ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Hunj Column: ಅರುಹ ಮರೆತು ಕುರುಹ ಪೂಜಿಸುವ ಹೆಡ್ಡರಾ ನೋಡಾ..!!

“ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು" ಎಂಬ ಸ್ಪಷ್ಟತೆಯೇ ಇರದ ಈ ಶರಣರ ಮಾತು ಗಿಳಿಪಾಠದ ಬುಡಬುಡಿಕೆ ದಾಸರ ಮಾತೆನಿಸುತ್ತದೆ. ಮೇಲಾಗಿ ಈ ಶರಣ ಬೆಲ್ದಾಳರು ತಮ್ಮ ವಾದಕ್ಕೆ ಸಾಕ್ಷಿಯಾಗಿ ಚೆನ್ನಬಸವಣ್ಣನು ಕಲ್ಯಾಣವನ್ನು ಅತ್ಯಂತ ನಿಖರವಾಗಿ ಭೌತಿಕವಾಗಿ ಹೇಗಿತ್ತು ಎಂದು ವರ್ಣಿಸಿzನೆ ಎಂದೂ ವಚನ ಪುರಾವೆ ಕೊಡುತ್ತಾರೆ.

ಅರುಹ ಮರೆತು ಕುರುಹ ಪೂಜಿಸುವ ಹೆಡ್ಡರಾ ನೋಡಾ..!!

Profile Ashok Nayak Apr 8, 2025 6:40 AM

ಬಸವ ಮಂಟಪ

ರವಿ ಹಂಜ್‌

(ಭಾಗ-೨)

ವೀಣಾ ಬನ್ನಂಜೆಯವರು ಹೇಳಿದಂತೆ ಭೌತಿಕವಾಗಿ ಈ ಕಟ್ಟಡ ಇಲ್ಲವೆಂದು ಜಾಮದಾರರು ಒಪ್ಪಿದರೆ, ಶರಣ ಸಿದ್ಧರಾಮ ಬೆಲ್ದಾಳರು ಅನುಭವ ಮಂಟಪ ಇದ್ದುದಲ್ಲದೆ ಅದು ಭೌತಿಕ ವಾಗಿ ಬಸವಣ್ಣನ ಮಹಾಮನೆಯ ಭಾಗವಾಗಿತ್ತು ಎಂದು ತಮ್ಮ ಬಸವಭಕ್ತಿ ಮೆರೆಸುತ್ತಾರೆ. “ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡಲಿ....ಎನ್ನ ಕಾಲೇ ಕಂಬ ದೇಹವೇ ದೇಗುಲ" ಎಂದ ಬಸವಣ್ಣನು ಏಳುನೂರೆಪ್ಪತ್ತು ಅಮರಗಣಂಗಳು, ಲಕ್ಷದ ಮೇಲೆ ತೊಂಬ ತ್ತಾರು ಸಾವಿರ ಜಂಗಮರನ್ನು ಸೇರಿಸಿ ಅವರ ಪಾದೋದಕ ಪ್ರಸಾದವನ್ನು ಸ್ವೀಕರಿಸುವಂಥ ಭೌತಿಕ ‘ಮಹಾಮನೆ’ಯನ್ನು ಹೊಂದಿರಲು ಸಾಧ್ಯವೇ? ಜೀವನ ಪರ್ಯಂತ ಬಸವಣ್ಣನ ವಚನಗಳ ಪ್ರವಚನ ಮಾಡಿಕೊಂಡು ಬಂದ ಶರಣ ಬೆಲ್ದಾಳರು ಈವರೆಗೆ ಸಾಗಿಬಂದ ತಮ್ಮ ಓದನ್ನು, ಪಾರಮಾರ್ಥವನ್ನು, ಜೀವನವನ್ನು ಪುನರವಲೋಕನ ಮಾಡಿಕೊಳ್ಳುವುದು ಉತ್ತಮ ಎನ್ನಬಹುದಷ್ಟೇ.

“ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು" ಎಂಬ ಸ್ಪಷ್ಟತೆಯೇ ಇರದ ಈ ಶರಣರ ಮಾತು ಗಿಳಿಪಾಠದ ಬುಡಬುಡಿಕೆ ದಾಸರ ಮಾತೆನಿಸುತ್ತದೆ. ಮೇಲಾಗಿ ಈ ಶರಣ ಬೆಲ್ದಾಳರು ತಮ್ಮ ವಾದಕ್ಕೆ ಸಾಕ್ಷಿಯಾಗಿ ಚೆನ್ನಬಸವಣ್ಣನು ಕಲ್ಯಾಣವನ್ನು ಅತ್ಯಂತ ನಿಖರವಾಗಿ ಭೌತಿಕವಾಗಿ ಹೇಗಿತ್ತು ಎಂದು ವರ್ಣಿಸಿzನೆ ಎಂದೂ ವಚನ ಪುರಾವೆ ಕೊಡುತ್ತಾರೆ.

ಅಂದ ಹಾಗೆ ಕಲ್ಯಾಣವನ್ನು ವರ್ಣಿಸುವ ಚೆನ್ನಬಸವಣ್ಣನ ವಚನ ಹೀಗಿದೆ: “ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮತ್ ಕಲ್ಯಾಣಪುರದ ಮಹಾತ್ಮ ಎಂತೆಂದಡೆ, ವಿಸ್ತರಿಸಿ ಪೇಳುವೆನು; ಎಲ್ಲಾ ಶಿವಗಣಂ ಗಳು ಕೇಳಿ ಕೃತಾರ್ಥರಾಗಿರಯ್ಯಾ. ಹದಿನಾಲ್ಕು ಭುವನಕ್ಕೆ ಕಳಸವೆಂದೆ ನಿಸುವ ರುದ್ರಲೋಕವೆ ಮರ್ತ್ಯಕ್ಕಿಳಿತಂದು ಕಲ್ಯಾಣವೆಂಬ ಪುರವಾಗಿ ಹುಟ್ಟಿತ್ತು ನೋಡಿ ರಯ್ಯಾ!

ಇದನ್ನೂ ಓದಿ: Ravi Hunj Column: ಜಾತಿಪೀಠಿಗಳು ನಾಟಕ ಆಡಿಸುವುದರಲ್ಲಿ ಮಗ್ನರಾಗಿದ್ದಾರೆ !

ಅಲ್ಲಿ ಸತ್ಯರು ಸಾತ್ತ್ವಿಕರು ನಿತ್ಯರು ನಿಜೈಕ್ಯರು ಮಹಾಜ್ಞಾನಿಗಳು ಪರಮಶಿವಯೋಗಿಗಳು ಶಿವಾನು ಭಾವಸಂಪನ್ನರು ಶಿವಲಿಂಗಪ್ರಾಣಿಗಳು ಶಿವಪ್ರಸಾದಪಾದೋದ ಕಸಂಬಂಧಿಗಳು ಶಿವಾಚಾರವೇದ್ಯರು ಶಿವಾಗಮಸಾಧ್ಯರು ಶಿವಸಮಯಪಕ್ಷರುಗಳಲ್ಲದೆ, ಮತ್ತಾರು ಅಲ್ಲಿಲ್ಲ ನೋಡಿರಯ್ಯಾ. ಪಾಪಿಗಳು ಕೋಪಿಗಳು ಅಸತ್ಯರು ಅನಾಚಾರಗಳು ಹೊಗಬಾರದು ಕಲ್ಯಾಣವ. ಮೀರಿ ಹೊಕ್ಕೆಹೆವೆಂಬವರಿಗೆ ಬಾಳ ಬಾಯಧಾರೆ ನೋಡಿರಯ್ಯಾ. ಆ ಕಲ್ಯಾಣ ಅಗಮ್ಯ ಅಗೋಚರ ನೋಡಿರಯ್ಯಾ. ಆ ಮಹಾಕಲ್ಯಾಣದ ವಿಸ್ತೀರ್ಣ ತಾನೆಂತೆಂದಡೆ: ಹನ್ನೆರಡು ಯೋಜನ ಪರಿಪ್ರಮಾಣದ ವಿಸೀರ್ಣಪಟ್ಟಣಕ್ಕೆ ಮುನ್ನೂರರವತ್ತು ಬಾಗಿಲ ವಾಡ. ಆ ಬಾಗಿಲಿಂಗೆ ನೂರ ಐವತ್ತೈದು ವಜ್ರದ ಹಾರೆಯ ಕದಂಗಳು. ಇನ್ನೂರ ಇಪ್ಪತ್ತೈದು ಕಲು ಗೆಲಸದ ದ್ವಾರವಟ್ಟಕ್ಕೆ ನಾನೂರ ಐವತ್ತು ಸುವರ್ಣದ ಕೆಲಸದ ಕದಂಗಳು, ಅಲ್ಲಿ ನೂರ ಹದಿನೈದು ಚೋರಗಂಡಿ; ಅವಕ್ಕೆ ನೂರ ಹದಿನೈದು ಮೊಳೆಯ ಕದಂಗಳು.

ಇಪ್ಪತ್ತು ಬಾಗಿಲು ಆಳ್ವರಿಯೊಳಗಿಪ್ಪವಾಗಿ ಅವಕ್ಕೆ ಕದಂಗಳಿಲ್ಲ. ಆ ಪಟ್ಟಣಕ್ಕೆ ಬರಿಸಿ ಬಂದ ಕೋಂಟೆ ನಾಲ್ವತ್ತೆಂಟು ಯೋಜನ ಪರಿಪ್ರಮಾಣು. ಬಾಹತ್ತರ (ನಿಯೋಗಿಗಳ) ಮನೆ ಲಕ್ಷ; ಮಂಡಳಿಕರ ಮನೆ ಲಕ್ಷ; ಸಾಮಂತರ ಮನೆ ಲಕ್ಷ; ರಾಯ ರಾವುತರ ಮನೆಯೊಳಡಗಿದ ಮನೆಗಳಿಗೆ ಲೆಕ್ಕವಿಲ್ಲ. ದ್ವಾದಶ ಯೋಜನ ವಿಸೀರ್ಣದ ಸೂರ್ಯವೀಥಿ ನೂರಿಪ್ಪತ್ತು; ದ್ವಾದಶ ಯೋಜನದ ಸೋಮವೀಥಿ ನೂರಿಪ್ಪತ್ತೈದು. ಅದರಿಂ ಮಿಗಿಲಾದ ಒಳಕೇರಿ ಹೊರಕೇರಿಗೆ ಗಣನೆಯಿಲ್ಲ. ಆ ಪಟ್ಟಣದೊಳಗೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶಿವಾಲಯ. ಆ ಶಿವಾಲಯಂಗಳಿಗೆ ಮುಖ್ಯವಾದ ತ್ರಿಪುರಾಂತಕದೇವರ ಶಿವಾಲಯ.

ಮುನ್ನೂರರವತ್ತು ಪದ್ಮಪತ್ರ ತೀವಿದ ಸರೋವರಗಳು. ಎರಡು ಲಕ್ಷವು ಎಂಬತ್ತೈದು ಸಾವಿರದ ಏಳು ನೂರೆಪ್ಪತ್ತು ದಾಸೋಹದ ಮಠಂಗಳು. ಆ ದಾಸೋಹದ ಮಠಂಗಳಿಗೆ ಮುಖ್ಯವಾದ ಬಸವರಾಜದೇವರ ಮಠದ ವಿಸ್ತೀರ್ಣವೆಂತೆಂದಡೆ: ಯೋಜನವರಿಯ ಬಿನ್ನಾಣದ ಕಲುಗೆಲಸದಳಿ; ಅತಿ ಸೂಕ್ಷ್ಮದ ಕುಸುರಿಗೆಲಸದ ದ್ವಾರವಟ್ಟವೈದು.

ಅವಕ್ಕೆ ಪಂಚಾಕ್ಷರಿಯ ಶಾಸನ. ಮಿಸುನಿಯ ಕಂಭದ ತೋರಣಗಳಲಿ ರುದ್ರಾಕ್ಷಿಯ ಸೂಸಕ ಆ ಬಾಗಿಲುವಾಡದಲ್ಲಿ ಒಪ್ಪುತಿರ್ಪವಯ್ಯಾ, ನಂದಿಯ ಕಂಭದ ಧ್ವಜ ಉಪ್ಪರಗುಡಿ ಪತಾಕೆ ವ್ಯಾಸಧ್ವಜ ಒಪ್ಪುತಿರ್ಪ ವಯ್ಯಾ, ಆ ಮಧ್ಯದಲ್ಲಿ ಬಸವರಾಜದೇವರ ಸಿಂಹಾಸನದ ವಿಸ್ತೀರ್ಣದ ಪ್ರಮಾಣು: ಸಹಸ್ರಕಂಭದ ಸುವರ್ಣದುಪ್ಪರಿಗೆ; ಆ ಮನೆಗೆತ್ತಿದ ಹೊನ್ನಕಳಸ ಸಾವಿರ. ಗುರುಲಿಂಗ ಜಂಗಮಕ್ಕೆ ಪಾದಾರ್ಚನೆಯ ಮಾಡುವ ಹೊಕ್ಕರಣೆ ನಾಲ್ಕು ಪುರುಷ ಪ್ರಮಾಣದ ಘಾತ.

ಅಲ್ಲಿ ತುಂಬಿದ ಪಾದೋದಕದ ತುಂಬನುಚ್ಚಲು ಬೆಳೆವ ರಾಜಶಾಲಿಯ ಗದ್ದೆ ಹನ್ನೆರಡು ಕಂಡುಗ, ಆ ಯೋಜನವರಿಯ ಬಿನ್ನಾಣದ ಅರಮನೆಯ ವಿಸೀರ್ಣದೊಳಗೆ ಲಿಂಗಾ ರ್ಚನೆಯ ಮಾಡುವ ಮಠದ ಕಟ್ಟಳೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ. ಇನ್ನು ಬಸವ ರಾಜದೇವರು ಮುಖ್ಯವಾದ ಅಸಂಖ್ಯಾತರ ಮಠಂಗಳು ಆ ಕಲ್ಯಾಣದೊಳಗೆ ಎಷ್ಟು ಎಂದಡೆ: ಹನ್ನೆರಡು ಸಾವಿರ ಕಟ್ಟಳೆಯ ನೇಮದ ಭಕ್ತರ ಮಠಂಗಳು, ಇಪ್ಪತ್ತೆಂಟು ಸಾವಿರ ಮಹಾಮನೆಗಳು; ಹತ್ತು ಸಾವಿರ ನಿತ್ಯನೇಮಿಗಳ ಮಠಂಗಳು; ಹದಿನೈದು ಸಾವಿರ ಚಿಲುಮೆ ಯಗ್ಗವಣಿಯ ವ್ರತಸ್ಥರ ಮಠಂಗಳು; ಐದು ಸಾವಿರ ವೀರವ್ರತನೇಮಿಗಳ ಕಟ್ಟಳೆಯ ಮಠಂಗಳು; ಹನ್ನೆರಡು ಸಾವಿರ ಅಚ್ಚಪ್ರಸಾದಿಗಳ ಮಠಂಗಳು, ಒಂದು ಸಾವಿರ ಅರವತ್ತು ನಾಲ್ಕು ಶೀಲಸಂಪನ್ನರ ಮಠಂಗಳು; ನಿತ್ಯ ಸಾವಿರ ಜಂಗಮಕ್ಕೆ ಆರೋಗಣೆಯ ಮಾಡಿ ಸುವ ದಾಸೋಹಿಗಳ ಮಠಂಗಳು ಮೂವತ್ತೆರಡು ಸಾವಿರ; ನಿತ್ಯ ಐನೂರು ಜಂಗಮಕ್ಕೆ ಒಲಿದು ದಾಸೋಹವ ಮಾಡುವ ಸತ್ಯಸದಾಚಾರಿಗಳ ಮಠಂಗಳು ಐವತ್ತೆಂಟು ಸಾವಿರ; ನಿತ್ಯ ಸಾವಿರದೈನೂರು ಜಂಗಮಕ್ಕೆ ಒಲಿದು ದಾಸೋಹವ ಮಾಡುವ ದಾಸೋಹಿಗಳ ಮಠಂಗಳು ಹನ್ನೊಂದು ಸಾವಿರ; ನಿತ್ಯ ಅವಾರಿಯಿಂದ ಮಾಡುವ ಮಾಟಕೂಟದ ಸದ್ಭಕ್ತರ ಮಠಂಗಳು ಒಂದು ಲಕ್ಷ; ಜಂಗಮಸಹಿತ ಸಮಯಾಚಾರದಿಂದ ಲಿಂಗಾರ್ಚನೆಯ ಮಾಡುವ ಜಂಗಮಭಕ್ತರ ಮಠಂಗಳು ಎರಡು ಸಾವಿರದೇಳ್ನೂರೆಪ್ಪತ್ತು; ಅಂತು ಎರಡು ಲಕ್ಷವು ಎಂಬತ್ತೈದು ಸಾವಿರದ ಏಳುನೂರೆಪ್ಪತ್ತು.

ಇಂತಪ್ಪ ಅಸಂಖ್ಯಾತರಿಗೆ ಮುಖ್ಯವಾಗಿ ರುದ್ರಲೋಕದಿಂದಿಳಿತಂದ ಪ್ರಮಥಗಣಂಗಳ ಮಠಂಗಳು ಏಳು ನೂರೆಪ್ಪತ್ತು. ಇಂತೀ ಮಹಾಪ್ರಮಥರಿಗೆ ಪುರಾತರಿಗೆ ಅಸಂಖ್ಯಾತ ಮಹಾ ಗಣಂಗಳಿಗೆ ಪ್ರಥಮ ನಾಯಕನಾಗಿ, ಏಕಮುಖ, ದಶಮುಖ, ಶತಮುಖ, ಸಹಸ್ರಮುಖ, ಲಕ್ಷಮುಖ, ಕೋಟಿ ಮುಖ, ಅನಂತಕೋಟಿಮುಖನಾಗಿ ಭಕ್ತರಿಗೆ ಒಡನಾಡಿಯಾಗಿಪ್ಪನು ಸಂಗನಬಸವಣ್ಣ.

ಜಗದಾರಾಧ್ಯ ಬಸವಣ್ಣ, ಪ್ರಮಥಗುರು ಬಸವಣ್ಣ, ಶರಣಸನ್ನಹಿತ ಬಸವಣ್ಣ, ಸತ್ಯಸಾತ್ವಿಕ ಬಸವಣ್ಣ, ನಿತ್ಯನಿಜೈಕ್ಯ ಬಸವಣ್ಣ, ಷಡುಸ್ಥಲಸಂಪನ್ನ ಬಸವಣ್ಣ, ಸರ್ವಾಚಾರ ಸಂಪನ್ನ ಬಸವಣ್ಣ, ಸರ್ವಾಂಗಲಿಂಗಿ ಬಸವಣ್ಣ, ಸುeನಭರಿತ ಬಸವಣ್ಣ, ನಿತ್ಯಪ್ರಸಾದ ಬಸವಣ್ಣ, ಸಚ್ಚಿದಾನಂದಮೂರ್ತಿ ಬಸವಣ್ಣ, ಸದ್ಯೋನ್ಮುಕ್ತಿರೂಪ ಬಸವಣ್ಣ, ಅಖಂಡಪರಿಪೂರ್ಣ ಬಸವಣ್ಣ, ಅಭೇದ್ಯಭೇದಕ ಬಸವಣ್ಣ, ಅನಾಮಯಮೂರ್ತಿ ಬಸವಣ್ಣ, ಮಹಾಮನೆಯ ಮಾಡಿದಾತ ಬಸವಣ್ಣ, ರುದ್ರಲೋಕವ ಮರ್ತ್ಯಲೋಕಕ್ಕೆ ತಂದಾತ ಬಸವಣ್ಣ, ಶಿವಾಚಾ ರದ ಘನವ ಮೆರೆದಾತ ಬಸವಣ್ಣ.

ಇಂತಹ ಬಸವಣ್ಣನ ಭಕ್ತಿಯನು ಒರೆದೊರೆದು ನೋಡುವ, ಪ್ರಜ್ವಲಿತವ ಮಾಡುವ ಅಶ್ವಪತಿ, ಗಜಪತಿ, ನರಪತಿರಾಯ, ರಾಜಾಧಿರಾಜ ಬಿಜ್ಜಳರಾಯನೂ ಆ ಬಸವಣ್ಣನೂ ಆ ಕಲ್ಯಾಣಪಟ್ಟಣದೊಳಗೆ ಸುಖಸಂಕಥಾವಿನೋದದಿಂದ ರಾಜ್ಯಂಗೆಯುತ್ತಿರಲು, ಆ ಕಲ್ಯಾಣದ ನಾಮವಿಡಿದು ವಿವಾಹಕ್ಕೆ ಕಲ್ಯಾಣವೆಂಬ ನಾಮವಾಯಿತ್ತು. ಲೋಕದೊಳಗೆ ಕಲ್ಯಾಣವೆ ಕೈಲಾಸವೆನಿಸಿತ್ತು.

ಇಂತಪ್ಪ ಕಲ್ಯಾಣದ ದರುಶನವ ಮಾಡಿದಡೆ ಭವಂ ನಾಸ್ತಿ, ಇಂತಪ್ಪ ಕಲ್ಯಾಣವ ನೆನೆದಡೆ ಪಾಪಕ್ಷಯ, ಇಂತಪ್ಪ ಕಲ್ಯಾಣದ ಮಹಾತ್ಮೆಯಂ ಕೇಳಿದಡೆ ಕರ್ಮಕ್ಷಯವಹುದು, ಮೋಕ್ಷ ಸಾಧ್ಯವಹುದು, ಇದು ಕಾರಣ, ಕೂಡಲಚೆನ್ನಸಂಗಮದೇವಾ, ನಿಮ್ಮ ಭಕ್ತ ಬಸವಣ್ಣ ನಿದಠ್ಞವೆ ಮಹಾಕಲ್ಯಾಣವೆಂದರಿದು ದಿವ್ಯಶಾಸನವ ಬರೆದು ಪರಿಸಿದ ಕಾರಣ, ಎನ್ನ ಭವಂ ನಾಸ್ತಿಯಾಯಿತ್ತಯ್ಯಾ"- ಚೆನ್ನಬಸವಣ್ಣ.

ತುಲನಾತ್ಮಕವಾಗಿ ವಾಸ್ತವಿಕವಾಗಿ ಈ ವಚನದಂತೆ ಕಲ್ಯಾಣವನ್ನು ಕಲ್ಪಿಸಿಕೊಂಡರೆ ಕಲ್ಯಾಣಪಟ್ಟಣವು ರೋಮ್ ನಗರಕ್ಕಿಂತ ಭವ್ಯವಾಗಿ ಬಿಜ್ಜಳನ ಸಾಮ್ರಾಜ್ಯವು ಅಲೆಗ್ಸಾಂಡ ರನ ಸಾಮ್ರಾಜ್ಯಕ್ಕಿಂತ ಮಹಾನ್ ಆಗಿ ತೋರುತ್ತದೆ. ಅತ್ಯಂತ ವಾಸ್ತವಿಕ, ತಾರ್ಕಿಕ ಚಿಂತನೆಯ ಚೆನ್ನಬಸವಣ್ಣನು ಇದನ್ನು ಲೌಕಿಕಾರ್ಥವಾಗಿ ಹೇಳಿರುವ ಸಾಧ್ಯತೆ ಇದೆಯೇ ಎಂದು ನವಲಿಂಗಿಗಳು ಯೋಚಿಸುವುದೇ ಇಲ್ಲ.

ಏಕೆಂದರೆ ಇವರೆಲ್ಲರೂ ಬಾಯಲ್ಲಿ ಕಾಲೇ ಕಂಬ, ದಿಟದಲ್ಲಿ ಸಾವಿರ ಬಿಂಬ ತೋರುವ ಗಾರುಡಿಗರು. “ಎತ್ತು ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು" ಎನ್ನುವಷ್ಟು ಲಿಂಗಭೇದ ಅರಿಯದ ಮೂಢರು. ಹೀಗೆ ಸಾಮಾನ್ಯ ತರ್ಕದಿಂದ ಚಿಟಿಕೆ ಹೊಡೆದಂತೆ ಇವರ ಎಲ್ಲಾ ಸಂಕಥನಗಳನ್ನು ಹೊಡೆದುರುಳಿಸಬಹುದು.

ಅಂದ ಹಾಗೆ ಈ ವಚನದ ಆರಂಭದಲ್ಲಿಯೇ ಚೆನ್ನಬಸವಣ್ಣನು, “ರುದ್ರಲೋಕವೆ ಮರ್ತ್ಯಕ್ಕಿಳಿತಂದು ಕಲ್ಯಾಣವೆಂಬ ಪುರವಾಗಿ ಹುಟ್ಟಿತ್ತು ನೋಡಿರಯ್ಯಾ!" ಎಂದು ಅಲೌಕಿಕ ಕಲ್ಯಾಣದ ಕಲ್ಪನೆಯಲ್ಲಿ ರುದ್ರಲೋಕವನ್ನೇ ವರ್ಣಿಸಿದ್ದಾನೆ. ಇಂಥ ಅಲೌಕಿಕ ವರ್ಣನೆಯ ವಚನವನ್ನೇ ಲೌಕಿಕ ಎಂದುಕೊಂಡ ಬಸವಮೂರ್ಖರನ್ನು ಶರಣ ಶ್ರೇಷ್ಠ ರೆಂದು 21ನೇ ಶತಮಾನದಲ್ಲಿ ನಾಡು ಪುರಸ್ಕಾರದ ಮೇಲೆ ಪುರಸ್ಕಾರ ಕೊಟ್ಟು ಪುರಸ್ಕರಿಸು ತ್ತದೆ ಎಂದರೆ ಅದು ನಮ್ಮ ನಾಡಿನ ‘ಸಾಂಸ್ಕೃತಿಕ ಅಧೋಗತಿ’ಯ ಮಾಪಕ ಎಂದಷ್ಟೇ ನಿಟ್ಟುಸಿರಿಸಬಹುದು.

ಅಂದ ಹಾಗೆ, ಈ ಶರಣರೀರ್ವರ ವಾದವನ್ನು ಪ್ರತ್ಯೇಕ ಧರ್ಮ ಕೂಗಿಗರ ಮುಖವಾಣಿ ಚಾನೆಲ್ ಬಿತ್ತರಿಸಿದೆ.

***

ಇನ್ನು ಬನ್ನಂಜೆಯವರ ಹೇಳಿಕೆಯಿಂದ ಅವರ ಮೇಲೆ ಯುದ್ಧ ಘೋಷಿಸಿರುವ ವಿರೋಧಿ ಗಳು ‘ಅನುಭವ ಮಂಟಪ’ ಪದವು ವಚನಗಳಲ್ಲಿ ಉಲ್ಲೇಖವಾಗಿದೆ ಎಂದು ಪುರಾವೆಯಾಗಿ ಪುಂಖಾನುಪುಂಖ ವಚನಗಳನ್ನು ರಾತ್ರೋರಾತ್ರಿ ಸೃಷ್ಟಿಸಿ ತೇಲಿ ಬಿಡುತ್ತಿದ್ದಾರೆ. ಅವ್ಯಾ ವುವೂ ಅಧಿಕೃತ ವಚನಗಳಲ್ಲ. ಶರಣ ಸಿದ್ಧರಾಮ ಬೆಲ್ದಾಳರೂ ಸೇರಿ ಅವರು ಕೊಡುವ ವಚನ ಸಂಪುಟದಲ್ಲಿರುವ ಏಕೈಕ ವಚನ, ನೀಲಮ್ಮನ ವಚನ.

ನೀಲಮ್ಮನು ರಚಿಸಿರುವ ಇನ್ನೂರಕ್ಕೂ ಹೆಚ್ಚಿನ ವಚನಗಳು ಐದಾರು ಸಾಲುಗಳಲ್ಲಿದ್ದು ಕೆಲವು ವಚನಗಳು ಹತ್ತು ಸಾಲಿನಷ್ಟು ದೊಡ್ಡವಿವೆ. ಆದರೆ ಅನುಭವಮಂಟಪ ಎನ್ನುವ ವಚನವು ಅರವತ್ತಾರು ಸಾಲಿನಷ್ಟು ಉದ್ದವಿದೆ. ಈಕೆ ಬಸವಯ್ಯ ಎಂದಿರುವ ವಚನಗಳಲ್ಲಿ ತನ್ನ ವೈಯಕ್ತಿಕ ಸಾಧನೆಗೆ ಬಸವಣ್ಣನು ಹೇಗೆ ಅನುವಾದನು ಎಂದು ತನ್ನ ಮತ್ತು ಬಸವಣ್ಣನ ನಡುವಿನ ಆತ್ಮಾನುಸಂಧಾನದ ಕುರಿತು ಹೇಳುತ್ತಾಳೆಯೇ ಹೊರತು ಈ ವಚನ ದಲ್ಲಿರುವಂತೆ ಬಸವಣ್ಣನ ಸಾರ್ವತ್ರಿಕ ಸಾಧನೆಯ ಬಗ್ಗೆ ಎಲ್ಲಿಯೂ ಹೇಳಿಲ್ಲ.

ಹಾಗಾಗಿ ಮೇಲ್ನೋಟಕ್ಕಲ್ಲದೆ ಎಲ್. ಬಸವರಾಜುರವರ ಪ್ರಕ್ಷಿಪ್ತ ತರ್ಕದನ್ವಯ ಸಹ ಇದು ಸುಲಭವಾಗಿ ಪ್ರಕ್ಷಿಪ್ತ ವಚನ ಎನಿಸುತ್ತದೆ. ಅಂದ ಹಾಗೆ ನೀಲಮ್ಮನ ವಚನ ಹೀಗಿದೆ:

“ಆದಿಯಾಧಾರವಿಲ್ಲದಂದು, ಕಳೆಮೊಳೆದೋರದಂದು, ಕಾಮನಿಃಕಾಮವಿಲ್ಲದಂದು, ವೀರವಿತರಣವಿಲ್ಲದಂದು, ಯುಗಜುಗವಿಲ್ಲದಂದು, ಪಿಂಡಾಂಡ ಬ್ರಹ್ಮಾಂಡವಿಲ್ಲದಂದು, ಏನೂ ಏನೂ ಇಲ್ಲದಂದು, ಎ ಮೂರ್ತಿಗಳು ನೆಲೆಗೊಳ್ಳದಂದು, ಅಂದು ಏನೆಂದು ಅರಿಯ ದಿರ್ಪ ನಮ್ಮ ಬಸವಯ್ಯನು. ಒಂದು ಗುಣವನೊಂದು ಅಕ್ಷರಕ್ಕೆ ತಂದಾತ ನಮ್ಮ ಬಸವ ಯ್ಯನು. ಆ ಅಕ್ಷರವ ರೂಪಮಾಡಿ, ತ್ರಯಾಕ್ಷರದಲ್ಲಿ ಕಳೆಯ ಸಂಬಂಧಿಸಿದಾತ ನಮ್ಮ ಬಸವಯ್ಯನು.

ಆ ಕಳೆಯ ಮೂರು ತೆರನ ಮಾಡಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಎಂಬ ಪಂಚ ತತ್ವವೆ ಪಂಚವದನವಾಗಿ, ಆ ಪಂಚವದನವೇ ಪಂಚೀಕೃತವನೆಯ್ದಿ, ಜಗದಾದಿ ಸೃಷ್ಟಿ ಯನನು ಮಾಡುವುದಕ್ಕೆ ಕರ್ತನಾದ ನಮ್ಮ ಬಸವಯ್ಯನು. ಆ ಸೃಷ್ಟಿಯ ಮುಖವ ಕಂಡು ಸೃಜಿಸಲು ಪುಟ್ಟಿದರು ಪಂಚಶಕ್ತಿಯರು. ಆ ಪಂಚಶಕ್ತಿಯರಿಗೆ ಪಂಚಮೂರ್ತಿಯರ ಕೈಗೊಳಿಸಿದಾತ ನಮ್ಮ ಬಸವಯ್ಯನು. ಆ ಪಂಚಮೂರ್ತಿಗಳಿಂದುತ್ಪತ್ಯವಾದ ಲೋಕವ ನೋಡಲೆಂದು, ಕೈಲಾಸವನೆ ಕಲ್ಯಾಣವ ಮಾಡಿದಾತ ನಮ್ಮ ಬಸವಯ್ಯನು.

ಆ ಕೈಲಾಸವೇ ಕಲ್ಯಾಣವಾಗಲಾ ಕಲ್ಯಾಣಕ್ಕೆ- ಪ್ರಮಥಗಣಂಗಳ, ರುದ್ರಗಣಂಗಳ, ಅಮರ ಗಣಂಗಳ, ಪುರಾತನಗಣಂಗಳ, ಪುಣ್ಯಗಣಂಗಳ, ಮಹಾಗಣಂಗಳ, ಮುಖ್ಯ ಗಣಂಗಳ, ಮಹಾಲಿಂಗೈಕ್ಯಸಂಪನ್ನರಂ, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರೆಂಬ ಆಚಾರಾದಿ ಮಹಾಲಿಂಗಸಂಪನ್ನರಂ, ಷಟ್ಸ್ಥಿಲಪ್ರಸಾದಪ್ರಸನ್ನರೂಪರಂ, ಆದಿಮುಕ್ತರಂ, ಅನಾದಿ ಮುಕ್ತರಂ, ಅಜಾತರಂ, ಅಪ್ರಮಾಣರಂ, ಅನಿಮಿಷಲಿಂಗ ನಿರೀಕ್ಷ ಣರಂ, ತ್ರಿವಿಧ ವಿದೂರರಂ, ತ್ರಿವಿಧಲಿಂಗಾಂಗಮೂರ್ತಿಗಳಂ, ಅರ್ಪಿತಸಂಯೋಗರಂ, ಆಗಮವಿದರಂ, ಅನಾದಿಪರ ಶಿವಮೂರ್ತಿಗಳಂ, ಏಕಲಿಂಗನಿಷ್ಠಾಪರರುಮಪ್ಪ ಮಹಾ ಪ್ರಮಥಗಣಂಗಳಂ ತಂದು ನೆರಹಿದಾತ ನಮ್ಮ ಬಸವಯ್ಯನು.

ಮರ್ತ್ಯಲೋಕವನೆ ಮಹಾಪ್ರಮಥರ ಬಿಡಾರವ ಮಾಡಿದಾತ ನಮ್ಮ ಬಸವಯ್ಯನು. ಆದಿಯಸೃಷ್ಟಿಯನನಾದಿಯಸೃಷ್ಟಿಗೆ ತಂದು, ಅನಾದಿಸೃಷ್ಟಿ ಯನಾದಿಸೃಷ್ಟಿಗೆ ತಂದು, ಅಜಾತನಬೀಡನಂಗದಲ್ಲಿ ನೆರಹಿದಾತ ನಮ್ಮ ಬಸವಯ್ಯನು. ಭಾವವಿಲ್ಲದ ಭ್ರಮೆಯ ಭ್ರಮೆಗೊಳಿಸಿ ಭಾವಕ್ಕೆ ತಂದಾತ ನಮ್ಮ ಬಸವಯ್ಯನು. ಬಯಲನೊಂದು ರೂಪಮಾಡಿ ಬಣ್ಣಕ್ಕೆ ತಂದು, ಆ ಬಣ್ಣವ ನಿಜದಲ್ಲಿ ನಿಲಿಸಿದಾತ ನಮ್ಮ ಬಸವಯ್ಯನು.

ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ ಇಚೆಯನರಿದು ಅರ್ಪಿತವ ಮಾಡಿದಾತ ನಮ್ಮ ಬಸವಯ್ಯನು. ಅಂಗಸಂಗಿಗಳನಂತರಿಗೆ ಅಂಗನೆಯರ ಅನುಭವವ ನಡಸಿದಾತ ನಮ್ಮ ಬಸವಯ್ಯನು. ಮೂವತ್ತಾರುಸಾವಿರ ಮಾಹೇಶ್ವರರಿಗೆ ಮುಖಮೂರ್ತಿಯಾಗಿ, ಅರ್ಪಿತಪ್ರಸಾದವನನುಭವಿಸಿದಾತ ನಮ್ಮ ಬಸವಯ್ಯನು.

ಹನ್ನೆರಡು ಸಾವಿರ ರಾಣಿಯರ ಅಂಗವನರ್ಪಿತ ಪ್ರಸಾದಿಗಳ ಮಾಡಿದಾತ ನಮ್ಮ ಬಸವಯ್ಯನು. ಎಂಬತ್ತೆಂಟು ಪವಾಡಮಂ ಗೆದ್ದು ಮುನ್ನೂರರುವತ್ತು ಸತ್ತ ಪ್ರಾಣವನೆತ್ತಿ ಮೆರೆದು ಪರಸಮಯವನಳಿದಾತ ನಮ್ಮ ಬಸವಯ್ಯನು. ಇಪ್ಪತ್ತೈದು ಸಾವಿರ ಚಾರ್ವಾಕರಂ ನೆಗ್ಗಿಲೊತ್ತಿ, ಅಪ್ರತಿಮ ಶಿವಗಣಂಗಳ ಮಹಾತ್ಮೆಯಂ ಮೆರೆದಾತ ನಮ್ಮ ಬಸವಯ್ಯನು. ಪ್ರಣವದ ಬೀಜವ ಬಿತ್ತಿ, ಪಂಚಾಕ್ಷರಿಯಬೆಳೆಯ ಬೆಳೆದು, ಪರಮ ಪ್ರಸಾದವನೊಂದು ರೂಪ ಮಾಡಿ ಮೆರೆದು, ಭಕ್ತಿಫಲವನುಂಡಾತ ನಮ್ಮ ಬಸವಯ್ಯನು.

ಚೆನ್ನಬಸವನೆಂಬ ಪ್ರಸಾದಿಯ ಪಡೆದು, ಅನುಭವಮಂಟಪವನನು ಮಾಡಿ, ಅನುಭವ ಮೂರ್ತಿಯಾದ ನಮ್ಮ ಬಸವಯ್ಯನು. ಅರಿವ ಸಂಪಾದಿಸಿ ಆಚಾರವ ನಂಗಂಗೊಳಿಸಿ, ಏಳುನೂರೆಪ್ಪತ್ತು ಅಮರಗಣಂಗಳ ಅನುಭವಮೂರ್ತಿಗಳ ಮಾಡಿದಾತ ನಮ್ಮ ಬಸವಯ್ಯನು. ಆ ಅನುಭವದಲ್ಲಿ ಐಕ್ಯಪ್ರಸಾದವನಂಗಂಗೊಂಡು, ಮಂತ್ರ ನಿರ್ಮಂತ್ರ ವಾದಾತ ನಮ್ಮ ಬಸವಯ್ಯನು. ಭಕ್ತಿಸ್ಥಲವನಳಿದು ಭಾವವಡಗಿ ಬಟ್ಟಬಯಲ ಕೂಡಿ, ಸಂಗಯ್ಯನಲ್ಲಿ ಸ್ವಯಲಿಂಗಿಯಾದ ನಮ್ಮ ಬಸವಯ್ಯನು"- ನೀಲಮ್ಮ.

ಕೃತಕ ಬುದ್ಧಿಮತ್ತೆಯ ವಿಷಯವನ್ನು ಬಿಟ್ಟು ಅದರ ಜನನಿ ಪಾರ್ವತಿ ಎನ್ನುವುದನ್ನೇ ಹೆಕ್ಕಿಕೊಳ್ಳುವುದು, ಜನಕನ ಆಸ್ಥಾನದ ಪುರಾಣದೊಳಗಿನ ನೀತಿಗಿಂತ ಆತನ ಆಸ್ಥಾನ ವಿತ್ತೆನ್ನುವುದು, ರೇಣುಕನ ತತ್ವಕ್ಕಿಂತ ಆತ ಕಲ್ಲಿನಿಂದ ಹುಟ್ಟಿದ್ದನೇ ಎನ್ನುವುದು, ವಚನಗಳ ಅಧ್ಯಾತ್ಮಕ್ಕಿಂತ ಅದು ಪ್ರಥಮ ಸಂಸತ್ತು ಎಂದು ಸಾಧಿಸುವುದು....!? ತತ್ವಕ್ಕಿಂತ ರೂಪಾ ಕೋಕ್ತಿಯನ್ನೇ ಸತ್ಯವೆಂದು ಸ್ಥಾಪಿಸಹೊರಟ 21ನೇ ಶತಮಾನದ ತಾರ್ಕಿಕ ಪಂಡಿತೋತ್ತಮ ಸ್ಥಿತಿಗೆ ಅಲ್ಲಮನು ಅಂದೇ ತನ್ನ ವಚನದಲ್ಲಿ ಹೀಗೆ ಮೊಟಕಿ ಕಟಕಿ ಕುಟುಕಿದ್ದಾನೆ: “ಅರುಹ ಪೂಜಿಸಲೆಂದು ಕುರುಹು ಕೊಟ್ಟೆಡೆ, ಅರುಹ ಮರೆತು ಕುರುಹ ಪೂಜಿಸುವ ಹೆಡ್ಡರಾ ನೋಡಾ ಗುಹೇಶ್ವರ!"

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)