂಡಿತ್ತು. ಅತ್ತ ಆರ್‌ಸಿಬಿ ತವರಿನಾಚೆ ನಡೆದ ಪಂದ್ಯದಲ್ಲಿ ಗೆದ್ದು ತವರಿನ ಪಂದ್ಯದಲ್ಲಿ ಸೋಲು ಕಂಡಿತ್ತು. ಹೀಗಾಗಿ ತವರಿನಲ್ಲಿ ಮತ್ತು ತವರಿನಾಚೆ ಬಲಿಷ್ಠವಾಗಿರುವ ಇತ್ತಂಡಗಳ ಈ ಮುಖಾಮುಖಿ ಸಹಜವಾಗಿಯೇ ಅಭಿಮಾನಿಗಳ ಕುತೂಹಲ ಹೆಚ್ಚಿಸುವಂತೆ ಮಾಡಿದೆ.
ಆರ್‌ಸಿಬಿ ಮೇಲ್ನೋಟಕ್ಕೆ ಮುಂಬೈಗಿಂತ ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ ತವರಿನಲ್ಲಿ ಬಲಿಷ್ಠವಾಗಿರುವ ಮುಂಬೈ ತಂಡದ ಸವಾಲನ್ನು ಅಷ್ಟು ಹಗುರವಾಗಿ ಕಾಣುವಂತಿಲ್ಲ. ಬ್ಯಾಟಿಂಗ್‌ನಲ್ಲಿ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟೀದಾರ್, ಜಿತೇಶ್ ಶರ್ಮ, ಟಿಮ್ ಡೇವಿಡ್ ಉತ್ತಮ ಫಾರ್ಮ್‌ನಲ್ಲಿರುವುದು ಆರ್‌ಸಿಬಿಗೆ ಬಲ ಎನ್ನಬಹುದು. ಬೌಲಿಂಗ್‌ನಲ್ಲಿ ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್, ಪಾರ್ಟ್ ಟೈ ಬೌಲರ್ ಲಿವಿಂಗ್‌ಸ್ಟೋನ್ ಈ ಹಿಂದೆ ಮುಂಬೈ ಪರವೇ ಆಡಿದ್ದ ಕೃಣಾಲ್ ಪಾಂಡ್ಯ ತಂಡಕ್ಕೆ ಶಕ್ತಿ ತುಂಬಿದ್ದಾರೆ.
ಪಿಚ್ ರಿಪೋರ್ಟ್
ವಾಂಖೇಡೆ ಸಣ್ಣ ಸ್ಟೇಡಿಯಂ ಆದ ಕಾರಣ ದೊಡ್ಡ ಹೊಡೆತಗಳನ್ನು ಸರಾಗವಾಗಿ ಬಾರಿಸಬಹುದು. ಇಲ್ಲಿ ಟಾಸ್ ಕೂಡ ನಿರ್ಣಾಯಕ. ದ್ವಿತೀಯ ಇನಿಂಗ್ಸ್ ವೇಳೆ ಇಬ್ಬನಿ ಬೀಳುವ ಕಾರಣ ಸ್ಪಿನ್ನರ್‌ಗಳಿಗೆ ಸವಾಲು ಎದುರಾಗಬಹುದು. ಈ ಕ್ರೀಡಾಂಗಣದಲ್ಲಿ ನಡೆದ ಪಂದ್ಯಗಳ ದಾಖಲೆ ನೋಡುವುದಾದರೆ, ಮೊದಲು ಬ್ಯಾಟ್ ಮಾಡಿದ ತಂಡ 54 ಪಂದ್ಯಗಳನ್ನು ಗೆದ್ದಿದ್ದರೆ, ಚೇಸಿಂಗ್ ಮಾಡಿದ ತಂಡ 65 ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆಗೆ ಒತ್ತು ನೀಡಬಹುದು.
ಇದನ್ನೂ ಓದಿ IPL 2025 Points Table: ಗೆಲುವಿನೊಂದಿಗೆ ದ್ವಿತೀಯ ಸ್ಥಾನಕ್ಕೇರಿದ ಗುಜರಾತ್
ಸಂಭಾವ್ಯ ತಂಡಗಳು
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನಮನ್ ಧೀರ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಚಾಹರ್, ಜಸ್‌ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಮಿಚೆಲ್ ಸ್ಯಾಂಟ್ನರ್, ವಿಘ್ನೇಶ್ ಪುತ್ತೂರ್.
ಆರ್‌ಸಿಬಿ: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ತ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಹಾಟ್‌ಸ್ಟಾರ್.