Narayana Yaji Column: ವಾಲ್ಮೀಕಿಗಿರಿಯಿಂದ ಹುಟ್ಟಿದ ರಾಮಾಯಣ ಮಹಾನದಿ
ರಾಮನ ಕಲ್ಯಾಣ ಗುಣಗಳನ್ನು ಪ್ರತಿಪಾದಿಸುವ, ಸೀತೆಯ ಸಚ್ಛರಿತ್ರರೂಪವಾದ, ಪೌಲಸ್ತ್ಯ (ರಾವಣ) ವಧೆಯನ್ನು ನಿರೂಪಿಸುವ ರಾಮಾಯಣವೆನುವ ಮಹಾಕಾವ್ಯವನ್ನು ಚರಿತ ವ್ರತರು (ವಾಲ್ಮೀಕಿ) ರಚಿಸಿದರು. ರಾಮಾಯಣ ಪ್ರಾರಂಭವಾಗುವುದೇ ಪ್ರಪಂಚದಲ್ಲಿ ಆದರ್ಶ ಪುರುಷ ಅಥವಾ ಪರಿಪೂರ್ಣಗುಣಗಳುಳ್ಳ ವ್ಯಕ್ತಿ ನಿಜವಾಗಿಯೂ ಇದ್ದಾನೆಯೋ ಎನ್ನುವ ವಾಲ್ಮೀಕಿ ಮುನಿಗೆ ಸಂಶಯ ಹುಟ್ಟುವಲ್ಲಿಂದ.


ನಾರಾಯಣ ಯಾಜಿ
ಕಾವ್ಯಂ ರಾಮಾಯಣಂ ಕೃತ್ಸ್ನಂ ಸೀತಾಯಾಶ್ಚರಿತಂ ಮಹತ್. ಪೌಲಸ್ತ್ಯವಧಮಿತ್ಯೇವ ಚಕಾರ ಚರಿತವ್ರತಃ ||ಬಾ.4||
ರಾಮನ ಕಲ್ಯಾಣಗುಣಗಳನ್ನು ಪ್ರತಿಪಾದಿಸುವ, ಸೀತೆಯ ಸಚ್ಛರಿತ್ರರೂಪವಾದ, ಪೌಲಸ್ತ್ಯ (ರಾವಣ)ವಧೆಯನ್ನು ನಿರೂಪಿಸುವ ರಾಮಾಯಣವೆನುವ ಮಹಾಕಾವ್ಯವನ್ನು ಚರಿತ ವ್ರತರು(ವಾಲ್ಮೀಕಿ) ರಚಿಸಿದರು. ರಾಮಾಯಣ ಪ್ರಾರಂಭವಾಗುವುದೇ ಪ್ರಪಂಚದಲ್ಲಿ ಆದರ್ಶ ಪುರುಷ ಅಥವಾ ಪರಿಪೂರ್ಣ ಗುಣಗಳುಳ್ಳ ವ್ಯಕ್ತಿ ನಿಜವಾಗಿಯೂ ಇದ್ದಾನೆಯೋ ಎನ್ನುವ ವಾಲ್ಮೀಕಿ ಮುನಿಗೆ ಸಂಶಯ ಹುಟ್ಟುವಲ್ಲಿಂದ. ರತ್ನಾಕರ, ಪ್ರಾಚೇತಸ, ಋಕ್ಷ ಹೀಗೆ ಹಲವು ಹೆಸರುಳ್ಳ, ಒಂದು ಕಾಲದಲ್ಲಿ ಹಿಂಸಾರತಿಯಲ್ಲಿ ಮನವಿಟ್ಟವನಿಗೆ ತನ್ನ ಹಳೆಯ ಬದುಕೆಲ್ಲ ಹುತ್ತದಲ್ಲಿ ಮಣ್ಣಾಗಿದೆ. ಜೀವಿಸುವುದು ಎಂದರೆ ಇನ್ನೊಬ್ಬರನ್ನು ಕೊಲ್ಲಬೇಕು, ದೋಚಬೇಕು, ಅನುಭವಿಸಬೇಕು ಎನ್ನುವದಷ್ಟೇ ತಿಳಿದಿದ್ದ ಋಕ್ಷನಿಗೆ ಮೊದಲ ಆಘಾತ ವಾದದ್ದು ‘ಯಾರ ಸಲುವಾಗಿ ಈ ಹಿಂಸೆಯನ್ನು ಮಾಡುತ್ತಿರುವೆ?’ ಎನ್ನುವ ಸಪ್ತರ್ಷಿಗಳ ಪ್ರಶ್ನೆ.
ತನ್ನ ಪತ್ನಿ, ತನ್ನ ಮಕ್ಕಳು, ತನ್ನವರು ಎನ್ನುವವರಿಗಾಗಿ ಎನ್ನುವ ಉತ್ತರ. ‘ಹಿಂಸೆ ಪಾಪ ವಲ್ಲವೇ?’ ಎನ್ನುವ ಮರು ಪ್ರಶ್ನೆಗೆ ಇದ್ಯಾವ ಹೊಸತು ಎನ್ನುವ ಕುತೂಹಲ! ಕಡಿ, ಕೊಲ್ಲು, ತಿನ್ನು ಹೀಗೆ ಬದುಕಿದವನಿಗೆ ಪಾಪ, ಪುಣ್ಯದ ಕಲ್ಪನೆಯ ಅರಿವಿಲ್ಲ. ಕಾಡಿನಲ್ಲಿ ಕ್ರೂರ ಪ್ರಾಣಿಗಳು ತನಗಿಂತ ಬಲಹೀನವಾದುದನ್ನು ಕೊಂದು ಜೀವಿಸುವುದನ್ನು ಕಂಡವನಿಗೆ ದೋಚುವಿಕೆ ಸಹಜ ಕ್ರಿಯೆಯಾಗಿತ್ತು. ರತ್ನಾಕರನೆನ್ನುವ ಬೇಡ ಹೆಂಡತಿ ಮಕ್ಕಳನ್ನು ಸುಖವಾಗಿರಿಸಲು ಹಿಂಸಾವೃತ್ತಿಯನ್ನೇ ಮೈಗೂಡಿಸಿಕೊಂಡು ಬದುಕಿದವ. ಲೌಕಿಕದ ಸುಖವನ್ನು ಹಂಚಿಕೊಳ್ಳಲು ಬಯಸುವ ಅವನ ಕುಟುಂಬದವರು ಅದರಿಂದ ಉಂಟಾಗ ಬಹುದಾದಂತಹ ಪಾಪಕ್ಕೆ ಹೊಣೆಗಾರರಾಗಲು ಸಿದ್ಧರಿಲ್ಲದಾಗ ಆಘಾತಗೊಂಡ!
ಇದನ್ನೂ ಓದಿ: Narayana Yaji Article: ಡಿಂಕ್ ಮನೋಭಾವ ಮತ್ತು ಕುಸಿಯುತ್ತಿರುವ ಹವ್ಯಕ ಜನಸಂಖ್ಯೆ
ಲೋಕದಲ್ಲಿ ನನ್ನವರು, ನನ್ನದು ಎಲ್ಲವನ್ನೂ ಮೀರಿ ಆದರ್ಶಕ್ಕಾಗಿ ಬದುಕಿದವರಿ ದ್ದಾರೆಯೇ ಎನ್ನುವ ಸಂಶಯ ಆತನಿಗೆ ಬಂತು. ಅದನ್ನು ಧ್ಯಾನಿಸುವ ಕ್ರಿಯೆಯೇ ತಪಸ್ಸು. ತಪಸ್ಸು ಎಂದರೆ ಮನಸ್ಸಿನಲ್ಲಿ ನಡೆಯುವ ಮಂಥನ, ಹುಡುಕಾಟ.
ಹುತ್ತಗಟ್ಟುವ ಕ್ರಿಯೆ
ಸಾತ್ವಿಕ ತೇಜಸ್ಸಿನ ಮುಂದೆ ತಾಮಸಿಕತೆ ನಿಲ್ಲಲಾರದು. ಬೇಡನಿಗೆ ತಾನು ತನ್ನದು ಎಂದು ಕೊಂಡ ಸಂಸಾರವೆಲ್ಲವೂ ಭ್ರಮೆ, ಮಿಥ್ಯೆ ಎಂದು ತಿಳಿದಾಗ ‘ನಾನು’ ಎನ್ನುವುದೂ ಭ್ರಮೆ ಎನ್ನುವ ಅರಿವಾಯಿತು.
ಹಾಗಾದರೆ ಈ ಮಿಥ್ಯವನ್ನು ಮೀರಿ ಲೋಕದಲ್ಲಿ ಆದರ್ಶವ್ಯಕ್ತಿ ಎನ್ನುವವ ಇದ್ದಿರಬಹುದೇ ಎನ್ನುವುದನ್ನು ತಿಳಿಯಲು, ತನ್ನ ಸುತ್ತಲೂ ಕಟ್ಟಿಕೊಳ್ಳುವ ಆವರಣವೇ ಹುತ್ತ. ರೇಷ್ಮೆ ಹುಳ ಪತಂಗವಾಗಬೇಕೆಂದು ತನ್ನ ಸುತ್ತಲೂ ತಾನೇ ಕಟ್ಟಿಕೊಳ್ಳುವ ಬಲೆಯ ಬಂಧನವೂ ಹುತ್ತಗಟ್ಟುವ ಕ್ರಿಯೆಯೇ.
ನಾನು ಎನ್ನುವುದನ್ನು ಮೀರಿಯೂ ಎಲ್ಲರೊಡನೆ ಬಾಳಿದ ಮನುಷ್ಯನೋರ್ವ ಇದ್ದಾ ನೆಯೋ, ಇದ್ದರೆ ಹೇಗಿರಬಹುದೆನ್ನುವದನ್ನು ತಿಳಿಯಬೇಕೆಂದು ಎನ್ನುವುದ ಕ್ಕಿಂತಲೂ ತಾನು ಹಾಗೆ ಇರುವದಾದರೆ ಹೇಗಿರಬೇಕು ಎನ್ನುವುದನ್ನು ಅರಿಯುವ ಕ್ರಿಯೆಯೇ ತಪಸ್ಸು; ತನ್ನೊಳಗೇ ಲೀನವಾಗುವಿಕೆ, ಕರಗಿ ಹೋಗುವಿಕೆ. ಕಾವ್ಯ ಹುಟ್ಟುವ ಹೊತ್ತು ಇದು. ರಸಸಿದ್ಧಿ ಪಡೆಯಲು ಈ ಸ್ಥಿತಿ ಅಗತ್ಯ. ಮೊದಲು ಕವಿ ರಸಭಾವದಲ್ಲಿ ಲೀನವಾಗುತ್ತಾನೆ.
ತುರೀಯಾವಸ್ಥೆಗೆ ತಲುಪುವಾಗ ಭಾವದ ಆವರಣದೊಳಗೆ ಸಿಕ್ಕಿ ಬೀಳುತ್ತಾನೆ. ಇದೇ ಹುತ್ತ ಗಟ್ಟುವ ಕ್ರಿಯೆ. ‘ಬದುಕೆನ್ನುವುದು ಆದರ್ಶವನ್ನು ಹುಡುಕುವುದಕ್ಕಾಗಿಯಲ್ಲ; ಆದರ್ಶವೇ ಬದುಕಾಗಬೇಕೆಂದು’ ಅನಿಸಿದ ಘಳಿಗೆಯದು.
ತಾನು ಎನ್ನುವ ಭಾವವನ್ನು ದಾಟಿ ಲೋಕಕ್ಕಾಗಿ ಬದುಕಿದವ ಜಗತ್ತಿನಲ್ಲಿ ಇರಬಹುದೇ ಎನ್ನುವ ಸಂಶಯದ ಹುತ್ತ ಕಾಡಿದಾಗ ಹುಡುಕಾಟ ಪ್ರಾರಂಭವಾಯಿತು. ಒಂದು ವೇಳೆ ಇಲ್ಲದೇ ಹೋದರೆ? ಎನ್ನುವ ಚಿಂತೆ ಕಾಡಿತು. ಮುನಿಪುಂಗವ ಆ ಕುರಿತೇ ತಪ್ಪಸ್ಸು ಮಾಡು ತ್ತಿದ್ದ; ಈ ವಿಷಯದ ಕುರಿತು ಸ್ಪಷ್ಟ ನಿದರ್ಶನವನ್ನು ಬಯಸುತ್ತಿದ್ದ. ಅದರ ಫಲವೇ ವೇದೋಪನಿಷತ್ತುಗಳಲ್ಲಿ ಅವಿತಿರುವ ಅಮೂರ್ತ ಜ್ಞಾನಭಂಡಾರಗಳ ದರ್ಶನ. ದರ್ಶನ ಆದರ್ಶವಾಗಬೇಕಾದರೆ ಅದಕ್ಕೊಂದು ಮೂರ್ತರೂಪ ಬೇಕು. ಅದೆಲ್ಲಿ ಎಂದು ಮತ್ತೆ ಮತ್ತೆ ಹಂಬಲಿಸುತ್ತಾ ಎಚ್ಚರವಾಗಿಯೂ ಎಚ್ಚರಗೊಳ್ಳದ ಸ್ಥಿತಿಯಲ್ಲಿ ಇದ್ದ. ಅಕ್ಷರ ವೆನ್ನುವುದು ಅವಿನಾಶಿ. ಅದು ಒಂದೂ ಅಲ್ಲದ ಬಹುತ್ವವೂ ಅಲ್ಲದ ವ್ಯಾಪಕತ್ವ. ಅದಕ್ಕೆ ಮತ್ತೊಂದು ಅಕ್ಷರ ಸೇರಿದಾಗ ಅದಕ್ಕೊಂದು ಮೂರ್ತರೂಪ ಬರುತ್ತದೆ.
ಅದುವೇ ರಾಮ ಎನ್ನುವುದನ್ನು ಸಪ್ತರ್ಷಿಗಳೇ ಹೇಳಿದಾಗ ಮನಸ್ಸಿನೊಳಗೆ ಪಡಿಮೂಡಿತು ಒಂದು ಆಕೃತಿ. ಅದುವೇ ಸಪ್ತರ್ಷಿಗಳು ಹೇಳಿದ ಎರಡಕ್ಷರ ‘ರಾಮ.’ ಸಪ್ತರ್ಷಿಗಳೇನೋ ಮಹಾಮಹಿಮನ ವಿಷಯಗಳನ್ನು ವಿವರಿಸಿ ‘ರಾಮ’ ಎನ್ನುವ ಹೆಸರನ್ನು ಹೇಳಿದ್ದಾರೆ. ಲೋಕದಲ್ಲಿ ಸಂಭಾವಿತನಾಗಿ ಬದುಕುವದೆನ್ನುವದು ಒಂದು ಆದರ್ಶ ಸ್ಥಿತಿ.
ಆದರ್ಶವೆನ್ನುವುದು ವಾಸ್ತವವೂ ಆಗಬಹುದೇ ಎನ್ನುವ ಚಿಂತೆ ನಿರಂತರವಾಗಿ ಕಾಡು ತ್ತಿರುವಾಗಲೇ, ಇದಕ್ಕೆ ಉತ್ತರಿಸಬಲ್ಲವರು ಅಧ್ಯಯನ ಅಧ್ಯಾಪನಗಳಲ್ಲಿ ನಿರತರಾದ ತಪಸ್ವಿ ಗಳಾಗಿರಬೇಕು; ಏಕಾಗ್ರತೆಯನ್ನು ವಾಲ್ಮೀಕಿಗಿಂತಲೂ ಚೆನ್ನಾಗಿ ಸಾಧಿಸಿದವರಾಗಿರಬೇಕು. ಮಾತು ಬಲ್ಲವರಲ್ಲಿ ಶ್ರೇಷ್ಠರಾಗಿರಬೇಕು. ಅಂಥವರು ಯಾರಿದ್ದಾರೆ ಎನ್ನುವ ಪ್ರಶ್ನೆ ನಿರಂತರವಾಗಿ ವಾಲ್ಮೀಕಿಯನ್ನು ಕಾಡುತ್ತಿತ್ತು.
ನಾರದ ನೀಡಿದ ಸೂಚನೆ
ಹೀಗಿರುವಾಗ ಅವರಲ್ಲಿಗೆ ನಾರದ ಬರುತ್ತಾನೆ. ಮಹರ್ಷಿಯ ಪ್ರಶ್ನೆಗೆ ಉತ್ತರಿಸಲು ಇವರಿ ಗಿಂತಲೂ ಬೇರೆ ಯಾರು ಸಮರ್ಥರಿಲ್ಲ ಎಂದುಕೊಳ್ಳುತ್ತಾನೆ. (ತಪಸ್ಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಮ್). ನೇರವಾಗಿ ಅವರಲ್ಲಿಯೇ ತನ್ನನ್ನು ಕಾಡುತ್ತಿರುವ ಚಿಂತೆ ಯನ್ನು ಹೇಳುತ್ತಾ ‘ಲೋಕದಲ್ಲಿ ಯಾವ ದೋಷವೂ ಇಲ್ಲದ ವ್ಯಕ್ತಿ ಎಂದರೆ ಆತನಲ್ಲಿ ಈ ಕೆಳಗಿನ ಹದಿನಾರು ಗುಣಗಳಿರಬೇಕು. (ಅವು ಕಲ್ಯಾಣವಂತ, ವೀರ್ಯವಂತ, ದರ್ಮಜ್ಞ, ಕೃತಜ್ಞ, ಸತ್ಯಭಾಷಿ, ದೃಢವ್ರತನಿಷ್ಠ, ಕುಲಾಚಾರಗಳನ್ನು ತಪ್ಪದೇ ನಡೆಸುಕೊಂಡು ಬರು ವಾತ, ಭೂತದಯೆ, ಚತುರ್ದಶವಿದ್ಯೆಗಳಲ್ಲಿಯೂ ಪಾರಂಗತ, ಸರ್ವಕಾರ್ಯ ದುರಂಧರ, ಮೋಹಕ ರೂಪಿನವ, ಧೈರ್ಯವಂತ, ಕೋಪವನ್ನು ಗೆದ್ದವ, ಎಣೆಯಿಲ್ಲದ ಕಾಂತಿಯುಳ್ಳವ, ಅನಸೂಯ, ದೇವತೆಗಳಿಗೂ ಅಂಜದ ಪರಾಕ್ರಮಿ) ‘ಇಂಥಹ ಮಾನವನು ‘ಕೋನ್ವಸ್ಮಿನ್ ಸಾಂಪ್ರತಂ ಲೋಕೇ- ಈ ಕಾಲದಲ್ಲಿ’ ಇದ್ದಾನೆಯೇ; ಇದ್ದರೆ ಆತನ ಕುರಿತು ವಿವರಿಸಿ’ ಎಂದು ಕೇಳಿಕೊಳ್ಳುತ್ತಾರೆ.
ಆಗ ನಾರದರು ಇಕ್ಷಾಕುವಂಶದಲ್ಲಿ ಜನಿಸಿದ ‘ರಾಮ ರಾಮ’ ಎಂದು ಜನಗಳು ಕರೆಯುವ ನರಪುಂಗವನಿದ್ದಾನೆ ಎಂದು ರಾಮನ ಚರಿತ್ರೆಯನ್ನು ವಿವರಿಸುತ್ತಾರೆ. ವಾಲ್ಮೀಕಿಯ ಮನ ದಲ್ಲಿ ರಾಮನೆನ್ನುವ ಮೂರ್ತಿ ಅಚ್ಚೊತ್ತುದೆ.
ಇಬ್ಬರೂ ಸಮಕಾಲೀನರು
ಗಮನಿಸ ಬೇಕಾದ ಸಂಗತಿ ಎಂದರೆ ವಾಲ್ಮೀಕಿ ಮತ್ತು ರಾಮ ಇಬ್ಬರೂ ಒಂದೇ ಕಾಲ ದಲ್ಲಿದ್ದವರು. ರಾಮ ರಾವಣನನ್ನು ಕೊಂದಿರುವ ಕಾರಣ ಆತನ ಕೀರ್ತಿ ಮೂರುಲೋಕ ದಲ್ಲಿಯೂ ಹಬ್ಬಿದೆ. ಬದುಕಿದ್ದಾಗಲೇ ಗಾಥೆಗಳಾಗುವುದು ರಾಮ, ಕೃಷ್ಣ, ಬುದ್ಧರಂತವರಿಗೆ ಸಾಧ್ಯ. ರಾವಣ ವಿಜಯ ಜನಪದರಲ್ಲಿ ಲಾವಣಿಯಾಗಿ ಮೂರುಲೋಕದಲ್ಲಿಯೂ (ಸರ್ವತ್ರವೂ ಎಂದರ್ಥ) ಹಾಡಲ್ಪಡುತ್ತಿತ್ತು.
ಬ್ರಹ್ಮ ಪ್ರತ್ಯಕ್ಷನಾಗಿ ‘ರಾಮಾಯಣವನ್ನು ರಚಿಸು’ ಎಂದು ಹೇಳಿದ ಅಂದರೆ, ‘ಲಾವಣಿಯ ರೂಪದಲ್ಲಿ ಜನಪದರು ಹಾಡುವ ಕಂಠಕ್ಕೆ ಅನುಷ್ಟುಪ್ ಛಂದಸ್ಸಿನ ಕಾವ್ಯವನ್ನು ಕೊಡು’ ಎನ್ನುವ ಆದೇಶ. ವಾಲ್ಮೀಕಿಗೆ ಪ್ರಾಚೇತಸ ಎನ್ನುವ ಹೆಸರೂ ಇದೆ. ವರುಣನ ಹೆಸರು ಪ್ರಚೇ ತಸ, ವರುಣ ಮಳೆಸುರಿಸಿ ಹುತ್ತದಿಂದ ಎಬ್ಬಿಸಿದವನಾದದ್ದರಿಂದ ಇವ ಪ್ರಾಚೇತಸ. ಭೂಮಿ ಗೆ ಮಳೆಸುರಿದರೆ ಅಲ್ಲೆಲ್ಲೋ ಅವಿತಿದ್ದ ಬೀಜಕ್ಕೆ ಜೀವ ಬಂದು ಚಿಗಿಯುತ್ತದೆ. ರಾಮಾಯಣ ಚಿಗಿತಿದ್ದು ಭಿತ್ತಿಗಟ್ಟಿದ ಹುತ್ತದಿಂದ. ನಾಯಕಿ ಭೂಮಿಪುತ್ರಿ.
ರಾವಣ ಇದಕ್ಕೆ ತದ್ವಿರುದ್ಧವಾದ ವ್ಯಕ್ತಿತ್ವದವ. ಅರು ಕೋಟಿ ವರ್ಷಗಳಕಾಲ ಲೋಕವನ್ನು ರೋದಿಸುವಂತೆ ಮಾಡಿದರೆ, ಲೋಕವನ್ನು ರಮಿಸಿದವ (ಸಂತೈಸಿದವ) ರಾಮ, ಈ ಎರಡರ ನಡುವೆ ಸ್ಥಿತಪ್ರಜ್ಞಳಾಗಿ ತನ್ನ ಚರಿತ್ರೆಯನ್ನು ಕಾದುಕೊಂಡವಳು ಸೀತೆ. ಹಾಗಾಗಿ ವಾಲ್ಮೀಕಿಗೆ ನಾರದರು, ಬ್ರಹ್ಮ ಹೇಳಿದ ಮೇಲೆ ಲೋಕದಲ್ಲಿ ಆದರ್ಶ ಪುರುಷ ಎನ್ನುವುದು ಕಲ್ಪನೆಯ ಮನೋಭೂಮಿಕೆಯಲ್ಲ; ವಾಸ್ತವದಲ್ಲಿ ರಾಜ್ಯವಾಳುತ್ತಿದ್ದಾನೆ ಎನ್ನುವ ಅರಿವಾಯಿತು.
ಉಪನಿಷತ್ತಿನಲ್ಲಿ ಗುರು ಲೌಕಿಕವನ್ನು ಹೇಳುತ್ತಾ ಪಾರಮಾರ್ಥಿಕದ ಹಾದಿಯನ್ನು ತೋರಿ ಸುತ್ತಾನೆ. ಗುರು ಮಾರ್ಗವಲ್ಲ; ಹೀಗೆ ಹೋದರೆ ಇಂಥ ಊರಿಗೆ ಹೋಗಬಹುದೆಂದು ಹೇಳುವ ಕೈಮರ ಆತ. ಇಲ್ಲಿ ನಾರದ ಮತ್ತು ಬ್ರಹ್ಮ ಇಬ್ಬರೂ ಪ್ರಪಂಚಕ್ಕೆ ದಾರಿ ತೋರುವ ಮೂರು ವಿಶೇಷಣಗಳಾದ ‘ರಾಮನಲ್ಲಿರುವ
ಕಲ್ಯಾಣ ಗುಣ, ಸೀತೆಯ ಸಚ್ಛರಿತ್ರರೂಪ, ಪೌಲಸ್ತ್ಯ (ರಾವಣ) ವಧೆ’, ಇವುಗಳನ್ನು ವಿವರಿ ಸುವ ಮಹಾಕಾವ್ಯವನ್ನು ರಚಿಸುಎಂದು ಸೂಚಿಸುತ್ತಾರೆ. ವಾಲ್ಮೀಕಿ ತನ್ನ ಕಾವ್ಯ ಹೇಗಿದೆ ಎನ್ನುವುದನ್ನು ಹೇಳಿಕೊಳ್ಳುವದು ಹೀಗೆ. ‘ತನ್ನ ಕಾವ್ಯದಲ್ಲಿ ಅಧ್ಯಯನ ಮಾಧುರ್ಯವೂ ಇದೆ, ಗಾನ ಮಾಧುರ್ಯವೂ ಇದೆ.
ದ್ರುತ-ಮಧ್ಯಮ-ವಿಲಂಬಿತಗಳಲ್ಲಿ ಸುಲಲಿತವಾಗಿ ಹಾಡಬಹುದು, ಹಾಗೇ ಇದರಲ್ಲಿ ಗಾನ-ಧ್ವನಿ-ಪರಿಚ್ಛೇದಗಳಿಗೆ ಅನುಕೂಲವಾಗಿದೆ. ನವರಸಗಳುಳ್ಳ ಇದನ್ನು ಸಪ್ತಸ್ವರಗಳಲ್ಲಿ ವೀಣಾ ವಾದ್ಯದೊಡನೆಯೂ, ತಾಳ-ಮೃದಂಗಾದಿಗಳ ಮೇಳಗಳಲ್ಲಿ ಹಾಡಬಹುದು’.
ವಾಲ್ಮೀಕಿ ಎನ್ನುವ ಕೋಗಿಲೆಯು ಕಾವ್ಯ ಎನ್ನುವ ವೃಕ್ಷದ ಶಾಖೆಗಳ ಮೇಲೆ ಕುಳಿತು ಕೊಂಡು ರಾಮ, ರಾಮ ಎನ್ನುವ ಮಧುರ ಕಾವ್ಯವನ್ನು ಹಾಡಿದ ಹಿನ್ನೆಲೆ ಇದು. ಚೈತ್ರೇ ಮಾಸೇ ಸೀತೇ ಪಕ್ಷೇ ಕಥಾ ರಾಮಾಯಣಸ್ಯ ಚನವಾಹ್ನಾ ಕಿಲ ಶ್ರೋತ್ರವ್ಯಾ ಭಕ್ತಿಭಾವೇನ ಸಾದರಮ್ಯಸ್ಯ ಶ್ರವಣಮಾತ್ರೇಣ ಸರ್ವಪಾಪೈಃ ಪ್ರಮುಚ್ಯತೆ ||
ಚೈತ್ರಮಾಸದ ಶುಕ್ಲಪಕ್ಷದ ಒಂಭತ್ತು ದಿವಸಗಳಲ್ಲಿ ರಾಮಾಯಣ ಕಥೆಯನ್ನು ಭಕ್ತಿಭಾವ ದಿಂದ ಕೇಳಬೇಕು. ಇದರ ಶ್ರವಣಮಾತ್ರದಿಂದಲೇ ಸಮಸ್ತಪಾಪಗಳಿಂದ ವಿಮುಕ್ತರಾಗು ತ್ತಾರೆ.
*
ನಾರದ ಮತ್ತು ಬ್ರಹ್ಮ ಇಬ್ಬರೂ ‘ರಾಮನಲ್ಲಿರುವ ಕಲ್ಯಾಣ ಗುಣ, ಸೀತೆಯ ಸಚ್ಛರಿತ್ರರೂಪ, ಪೌಲಸ್ತ್ಯ (ರಾವಣ) ವಧೆ’, ಇವುಗಳನ್ನು ವಿವರಿಸುವ ಮಹಾಕಾವ್ಯವನ್ನು ರಚಿಸು ಎಂದು ವಾಲ್ಮೀಕಿಗೆ ಸೂಚಿಸುತ್ತಾರೆ. ನಂತರ ವಾಲ್ಮೀಕಿಯು ರಾಮಾಯಣ ರಚಿಸಿದ. ತನ್ನ ಕಾವ್ಯದ ಕುರಿತು ಆತ ಹೇಳಿಕೊಳ್ಳುವದು ಹೀಗೆ. ‘ಈ ಕಾವ್ಯದಲ್ಲಿ ಅಧ್ಯಯನ ಮಾಧುರ್ಯವೂ ಇದೆ, ಗಾನ ಮಾಧುರ್ಯವೂ ಇದೆ. ದ್ರುತ- ಮಧ್ಯಮ- ವಿಲಂಬಿತಗಳಲ್ಲಿ ಸುಲಲಿತವಾಗಿ ಹಾಡ ಬಹುದು, ಹಾಗೇ ಇದರಲ್ಲಿ ಗಾನ-ಧ್ವನಿ-ಪರಿಚ್ಛೇದಗಳಿಗೆ ಅನುಕೂಲವಾಗಿದೆ. ನವರಸ ಗಳುಳ್ಳ ಇದನ್ನು ಸಪ್ತಸ್ವರಗಳಲ್ಲಿ ವೀಣಾ ವಾದ್ಯದೊಡನೆಯೂ, ತಾಳ-ಮೃದಂಗಾದಿಗಳ ಮೇಳಗಳಲ್ಲಿ ಹಾಡಬಹುದು’. ರಾಮನವಮಿಯ ಸಪ್ತಾಹದಲ್ಲಿ ರಾಮಾಯಣದ ಕಥೆ ಯನ್ನು ಕೇಳಬೇಕು ಎಂಬ ಪರಂಪರಾಗತ ನಂಬಿಕೆ ಇದೆ.
ಹೃದಯದ ಕಣ್ಣು ತೆರೆದಾಗ
ಎಲ್ಲಿ ಹೃದಯದ ಕಣ್ಣು ತೆರೆಯುತ್ತದೆಯೋ ಅಲ್ಲಿಕಾವ್ಯದ ರಸಸೃಷ್ಟಿಯಾಗುತ್ತದೆ. ಲೋಕ ದಲ್ಲಿ ಸಾಮಾನ್ಯವಾಗಿ ಕಂಡ ಸಂಗತಿಗಳು ಕವಿಗೆ ವಿಶೇಷ ರೂಪವಾಗಿ ಗೋಚರವಾಗುವುದು.
‘ತನ್ನೊಳಗೆ ತುಂಬಿರುವ ರಸಕ್ಕೆ ಅನುಗುಣವಾದ ಶಬ್ದಾರ್ಥಗಳನ್ನು ಕುರಿತು ಚಿಂತನೆಯಲ್ಲಿ ಕವಿಯ ಚೇತಸ್ಸು ನಿಶ್ಚಲವಾಗಿರುವಾಗ, ವಸ್ತುವಿನ ನಿಜಸ್ವರೂಪವನ್ನು ಮುಟ್ಟಿದ ಪ್ರಜ್ಞೆ ಅವನಲ್ಲಿ ಥಟ್ಟನೆ ಹೊಮ್ಮುತ್ತದೆ. ಇದೇ ಕವಿಯ ಪ್ರತಿಭೆ, ಪರಮೇಶ್ವರನ ಮೂರನೆಯ ಕಣ್ಣೆಂದೇ ಕೀರ್ತಿಸುತ್ತಾರೆ. ಇದರ ಮೂಲಕ ತ್ರಿಕಾಲದಲ್ಲಿ ನಡೆಯುವ ಸಂಗತಿಗಳನ್ನು ಸಾಕ್ಷಾತ್ತಾಗಿ ಕಾಣಬಲ್ಲನು( ತೀ. ನ. ಶ್ರೀ. ಅವರ ಭಾ. ಕಾ. ಮೀ-10)’. ವಾಲ್ಮೀಕಿ ಕುಳಿತಲ್ಲಿಯೇ ರಾಮಾಯಣದ ಎಲ್ಲಾ ವಿವರಗಳನ್ನು ಕಾಣುವದು ಈ ವಿಶೇಷ ದೃಷ್ಟಿಯಿಂದಲೇ. ಅದನ್ನೇ ಬ್ರಹ್ಮ ಆತನಿಗೆ ಕೊಟ್ಟ ವರವೆಂದು ಅಲಂಕಾರಿಕವಾಗಿ ಹೇಳಲಾಗಿದೆ.